-->
ಜೀವನ ಸಂಭ್ರಮ : ಸಂಚಿಕೆ - 91

ಜೀವನ ಸಂಭ್ರಮ : ಸಂಚಿಕೆ - 91

ಜೀವನ ಸಂಭ್ರಮ : ಸಂಚಿಕೆ - 91
ಲೇಖಕರು :  ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

          
      ಮಕ್ಕಳೇ, ಬುದ್ಧಿವಂತ ಮತ್ತು ವಿವೇಕವಂತರಿಗಿರುವ ವ್ಯತ್ಯಾಸ ತಿಳಿಯಲು ಈ ಘಟನೆ ಓದಿ. ಒಂದು ಊರಿನಲ್ಲಿ ಪುಟ್ಟಪ್ಪ ಎಂಬ ವ್ಯಕ್ತಿ ಇದ್ದನು. ಈತ ಊರಿಗೆಲ್ಲಾ ಬೇಕಾಗಿದ್ದವನು. ಊರಿಗೆ ತುಂಬಾ ಉಪಕಾರಿಯಾಗಿದ್ದವನು. ಈತನಿಗೆ ನಾಲ್ಕು ಜನ ಮಕ್ಕಳು. ಮೊದಲನೆಯವನು ಗಂಡು ರಮೇಶ. ಎರಡನೆಯವಳು ಹೆಣ್ಣುಮಕ್ಕಳು ಗಂಗಾ. ನಂತರ ಎರಡು ಗಂಡು ಮಕ್ಕಳು ಮೂರ್ತಿ ಮತ್ತು ಕೀರ್ತಿ.
       ಮೊದಲನೇ ಮಗ ರಮೇಶ ಓದಿ ಸರ್ಕಾರಿ ನೌಕರಿಗೆ ಸೇರಿದ್ದನು. ರಮೇಶ ಸರ್ಕಾರಿ ನೌಕರಿಗೆ ಸೇರುವ ಮೊದಲೇ ಗಂಗಾಳಿಗೆ ತಂದೆ ಮದುವೆ ಮಾಡಿದ್ದರು. ರಮೇಶ ಕೆಲಸಕ್ಕೆ ಸೇರಿದ ನಂತರ ಇಬ್ಬರೂ ಸಹೋದರರ ಮದುವೆ ಮಾಡಿದನು. ಆ ಇಬ್ಬರು ಸಹೋದರರ ಜೀವನಕ್ಕೆ ದುಡಿಯಲು ಬೇಕಾದ ಆಟೋ ವ್ಯವಸ್ಥೆ ಮಾಡಿಕೊಟ್ಟಿದ್ದನು. ಜಮೀನು ಸಾಕಷ್ಟಿತ್ತು. ಆಟೋ ತೆಗೆದುಕೊಳ್ಳುವಾಗ ಹಣ ತಾವೇ ಕಟ್ಟುವುದಾಗಿ ತಮ್ಮಂದಿರು ಹೇಳಿದ್ದರು. ಆ ಮಾತಿನಂತೆ ಅಣ್ಣ ಬ್ಯಾಂಕಿನಲ್ಲಿ ಸಾಲ ಮಾಡಿ ಆಟೋ ತೆಗೆದುಕೊಟ್ಟನು. ತಮ್ಮಂದಿರು ಸ್ವಲ್ಪ ಸಮಯ ಹಣ ನೀಡಿದರು. ಕಾಲು ಭಾಗ ಮಾತ್ರ ಪಾವತಿಸಿದ್ದರು.
     ಒಮ್ಮೆ ತಂದೆಯನ್ನು ಸಕ್ಕರೆ ಕಾಯಿಲೆಯಿಂದ ಆಸ್ಪತ್ರೆಗೆ ಸೇರಿಸಲಾಯಿತು. ಗ್ಯಾಂಗ್ರಿನ್ ಆಗಿ ಕಾಲ ಬೆರಳುಗಳನ್ನು ತೆಗೆಯಲಾಯಿತು. ತಮ್ಮಂದಿರಿಗೆ ತೊಂದರೆ ನೀಡಬಾರದು ಎಂದು ಎಲ್ಲಾ ವೆಚ್ಚವನ್ನು ರಮೇಶನೇ ನೋಡಿಕೊಂಡನು. ನಂತರ ರಮೇಶನಿಗೆ ಬೇರೆ ಊರಿಗೆ ವರ್ಗವಾಯಿತು. ತಂದೆಯನ್ನು ನೋಡಿಕೊಳ್ಳುವ ಜವಾಬ್ದಾರಿ ತಮ್ಮಂದಿರ ಮೇಲೆ ಬಿತ್ತು. ಸ್ವಲ್ಪ ದಿನದ ನಂತರ ತಂದೆ ತೀರಿಕೊಂಡರು. ಕೊನೆಯ ತಮ್ಮ ಕೀರ್ತಿ ಚೆನ್ನಾಗಿ ದುಡಿಯುತ್ತಿದ್ದನು. ಆದರೆ ಕುಡಿತದ ದಾಸನಾಗಿದ್ದನು. ಕುಡಿದ ಮೇಲೆ ತನ್ನ ನಿಯಂತ್ರಣ ತನ್ನ ಮೇಲೆ ಇರುತ್ತಿರಲಿಲ್ಲ. ಎಲ್ಲರೊಂದಿಗೆ ಜಗಳ ಮಾಡುತ್ತಿದ್ದನು. ಅಣ್ಣ ರಮೇಶನು ಒಳ್ಳೆಯ ಮಾತಿನಲ್ಲಿ ಸಾಕಷ್ಟು ಎಚ್ಚರಿಕೆ ನೀಡಿದರೂ ಪ್ರಯೋಜನವಾಗಲಿಲ್ಲ. ಜಮೀನಿನಲ್ಲಿ ತಮ್ಮಂದಿರು ಅಪೇಕ್ಷಿಸಿದಂತೆ ಕೇವಲ 22 ಗುಂಟೆ ಜಮೀನಿಟ್ಟುಕೊಂಡು ಉಳಿದದ್ದನ್ನು ತಮ್ಮಂದಿರಿಗೆ ನೀಡಿದ್ದನು. 
      ಹೀಗಿರಬೇಕಾದರೆ ಒಮ್ಮೆ ಕೀರ್ತಿ ರಾತ್ರಿ ಕುಡಿದು ಬಂದು ತನ್ನ ಪತ್ನಿಗೆ ಹೊಡೆಯಲು ಶುರು ಮಾಡಿದ. ಆಗ ಕೀರ್ತಿಯ ತಾಯಿ ಬಿಡಿಸಿ ಬುದ್ಧಿ ಹೇಳಲು ಬಂದಾಗ ಅವರನ್ನು ಜಾಡಿಸಿ ನೂಕಿದ. ಈ ಘಟನೆ ಹೇಳಿ ಹಿರಿಯ ಮಗ ರಮೇಶನಿಗೆ ತಿಳಿಸುವಂತೆ ತಾಯಿ ಗಂಗಾ ಬಳಿ ಹೇಳಿರುತ್ತಾಳೆ. ಗಂಗಾ ರಮೇಶನ ಪತ್ನಿಗೆ ತಿಳಿಸುತ್ತಾಳೆ. ಬೆಳಗ್ಗೆ ವಾಯುವಿಹಾರದಿಂದ ಬಂದ ತಕ್ಷಣ ರಮೇಶನ ಪತ್ನಿ ರಮೇಶನಿಗೆ.... ಕೀರ್ತಿ ತನ್ನ ಪತ್ನಿ ಮತ್ತು ತಾಯಿಗೆ ಹಲ್ಲೆ ಮಾಡಿರುವುದಾಗಿ ಹೇಳಿದಳು. ತಾಯಿಗೆ ಹಲ್ಲೆ ಮಾಡಿದ್ದಾನೆ ಎಂದು ಕೇಳಿದ ತಕ್ಷಣ ರಮೇಶನಿಗೆ ಕೋಪ ಹೆಚ್ಚಾಯಿತು. ಮೊಬೈಲ್ ನಲ್ಲಿ ಕೀರ್ತಿಗೆ ಫೋನ್ ಮಾಡಿ, ಎಷ್ಟು ಹೇಳಿದರೂ ತಿದ್ದು ಕೊಳ್ಳುತ್ತಿಲ್ಲವೆಂದು ಚೆನ್ನಾಗಿ ಬೈದು ಹೀಗೆ ಮಾಡಿದರೆ ಪೊಲೀಸ್ ಗೆ ದೂರ ನೀಡುವುದಾಗಿ ಎಚ್ಚರಿಸಿದ. ಬೈದಾಗ ಸುಮ್ಮನಿದ್ದ ಕೀರ್ತಿ, ಮತ್ತೆ ಕುಡಿದು ಗಿಡಗಳಿಗೆ ಹಾಕುವ ಔಷಧ ತೆಗೆದುಕೊಂಡು ಯಾರಿಗೂ ಕಾಣದಂತೆ ಬೈಕನ್ನು ದೂರ ನಿಲ್ಲಿಸಿ, ಮರದಡಿಯಲ್ಲಿ ಕುಳಿತು ಪುನಃ ದೂರವಾಣಿ ಮಾಡಿ "ಇಂದು ನನ್ನ ಹುಟ್ಟುಹಬ್ಬ ನಾಳೆ ಪೂಜೆಗೆ ಬನ್ನಿ" ಎಂದು ಹೇಳಿದ. ಇದರಿಂದ ಗಾಬರಿಯಾಗಿ ಅಲ್ಲಿದ್ದವರಿಗೆಲ್ಲ ದೂರವಾಣಿ ಕರೆ ಮಾಡಿ ಅವನನ್ನ ಹುಡುಕಿ ಕರೆ ತರುವಂತೆ ತಿಳಿಸಲಾಯಿತು. ಆತನನ್ನ ಹುಡುಕಿ ಮನೆಗೆ ಉಪಾಯದಿಂದ ಕರೆತಂದರು. 
     ನಂತರ ಅಣ್ಣ ರಮೇಶ ಹೇಳಿದ, "ಇನ್ನು ನಿನ್ನ ತಂಟೆಗೆ, ವ್ಯವಹಾರಕ್ಕೆ ಬರುವುದಿಲ್ಲ. ನಿನ್ನಿಷ್ಟದಂತೆ ನಡೆದುಕೋ" ಎಂದು ಹೇಳಿದ. ರಮೇಶ ಓದಿ ಬುದ್ದಿವಂತನಾಗಿದ್ದರಿಂದ, ತಮ್ಮ ತನ್ನ ಮಾತಿಗೆ ಬೆಲೆ ಕೊಡುತ್ತಾನೆ ಎಂದು ತಿದ್ದಲು ಪ್ರಯತ್ನಿಸಿದ್ದ. ಇದರಿಂದ ವಿಫಲನಾಗಿದ್ದ. ನನ್ನ ತಮ್ಮ ಎನ್ನುವ ಗೌರವ ಅಭಿಮಾನ ನುಚ್ಚುನೂರಾಗಿತ್ತು.
      ಕೀರ್ತಿಯ ಪತ್ನಿ ಗಂಡನನ್ನು ತಿದ್ದಲು ಸಾಕಷ್ಟು ಪ್ರಯತ್ನಿಸಿದ್ದಳು. ಆದರೆ ಯಾವುದೇ ಸುಧಾರಣೆ ಕಂಡು ಬರಲಿಲ್ಲ. ತನ್ನನ್ನು ತಾನೇ ತಿದ್ದಿಕೊಂಡಳು. ಇವರನ್ನು ತಿದ್ದುವುದಕ್ಕಿಂತ ತಾನು ತಿದ್ದಿಕೊಳ್ಳುವುದೇ ಮೇಲು ಎಂದು ತೀರ್ಮಾನಿಸಿದಳು. ಗಂಡ ಕುಡಿದು ಬಂದಾಗ  ಅವನು ಏನು ಹೇಳುತ್ತಾನೋ ಹಾಗೆ ಕೇಳುತ್ತಿದ್ದಳು. ಹಾಗಾಗಿ ಗಂಡ ಹೆಂಡತಿ ನಡುವೆ ಜಗಳ ಕಡಿಮೆಯಾಗಿತ್ತು.
      ಈ ಎರಡು ಘಟನೆ ಓದಿದಾಗ 'ರೂಮಿ' ಎನ್ನುವ ಸಂತ ಹೇಳಿದ್ದು ನೆನಪಿಗೆ ಬರುತ್ತದೆ. "ನಿನ್ನೆ ನಾನು ಬುದ್ಧಿವಂತನಾಗಿದ್ದೆ ಹಾಗಾಗಿ ಜಗತ್ತನ್ನು ತಿದ್ದಲು ಪ್ರಯತ್ನಿಸುತ್ತಿದೆ. ಈಗ ನಾನು ವಿವೇಕಿಯಾಗಿರುವೆ ಹಾಗಾಗಿ ನನ್ನನ್ನು ನಾನೇ ತಿದ್ದಿಕೊಳ್ಳುತ್ತೇನೆ."
      ಮಕ್ಕಳೇ ಜಗತ್ತನ್ನು ತಿದ್ದುವ ಬುದ್ಧಿವಂತರು ಆಗಿರುವುದಕ್ಕಿಂತಲೂ ನಮ್ಮನ್ನೇ ನಾವು ತಿದ್ದಿ ಕೊಳ್ಳುವ ವಿವೇಕಿಯಾಗಿರುವುದು ಮೇಲು ಅಲ್ಲವೇ ಮಕ್ಕಳೇ.....
......................................... ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************



Ads on article

Advertise in articles 1

advertising articles 2

Advertise under the article