-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 16

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 16

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 16
ಲೇಖಕರು : ಜನಾರ್ಧನ ದುರ್ಗ
ಶಿಕ್ಷಕರು
ದ.ಕ.ಜಿ.ಪಂ.ಉ.ಹಿ. ಪ್ರಾಥಮಿಕ ಶಾಲೆ ಬಡಗನ್ನೂರು.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 99729 91018          
       

    ಹೌದು, ಆ ಹುಡುಗ ಪ್ರತಿ ದಿನ ನನ್ನ ಬರುವಿಕೆಗಾಗಿ ಕಾಯುತ್ತಿರುತ್ತಾನೆ. ಹೀಗೆಂದರೆ ನಿಮಗೆ ಆಶ್ಚರ್ಯವಾಗುತ್ತದೆಂದು ನನಗೂ ಗೊತ್ತು. ಆದರೆ ಇದು ಸತ್ಯ!. ಭೌತಿಕ ಸುಖಭೋಗಗಳಲ್ಲೆ ತನ್ನೆಲ್ಲಾ ಸುಖಸಂತೋಷವನ್ನು ಕಾಣಬಯಸುವ ಈಗಿನ ಮಕ್ಕಳಲ್ಲಿ ''ಇಂಥಹಾ ಶಿಷ್ಯಂದಿರು ಇರುವರೇ..?'' ಎಂದು ನೀವು ಹುಬ್ಬೇರಿಸುವಿರೆಂದು ನಾನು ಬಲ್ಲೆ. ಆದರೆ ನನ್ನ ಹುಡುಗ ಶಿವರಾಜ್ (ಹೆಸರು ಬದಲಿಸಲಾಗಿದೆ) ಪ್ರತಿ ದಿನ ನನ್ನ ಬರುವಿಗಾಗಿ ಕಾಯುತ್ತಾನೆ. ನನ್ನನ್ನು ಕಂಡ ಕೂಡಲೇ ಆ ಮುಖಾರವಿಂದ ಅರಳುತ್ತದೆ. ಬಹುತೇಕ ಸಂದರ್ಭಗಳಲ್ಲಿ ಅಧ್ಯಾಪಕರ ಕೊಠಡಿಗೆ ನಮ್ಮಿಬ್ಬರದ್ದು ಜೋಡಿ ಪ್ರವೇಶ. ಅಬ್ಬಾ..! ಎಷ್ಟೊಂದು ಆತ್ಮರತಿ ಮಾಡಿಕೊಳ್ಳುತ್ತಿದ್ದಾನೆ ಈ ಮನುಷ್ಯ ಎಂದು ನೀವು ಅಂದು ಕೊಳ್ಳುತ್ತಿದ್ದಿರಾದರೆ ಹೇಳುತ್ತೇನೆ ಕೇಳಿ.
         ಅದೊಂದು ದಿನ ಎರಡನೇ ತರಗತಿಯ ಹುಡುಗ ತಂದು ತೋರಿಸಿದ ಗಾಂಧಿಯ ಚಿತ್ರ ನೋಡಿದ ನಮ್ಮ ಮುಖ್ಯ ಶಿಕ್ಷಕಿ ಕಮ್ ನಲಿಕಲಿ ಶಿಕ್ಷಕಿ ಹರಿಣಾಕ್ಷಿ ಮೇಡಂ "ಸರ್ ಆ ಚಿತ್ರ ಒಮ್ಮೆ ನೋಡಿ, ಚಂದ ಬಿಡಿಸಿದ್ದಾರೆ ನಮ್ಮ ಮಕ್ಕಳು" ಅಂದಾಗ ಆ ಚಿತ್ರ ನೋಡಿದೆ, ಅದು ನನ್ನನ್ನು ವಿಶೇಷವಾಗಿ ಸೆಳೆಯಿತು. ಕಾರಣ ಅದೊಂದು ಪ್ರಬುದ್ಧ ರೇಖೆಗಳಿಂದೊಡಗೂಡಿದ ಆಕರ್ಷಕ ಭಾವಚಿತ್ರ. ಅದಕ್ಕೆ ರೈಟ್ ಮಾರ್ಕ್ ಕೊಟ್ಟು ''ಇದು ಯಾರು ಬಿಡಿಸಿ ಕೊಟ್ಟದ್ದು, ನೀನು ಬಿಡಿಸಿದ್ದಲ್ವಲ್ಲ..?'' ಸಂಶಯದಲ್ಲೆ ಕೇಳಿದೆ, ''ಅದು ಶಿವರಾಜ್ ಬಿಡಿಸಿ ಕೊಟ್ಟದ್ದು ಸರ್, ಮಹೇಶನಿಗು ಬಿಡಿಸಿಕೊಟ್ಟಿದ್ದಾನೆ ಸರ್ ನೋಡಿ…'' ನೋಡಿದರೆ ಎರಡೂ ಚಿತ್ರಗಳು ತದ್ರೂಪದಂತಿವೆ. ಸರಿ ಅವನನ್ನು ಬರ್ಲಿಕ್ಕೆ ಹೇಳು ಎಂದೆ.
      ಶಿವರಾಜ್ ಬಂದು ಎದುರು ನಿಂತಿದ್ದಾನೆ. ನನ್ನ ಮುಖ ನೋಡದೆ ಅಪರಾಧಿಯಂತೆ ನೆಲ ನೋಟಕನಾಗಿ ನಿಂತಿದ್ದಾನೆ!, ಕಣ್ಣ ರೆಪ್ಪೆಗಳು ಒಂದೇ ಸಮನೆ ಬಡಿದುಕೊಳ್ಳುತ್ತಿವೆ. ಇನ್ನು ನಾನು ಗಂಭೀರ ಮುಖದೊಂದಿಗೆ ಮುಂದುವರೆದರಾಗದೆಂದು ಸ್ಪಷ್ಟವಾಗಿ ಹತ್ತಿರಕ್ಕೆ ಕರೆದು ತಲೆ ಸವರುತ್ತ ಸ್ವಲ್ಪ ಹೆಚ್ಚೇ ಕಾಳಜಿ ತೋರುವಂತೆ ಕೇಳಿದೆ. ಯಾಕೆಂದರೆ ನನಗೆ ಸತ್ಯ ಬೇಕಿತ್ತು ಅಷ್ಟೇ. 'ಇದು ನೀನು ಬಿಡಿಸಿದ್ದಾ? ಎಷ್ಟು ಚಂದಾಗಿದೆ! ಸೂ…ಪರ್!" ಕೈ ಮಾಡಿ ತೋರಿಸಿದೆ. ಮುದುರಿದ್ದ ಮುಖ ಮಂದಹಾಸ ಬೀರಿತು! "ಹೌದು ನಾನೆ ಮಾಡಿದ್ದು'' ಸಂಕೋಚದಿಂದಲೆ ಉತ್ತರ ಬಂದಿತು. ಆಗಲೂ ನೋಟ ಗೋಡೆಯ ಮೇಲಿತ್ತೆ ಹೊರತು ನನ್ನೆಡೆಗೆ ನೋಡಲು ಹಿಂಜರಿಯುತ್ತಿತ್ತು, ''ಹೌದಾ..? ಎಲ್ಲಿ ನೋಡಿ ಬಿಡಿಸಿದ್ದು…? ಚಿತ್ರದ ಅಡಿಯಲ್ಲಿ ಪೇಪರ್ ಇಟ್ಟು ಒತ್ತಿದ್ದ..? ಚಂದ ಆಗಿದೆ ಮಾತ್ರ…'' ಅಂದೆ, ''ಇಲ್ಲ ಒತ್ತಿದ್ದಲ್ಲ ನಾನೆ ಬಿಡಿಸಿದ್ದು'' ತಟ್ಟನೆ ಉತ್ತರ ಬಂದಿತಾದರೂ ಕೈಗಳಲ್ಲಿನ ನಡುಕವನ್ನು ಗಮನಿಸದಿರಲಿಲ್ಲ. ಚಿತ್ರದ ಅಡಿ ಮುಟ್ಟಿ ನೋಡಿದರೆ ಯಾರಾದರೂ ಒತ್ತಿ ಬಿಡಿಸಿದ್ದೆಂದು ಸುಲಭದಲ್ಲಿ ಹೇಳಬಹುದಿತ್ತು. ಆದರೆ ನನಗೆ ಹುಡುಗನನ್ನು ಅಪರಾಧಿಯೆಂದು ಕಂಡು ಹಿಡಿದು ಧೀರನಾಗುವುದು ಆ ಸಂದರ್ಭದಲ್ಲಿ ಬೇಕಿಲ್ಲವೆನಿಸಿತು. ''ಸರಿ ನೀನು ನಾಳೆ ಮಧ್ಯಾಹ್ನ ಒಂದು ಕಾಗದ ಹಿಡ್ಕೊಂಡು ಇಲ್ಲಿ ಬಂದು ಗಾಂಧೀಜಿ ಚಿತ್ರ ಬಿಡಿಸ್ಬೇಕು ಆಯ್ತಾ, ಎಲ್ಲಾ ಟೀಚರ್ಸ್ ಗು ನೋಡ್ಬೇಕಂತೆ.., ನೀನು ಅಷ್ಟು ಚಂದ ಬಿಡಿಸುವುದು ನೋಡಿ ಎಲ್ಲರಿಗೂ ಖುಷಿಯಾಗಿದೆ'', ಮಿಕ ಸಿಕ್ಕಿ ಹಾಕ್ಕೊಂಡಿತೆಂದುಕೊಂಡು ಮನಸ್ಸಿನೊಳಗೆ ನನ್ನ ಬುದ್ಧಿವಂತಿಕೆಗೆ ಶಹಬ್ಬಾಸ್ ಹೇಳಿದೆ!.
        ಮರುದಿನ ಶಿವರಾಜ್ ಮೊದಲ ಅವಧಿಯಲ್ಲೆ ಬಂದಿದ್ದಾನೆ. ನೋಡ ನೋಡುತ್ತಿದ್ದಂತೆ ಗಾಂಧಿ ಚಿತ್ರ ತಯಾರಾಗಿತ್ತು! ಸರಿಯಾಗಿ ಸಮಯ ಗಮನಿಸಿದ್ದಿದ್ದರೆ ಎರಡು ಮೂರು ನಿಮಿಷದ ಅವಧಿ ಮೀರುತ್ತಿರಲಿಲ್ಲವೇನೊ, ನೋಡಿದರೆ ಮೊದಲ ದಿನದ ಚಿತ್ರದಷ್ಟು ಅಲ್ಲದಿದ್ದರೂ ಎರಡನ್ನೂ ಒಬ್ಬನೇ ಬಿಡಿಸಿದ್ದೆಂದು ಹೇಳುವಷ್ಟು ಸಾಮ್ಯತೆ ಇತ್ತು. ಚಿತ್ರದ ಅಡಿ ಭಾಗವನ್ನು ಮುಟ್ಟಿ ಗಮನಿಸಿದೆ‌, ದಪ್ಪ ರೇಖೆ ಹಾಗೆ ಕೈಗೆ ಸಿಗುತ್ತಿತ್ತು. ಅಲ್ಲಿಗೆ ಹುಡುಗ ಅಗ್ನಿ ಪರೀಕ್ಷೆಯಲ್ಲಿ ಪಾಸಾಗಿದ್ದ, ಈಗ ಅವನಿಗಿಂತಲೂ ಹೆಚ್ಚು ಸಂಭ್ರಮಿಸಿದ್ದು ನಾನು ಮತ್ತು ನಮ್ಮ ಸ್ಟಾಫ್. ಪ್ರತಿಭಾ ಕಾರಂಜಿಗೆ ಒಂದು ಜನ ಸಿಕ್ಕಿತೆಂಬ ಶಿಕ್ಷಕ ಸಹಜ ಖುಷಿ ಅದು!!.
         ಅಂದಿನಿಂದ ನಮ್ಮ ಪಯಣ ಶುರು. ಮತ್ತೆ ಸೂಕ್ಷ್ಮವಾಗಿ ನೋಡಿದಾಗ ಆ ಹುಡುಗನಿಗೆ ಹಿಂಜರಿಕೆ ಸ್ವಭಾವ ಯಥೇಚ್ಛವಾಗಿ ಆವರಿಸಿಕೊಂಡಿದ್ದಿತು. ಹೊಗಳಿಕೆ ಮತ್ತು ಪ್ರೀತಿಯ ಎರಡು ಗುಳಿಗೆಗಳನ್ನು ಪ್ರತೀ ದಿನ ಕೊಟ್ಟು ನೋಡುವ ಎಂಬ ತೀರ್ಮಾನಕ್ಕೆ ಬಂದೆ. ಹತ್ತಿರ ಕರೆದು ತಲೆ ನೇವರಿಸಿ, ಬೆನ್ನು ತಟ್ಟಿ ''ನಾಳೆಯಿಂದ ನಿನಗೆ ಒಂದೊಂದು ಚಿತ್ರವನ್ನು ವಾಟ್ಸಪ್ ನಲ್ಲಿ ಹಾಕುತ್ತೇನೆ ನೀನು ಬಿಡಿಸಿ ತಂದು ತೋರಿಸಬೇಕು" ಎಂದೆ. ಸರಿಯೆಂದು ತಲೆ ಆಡಿಸಿದ. ಮುಖದಲ್ಲಿ ಸಂಭ್ರಮ ಮನೆ ಮಾಡಿದ್ದನ್ನು ಗಮನಿಸಿದೆ.
          ಅಂದಿನಿಂದ ಬೇರೆ ಬೇರೆ ಖ್ಯಾತನಾಮರ ಭಾವಚಿತ್ರ, ಪರಿಸರದ ಚಿತ್ರಗಳನ್ನು ಕೊಟ್ಟರೆ ನಾವು ನಿಬ್ಬೆರಗಾಗುವಂತೆ ಬಿಡಿಸಿಕೊಂಡು ಬರುವ ಶಿವರಾಜ್ ನಮ್ಮೆಲ್ಲರ ಕಣ್ಮಣಿಯಾಗಿ ಹೋದ. ಅಷ್ಟಕ್ಕೇ ತೃಪ್ತರಾಗದೆ ಗೋಡೆಯ ಮೇಲಿನ ಮಹನೀಯರ ಭಾವಚಿತ್ರಗಳನ್ನು ನಮ್ಮ ಮುಂದೆಯೆ ಬಿಡಿಸಲು ಹೇಳಿ ಅಲ್ಲೂ ಸೈ ಎನಿಸುವಷ್ಟು ಬಿಡಿಸಿ ತೋರಿಸಿದ.
            ಇದಿಷ್ಟು ಆರಂಭದಲ್ಲಿ ನಾವು ಇಟ್ಟ ಪರೀಕ್ಷೆಗಳಾದರೆ ಈಗ ನಮಗೇ ಪರೀಕ್ಷೆ ಒಡ್ಡುವಷ್ಟು ಆತ್ಮೀಯತೆ ಬೆಳೆಸಿಕೊಂಡಿದ್ದಾನೆ. ಇಂದು ಚಿತ್ರ ಕಳುಹಿಸಿದ ಮರುದಿನ ನಾನು ಬಂದು ತಲುಪುತ್ತಲೆ ಜಗಲಿಯಲ್ಲಿ ಚಿತ್ರದೊಂದಿಗೆ ಹಾಜರಾಗುತ್ತಾನೆ. ಮುಖ ಕೊಟ್ಟು ಮಾತನಾಡಲು ನಡುಗುತ್ತಿದ್ದ ಅದೇ ಹುಡುಗ ಚಿತ್ರ ಕಳುಹಿಸಲು ಮರೆತ ದಿನ ಬಂದು "ಇವತ್ತು ಯಾಕೆ ಸರ್ ಚಿತ್ರ ಕಳಿಸ್ಲಿಲ್ಲ?" ಎಂದು ಪ್ರಶ್ನಿಸುತ್ತಾನೆ ಮತ್ತು ನನಗೆ ಇಂತಹಾ ಚಿತ್ರವೇ ಕಳುಹಿಸಿ ಎಂದು ಗಟ್ಟಿ ಮನವಿಯನ್ನೆ ಸಲ್ಲಿಸಿ ನಗೆ ಬೀರುತ್ತಾನೆ. ಕೆಲವೊಮ್ಮೆ ಎರಡು ಮೂರು ದಿನ ಮರೆತೆನೆಂದರೆ "ಇವತ್ತು ಕಳಿಸ್ಲೇ ಬೇಕು ಇಲ್ಲಂದ್ರೆ ನನಗೆ ಗೊತ್ತಿಲ್ಲ…" ಎಂಬ ವಾರ್ನಿಂಗ್ ಅನ್ನು ನಾನು ಎದುರಿಸಬೇಕು.
            ಹುಡುಗನ ಅಮ್ಮ ಹೇಳುವಂತೆ, ನಾನೇನಾದರೂ ಟ್ರೈನಿಂಗ್ ನಂತಹ ಕಾರಣಕ್ಕೆ ದೀರ್ಘಾವಧಿಯ ರಜೆಯಲ್ಲಿದ್ದರೆ "ಸರ್ ಇನ್ನು ಬರುವುದಿಲ್ವ ಶಾಲೆಗೆ?" ಎಂದು ಹಲುಬುತ್ತಾನಂತೆ. ಶಿಕ್ಷಕನಾಗಿ ಇದಕ್ಕಿಂತ ದೊಡ್ಡ ಪ್ರಶಸ್ತಿ ಯಾರಿಗೂ ಲಭಿಸದೆಂಬ ಸಂಭ್ರಮವಷ್ಟೆ ನನ್ನದು. ಅಂತೂ ಇಂತೂ ಇಲ್ಲಿ ಪ್ರೀತಿಯು ಗೆದ್ದಿತು. ಅಂದ ಹಾಗೆ ಇಲ್ಲಿ ಬರುವ 'ನಾನು' ಒಬ್ಬ ಚಿತ್ರಕಲಾ ಶಿಕ್ಷಕನೂ ಅಲ್ಲ, ಚಂದ ಚಿತ್ರ ಬಿಡಿಸುವುದಕ್ಕೆ ಬರುವವನೂ ಅಲ್ಲ, ಚಂದದ ಚಿತ್ರವನ್ನು ನೋಡಿ ಸಂಭ್ರಮಿಸುವುದರಲ್ಲಿ ಹಿಂದೆ ಬಿದ್ದಿಲ್ಲ ಬಿಟ್ಟರೆ ಇಲ್ಲಿ ನನ್ನದೇನು ಹಿರಿಮೆಯಿಲ್ಲ. ಆದರೆ ನಾನಿಷ್ಟೆ ಹೇಳಬಲ್ಲೆ ಬಿಸಿಲ ಗುಡ್ಡದ ಗಿಡಕ್ಕೆ ಪ್ರೀತಿಯ ಸಿಂಚನ ಗಿಡವನ್ನು ಚಿಗುರಿಸುವುದು ಖಂಡಿತ, ಹಾಗೆಂದು ತೊರೆಯ ಪಕ್ಕದ ಗಿಡವಾಗಿದ್ದರೆ ಬೇಕಿರುವುದು ನೀರಲ್ಲ ಬಿಸಿಲೆಂದು ತಿಳಿದಿರುವುದು ಕೂಡ ಅಷ್ಟೇ ಅವಶ್ಯಕ.
.................................... ಜನಾರ್ಧನ ದುರ್ಗ
ಶಿಕ್ಷಕರು, 
ದ.ಕ.ಜಿ.ಪಂ.ಉ.ಹಿ. ಪ್ರಾಥಮಿಕ ಶಾಲೆ ಬಡಗನ್ನೂರು.
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 99729 91018
******************************************   



Ads on article

Advertise in articles 1

advertising articles 2

Advertise under the article