-->
ಹೃದಯದ ಮಾತು : ಸಂಚಿಕೆ - 01

ಹೃದಯದ ಮಾತು : ಸಂಚಿಕೆ - 01

ಹೃದಯದ ಮಾತು : ಸಂಚಿಕೆ - 01
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
             

     'ಹೆಣ್ಣು' ಜಗತ್ತಿನ ಅಮೂಲ್ಯ ಸೃಷ್ಟಿ. ಆಕೆಯ ವ್ಯಾಪ್ತಿ ವಿಶಾಲವಾದದ್ದು. ಹುಟ್ಟಿದಾಗ ಕೈ ಹಿಡಿದ ತಾಯಿಯಾಗಿ, ಆಟವಾಡುತ್ತಾ ಬಿದ್ದಾಗ ಮೇಲೆತ್ತಿ ಸಂತೈಸುವ ಅಕ್ಕನಾಗಿ, ಪ್ರತಿಯೊಂದಕ್ಕೂ ತರಲೆ ಮಾಡುತ್ತಾ ಪೀಡಿಸುವ ತಂಗಿಯಾಗಿ, ಪ್ರಾಥಮಿಕ ಅಕ್ಷರಗಳನ್ನು ನಾಲಗೆಯ ತುದಿಯಲ್ಲಿ ಪಠಿಸುವಂತೆ ಮಾಡಿದ ಶಿಕ್ಷಕಿಯಾಗಿ, ಸಂಸಾರದಲ್ಲಿ ನಮ್ಮ ಎಲ್ಲಾ ಕಷ್ಟ ನಷ್ಟಗಳಿಗೆ ಜೊತೆಯಾಗಿ, ಅಪ್ಪನ ಕಣ್ಣೀರ ಒರೆಸುವ ಕರುಣಾಮಯಿಯಾಗಿ ಬಹುಮುಖಿಯಾಗಿರುವವಳು ಹೆಣ್ಣು. ಕಟ್ಟ ಕಡೆಗೆ ಸತ್ತು ಚಟ್ಟವೇರಿದಾಗ ಮಲಗಲು ಜಾಗ ಕೊಟ್ಟ ಭೂಮಿಯೂ ಒಂದು ಹೆಣ್ಣೆಂದು ತಿಳಿದವರು ನಾವು.

      "ಯತ್ರ್ ನಾರ್ಯಸ್ತು ಪೂಜ್ಯಂತೆ ತತ್ರ್ ರಮಂತೇ ದೇವತಾ:" ಎಂಬ ವಾಕ್ಯ ಹೆಣ್ಣಿನ ಶ್ರೇಷ್ಠತೆಯ ಬಗ್ಗೆ ಮನವರಿಕೆ ಮಾಡಿದೆ. "ಹೆಣ್ಣು ಮನೆಗೆ ಕನ್ನಡಿ ಇದ್ದಂಗೆ" ಎಂಬ ನುಡಿ ಬಹಳನೇ ಅರ್ಥಗರ್ಭಿತ. ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಂದು ಹೆಣ್ಣು ಇದ್ದೇ ಇರುತ್ತಾಳೆ. ಆಕೆಗೆ ಕರ್ತೃತ್ವ, ನೇತೃತ್ವ ಹಾಗೂ ಮಾತೃತ್ವ ರಕ್ತಗತವಾಗಿರುವ ಮೂರು ಗುಣಗಳಾಗಿವೆ. ಆಕೆ ಹೃದಯದಲ್ಲಿ ಸ್ಥಾನ ಕೊಟ್ಟವರನ್ನು ಉಸಿರಿರುವ ತನಕ ಉಳಿಸಿಕೊಳ್ಳುತ್ತಾಳೆ. ಅವಳು ಸದಾ ಮನೆಯ ನಂದಾದೀಪ, ಮಮತೆಯ ಸ್ವರೂಪ. ತನಗಾಗಿ ಏನನ್ನೂ ಪ್ರಾರ್ಥಿಸದ ಆಕೆ ತನ್ನ ಮಕ್ಕಳು ಹಾಗೂ ಗಂಡನಿಗಾಗಿ ಸದಾ ಪ್ರಾರ್ಥಿಸುತ್ತಿರುತ್ತಾಳೆ.
     ಹೆಣ್ಣು ತನಗಾಗಿ ಕೊಟ್ಟ ಹಣ್ಣನ್ನು ಅಡಗಿಸಿಟ್ಟು, ಪುಟ್ಟ ತಮ್ಮನ ಬರುವಿಕೆಗಾಗಿ ಕಾದು ಕುಳಿತು, ತಮ್ಮನಿಗೆ ತಿನ್ನಿಸಿ ಸಂತೋಷಪಡುವ ಔದಾರ್ಯವುಳ್ಳವಳು. ಬಳೆ ಮತ್ತು ಗೆಜ್ಜೆಯ ಶಬ್ಧ ಮನೆ ತುಂಬಾ ಕೇಳಿಸುತ್ತಿದ್ದರೆ ಅದೊಂದು ಸೌಭಾಗ್ಯ. ಸಂಸಾರದಲ್ಲಿ ಮಕ್ಕಳನ್ನು ತೊರೆದ ಅಪ್ಪಂದಿರು ಸಾಕಷ್ಟು ಇದ್ದರೂ ಮಕ್ಕಳನ್ನು ಮರೆತ ತಾಯಂದಿರು ಬಹಳನೇ ವಿರಳ. ತನ್ನ ಪ್ರತಿಯೊಂದು ಕಷ್ಟ- ನೋವಿಗಾಗಿ ರಾತ್ರಿಯಾದೊಡನೆ ನಾಲ್ಕು ಗೋಡೆಗಳ ಮಧ್ಯೆ ಕಣ್ಣೀರಿಡುವ ಹೆಣ್ಣು, ಸೂರ್ಯೋದಯ ವಾಗುತ್ತಿದ್ದಂತೆ ಎಲ್ಲವನ್ನೂ ಮರೆತು ಮನೆಯ ಮುಂದೆ ರಂಗೋಲಿ ಹಾಕಬಲ್ಲವಳು. 
     ಹೆಣ್ಣು ಸಿಡಿದರೆ ಉಗ್ರ ರೂಪ ತಾಳಬಲ್ಲಳು. ಆಕೆ ಮುನಿದರೆ ಮಾರಿ ಎಂಬ ಮಾತೂ ಇದೆ. ಆದರೆ ಆ ಪರಿಸ್ಥಿತಿಗೆ ಆಕೆ ಒಡ್ಡುವುದು ತೀರಾ ಅಪರೂಪ. ಹೆಣ್ಣು ಈ ಭೂಮಿಗೆ ದೇವರ ಅನರ್ಘ್ಯ ಕೊಡುಗೆ. ಜಗತ್ತಿನ ಪ್ರತಿಯೊಬ್ಬರಿಗೂ ರಜೆ ಎಂಬ ಮಜವಿದೆ. ಆದರೆ ಹೆಣ್ಣು ಬದುಕಲ್ಲಿ ಎದ್ದು ನಿಂತರೆ ರಜೆಯನ್ನೇ ಕಾಣದವಳು. ಇಂತಹ ಅಮೂಲ್ಯ ಸಂಪತ್ತನ್ನು ಅರ್ಥೈಸುವಲ್ಲಿ, ಗೌರವಿಸುವಲ್ಲಿ ನಾವು ಎಡವಿದ ಬಗ್ಗೆ ಕಳವಳವಿದೆ.
     ಕುಡುಕ ಗಂಡನನ್ನು ದೇವರೆಂದು ಪೂಜಿಸುತ್ತಾ, ಆಕೆಯ ಬರುವಿಕೆಗಾಗಿ ತಡರಾತ್ರಿ ತನಕವೂ ಬಾಗಿಲಲ್ಲಿ ಕುಳಿತ ಹೆಣ್ಣುಗಳೆಷ್ಟೋ?... ಗಂಡ ತಾನು ಮಾಡಿದ ಕರ್ಮಗಳಿಂದ ನಷ್ಟ ಹೊಂದಿ ಮನೆಗೆ ಬಂದು ಮೊಸಳೆ ಕಣ್ಣೀರು ಸುರಿಸಿದಾಗ ಮೈಮೇಲೆ ಧರಿಸಿದ್ದ ಒಡವೆ ಮಾತ್ರವಲ್ಲದೆ, ಅಮೂಲ್ಯವಾದ ತಾಳಿಯನ್ನು ದಾರವೊಂದಕ್ಕೆ ಕಟ್ಟಿ ಅದನ್ನೂ ಗಂಡನ ಕೈಗಿಟ್ಟು ಸಂತೈಸುವ ಪರಿಯಂತೂ ಅತ್ಯದ್ಭುತವಾದದ್ದು. ತನ್ನೆದುರೇ ಅನೈತಿಕ ಸಂಬಂಧಗಳಲ್ಲಿ ತೊಡಗಿದ್ದರೂ, ಮೌನ ಕಣ್ಣೀರು ಸುರಿಸುತ್ತಾ ಸಹಿಸಿಕೊಳ್ಳಲು ಹೆಣ್ಣಿಂದ ಮಾತ್ರ ಸಾಧ್ಯ. ಪರಸಂಗದಿಂದ ರೋಗಪೀಡಿತನಾಗಿ ಹಾಸಿಗೆ ಹಿಡಿದಾಗ ಸಾಯುವ ತನಕ ಆರೈಕೆ ಮಾಡುವ ಹೃದಯವುಳ್ಳವಳು ಹೆಣ್ಣು. 
      'ಹೆಣ್ಣಿನ ಬಾಳು ಕಣ್ಣೀರಿನ ಗೋಳು' ಆಕೆಯ ಜನ್ಮಕ್ಕೆ ಹೆಜ್ಜೆಗೊಂದು ಮುಳ್ಳಿದೆ. ಹುಟ್ಟುವಾಗ, ಬೆಳೆಯುತ್ತಿರುವಾಗ, ಮುಟ್ಟಾದಾಗ, ಮದುವೆಯಾಗಿ ಮನೆಯ ಹೊರಗೆ ಕಾಲಿಟ್ಟಾಗ, ಮಗುವಿಗೆ ಜನ್ಮ ನೀಡುವಾಗ.... ಹೀಗೆ ಪ್ರತಿ ಸಂದರ್ಭವೂ ಅಳುವೊಂದೇ ಆಕೆಯ ಮುಂದಿರುವ ವಿಕಲ್ಪ. ಪ್ರತಿ ಕ್ಷಣವೂ ಆಕೆ ಮೃದುವಾಗಿರಬೇಕು, ಶಾಂತವಾಗಿರಬೇಕು, ತ್ಯಾಗ ಮಾಡಬೇಕು, ತಗ್ಗಿದ ಧ್ವನಿಯಲ್ಲಿ ಮಾತಾಡಬೇಕೆಂಬ ನಿರ್ಬಂಧಗಳು ಆಕೆಗಿದೆ. 
      ಬಣ್ಣ ಬಣ್ಣದ ಕನಸು ಕಟ್ಟಿದ ಹೆಣ್ಣಿಗೆ ಮಸಿ ಬಳಿಯುವವರೇ ಬಹಳ. ಹೆಣ್ಣಿನ ಮೇಲೆ ಪುರುಷ ವರ್ಗದ ಪೌರುಷ ಅಗಣಿತ. ವಿಶ್ವದಾದ್ಯಂತ ವರ್ಷಕ್ಕೆ ಸರಾಸರಿ 1500 ಮಂದಿ ಹೆಣ್ಣು ಮಕ್ಕಳ ಮೇಲೆ ಆ್ಯಸಿಡ್ ಎರಚಿ ಅವರ ಮುಗ್ಧ ಮುಖವನ್ನು ವಿಕಾರಗೊಳಿಸಲಾಗುತ್ತಿದೆ. ಹೆಣ್ಣಿಗೆ ಶ್ರೇಷ್ಠ ಸ್ಥಾನ ನೀಡಿರುವ ಭಾರತದಲ್ಲೂ 2021ರಲ್ಲಿ 176 ಹೆಣ್ಣು ಮಕ್ಕಳ ಮೇಲೆ ಈ ರೀತಿಯ ದಾಳಿಗಳಾಗಿವೆ. ನಮ್ಮ ದೇಶದಲ್ಲಿ 2019ರಲ್ಲಿ 32033, 2020ರಲ್ಲಿ 28046 ಹಾಗೂ 2021ರಲ್ಲಿ 31677 ಅತ್ಯಾಚಾರ ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆ. ಅಂದರೆ ಪ್ರತಿದಿನ 86 ಮಂದಿಯ ಬದುಕನ್ನು ನಾಶಮಾಡಲಾಗುತ್ತಿದೆ. ಇದಕ್ಕಿಂತಲೂ ಕರಾಳವಾದದ್ದು ಹೆಣ್ಣಿನ ಕೊಲೆ. ಅಂದಾಜು ಪ್ರಕಾರ 2021 ರಲ್ಲಿ 81000 ಹೆಣ್ಣು ಮಕ್ಕಳ ಕೊಲೆಯಾಗಿದೆ. ಇವರಲ್ಲಿ 45000 ಮಂದಿ ಸ್ವಂತ ಗಂಡನಿಂದಲೇ ಇಹಲೋಕಕ್ಕೆ ಇತಿಶ್ರೀ ಹೇಳಿದ್ದಾರೆ. 2020ರಲ್ಲಿ ಈ ರೀತಿಯ 47000 ಘಟನೆಗಳು ದಾಖಲಾಗಿವೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಜಗತ್ತಿನಾದ್ಯಂತ 130 ಮಿಲಿಯನ್ 6 ರಿಂದ 17 ವರ್ಷದ ಹೆಣ್ಣು ಮಕ್ಕಳು ಶಾಲಾ ವ್ಯವಸ್ಥೆಯಿಂದ ಹೊರಗಿದ್ದಾರೆ ಎಂದು ಅಂದಾಜಿಸಲಾಗಿದೆ.
      ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಧರ್ಮವಿಲ್ಲವಾಗಿದೆ. 'ಕಾಮಕ್ಕೆ ಕಣ್ಣಿಲ್ಲ' ಎನ್ನುತ್ತಲೇ‌ ಆಕೆಯ ಮೇಲೆ ಮೃಗಗಳಂತೆ ಎರಗುತ್ತಿದ್ದೇವೆ. ಹೆಣ್ಣು ಧರಿಸುವ ಧಿರಿಸು ನಮ್ಮ ಉದ್ರೇಕಕ್ಕೆ ಕಾರಣವೆಂಬ ಸಬೂಬು ನಮ್ಮದು. ಆರರ ಬಾಲೆಯಲ್ಲಿ ಇಲ್ಲವೇ ಎಂಭತ್ತರ  ವೃದ್ಧೆಯ ಬಟ್ಟೆಯಲ್ಲಿ ನಮಗಾದ ಉದ್ರೇಕ ಯಾವುದು ?... ಹೆಣ್ಣೊಬ್ಬಳು ಏಕಾಂಗಿಯಾದಾಗ ಮಧ್ಯರಾತ್ರಿಯೂ ಆಕೆಯನ್ನು ಕರೆ ಮಾಡಿ ಕಾಡಿಸುವ ಮಂದಿಗೆ ಕೊರತೆಯಿಲ್ಲ. ಅಸಹಾಯಕಳಾಗಿ ಬಳಿಗೆ ಬಂದ ಹೆಣ್ಣು ಗಂಡಿನ ಕಾಮಕ್ಕೆ ಸಮ್ಮತಿಯೆಂಬ ಭಾವನೆಯಲ್ಲಿ ಬದುಕುವ ಸಮೂಹ ನಮ್ಮದು. ದೇಶದ ಮೂಲೆ ಮೂಲೆಯಲ್ಲಿ ಹೆಣ್ಣನ್ನು ನಗ್ನ ಇಲ್ಲವೇ ಅರೆನಗ್ನಗೊಳಿಸುತ್ತಿರುವ ಹೇಯ ಕೃತ್ಯಗಳಿಗೂ ಸಬೂಬು ಹುಡುಕುವ ಸಮಾಜ ನಮ್ಮದಾಗಿದೆ. ಬೆಡ್ ರೂಮಲ್ಲಿ ತನ್ನ ಸ್ವಂತ ಗಂಡನ ಮುಂದೆಯೇ ನಗ್ನವಾಗಿರಲು ನಾಚಿಕೊಳ್ಳುವ ಹೆಣ್ಣನ್ನು ಹೈವೆ ಮಧ್ಯೆ ಬೆತ್ತಲಾಗಿಸಿ, ಕೇಕೆ ಹಾಕುವ ಹೃದಯ ಶೂನ್ಯತೆ. ತಡೆಯುವ ಸಾಮರ್ಥ್ಯವಿದ್ದರೂ ಮೌನಕ್ಕೆ ಜಾರಿರುವ ವ್ಯವಸ್ಥೆ. 

     ಹೆಣ್ಣನ್ನು ಗೌರವಿಸದ ಸಮಾಜ ಸಭ್ಯವೆನಿಸಿಕೊಳ್ಳದು. ಆಕೆಗೆ ಕೆಲವೊಂದು ಇತಿಮಿತಿಗಳಿವೆ. ಆದರೆ ಅವುಗಳೇ ಆಕೆಯ ಶೋಷಣೆಗೆ ಸಕಾರಣವಾಗದು. ಜನ್ಮಕೊಟ್ಟ ತಾಯಿಯೂ ಒಂದು ಹೆಣ್ಣೇ. ಹೆಣ್ಣಿಗೆ ಮಾನವೇ ಭೂಷಣ. ಅದೇ ಹೆಣ್ಣನ್ನು ಬೆತ್ತಲೆಯಾಗಿ ನಡು ಬೀದಿಯಲ್ಲಿ ನರಳುವಂತೆ ಮಾಡುವ ನಮಗೆ ಗಂಡಾಂತರ ನಿಶ್ಚಿತ. ಪಾಪ ಕೃತ್ಯವನ್ನು ಮತ್ತೊಂದು ಪಾಪ ಕೃತ್ಯಕ್ಕೆ ತುಲನೆ ಮಾಡಿ ಸಮರ್ಥಿಸುವ ನೀಚತೆ ನಮ್ಮಲ್ಲಿದೆ. ಹೆಣ್ಣಿನ ದೇಹವನ್ನು ಮುಚ್ಚಲು ಬಟ್ಟೆ ನೀಡಬೇಕಾದ ನಾವು ಆಕೆಯ ದೇಹವನ್ನು ಹರಿದು ಚಿಂದಿ ಮಾಡಿದರೆ, ಆಕೆಯ ಕಣ್ಣೀರು ಪ್ರವಾಹವಾಗಿ ಜಗತ್ತನ್ನು ನಾಶಮಾಡಬಲ್ಲದು. ಹೆಣ್ಣಿನ ತ್ಯಾಗ ಅದೆಷ್ಟೋ ಸಂಸಾರದ ಸಂತಸಕ್ಕೆ ಕಾರಣವಾಗಿವೆ. ಹೆಣ್ಣಿನ ಸಹನಾಶೀಲತೆಯೇ ನಮಗೆ ಶ್ರೀರಕ್ಷೆ ಎಂಬುವುದನ್ನು ಅರಿತುಕೊಂಡು, ಆಕೆಗೆ ಗೌರವ ನೀಡಿದಾಗಲೇ ಪ್ರಕೃತಿ ನಮ್ಮನ್ನು ಕ್ಷಮಿಸಬಲ್ಲದು.
ಚಿತ್ರಗಳು : ಆಶಿಶ್ ಎಂ ರಾವ್ , ದ್ವಿತೀಯ ಪಿಯುಸಿ, ಮಂಗಳೂರು
...................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಣಿತ ಶಿಕ್ಷಕರು
ಸರಕಾರಿ ಪ್ರೌಢಶಾಲೆ, ನಡ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************





Ads on article

Advertise in articles 1

advertising articles 2

Advertise under the article