-->
ರಾಷ್ಟ್ರಿಯ ಯೋಗಪಟು : ಸಾನ್ವಿ ದೊಡ್ಡಮನೆ ಪಂಜ

ರಾಷ್ಟ್ರಿಯ ಯೋಗಪಟು : ಸಾನ್ವಿ ದೊಡ್ಡಮನೆ ಪಂಜ

ಲೇಖನ : ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 

                
    ಇಂದು ಜೂನ್ 21- ವಿಶ್ವ ಯೋಗ ದಿನಾಚರಣೆ. ಭಾರತದ ಕೊಡುಗೆಯನ್ನು ಇಡೀ ಜಗತ್ತಿಗೆ ಪಸರಿಸಿದ ನೆನಪಿನ ದಿನ. ಇಂದು ಯೋಗದ ಮಹತ್ವವನ್ನು ವಿಶ್ವವೇ ಗಮನಿಸುತ್ತಿದೆ.
      ದೇಹದ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಯೋಗ ಅಭ್ಯಾಸವನ್ನು ನಿರಂತರವಾಗಿ ಮಾಡುತ್ತೇವೆ. ಇದರ ಜೊತೆಗೆ ಸಾಧನೆಗಾಗಿ ತೊಡಗಿರುವ ಅನೇಕರನ್ನು ಬಹಳಷ್ಟು ಕಾಲದಿಂದ ನೋಡುತ್ತಾ ಬಂದಿದ್ದೇವೆ. ಬಾಲ್ಯದಿಂದಲೇ ಯೋಗವನ್ನು ಇಷ್ಟಪಟ್ಟು ಅಭ್ಯಾಸ ಮಾಡಿ ಸಾಧನೆ ಮೆರೆದ ಪುಟ್ಟ ಬಾಲಕಿಯ ಸಾಧನೆಯ ಕಥೆ ಇಲ್ಲಿದೆ.
   ಈಕೆಯ ಹೆಸರು ಸಾನ್ವಿ ದೊಡ್ಡಮನೆ ಪಂಜ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸೈಂಟ್ ಆನ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಡಬ 6ನೇ ತರಗತಿಯಲ್ಲಿ ಕಲಿಯುತ್ತಿರುವ ಹುಡುಗಿ. ಕಡಬದ ಶ್ರೀ ಮೂಕಾಂಬಿಕಾ ಮಾರುತಿ ಆಟೋ ವರ್ಕ್ ಮಾಲಕ ನಿತ್ಯಾನಂದ ದೊಡ್ಡಮನೆ ಮತ್ತು ಶ್ರೀಮತಿ ಸೀತಾಲಕ್ಷ್ಮಿ ದಂಪತಿಯ ಪುತ್ರಿ. ಪುಟ್ಟ ಪುಟ್ಟ ಹೆಜ್ಜೆ ಇಡುವಾಗಲೇ ಯೋಗಾಸನಗಳನ್ನು ಗಮನಿಸುತ್ತಿದ್ದ ಕಣ್ಣುಗಳಿಂದಲೇ ಭವಿಷ್ಯದ ಯೋಗ ತಾರೆಯನ್ನು ಗಮನಿಸಿದ ತಂದೆ ತಾಯಿ ನಿಜವಾಗಲೂ ಶ್ರೇಷ್ಠರು. ಸುಳ್ಯದ ನಿರಂತರ ಯೋಗ ಕೇಂದ್ರದ ಶರತ್ ಮರ್ಗಿಲಡ್ಕ ಇವರ ಬಳಿ ಯೋಗ ಅಭ್ಯಾಸಕ್ಕೆ ಸೇರಿಸಿ ಸಾನ್ವಿಯ ಕನಸನ್ನು ಬೆಳಗಿದರು.
     ನಿರಂತರ ಅಭ್ಯಾಸ ಸಾಧನೆಯ ಮೆಟ್ಟಿಲನ್ನೇರಲು ಸಾಧ್ಯವಾಯಿತು. ಸಾನ್ವಿ , 5ನೇ ತರಗತಿಯವರೆಗೆ ಅಧ್ಯಯನ ಮಾಡಿದ ಕಡಬದ ಕ್ನನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರ ಸಹಕಾರವನ್ನು ಪ್ರೀತಿಯಿಂದ ನೆನೆಸಿಕೊಳ್ಳುತ್ತಾರೆ. 
     ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ
ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಸೂರು ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ, ಎಸ್.ಜಿ.ಎಸ್‌. ಅಂತಾರಾಷ್ಟ್ರೀಯ ಯೋಗ ಪ್ರತಿಷ್ಠಾನ ಹಾಗೂ ಮೈಸೂರು ಯೋಗ ಒಕ್ಕೂಟದ ಸಹಯೋಗದೊಂದಿಗೆ ರಾಷ್ಟ್ರೀಯ ಹಬ್ಬಗಳ ಆಚರಣೆಯ ಅಂಗವಾಗಿ ಮೈಸೂರಿನಲ್ಲಿ ನಡೆದ
ದಕ್ಷಿಣ ಭಾರತ ಯೋಗಾಸನ ಕ್ರೀಡಾ ಸ್ಪರ್ಧೆಯಲ್ಲಿ ಸಾನ್ವಿ ಡಿ 9 - 12 ವಯೋಮಿತಿಯ ವಿಭಾಗದಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದಾರೆ.    
    ವರ್ಷಿಣಿ ಯೋಗ ಎಜುಕೇಶನ್ ಮತ್ತು ಕಲ್ಬರಲ್ ಸ್ಪೋರ್ಟ್ಸ್ ಟ್ರಸ್ಟ್ ಹಾಗೂ ಆಯುಷ್ ಮತ್ತು ಯೂತ್ ಸರ್ವಿಸ್ ಇವರು ಗೋವಾದಲ್ಲಿ ಆಯೋಜಿಸಿದ್ದ 8ನೇ ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯ 11 ರಿಂದ 15 ವಯೋಮಿತಿ ವಿಭಾಗದಲ್ಲಿ ಸಾನ್ವಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಆಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾದರು.
  

     ಯೋಗಾಸನದಲ್ಲಿ ಸಾನ್ವಿ ದೊಡ್ಡಮನೆ ಪಂಜರವರು ನೋಬೆಲ್ ವರ್ಲ್ಡ್ ರೆಕಾರ್ಡ್ 2022 ಹಾಗೂ
ಭಾರತದಿಂದ ಪ್ರಸ್ತುತಪಡಿಸಲಾದ ಇಂಟರ್ ನ್ಯಾಷನಲ್ ಎಕ್ಸಲೆನ್ಸ್ ಯೋಗಾಸನ ಪ್ಲೇಯರ್ - 2022 ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇಷ್ಟು ದೊಡ್ಡ ಮಟ್ಟದ ಗೌರವಗಳನ್ನು ಪಡೆದುಕೊಂಡಿರುವ ಸಾನ್ವಿಯ ಸಾಧನೆ ನಿಜಕ್ಕೂ ಪ್ರಶಂಸನೀಯ.
      ಗಿಸಾ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ಆಯೋಜಿಸಿದ ಒಂದು ನಿಮಿಷದಲ್ಲಿ ಅತಿ ಹೆಚ್ಚು ಬಾರಿ ಭುಜಂಗಾಸನ ಮತ್ತು ಪರ್ವತಾಸನ ಮಾಡುವ ಮೂಲಕ ಅಂತಾರಾಷ್ಟ್ರೀಯ ಯೋಗ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾನ್ವಿ ಭಾಗವಹಿಸಿ ಪ್ರಮಾಣ ಪತ್ರ ಮತ್ತು ಪದಕವನ್ನು ಪಡೆದಿರುತ್ತಾರೆ. 
     ಇಷ್ಟು ಸಣ್ಣ ಹರಯದಲ್ಲಿ ಸಾಧನೆ ಮೇಲೆ ಸಾಧನೆ ಮಾಡುತ್ತಿರುವ ಸಾನ್ವಿ ಅದ್ಭುತ ಪ್ರತಿಭೆ. ಇವರು ಕಲಿಕೆ, ಚಿತ್ರಕಲೆ, ಹಾಗೂ ಶಾಲೆಯಲ್ಲಿ ನಡೆಸಲಾಗುವ ಎಲ್ಲಾ ಚಟುವಟಿಕೆಗಳಲ್ಲೂ ಪ್ರತಿಭಾನ್ವಿತ ವಿದ್ಯಾರ್ಥಿನಿ.ಇವರು ಚಿತ್ರಿಸಿರುವ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

      ಇಲ್ಲಿ ಚಿತ್ರಿಸಿರುವ ಪ್ರತಿಯೊಂದು ಚಿತ್ರಗಳು ಸೊಗಸಾಗಿದೆ. ಚಿತ್ರಕಲಾ ಗುರುಗಳಾದ ಪ್ರತಿಭಾನ್ವಿತ ಕಲಾವಿದ ಸತೀಶ್ ಪಂಜ ಇವರ ಇವರ ಕಲಾ ಶಾಲೆಯಲ್ಲಿ ಅಭ್ಯಸಿಸುತ್ತಿರುವ ಈಕೆ ಭವಿಷ್ಯದಲ್ಲಿ ಉತ್ತಮ ಚಿತ್ರಕಲಾವಿದೆಯಾಗಿಯೂ ಬೆಳೆಗಲು ವಿಪುಲ ಅವಕಾಶವಿದೆ. ಇಂದಿನ ಮೊಬೈಲ್ ಟಿವಿ ಯುಗದಲ್ಲಿ ಡಿಜಿಟಲ್ ಗೇಮ್ ಗಳಲ್ಲಿ ಮಗ್ನವಾಗಿರುವ ಮಕ್ಕಳಿಗಿಲ್ಲಿ ದೊಡ್ಡ ಸಂದೇಶವಿದೆ. ಪ್ರತಿಯೊಂದು ಮನೆಯಲ್ಲಿಯೂ ಮಕ್ಕಳಿಗೆ ಸಂಸ್ಕಾರಯುತವಾದ ಹವ್ಯಾಸಗಳನ್ನು ಬೆಳೆಸಿದರೆ ಮಕ್ಕಳು ಸಾಧನೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿದೆ. 
    ಬಹುಮುಖ ಪ್ರತಿಭೆಯ ಸಾನ್ವಿ ದೊಡ್ಡಮನೆ ಪಂಜ ಪ್ರಶಸ್ತಿಗಳ ಸರಮಾಲೆಗಳನ್ನು ಪಡೆಯಲಿ. ನಿರಂತರ ಅಧ್ಯಯನಗಳನ್ನು ಮಾಡುತ್ತಾ ಈ ನಾಡಿಗೆ ದೊಡ್ಡ ಕೊಡುಗೆಯಾಗಿ ಹೊರಹೊಮ್ಮಲಿ ಎನ್ನುವುದೇ ಮಕ್ಕಳ ಜಗಲಿಯ ಶುಭ ಹಾರೈಕೆ. 
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************

Ads on article

Advertise in articles 1

advertising articles 2

Advertise under the article