-->
ಯೋಗ : ಜೂನ್ - 21: ವಿಶ್ವ ಯೋಗ ದಿನದ ವಿಶೇಷ ಲೇಖನ

ಯೋಗ : ಜೂನ್ - 21: ವಿಶ್ವ ಯೋಗ ದಿನದ ವಿಶೇಷ ಲೇಖನ

ಲೇಖಕರು : ಮಂಜುಳಾ ಸುಬ್ರಹ್ಮಣ್ಯ ಭಟ್
ಯೋಗ ಶಿಕ್ಷಕಿ, ಸಂಗೀತ ಕಲಾವಿದೆ
ಕುಕ್ಕಾಜೆ, ಪುಚ್ಚೆಕೆರೆ,
ಮಂಚಿ ಅಂಚೆ ಮತ್ತು ಗ್ರಾಮ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


     ಯೋಗ ಎನ್ನುವ ಶಬ್ದವು ಇವತ್ತಿನ ದಿನಗಳಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಶಾರೀರಿಕ ವ್ಯಾಯಾಮ ಎನ್ನುವ ದೃಷ್ಟಿಯಲ್ಲಿ ಸಾಮಾನ್ಯವಾಗಿ ಇದನ್ನು ಬಳಸಲಾಗುತ್ತದೆ. ಆದರೆ ಯೋಗ ಎಂಬುದರ ಅರ್ಥವು ಅತ್ಯಂತ ವಿಸ್ತಾರವಾದುದಾಗಿದೆ. ಮೂಲತಃ "ಯುಜ್" ಎಂಬ ಸಂಸ್ಕೃತ ಧಾತುವಿನಿಂದ ಯೋಗ ಶಬ್ದವು ಉತ್ಪತ್ತಿಯಾಗಿದೆ. ಇದರ ಅರ್ಥವು 'ಜೋಡಿಸುವುದು', 'ಸೇರಿ‌ಸುವುದು' ಎಂಬುದಾಗಿದೆ. ನಮ್ಮ ದೇಹ ಮನಸ್ಸು ಹಾಗೂ ಆತ್ಮಗಳನ್ನು ಜೋಡಿಸುವುದನ್ನು ಯೋಗ ಎನ್ನಬಹುದು. ಅದೇ ರೀತಿ ಆತ್ಮ ಮತ್ತು ಪರಮಾತ್ಮನ ಸಂಯೋಗವನ್ನು ಯೋಗ ಎಂದು ಆಧ್ಯಾತ್ಮಿಕವಾಗಿ ಕರೆಯುತ್ತಾರೆ.
     ಪತಂಜಲಿ ಮಹರ್ಷಿಗಳು ತಮ್ಮ 'ಯೋಗದರ್ಶನ' ದಲ್ಲಿ 'ಯೋಗಶ್ಚಿತ್ತವೃತ್ತಿ ನಿರೋಧಹ' ಎಂದಿದ್ದಾರೆ. ಸದಾ ಆನಂದ ಸ್ವರೂಪಿಗಳಾದ ನಾವು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ ವರ್ಗಗಳಲ್ಲಿ ಸಿಲುಕಿ, ಅಜ್ಞಾನದಿಂದಾಗಿ ದುಃಖವನ್ನು ಅನುಭವಿಸುತ್ತೇವೆ. ಆದರೆ ಯೋಗದ ಅಭ್ಯಾಸವು ನಮ್ಮನ್ನು ಮನಸ್ಸಿನ ಈ ಚಂಚಲತೆಗಳಿಂದ ಪಾರು ಮಾಡಿ ತನ್ನೊಳಗಿನ ಆನಂದದ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ.
      ಅಷ್ಟಾಂಗ ಯೋಗದಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಎಂಟು ಮೆಟ್ಟಿಲುಗಳಿವೆ. ಗುರು ಮುಖೇನ ಈ ಅಭ್ಯಾಸವನ್ನು ಮಾಡುವುದರಿಂದ ರೋಗಿಯು ಆರೋಗ್ಯವಂತನಾಗಬಹುದು. ಆರೋಗ್ಯವಂತ ಮನುಷ್ಯ ಸದೃಢನಾಗಿ ಬಾಳಬಹುದು. ಹಾಗೆಯೇ ಆಧ್ಯಾತ್ಮ ಸಾಧನೆಯಲ್ಲಿ ತೊಡಗಿರುವವರು ಸಾಧಕರಾಗಬಹುದು. ಇಂತಹ ಒಂದು ವಿಶಿಷ್ಟವಾದಂತಹ ಆಯಾಮವನ್ನು ಹೊಂದಿರುವ ವಿದ್ಯೆ ಯೋಗವಿದ್ಯೆಯಾಗಿದೆ. ಇದು ಪ್ರಪಂಚಕ್ಕೆ ನಮ್ಮ ಭಾರತ ದೇಶದ ಕೊಡುಗೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
     ಮನುಷ್ಯನ ಶರೀರವೆಂಬ ಕುದುರೆ ಗಾಡಿಯ ಸವಾರನಾಗಿರುವ ಆತ್ಮವು ಸದಾ ಆನಂದ ಸ್ವರೂಪಿಯಾಗಿದೆ. ಈ ಕುದುರೆ ಗಾಡಿಗೆ ಬುದ್ಧಿಯೇ ಸಾರಥಿ, ಮನಸ್ಸು ಲಗಾಮು ಹಾಗೂ 5 ಕರ್ಮೇಂದ್ರಿಯಗಳು ಮತ್ತು ಐದು ಜ್ಞಾನೇಂದ್ರಿಯಗಳು ಕುದುರೆಗಳು. ಇಲ್ಲಿ ಕರ್ಮೇಂದ್ರಿಯಗಳು ಹಾಗೂ ಪಂಚೇಂದ್ರಿಯಗಳು ಬುದ್ಧಿಯೆಂಬ ಸಾರಥಿಯ ನಿಯಂತ್ರಣದಲ್ಲಿ ಇರುವುದು ಅತ್ಯಗತ್ಯ. ಇಲ್ಲವಾದಲ್ಲಿ ಮನಸ್ಸು ಎಂಬ ಲಗಾಮು ತನಿಚ್ಛೆ ಬಂದಂತೆ ನಡೆದು ಆತ್ಮಕ್ಕೆ ದುಃಖದ ದುಷ್ಪ್ರಭಾವವನ್ನು ಎದುರಿಸುವಂತಹ ಸಂದರ್ಭ ಬರುತ್ತದೆ. ಆದ್ದರಿಂದ 'ಉತ್ತಮವಾದ ವಿಚಾರಗಳ ಆಚರಣೆಯಲ್ಲಿ ಮನಸ್ಸಿಲ್ಲದಿದ್ದರೂ ಆಚರಣೆಯನ್ನು ಮಾಡಲೇಬೇಕು' ಎಂಬ ಸಂಕಲ್ಪದೊಂದಿಗೆ ಯೋಗದ ಅಭ್ಯಾಸದಲ್ಲಿ ನಿರತರಾಗಿರುವವರಿಗೆ ಆಯುಷ್ಯ, ಆರೋಗ್ಯ, ನೆಮ್ಮದಿ, ಶಾಂತಿ ಸಿಗುವುದರಲ್ಲಿ ಸಂದೇಹವಿಲ್ಲ.
........................... ಮಂಜುಳಾ ಸುಬ್ರಹ್ಮಣ್ಯ ಭಟ್
ಯೋಗ ಶಿಕ್ಷಕಿ, ಸಂಗೀತ ಕಲಾವಿದೆ
ಕುಕ್ಕಾಜೆ, ಪುಚ್ಚೆಕೆರೆ,
ಮಂಚಿ ಅಂಚೆ ಮತ್ತು ಗ್ರಾಮ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*********************************************


Ads on article

Advertise in articles 1

advertising articles 2

Advertise under the article