ಜಗಲಿ ಕಟ್ಟೆ : ಸಂಚಿಕೆ - 5
Sunday, June 25, 2023
Edit
ಜಗಲಿ ಕಟ್ಟೆ : ಸಂಚಿಕೆ - 5
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
ಮಕ್ಕಳ ಜಗಲಿಯಲ್ಲಿ ಚಿತ್ರಗಳು, ಕಥೆ, ಕವನ, ಲೇಖನ ಗಳನ್ನು ಬರೆದು ಕಳಿಸುವ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಇದು ನಿಜವಾಗಲೂ ಬಹಳ ಸಂತೋಷದ ಸಂಗತಿ. ಹೀಗೆ ಬರೆಯುವ, ಚಿತ್ರ ಮಾಡುವ ವಿದ್ಯಾರ್ಥಿಗಳಿಗೆ ನಿರಂತರವಾಗಿ ಪ್ರೋತ್ಸಾಹ ಕೊಡುತ್ತಿರುವ ಪೋಷಕರು ಹಾಗೂ ಶಿಕ್ಷಕರಿಗೆ ಮಕ್ಕಳ ಜಗಲಿಯ ಪರವಾಗಿ ವಿಶೇಷವಾದ ಅಭಿನಂದನೆಗಳು.
ಈಗಾಗಲೇ ಚಿತ್ರಗಳ ಸಂಚಿಕೆ - 451 ಮೀರಿದೆ. ಅಂದಾಜು ಸುಮಾರು 2ಸಾವಿರ ವಿದ್ಯಾರ್ಥಿಗಳ 4ಸಾವಿರದಷ್ಟು ಚಿತ್ರಗಳು ಪ್ರಕಟವಾಗಿರಬಹುದು. ಇಲ್ಲಿ ಚಿತ್ರ ಮಾಡುವ ವಿದ್ಯಾರ್ಥಿಗಳಿಗೆ ಸೂಚನೆಯೊಂದನ್ನು ಕೊಡಲು ಬಯಸುವೆ. ನೀವು ಕಳಿಸುವ ಚಿತ್ರಗಳನ್ನು ಸರದಿ ಪ್ರಕಾರ ಖಂಡಿತವಾಗಲೂ ಪ್ರಕಟಿಸುತ್ತೇವೆ. ಪ್ರಕಟವಾಗಲು ಮಾತ್ರ ಕೆಲವು ದಿನಗಳ ಅಥವಾ ತಿಂಗಳುಗಳ ಸಮಯಾವಕಾಶ ಬೇಕಾಗುತ್ತದೆ. ಆದರೆ ನಿರಂತರವಾಗಿ ಚಿತ್ರಗಳನ್ನು ರಚಿಸುತ್ತಾ ಅತ್ಯುತ್ತಮವಾಗಿರುವ ಕಲಾಕೃತಿಗಳನ್ನು ಕಳುಹಿಸುವುದಕ್ಕೆ ಮಾತ್ರ ಮರೆಯಬಾರದು. ಅತ್ಯುತ್ತಮ 10 ಅಥವಾ ಹೆಚ್ಚು ಕಲಾಕೃತಿಗಳನ್ನು ಕಳುಹಿಸಿದ್ದಲ್ಲಿ ನಿಮ್ಮ ವೈಯಕ್ತಿಕ ಸಂಚಿಕೆಯಾಗಿ ಪ್ರಕಟಿಸುತ್ತೇವೆ.
ಅನೇಕ ವಿದ್ಯಾರ್ಥಿಗಳು ಕವನಗಳನ್ನು ಬರೆಯುತ್ತಿದ್ದೀರಿ. ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಶಾಲೆಯ ವಿದ್ಯಾರ್ಥಿನಿಯೊಬ್ಬಳು ತನ್ನ ಅನಿಸಿಕೆಯಲ್ಲಿ ಕವನ ಬರೆಯಲು ಪ್ರೇರಣೆ ನೀಡುವ ತನ್ನ ಶಾಲೆಯ ಶಿಕ್ಷಕಿ ಒಬ್ಬರನ್ನು ನೆನಪಿಸಿಕೊಂಡರು. ಕವನ ಬರೆಸುವುದರ ಜೊತೆಗೆ ಕವನ ಗೋಷ್ಠಿಗಳಿಗೂ ತಮ್ಮನ್ನು ಕರ್ಕೊಂಡು ಹೋಗುವುದಾಗಿ ತಿಳಿಸಿದಾಗ ತುಂಬಾ ಸಂತೋಷವಾಯಿತು. ಹೀಗೆ ದಕ್ಷಿಣ ಕನ್ನಡ ಜಿಲ್ಲೆಯ ಕೆಯ್ಯೂರು ಪ್ರೌಢಶಾಲೆ, ಹಾಗೂ ಇತರ ಅನೇಕ ಶಾಲೆಗಳ ಶಿಕ್ಷಕರು ಮತ್ತು ಕೆಲವು ಪೋಷಕರು ವೈಯಕ್ತಿಕವಾಗಿ ವಿದ್ಯಾರ್ಥಿಗಳಿಗೆ ಬರವಣಿಗೆಯಲ್ಲಿ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ. ಕವನ, ಕಥೆ ಮತ್ತು ಲೇಖನ ಬರೆಯುವ ಮಕ್ಕಳಿಗೆ ಶಿಕ್ಷಕರು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರೋತ್ಸಾಹ ನೀಡಿ ನಿರಂತರವಾಗಿ ಬರೆಯುವ ಹವ್ಯಾಸವನ್ನು ಮೂಡಿಸಲು ನೆರವಾದರೆ ಮಕ್ಕಳ ಜಗಲಿಯಲ್ಲಿ ಪ್ರಕಟಿಸಿ ಬೆಳೆಸುವ ಕಾರ್ಯವನ್ನು ಜೊತೆಯಾಗಿ ಮಾಡೋಣ ಎಂದು ನಮ್ಮ ಪ್ರೀತಿಯ ವಿನಂತಿ.
ಮಕ್ಕಳಲ್ಲಿ ಬರವಣಿಗೆಯ ಆಸಕ್ತಿಯನ್ನು ಇಮ್ಮಡಿಗೊಳಿಸುವ ವಿಶೇಷವಾದ ಕಾರ್ಯಕ್ರಮವನ್ನು ಮಕ್ಕಳ ಜಗಲಿಯು ಆಯೋಜಿಸಲು ಸಿದ್ಧವಾಗಿದೆ. ಈ ಬಗ್ಗೆ ಮುಂದಿನ ಜಗಲಿ ಕಟ್ಟೆಯ ಮಾತುಕತೆಯಲ್ಲಿ ಮಾತನಾಡೋಣ......
ಕಳೆದ ಸಂಚಿಕೆಯ ಜಗಲಿಕಟ್ಟೆ ಅಂಕಣದಲ್ಲಿ ವಿ ಶ್ರೀ ರಾಮಮೂರ್ತಿ ನಿವೃತ್ತ ವಿಜ್ಞಾನ ಶಿಕ್ಷಕರು ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
ಎಂ. ಪಿ ಜ್ಞಾನೇಶ್ ಅವರು ಶಿಶಿರನ ಬಗ್ಗೆ ಬರೆದಿರುವ ಲೇಖನ ಓದಿ ಕಣ್ಣು ತುಂಬಿ ಬಂತು.. ಉತ್ತಮ ಚಿತ್ರಗಳು ರಚಿಸಿದ್ದಾನೆ.. ಆ ಹುಡುಗನ ಮನೆಯವರಿಗೆ ದೇವರು ಜೀವನ ಎದುರಿಸುವ ಶಕ್ತಿ ಕೊಡಲಿ..
............................................ ಪೋಷಕರು
ವೈಷ್ಣವಿ ರಾವ್
5ನೇ ತರಗತಿ
ಸೈಂಟ್ ಆಗ್ನೆಸ್ ಸಿ ಬಿ ಎಸ್ ಇ ಸ್ಕೂಲ್
ಬೆಂದೂರ್, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
****************************************
ಮಕ್ಕಳ ಜಗಲಿ ಒಂದು ಕುಟುಂಬವಾಗಿದೆ ಎಂಬುದಕ್ಕೆ ಶಿಶಿರ್ ರವರೆ ಮಾದರಿ... ಶಿಕ್ಷಣ ಅಧಿಕಾರಿಯವರು ಬರೆದ ಜೀವನೋತ್ಸಾಹ - ಲೇಖನ ಓದುವಾಗ ಕಣ್ಣಿನಲ್ಲಿ ತನಗೊತ್ತಿಲ್ಲದೆ ಬಂದ ಕಣ್ಣೀರೇ ಸಾಕ್ಷಿ.... ಆ ಮಗುವಿನ ತಂದೆ ತಾಯಿಗೆ ದೇವರು ಸಮಾಧಾನವನ್ನು ಕೊಡಲಿ.
................................................. ಶಿಫಾನ
ಪ್ರಥಮ ಪಿಯುಸಿ
ಅನುಗ್ರಹ ವುಮೆನ್ಸ್ ಕಾಲೇಜ್ ಕಲ್ಲಡ್ಕ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
****************************************
ಮಕ್ಕಳು ಅರಳುವ ಪ್ರತಿಭೆಗಳು ಅವರ ಅಭಿರುಚಿ, ಆಸಕ್ತಿಗೆ ನಾವು ಬೆಲೆ ಕೊಟ್ಟು ಪೋಷಿಸಿದ್ದೇ ಆದಲ್ಲಿ ಮುಂದೆ ಒಳ್ಳೆಯ ಅವಕಾಶಗಳು ಹುಡುಕಿ ಬರುತ್ತವೆ. ಅದೇ ನಮ್ಮ ಒತ್ತಡದ ಬದುಕಿನ ನಾಗಾಲೋಟಕ್ಕೆ ಮಕ್ಕಳನ್ನು ಓಟದ ಕುದುರೆ ಮಾಡಿ ಕಣ್ಣಿಗೆ ಅಂಕ ಎಂಬ ಪಟ್ಟಿ ಕಟ್ಟಿ ಮುಂದೆ ಜೀವನದಲ್ಲಿ ಕೆಲಸ ಸಿಗದೆ ಹೋದಾಗ ಏನು ಮಾಡಲು ತೋಚದ ಸ್ಥಿತಿಗೆ ನೂಕಿದ್ದೇವೆ.
ನನಗೆ ಮಕ್ಕಳ ಜಗಲಿ ಲಿಂಕ್ ಇಂದ ತುಂಬಾ ಅಂದರೆ ತುಂಬಾ ಉತ್ತಮ ವಿಷಯಗಳು ಸಿಕ್ಕಿದೆ. ನನ್ನ ಮಕ್ಕಳ ಓದುವ ಆಸಕ್ತಿ ಹೆಚ್ಚಿದೆ ಇದಕ್ಕೆ ನಿಮ್ಮ ತಂಡಕ್ಕೆ ನನ್ನ ಅನಂತಾನಂತ ಧನ್ಯವಾದಗಳು.
ನಿಮ್ಮ ಪ್ರೀತಿ. ವಿಶ್ವಾಸ ಪರಿಶ್ರಮದ ಕೂಸು ಈ ಮಕ್ಕಳ ಜಗಲಿ ಇದನ್ನು ಪ್ರತಿಯೊಬ್ಬರೂ ಬಹಳ ಕಾಳಜಿ ವಹಿಸಿ, ಪ್ರೀತಿಸಿ ನಿಮ್ಮೊಟ್ಟಿಗೆ ಬಾಂಧವ್ಯ ಬೆಳೆಸುತ್ತಿದ್ದೇವೆ.
......................................... ಸೌಮ್ಯ ಕಾರ್ಕಳ
ಪೋಷಕರು : ಆರ್ಯ, ಆದ್ಯ ಎನ್ ನಾಯಕ್
6ನೇ ತರಗತಿ
ಶ್ರೀ ಶ್ರೀ ರವಿ ಶಂಕರ್ ವಿದ್ಯಾ ಮಂದಿರ ಕಾರ್ಕಳ
****************************************
ನಮಸ್ಕಾರಗಳು ಸರ್......
ಶಿಶಿರ್ ಅಕ್ಕನಿಗೆ ಬರೆದಿಟ್ಟ ಪತ್ರವನ್ನು ಟೈಪ್ ಮಾಡಿದೆ. ಕಳುಹಿಸುತ್ತೇನೆ ಸರ್..... (ಶ್ರೀಮತಿ ಕವಿತಾ ಶ್ರೀನಿವಾಸ್ - ಶಿಶಿರನ ಅಮ್ಮ)
ಪ್ರೀತಿಯ ಅಕ್ಕನಿಗೆ, ಶಿಶಿರ ಮಾಡುವ ಪ್ರೀತಿ ಹಾಗೂ ಗೌರವದ ನಮಸ್ಕಾರಗಳು , ನಾನು ಕ್ಷೇಮವಾಗಿರುವೆನು.
"ಈ ಬಾರಿ ಮೋಡಗಳು ನಮಗೆ ಮೋಸ ಮಾಡಿದ್ದು" ಎಂದು ಹೇಳಿದರೆ ತಪ್ಪಾಗಲಾರದು. ಬೆಳಿಗ್ಗೆ ಏಳುವ ಹೊತ್ತಿಗೆ ಆಕಾಶವು ಕರಿದಾದ ದಟ್ಟ ಮೋಡಗಳಿಂದ ಕೂಡಿರುತ್ತದೆ. ಆ ಮೋಡಗಳ ನಡುವೆ ಗುಡುಗು ಸಿಡಿಲಿನ ಗರ್ಜನೆಯನ್ನು ಕೇಳಿದ ಕೂಡಲೇ ನಮ್ಮ ಮನದಲ್ಲಿ ಸಂತೋಷ, ಆತಂಕದ ಜೊತೆಗೆ ಟಿವಿ, ರೆಫ್ರಿಜರೇಟರ್ ಮುಂತಾದ ವಿದ್ಯುತ್ ಉಪಕರಣ, ಹೊರಗೆ ಒಣಗಲೆಂದು ಇರಿಸಿರುವ ಬಟ್ಟೆಗಳು, ಹಪ್ಪಳ, ಸಂಡಿಗೆ ಮೇಲೆ ಜಾಗೃತಿಯ ಭಾವನೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ. ಮರು ಕ್ಷಣಗಳಲ್ಲಿ ಮಳೆ ಹನಿಗಳು ಇಳೆಗೆ ಇಳಿದೇ ಬಿಡುತ್ತದೆ ಎಂಬ ಭಾವನೆಯ ಅಲೆಗಳಿಂದ ಮೋಡಗಳನ್ನು ವೀಕ್ಷಿಸುತ್ತಿದ್ದ ಮರು ಕ್ಷಣವೇ ಅದ್ಭುತ! ಅವಿಸ್ಮರಣೀಯ! ಮೋಡಗಳು ಗಾಯಾಭ್! ಮೋಡಗಳ ಈ ರೀತಿಯ ಪಲಾಯನ ಕಂಡ ಕೂಡಲೆ ಭಾವನೆಯ ಅಲೆಗಳು ಮುಳುಗಿ ಬೇಸರದ ಅಲೆಗಳು ಮೂಡುತ್ತವೆ.
ಏಪ್ರಿಲ್ ಮೇ ತಿಂಗಳಿನಲ್ಲಿ ಹವಾಮಾನ ಗಾಳಿಯ ವೇಗತೆಗಳ ಕಾರಣ ಮಳೆ ಹನಿಗಳನ್ನು 'pre-monsoon season' ನಲ್ಲಿ ಕಾಣಬಹುದು. ಇದನ್ನು 'kala baisakhi ' ಎಂದು West Bengal ನಲ್ಲಿ, 'Andhis' ಎಂದು U.P. ಯಲ್ಲಿ, 'Coffee blossoms' ಎಂದು ಕರ್ನಾಟಕದಲ್ಲಿ ಹಾಗೂ 'Mango showers' ಎಂದು ಕೇರಳದಲ್ಲಿ ಕರೆಯುತ್ತಾರೆ ಎಂಬ ಮಾತನ್ನು ಶಾಲೆಯಲ್ಲಿ ಕಲಿತಿದ್ದೆ. ಆದರೆ ಇದನ್ನು ಏಕೆ ಹೀಗೆ ಕರೆಯುವರು ಎನ್ನುವುದು ತಿಳಿದದ್ದು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದ 'ಪಾಕಕ್ರಾಂತಿ' ಎಂಬ ಪುಸ್ತಕದ ಒಂದು ಕತೆಯಿಂದ.
ಏಪ್ರಿಲ್ ಮಳೆಯನ್ನು ಕಾಫಿ ಬೆಳೆಗಾರರ ಜೀವ ಉಳಿಸುವ ಅಥವಾ ಸಾಯಿಸುವ ಮಳೆ ಎನ್ನುತ್ತಾರೆ. ಏಪ್ರಿಲ್ ಪ್ರಾರಂಭದಲ್ಲಿ ಸರಿಯಾಗಿ ಒಂದಿಂಚು ಮಳೆ ಬಂದರೆ ಒಂಭತ್ತು ದಿನಕ್ಕೆ ಸರಿಯಾಗಿ ಹೂವು.... ಮುಂದಕ್ಕೆ ಅದು ಇಡೀ ಕಾಫಿ ತೋಟ ಮೊಸರು ಚೆಲ್ಲಿದಂತೆ ಬೆಳ್ಳಗಾಗುತ್ತದೆ. ಇದರ ಘಮ ಘಮ ಪರಿಮಳಕ್ಕೆ ಜೇನುಹುಳುಗಳು ಝೇಂಕರಿಸುತ್ತದೆ. ಆದರೆ ಒಂದಿಂಚು ಮಳೆಯಾಗಬೇಕು. ಇಲ್ಲದ್ದಿದ್ದರೆ ಕಾಫಿ ಬೆಳೆಯುವುದಿಲ್ಲ. ಈ ಸುಂದರವಾದ ಕಾಫಿ ಹೂಗಳು ಏಪ್ರಿಲ್ ಮೇ ತಿಂಗಳಲ್ಲಿ ಬೆಳೆಯುವುದರಿಂದ ನಾವು ಇದನ್ನು Coffee blossoms (ಕಾಫಿ ಹೂಗಳು) ಎಂದು ಕರೆಯುತ್ತೇವೆ. ಇದಾದ ಮೇಲೆ ಮುಗಿಯುವುದಿಲ್ಲ. ಕೆಲವು ದಿನಗಳ ನಂತರ ಪುನಃ ಮಳೆಗೆ ಕಾಯಬೇಕು. ಮಳೆ ಬಾರದಿದ್ದರೆ ಮೊಗ್ಗುಗಳು ಉದುರುತ್ತವೆ. ಮಳೆ ಬಂದರೆ ಮಾತ್ರ ಕಾಯಿಕಟ್ಟಲು ಸಾಧ್ಯ.
ಕತೆಯಲ್ಲಿ ಒಬ್ಬ ರೈತ ಹಲವಾರು ಸಾಲುಗಳನ್ನು ಮಾಡಿ ಕಾಫಿ ತೋಟವನ್ನು ನೆಟ್ಟು ಮಳೆಯ ದೆಸೆಯಿಂದ ನಷ್ಟಗೊಂಡು ಕೊನೆಗೆ ತೋಟ ಮಾರಿ ದೇಶಾಂತರ ಹೋದರು. ನಾನು ಓದಿದ್ದು ಕಥೆಯಾದರೂ ದೇಶದಲ್ಲಿ ಇಂತಹ ಘಟನೆಗಳು ವರ್ಷಾನುವರ್ಷ ಹಲವಾರು ಭಾರಿ ನಡೆಯುತ್ತಿರುತ್ತದೆ ಎಂಬುದೇ ಸತ್ಯ. ಶಾಲೆ ಕಾಲೇಜುಗಳು ಪುನಃ ಪ್ರಾರಂಭವಾಗುತ್ತಿದೆ. ರಜಾ ದಿನಗಳಲ್ಲಿ ಏನು ಮಾಡಿದೆ ಎಂಬ ಶಿಕ್ಷಕರ ಮಾತು ನಮಗೆ ಕಾಯುತ್ತಿರುವ ಮೊದಲ ಪ್ರಶ್ನೆ. ಮೊದ ಮೊದಲು ಎರಡು ನಿಮಿಷದ ಉತ್ತರಕ್ಕೆ ಎರಡು ದಿನಗಳ ತಯಾರಿಗಳನ್ನು ಮಾಡಿ ಉತ್ತರಿಸುತ್ತಿದ್ದೆ. ಆದರೆ ಎರಡು ತಿಂಗಳ ರಜೆ ಕಳೆದ ಬಗೆಯನ್ನು ಎರಡೇ ನಿಮಿಷದಲ್ಲಿ ಹೇಗಪ್ಪಾ ಉತ್ತರಿಸುತಿದ್ದೆ ಎಂಬ ಪ್ರಶ್ನೆ ಕಾಡುತ್ತಿದೆ ಈಗ.
ಇರಲಿ ಬಿಡಿ ಪತ್ರದ ಕೊನೆಯ ಸಂಚಿಕೆಯಾದುದರಿಂದ ಪತ್ರವನ್ನು ಹೇಗೆ ಕೊನೆ ಗೊಳಿಸಬೇಕೆಂದು ತೋಚುತ್ತಿಲ್ಲ. ಆದರೂ ನನ್ನ ಪತ್ರವನ್ನು ಇಲ್ಲಿಗೆ ಮುಗಿಸುತ್ತೇನೆ ವಂದನೆಗಳು ಅಕ್ಕಾ.....
........................................................ ಶಿಶಿರ್
'ಚೈತನ್ಯ' ನೆಲ್ಯಡ್ಕ, ಅಂತರ
ನರಿಕೊಂಬು ಗ್ರಾಮ ಮತ್ತು ಅಂಚೆ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡ ಮಕ್ಕಳ ಜಗಲಿ ಕುಟುಂಬದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಇಲ್ಲಿ ಶಿಶಿರ್ ಬರೆದಿಟ್ಟ ಕೊನೆಯ ಪತ್ರವನ್ನು ಟೈಪ್ ಮಾಡಿ ಕಳುಹಿಸಿದ ಶಿಶಿರನ ಅಮ್ಮ ಶ್ರೀಮತಿ ಕವಿತಾ ಶ್ರೀನಿವಾಸ್ ಇವರಿಗೂ ಧನ್ಯವಾದಗಳು. ಇಲ್ಲಿ ಶಿಶಿರನ ಕೊನೆಯ ಪತ್ರ ಓದುವಾಗ ಹೃದಯ ಭಾರವಾದದ್ದು ಮಾತ್ರ ಸುಳ್ಳಲ್ಲ......
ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************