-->
ಲೇಖನ : ನನ್ನ ಬೆಕ್ಕು - ರಚನೆ: ಸಾನ್ವಿ ಸಿ ಎಸ್, 6ನೇ ತರಗತಿ

ಲೇಖನ : ನನ್ನ ಬೆಕ್ಕು - ರಚನೆ: ಸಾನ್ವಿ ಸಿ ಎಸ್, 6ನೇ ತರಗತಿ

ಲೇಖನ : ನನ್ನ ಬೆಕ್ಕು 
ರಚನೆ: ಸಾನ್ವಿ ಸಿ ಎಸ್ 
6ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ  
                
      ಬೇಸಿಗೆ ರಜೆಯ ಸಂದರ್ಭದಲ್ಲಿ ನಾನು ನನ್ನ ಅಜ್ಜನ ಮನೆಗೆ ಹೋಗಿದ್ದೆ. ಆಗ ನನ್ನ ಮನೆಯ ಬೆಕ್ಕು ಮರಿ ಹಾಕಿದೆ ಎಂದು ಅಜ್ಜಿ ಹೇಳಿದರು. ಆಗ ನನಗೆ ಖುಶಿಯೋ ಖುಶಿ. ಅದನ್ನು ನೋಡುವ ತವಕದಿಂದ ಮನೆಗೆ ಬಂದೆ. 
     ನನಗೆ ಬೆಕ್ಕುಗಳೆಂದರೆ ಪಂಚಪ್ರಾಣ. ನಾನು ಇದುವರೆಗೆ ಇಷ್ಟು ಚಿಕ್ಕದಾದ ಬೆಕ್ಕಿನ ಮರಿಯನ್ನು ನೋಡಿರಲಿಲ್ಲ. ಅದು ನಮ್ಮ ಒಂದು ಕೈಯ ಒಳಗೆ ಹಿಡಿಯಬಹುದಾದ ಗಾತ್ರದಲ್ಲಿ ಇತ್ತು. ಆ ಸಂದರ್ಭದಲ್ಲಿ ನನ್ನ ದೊಡ್ಡಪ್ಪನ ಮಗಳು ಧೃತಿ ಬೆಂಗಳೂರಿಂದ ನಮ್ಮ ಮನೆಗೆ ಬಂದಿದ್ದಳು. ನಾವು ಆ ಬೆಕ್ಕಿನ ಮರಿಯನ್ನು ನೋಡಲು ಅದರ ಹತ್ತಿರ ಹೋಗುತ್ತಿದ್ದೆವು. ಆಗ ಅದರ ಅಮ್ಮ ಅದನ್ನು ಅಪ್ಪಿಕೊಂಡು ಮಲಗುತ್ತಿತ್ತು. 
        ಬೆಕ್ಕುಗಳು ಮನೆಗೆ ಬಂದರೆ ಮಲಮೂತ್ರ ಮಾಡಿದರೆ ಎಂಬ ಕಾರಣದಿಂದ ಮನೆಯ ಹಿಂಬದಿಯ ಕೊಟ್ಟಿಗೆಯಲ್ಲಿ ಇರಬೇಕೆಂಬುದು ನನ್ನ ಅಪ್ಪನ ಅಭಿಪ್ರಾಯ. ಆ ಮರಿಯ ಅಮ್ಮ ಮರಿಯನ್ನು ಮನೆಯ ಒಳಗೆ ತಂದು ಇಡುತ್ತಿತ್ತು. ಆಗ ಅಪ್ಪ ಅದನ್ನು ಕೊಟ್ಟಿಗೆಗೆ ತೆಗೆದುಕೊಂಡು ಹೋಗುತ್ತಿದ್ದರು. ನಾನು ಆಗ ಜೋರಾಗಿ ಅಳುತ್ತಿದ್ದೆ. ಅಪ್ಪ ಅದನ್ನು ಹೊರಗೆ ತೆಗೆದುಕೊಂಡು ಹೋದರೂ ತಾಯಿ ಬೆಕ್ಕು ಮಾತ್ರ ಛಲದಿಂದ ಅದನ್ನು ಪುನಃ ಮನೆ ಒಳಗೆ ತಂದಿಡುತ್ತಿತ್ತು. 
      ನಾನು ಪುಟ್ಟ ರಟ್ಟಿನ ಪೆಟ್ಟಿಗೆಗೆ ಬಟ್ಟೆ ಹಾಕಿದೆನು. ಆ ಮರಿಯನ್ನು ಅದರಲ್ಲಿ ಮಲಗಿಸಿದೆ. ಅದು ಯಾವಾಗಲೂ ಅದರಲ್ಲೇ ಮಲಗುತ್ತಿತ್ತು. ಆಮೇಲೆ ಅದರಿಂದು ಕೆಳಗಿಳಿದು ನಡೆಯಲು ಕಲಿತು ಅದರ ತಾಯಿಯ ಹಿಂದೆ ಮುಂದೆ ಹೋಗುತ್ತಿತ್ತು. ತಾಯಿ ಬೆಕ್ಕು ಅದಕ್ಕೆ ಪುಟ್ಟ ಪುಟ್ಟ ಕೀಟಗಳನ್ನು ಬೇಟೆಯಾಡಿ ತಿನ್ನಲು ಕಲಿಸಿತು. ನಾಯಿಗಳು ಬಳಿಗೆ ಹೋಗುವಾಗ ಅದನ್ನು ಒಳಗೆ ತರುತ್ತಿತ್ತು. ನಮ್ಮ ಮನೆಯಲ್ಲಿ ಇವುಗಳೆರಡು ಅಲ್ಲದೆ ಮತ್ತೊಂದು ಅಶಕ್ತ ಬೆಕ್ಕಿನ ಮರಿಯೂ ಇತ್ತು. ಆ ಮರಿ ಹಾಕಿದ ಬೆಕ್ಕು ಇದಕ್ಕೂ ಹಾಲು ಕುಡಿಸುತ್ತಿತ್ತು. ಪ್ರಾಣಿಗಳಿಗೆ ಮನುಷ್ಯರಂಥ ಸ್ವಾರ್ಥ ಬುದ್ಧಿ ಇರುವುದಿಲ್ಲ. ಮನುಷ್ಯರು ಮಾತ್ರವಲ್ಲ , ಪ್ರಾಣಿಗಳು ತಮ್ಮ ಮರಿಗಳಿಗೆ ಎಷ್ಟು ಚಂದ ತರಬೇತಿ ಕೊಡುತ್ತವೆ ಎಂಬುದನ್ನು ನಾನು ಇಲ್ಲಿ ಪ್ರತ್ಯಕ್ಷವಾಗಿ ವೀಕ್ಷಿಸಿದೆ. 
    ಆ ಮರಿ ಹಾಕಿದ ಬೆಕ್ಕು ಒಂದು ಇಲಿಯನ್ನು ಅರ್ಧ ಸಾಯಿಸಿ ಮರಿಗೆ ತಂದು ಕೊಡುತ್ತಿತ್ತು. ಆ ಮರಿಯು ಅದರ ಜೊತೆ ಆಟವಾಡಿಕೊಂಡು ಕಚ್ಚಿ ಎಳೆದು ತಿನ್ನುತ್ತಿತ್ತು. ಆ ಮರಿಗೆ ಈಗ ಎರಡೂವರೆ ತಿಂಗಳಾಗಿದೆ. ಇಲಿ, ಕೀಟಗಳನ್ನು ಹಿಡಿಯುವುದು, ಮಲಮೂತ್ರ ಬಂದರೆ ಮನೆಯ ಹೊರಗಿನ ಮೈದಾನಕ್ಕೆ ಓಡುವುದು ಹೀಗೆ ಎಲ್ಲಾ ಕೆಲಸಗಳನ್ನೂ ನಿರ್ವಹಿಸುವಷ್ಟು ಸಶಕ್ತವಾಗಿದೆ. ಮನುಷ್ಯರಿಗೆ ಬುದ್ಧಿ ಶಕ್ತಿ ಬೆಳೆಯಲು ಮೂರು ನಾಲ್ಕು ವರ್ಷಗಳೇ ಬೇಕಾಗುತ್ತದೆ. ಆದರೆ ಬೆಕ್ಕುಗಳು ಬೆಳೆಯಲು ಕೇವಲ ಎರಡು ಮೂರು ತಿಂಗಳುಗಳು ಸಾಕಾಗುತ್ತದೆ. ಪ್ರಾಣಿಯಾದರೂ ಬೆಕ್ಕು ತನ್ನ ಮರಿಗೆ ತರಬೇತಿ ನೀಡಿ ಪ್ರೀತಿಯಿಂದ ಬೆಳೆಸುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಪ್ರಾಣಿಗಳಲ್ಲಾಗಲಿ ಮನುಷ್ಯರಲ್ಲಾಗಲಿ ಅಮ್ಮನ ಜವಾಬ್ದಾರಿ ಅತ್ಯಂತ ಮಹತ್ತರವಾದುದು ಎಂಬುದನ್ನು ನಾನು ಇಲ್ಲಿ ಕಂಡುಕೊಂಡೆ.
........................................... ಸಾನ್ವಿ ಸಿ ಎಸ್ 
6ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************



Ads on article

Advertise in articles 1

advertising articles 2

Advertise under the article