-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 19

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 19

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 19
ಲೇಖಕರು : ನಾರಾಯಣ ರೈ ಕುಕ್ಕುವಳ್ಳಿ
ನಿವೃತ್ತ ಪದವೀಧರ ಶಿಕ್ಷಕರು.
ಮಧುಪ್ರಪಂಚ ಪತ್ರಿಕಾ ಪ್ರಧಾನ ಸಂಪಾದಕ 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
                                   
     ನಾನು ಪ್ರಾಥಮಿಕ ಶಾಲೆಯಿಂದ ಭಡ್ತಿಗೊಂಡು ಸಾವಿರಾರು ವಿದ್ಯಾರ್ಥಿಗಳಿರುವ ಒಂದು ದೊಡ್ಡ ಹಿರಿಯ ಪ್ರೌಢ ಶಾಲೆಗೆ ವರ್ಗಾವಣೆಗೊಂಡೆ. ಎಲ್ಲಾ ಅಧ್ಯಾಪಕರು, ಮಕ್ಕಳು ನನ್ನನ್ನು ಪ್ರೀತಿ ಅಭಿಮಾನಗಳಿಂದ ಬರಮಾಡಿಕೊಂಡರು. 
     ಆಗಿನ ವಿದ್ಯಾರ್ಥಿಗಳು ಪತ್ರಿಕೆ ಓದುತ್ತಿದ್ದರು. ಕಥೆ, ಕವನ, ಲೇಖನ ಇತ್ಯಾದಿ ನಮ್ಮ "ಪ್ರತಿಭಾರಂಗ" ಅಂಕಣಕ್ಕೆ ಭಾವಚಿತ್ರ ಸಹಿತ ಬರೆಯುತ್ತಿದ್ದರು. ನನ್ನ ಫೊಟೋವೂ ಪ್ರಕಟವಾಗುತ್ತಿತ್ತು. ಆ ಕಾಲದ ನಮ್ಮ ಶಾಲಾ "ಮಕ್ಕಳ ಜಗಲಿ ನಳನಳಿಸುತ್ತಿತ್ತು."
     ಅದೊಂದು ದಿನ ನಾನು 9ನೇ ತರಗತಿಗೆ ಕನ್ನಡ ಪಾಠ ಮಾಡಲು ಹೋದೆ. ಸುಮಾರು 110 ವಿದ್ಯಾರ್ಥಿಗಳಿದ್ದರು. ಪಾಠದ ಹೆಸರು ಬರೆದೆ. ಒಂದು ನುಡಿಮುತ್ತು ಬರೆಯುವ ಹವ್ಯಾಸವೂ ಇತ್ತು. ಪಾಠ ಮುಂದುವರಿಯುತ್ತಿತ್ತು.. ಸುಮಾರು ಅರ್ಧ ಗಂಟೆ ಕಳೆದಾಗ ಹಿಂದಿನ ಸಾಲಿನ ವಿದ್ಯಾರ್ಥಿನಿಯರ ಗುಂಪಿನಿಂದ "ನಗೆಮಿಂಚು" ಜೋರಾಗಿ ಗುಡುಗಿತು. ಎಲ್ಲರ ಗಮನ ಆ ಗುಂಪಿನ ಕಡೆಗೆ ಹರಿಯಿತು.
      ನಾನು ಪಾಠ ನಿಲ್ಲಿಸಿ ವಿಚಾರಿಸಿದಾಗ ಒಬ್ಬಳು ವಿದ್ಯಾರ್ಥಿನಿ ನಡುಗುತ್ತ ಎದ್ದು ನಿಂತು ನನ್ನ ಕೈಗೆ ಒಂದು ವರ್ಣರಂಜಿತ ಕವರನ್ನು ಕೊಟ್ಟಳು. ಅಷ್ಟೊತ್ತಿಗೆ ಪಾಠದ ಅವಧಿಯೂ ಮುಗಿದಿತ್ತು. "ಏನಿಲ್ಲ...ಕಥೆ-ಕವನ.. ನೀವೂ ಬರೆದು ಕೊಡಿ.." ಎಂದು ಹೇಳಿ.. ಆ ಕವರಿನೊಳಗೆ ಏನಿರಬಹುದು??' ಎಂಬ ಕುತೂಹಲ ಬೇರೆ. ನಮ್ಮ ಅಧ್ಯಾಪಕರ ಕೊಠಡಿಗೆ ಹೋದಾಗ ನನ್ನ ಬೆನ್ನ ಹಿಂದೆಯೇ ಆ ವಿದ್ಯಾರ್ಥಿನಿಯೂ ಬರುತ್ತಿದ್ದಳು. ಅಧ್ಯಾಪಕರ ಕೊಠಡಿಯಲ್ಲಿ ಬೆರಳೆಣಿಕೆಯ ಅಧ್ಯಾಪಕರಿದ್ದರು.
       ಆ ವಿದ್ಯಾರ್ಥಿನಿ ನನ್ನ ಕಾಲಿಗೆ ಅಡ್ಡ ಬೀಳಲು ತೊಡಗಿದಾಗ ನಾನು ದೂರ ಸರಿದು ತಡೆದೆ. "ನೋಡಮ್ಮ ನೀನು ಅಳು ನಿಲ್ಲಿಸ ಬೇಕು. ಈ ಕವರಿನಲ್ಲಿ ಏನಿದೆ ಎಂದು ನಾನು ನೋಡಲೇ ಇಲ್ಲ.. ನೀನು ಏನೋ ತಪ್ಪು ಮಾಡಿದವರಂತೆ ಅಳುವುದು... ಉಳಿದವರು ನಿನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಮಜಾತೆಗೆದುಕೊಳ್ಳುವುದು... ಇದೆಲ್ಲ ಸಾಮಾನ್ಯ ಬಿಡು.." ಎಂದಾಗ ಆಕೆ "ಸರ್ ನಾನು ನನ್ನ ಗೆಳತಿಗೆ ಕೊಡಲು ಒಂದು ಚಿತ್ರ ಮಾಡಿ ಅದರಲ್ಲಿ "ಐ..ಲವ್..ಯೂ.." ಎಂದು ಬರೆದು ನೀವು ಬರೆದ ಒಂದು ಹನಿಗವನವನ್ನೂ ಬರೆದಿದ್ದೆ. ಅದನ್ನು ನಮ್ಮ ಬೆಂಚಿನ ಕೆಲವರು ಕನ್ನಡ ಸರ್ ಗೆ ಕೊಡುತ್ತೇವೆ.. 'ಎಂದು ಹೆದರಿಸಿದರು. ನನ್ನ ಗೆಳತಿ ಇಂದು ಶಾಲೆಗೆ ಬಂದಿಲ್ಲ ಸರ್..' ಎಂದು ಹೇಳುತ್ತಾ ಮತ್ತೆ ಅಳು.. ಕಣ್ಣೀರ ಕೋಡಿ.
    ಆಗ ನಾನೆಂದೆ.. "ಇದೂ ಒಂದು ಸಾಹಿತ್ಯ...ತಪ್ಪಲ್ಲ.. ನಿನ್ನ ಮನಸ್ಸಿಗೆ ನೋವು ಉಂಟುಮಾಡಿ ಮುಂದೆ ಏನೇನೋ ಕಥೆ ಕಟ್ಟವ ನಮ್ಮವರೇ ನಮ್ಮ ಸುತ್ತಮುತ್ತ ಇದ್ದಾರೆ. ನೀನು ಅಳು ನಿಲ್ಲಿಸು. ನಿನ್ನ ಗೆಳತಿ ನಾಳೆ ಬಂದರೆ ನಮ್ಮ ಕನ್ನಡ ತರಗತಿಯಲ್ಲೇ ಅವಳಿಗೆ ನೀನು ಕೊಡು. ಇಂದು ಅವಳ ಹುಟ್ಟಿದ ಹಬ್ಬ. 'ಐ ಲವ್ ಯೂ...' ಎನ್ನುವ ಮಾತು ಕೆಟ್ಟದ್ದಲ್ಲ. ನಾವು ಬಳಸುವುದರಲ್ಲಿದೆ. ನೀನು ನಿನ್ನ ಚಿತ್ರ-ಕವನ ಬರೆಯುವ ಹವ್ಯಾಸ ಮುಂದುವರಿಸು.. ಶುಭಾಶಯಗಳು.." ಎಂದು ಹೇಳಿದಾಗ ಅವಳ ಮೊಗದಲ್ಲಿ ನಗುಮಿಂಚಿತು. 
   ಮರುದಿನ ಪದ್ಯವೊಂದರ ಪಾಠ.. ಅದು ಪರಿಸರ ಪ್ರೇಮ.. ದೇಶ ಪ್ರೇಮಕ್ಕೆ ಸಂಬಂಧಿಸಿದ್ದು. ಆ ಹುಡುಗಿಯೂ ಬಂದಿದ್ದಳು. ಅವಳಿಗೆ ಹುಟ್ಟುಹಬ್ಬದ ಕೊಡುಗೆಯಾಗಿ ಗುಲಾಬಿ ಹೂವು.. ಚಿತ್ರಕವನ.. ಒಂದು ಕಲರ್ ಪೆನ್ನು ಗಟ್ಟಿಯಾಗಿ "ಐ ಲವ್ ಯೂ.." ಎಂದು ಹೇಳಿದಳು. ನಾನು ಕನ್ನಡ ಅಧ್ಯಾಪಕನ ನೆಲೆಯಲ್ಲಿ... "ನನ್ನ ಜೀವದ ಗೆಳತಿ ನಿನ್ನನ್ನು ನಾನು ತುಂಬಾ ಪ್ರೀತಿಸುತ್ತೇನೆ.." ಎಂದು ಹೇಳಿಸಿ ಘಟನೆಗೆ ಸುಖಾಂತ್ಯ ಕಾಣಿಸಿದೆ...
     ನೋಡಿ ನಮ್ಮ ಭಾವನೆಗಳು ಎಳೆಯ ಪ್ರಾಯದಲ್ಲೇ ಹೇಗೆ ಹಳಿ ತಪ್ಪುತ್ತವಲ್ಲ..!! ಮುಂದೆ ನಾವು ಪ್ರಕಟಿಸಿದ ಶಾಲಾ ಸಂಚಿಕೆಯಲ್ಲಿ ಮಕ್ಕಳ ಕವನ ಚಿತ್ರಗಳನ್ನು ಪ್ರಕಟಿಸಿದೆವು. ತರಗತಿಯಲ್ಲಿ ಹುಟ್ಟುಹಬ್ಬದ ಸರಳ ಆಚರಣೆಯೂ ನಡೆಯುತ್ತಿತ್ತು. ಮುಂದೆ ಹತ್ತನೇ ತರಗತಿಯಲ್ಲಿ ಶೇಕಡಾ 100 ಅಂಕಗಳಿಸಿ ಹೆಚ್ಚಿನವರು ಉತ್ತೀರ್ಣವಾದರು. ಇದು 22-23ವರ್ಷಗಳ ಹಿಂದಿನ ಪ್ರಸಂಗ...
............................ ನಾರಾಯಣ ರೈ ಕುಕ್ಕುವಳ್ಳಿ
ನಿವೃತ್ತ ಪದವೀಧರ ಶಿಕ್ಷಕರು.
ಮಧುಪ್ರಪಂಚ ಪತ್ರಿಕಾ ಪ್ರಧಾನ ಸಂಪಾದಕ 
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 90719 64152
*******************************************
Ads on article

Advertise in articles 1

advertising articles 2

Advertise under the article