ಜೀವನ ಸಂಭ್ರಮ : ಸಂಚಿಕೆ - 90
Sunday, June 18, 2023
Edit
ಜೀವನ ಸಂಭ್ರಮ : ಸಂಚಿಕೆ - 90
ಲೇಖಕರು : ಎಂ.ಪಿ. ಜ್ಞಾನೇಶ್
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಈ ಶೀರ್ಷಿಕೆ ಒಬ್ಬ ವಿದ್ಯಾರ್ಥಿಯ ಹೆಸರು. ಈತನ ಜೀವನೋತ್ಸಾಹ ಕುರಿತು ಬರೆಯಬೇಕೆನಿಸಿದೆ. ಲೇಖನ ನಿಮ್ಮ ಬದುಕಿಗೂ ಪ್ರೇರಣೆಯಾಗಲಿ.
ಶ್ರೀನಿವಾಸ ದೈಪಾಲ್, ವೃತ್ತಿಯಲ್ಲಿ ವಕೀಲರು, ತಾಯಿ ಕವಿತಾ ಗೃಹಿಣಿ. ಈ ದಂಪತಿಗೆ ಎರಡು ಜನ ಮಕ್ಕಳು. ಅದರಲ್ಲಿ ಎರಡನೇಯವನೇ ಶಿಶಿರ್. ಈತ ಎಸ್ ಎಸ್ ಎಲ್ ಸಿ ಓದುತ್ತಿದ್ದನು. ಕಲಿಯಲು ತುಂಬಾ ಆಸಕ್ತಿ. ಕೇವಲ ಓದುವುದರಲ್ಲಿ ಮಾತ್ರವಲ್ಲ ತನ್ನ ಅಚ್ಚುಮೆಚ್ಚಿನ ಚಿತ್ರ ನಟರು, ಗಾಯಕರು, ಜ್ಞಾನಪೀಠ ಪುರಸ್ಕೃತರು ಮತ್ತು ರಾಷ್ಟ್ರಪತಿ ಇವರ ಚಿತ್ರಗಳನ್ನು ಪೆನ್ಸಿಲ್ ನಲ್ಲಿ ರಚಿಸಿದ್ದಾನೆ. ಸಂಗೀತದಲ್ಲಿ ಜೂನಿಯರ್ ಆಗಿತ್ತು. ಬೇರೆ ಬೇರೆ ಪುಸ್ತಕಗಳನ್ನು ಓದುವುದು, ಪರಿಸರದ ಬಗ್ಗೆ ಕಾಳಜಿ ಮತ್ತು ಕುತೂಹಲ, ಕ್ರಾಫ್ಟ್ ಮಾಡುವುದು ಮತ್ತು ನಾಟಕದಲ್ಲಿ ಪಾತ್ರ ಮಾಡುವುದು ಹೀಗೆ ಎಲ್ಲದರಲ್ಲೂ ಆಸಕ್ತಿ. ಮಕ್ಕಳ ಜಗಲಿ ಬಳಗದಲ್ಲಿ ಆತನು ಒಬ್ಬ ಸದಸ್ಯ. ನನ್ನ ಜೀವನ ಸಂಭ್ರಮ ಲೇಖನವನ್ನು ತಪ್ಪದೆ ಓದುತ್ತಿದ್ದನು. ಆತನಿಗೆ ಅಕ್ಕನಪತ್ರಕ್ಕೆ ತನ್ನ ಪ್ರತಿಕ್ರಿಯೆ ತೋರುತ್ತಿದ್ದನು.
ಶಾಲೆ ಪ್ರಾರಂಭವಾಗಿ ನಡೆಯುತ್ತಿತ್ತು. ಒಮ್ಮೆ ಮಕ್ಕಳ ಜಗಲಿ ಬಳಗದ ತಾರಾನಾಥ್ ಕೈರಂಗಳ ರವರು ದೂರವಾಣಿ ಕರೆ ಮಾಡಿ, "ಶಿಶಿರ್ ಎಸ್ ಎಂಬ ವಿದ್ಯಾರ್ಥಿ ನಮ್ಮ ಮಕ್ಕಳ ಜಗಲಿ ಬಳಗದ ಸದಸ್ಯ. ಈತ ಎಸ್ ಎಲ್ ಎನ್ ಪಿ ಪ್ರೌಢಶಾಲೆಯಲ್ಲಿ ಓದುತ್ತಿದ್ದಾನೆ. ಈತನಿಗೆ ಒಂದು ಕಾಯಿಲೆ ಎಡ ಮೆದುಳಿನಲ್ಲಿ ಗ್ಲಯೋಮಾ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆತನಿಗೆ ತಂದೆ ತಾಯಿ ಒಳ್ಳೇ ಕಡೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ವಿದ್ಯಾರ್ಥಿ ನಿಮ್ಮನ್ನು ಭೇಟಿ ಮಾಡಬೇಕೆಂದು ಆಸೆ ಹೊಂದಿದ್ದಾನೆ. ಅವರನ್ನು ಕಳಿಸಬಹುದಾ...?" ಎಂದು ಕೇಳಿದರು. ವಿಷಯ ಕೇಳಿ ನೋವಾಯಿತು. ನಾವಿರುವುದೇ ಮಕ್ಕಳಿಗಾಗಿ ಕಳಿಸಿಕೊಡಿ ಎಂದೆನು.
ಮಾರನೇ ದಿನ ಮಧ್ಯಾಹ್ನ ತಂದೆ ತಾಯಿಯೊಂದಿಗೆ ಈ ವಿದ್ಯಾರ್ಥಿ ನನ್ನ ಕಚೇರಿಗೆ ಬಂದನು. ಮುದ್ದು - ಮುದ್ದಾದ ಮುಖ, ಏನೋ ಕಣ್ಣಿನಲ್ಲಿ ಒಂದು ಕಾಂತಿ. ಆಗ ಎಲ್ಲರನ್ನೂ ಕುಳಿತುಕೊಳ್ಳಲು ಹೇಳಿದೆ. ಈತ ಕುಳಿತುಕೊಳ್ಳದೆ ಮುಜುಗರ ಪಟ್ಟುಕೊಂಡು ನಿಂತಿದ್ದನು. ನಾನು ಆತನ ಮೈ ಸವರಿ ಕುಳಿತುಕೊಳ್ಳಪ್ಪ ಎಂದೆ. ಕುಳಿತುಕೊಂಡನು. ಆತ ಶಾಲೆಯ ತರಗತಿಯಲ್ಲಿ ಕುಳಿತು ಪಾಠ ಕೇಳಲು ಆಗುತ್ತಿರಲಿಲ್ಲ . ತಲೆನೋವು ಬಂದ ನಂತರ ಮೂರ್ಛೆ ಹೋಗುತ್ತಿದ್ದನು. ಇದರಿಂದ ಮಾನಸಿಕವಾಗಿ ಕುಂದಿರುವಂತೆ ಕಂಡನು. ಆತನ ತಂದೆ ತಾಯಿಗಳು ಮಾತ್ರ ಆತನಿಗೆ ದೇವರೇ ದೊರಕಿಸಿಕೊಟ್ಟಿದ್ದಾನೆ ಅನ್ನುವಂತೆ ಅನಿಸಿತು. ಆತನ ಎಲ್ಲಾ ಚಟುವಟಿಕೆಗೂ ಪ್ರೇರಣೆಯಾಗಿದ್ದರು. ಆತ ಬದುಕುವುದಿಲ್ಲವೆಂದು ಗೊತ್ತಿದ್ದೂ, ಆತನಿಗೆ ಏನೂ ಹೇಳದೆ, ಸಾಮಾನ್ಯ ರೋಗ ಎನ್ನುವ ಭರವಸೆ ಮೂಡಿಸಿ, ಆತನ ಸಂತೋಷಕ್ಕೆ ಏನು ಬೇಕು ಅದೆಲ್ಲ ಮಾಡುತ್ತಿದ್ದರು. ಆತನಿಗೆ ಧೈರ್ಯ ತುಂಬಲು ನನ್ನ ಬಳಿ ಕರೆ ತಂದಿದ್ದರು. ಆತನಿಗೆ ಕೆಲವು ಉದಾಹರಣೆ, ಕಥೆಗಳು ಮತ್ತು ಘಟನೆಗಳ ಮೂಲಕ ಧೈರ್ಯ ತುಂಬಲು ನಾನು ನನ್ನ ಪ್ರಯತ್ನ ಮಾಡಿದೆ. ಆತನ ಎದುರೇ ಮುಖ್ಯ ಶಿಕ್ಷಕರಿಗೆ ದೂರವಾಣಿ ಮಾಡಿ ಆತನಿಗೆ ಅನುಕೂಲ ಕಲ್ಪಿಸಲು ತಿಳಿಸಿದೆ. ಅದು ಆ ಶಾಲೆಯ ಎಲ್ಲಾ ಶಿಕ್ಷಕರಿಗೂ ಗೊತ್ತಿತ್ತು. ಹಾಗೂ ಬುದ್ಧಿವಂತ ಹುಡುಗ ಎಂದು ತಿಳಿದಿತ್ತು. ಆ ದಿನ ಆತನಲ್ಲಿ ಸಂತೋಷ ಕಂಡೆ. ಆತ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವುದಾಗಿ ಹೇಳಿ ತೆರಳಿದ. ಹೊರಡುವಾಗ ನನ್ನ ಜೊತೆಯಲ್ಲಿ ಫೋಟೋವನ್ನು ತೆಗೆಸಿಕೊಂಡನು. ಇದಾದ ನಂತರ ಎರಡು ಮೂರು ಬಾರಿ ತಂದೆ ದೂರವಾಣಿ ಕರೆ ಮಾಡಿ ಆ ವಿದ್ಯಾರ್ಥಿ ಜೊತೆ ಮಾತನಾಡಿಸುತ್ತಿದ್ದರು. ನನ್ನ ಮಾತನ್ನು ಕೇಳಿದ ಮೇಲೆ ಆತನಲ್ಲಿ ಸಂತೋಷ ಇರುವುದಾಗಿ ಆತನ ತಂದೆ ತಾಯಿಗಳು ಹೇಳಿದರು. ಇದು ಆತನ ಸಂತೋಷಕ್ಕೆ ನೀಡಿದ ನನ್ನ ಕಿರು ಕೊಡುಗೆ.
ಆತನಿಗೆ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತುಂಬಾ ಆಸಕ್ತಿ ಇತ್ತು. ಬೇಸಿಗೆ ರಜಾ ಅವಧಿಯಲ್ಲಿ ಆತ ಅನೇಕ ಶಿಬಿರಗಳಲ್ಲಿ ಭಾಗವಹಿಸಿದ್ದನು. ಸುಳ್ಯದ ರಂಗಮನೆ, ಆಳ್ವಾಸ್ ನ ಚಿಣ್ಣರ ಮೇಳ, ರಾಜ್ಯ ಮಟ್ಟದ ಶಿಬಿರಗಳಲ್ಲಿ ಭಾಗವಹಿಸಿದ್ದನು. ನಾವು ಜಿಲ್ಲಾ ಮಟ್ಟದ ಮಕ್ಕಳ ಹಬ್ಬವನ್ನು ಸರ್ಕಾರಿ ಪ್ರೌಢಶಾಲೆ ಶಂಬೂರಿನಲ್ಲಿ ಹಮ್ಮಿಕೊಂಡಿದ್ದು, ಕೊನೆಯ ದಿನ ಸಮಾರೋಪಕ್ಕೆ ನಾನು ಹೋಗಿದ್ದಾಗ, ಅಲ್ಲಿಯೂ ಬಂದು ಮಾತನಾಡಿಸಿದ್ದನು. ಆತ ತರಗತಿಯಲ್ಲಿ ಪಾಠ ಕೇಳಲು ಆಗುತ್ತಿರಲಿಲ್ಲ. ನೋಟ್ಸ್ ಮಾಡಿಕೊಳ್ಳಲು ಆಗದೆ ಇದ್ದಿದ್ದರಿಂದ, ಸಂಜೆ ಗೆಳೆಯರಿಂದ ನೋಟ್ಸ್ ಪಡೆದು, ಸ್ವಯಂ ಅಭ್ಯಾಸ ಮಾಡಿ ಎಸ್ ಎಸ್ ಎಲ್ ಸಿ ಯಲ್ಲಿ 459 ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾದನು. ಆತನ ಸ್ಥಿತಿ ಸರಿಯಿಲ್ಲದೆ ಇದ್ದುದರಿಂದ, ಕಾಲೇಜಿಗೆ ಮುಂದಿನ ವರ್ಷ ಸೇರಿಸುವುದಾಗಿ ತಂದೆ ತಾಯಿಗಳು ಮನವೊಲಿಸಿ, ಇತರೆ ಚಟುವಟಿಕೆಗೆ ತೊಡಗಿಸಿದ್ದರು. ನಿದ್ರೆ ಅವಧಿ ಬಿಟ್ಟರೆ ಉಳಿದ ಪ್ರತಿಯೊಂದು ಕ್ಷಣ ಹಾಡುವುದು ಅಥವಾ ಚಿತ್ರ ಬರೆಯುವುದು ಅಥವಾ ಕ್ರಾಫ್ಟ್ ಹೀಗೆ ತಲ್ಲೀನನಾಗುತ್ತಿದ್ದನು. ಆತನ ಚಟುವಟಿಕೆಗಳು ತಂದೆ-ತಾಯಿಗಳಿಗೆ ಧೈರ್ಯ ಕೊಡಬೇಕು ಮತ್ತು ಸಂತೋಷಪಡಬೇಕು ಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದನು.
ಈ ತಿಂಗಳ 14.06.2023 ರಂದು ತನ್ನ ತಾಯಿ ಅಸೌಖ್ಯದಿಂದ ನರಳುತ್ತಿದ್ದರಿಂದ ಆತನೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿಕೊಂಡು ಬಂದಿದ್ದಾನೆ. ಆ ದಿನ ರಾತ್ರಿ ತಲೆನೋವು ಬಂದಿದೆ. ಬೆಳಗ್ಗೆ ತಂದೆ ತಾಯಿ ಶಿಶಿರ್ ನನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದಾರೆ. ಆತ ಚೆನ್ನಾಗಿ ನಡೆದುಕೊಂಡು ಹೋಗಿದ್ದಾನೆ. ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡುತ್ತಿದ್ದ ಹಾಗೆ ಕಣ್ಣು ಮುಚ್ಚಿದ್ದಾನೆ. ತಂದೆ ತಾಯಿಗಳೊಂದಿಗೆ ಮಾತನಾಡಿಲ್ಲ. ದಿನಾಂಕ 17.06.2023 ರಂದು ಬೆಳಗ್ಗೆ ವೈದ್ಯರು ಬಂದು ಪರೀಕ್ಷೆ ಮಾಡಿ ನಿಮ್ಮ ಮಗು ಈ ಲೋಕ ಬಿಟ್ಟು ಹೋಗಿದ್ದಾನೆ ಎಂದು ತಿಳಿಸಿರುತ್ತಾರೆ. ಈ ವಿಷಯ ತಿಳಿದು ಬಹಳ ದುಃಖವಾಯಿತು. ಮಾರನೇ ದಿನ ತಂದೆ ತಾಯಿಗಳೊಂದಿಗೆ ಮಾತನಾಡಿ ಸಮಾಧಾನ ಹೇಳಿದೆ. ಏನೇ ಹೇಳಿದರೂ ತಂದೆ ತಾಯಿಗಳಿಗೆ ದುಃಖ ತಡೆದುಕೊಳ್ಳಲು ಸಾಧ್ಯವಿಲ್ಲ. ಆ ದೇವರೇ ಸಮಾಧಾನ ನೀಡಬೇಕು.
ಈ ಲೇಖನ ಬರೆದ ಉದ್ದೇಶ... ಈ ಮಗು ಜೀವನವನ್ನು ಕಡೆ ಕ್ಷಣದವರೆಗೆ ಎಷ್ಟು ಸಂಭ್ರಮದಿಂದ ಇದ್ದನು ಹಾಗೂ ಹೇಗೆ ಧನಾತ್ಮಕ ಚಿಂತನೆಗೆ ಬಳಸಿಕೊಂಡಿದ್ದನು ಎಂಬುದನ್ನು ನಿಮಗೆ ತಿಳಿಸಬೇಕೆಂಬ ಬಯಕೆ. ಒಮ್ಮೆ ಬುದ್ಧ ಶಾಂತವಾಗಿ ಜನರಿಗೆ ಪ್ರವಚನ ನೀಡುತ್ತಿದ್ದನು. ಆಗ ಜನರಿಗೆ ಒಂದು ಪ್ರಶ್ನೆ ಕೇಳಿದನು. ಮನುಷ್ಯನ ಆಯಸ್ಸು ಎಷ್ಟು ? ಎಂದು. ಆ ಪ್ರಶ್ನೆಗೆ ಒಬ್ಬ ಹೇಳಿದ..... ನೂರು ವರ್ಷ, ಇನ್ನೊಬ್ಬ ಹೇಳಿದ... ಎಂಬತ್ತು ವರ್ಷ, ಮತ್ತೊಬ್ಬ ಹೇಳಿದ... ಐವತ್ತು ವರ್ಷ ಎಂದು. ಆಗ ಬುದ್ಧ ಹೇಳಿದನು.... "ಇಲ್ಲ , ಅಷ್ಟಲ್ಲ." ಹಾಗಾದರೆ ನೀವೇ ಹೇಳಿ ಎಂದು ಪ್ರೇಕ್ಷಕರು ಬುದ್ಧನನ್ನು ಕೇಳಿದರು. ಆಗ ಬುದ್ಧ ಹೇಳಿದ್ದು, "ಜೀವನ ಎಂದರೆ ಒಂದು ಕ್ಷಣ. ಒಂದು ಕ್ಷಣ ಎಂದರೆ ಒಂದು ಉಸಿರಿನಷ್ಟು, ಒಂದು ಉಸಿರು ಒಳ ತೆಗೆದು ತೆಗೆಯುವಾಗಲೋ ಅಥವಾ ಉಸಿರು ಬಿಡುವಾಗಲೋ ಜೀವ ಹೋಗಬಹುದು. ಅದಕ್ಕಾಗಿ ಪ್ರತಿ ಕ್ಷಣವನ್ನು ಸುಂದರ ಅನುಭವ ಮಾಡಿಕೊಳ್ಳಬೇಕು. ಒಟ್ಟು ಕ್ಷಣಗಳ ಮೊತ್ತವೇ ಜೀವನ." ಎಂದು ಹೇಳಿದನು.
ಯಾರೋ ಜ್ಯೋತಿಷಿಗಳ ಕೈಗೆ ಕೈ ನೀಡಿ, ಆ ಜ್ಯೋತಿಷಿ, "ನಿನ್ನ ಆಯಸ್ಸು ಇನ್ನು ಐದು ವರ್ಷ ಅಷ್ಟೇ" ಎಂದಾಗ, ನಾನು ಇನ್ನು ಐದೇ ವರ್ಷ ಬದುಕುವುದು ಎಂದು ಇಂದೇ ಹಾಸಿಗೆ ಹಿಡಿದು ನರಳುವವರನ್ನು ನೋಡಿದ್ದೇವೆ. ಸಾವೇ ಸನಿಹ ಇದ್ದರೂ, ಸಾವೇ ಹತ್ತಿರ ಬರಲು ಹೆದುರುವಂತೆ ಬದುಕಿದ, ಶಿಶಿರ್ ನಮಗೆಲ್ಲಾ ಮಾದರಿ. ಆತನ ಧನಾತ್ಮಕ ಚಿಂತನೆ ಮತ್ತು ದೃಷ್ಟಿಕೋನ ಹೇಗಿದೆ ಅಲ್ಲವೇ..... ಆತ ತನ್ನ ಪ್ರತಿಕ್ಷಣವನ್ನು ಸುಂದರ ಗೊಳಿಸಿದ, ಮಧುರ ಗೊಳಿಸಿದ, ಆನಂದ ಅನುಭವಿಸಿದನು. ಆತನ ಹಾಡು ಕೇಳಿದರೆ, ಬರೆದಿರುವ ಚಿತ್ರ ನೋಡಿದರೆ, ಎಷ್ಟು ಸುಂದರ, ಮಧುರ ಜೀವನ ಸಾಗಿಸಿದ ಎನ್ನುವುದು ತಿಳಿಯುತ್ತದೆ. ಆತನ ತಾಯಿ ಹೇಳುವಾಗ ನನಗೆ ತುಂಬಾ ದುಃಖವಾಯಿತು. "ನನ್ನ ಮಗ ನಾವು ನೋಡಿ, ಕೇಳಿ ಸಂತೋಷಪಡಲಿ ಎಂದು ಸುಂದರ ಚಿತ್ರ, ಮಧುರ ಹಾಡನ್ನು ಬಿಟ್ಟು ಹೋಗಿದ್ದಾನೆ." ಆ ತಾಯಿ ತಂದೆಗೆ ದೊಡ್ಡ ನಮಸ್ಕಾರಗಳನ್ನು ಹೇಳಬೇಕು. ತಮ್ಮ ಆಸೆ ಪೂರೈಸಿ ಎಂದು ಒತ್ತಡ ಹಾಕುವ ತಂದೆ-ತಾಯಿ ಎಲ್ಲಿ...? ನಿನ್ನ ಸಂತೋಷಕ್ಕೆ ಬೇಕಾದುದನ್ನು ಮಾಡು ಎನ್ನುವ ಈ ತಂದೆ - ತಾಯಿ ಎಲ್ಲಿ ?. ಬದುಕು ಸುಂದರ ಸಂತೋಷವಾಗಿರಬೇಕಾದರೆ ಮನಸ್ಸು ಬಹಳ ಮುಖ್ಯ. ಮನಸ್ಸು ಸುಂದರ ಮತ್ತು ಸಂತೋಷವಾದರೆ ಜೀವನವೇ ಸುಂದರ ಮತ್ತು ಸಂತೋಷ ಅಲ್ವೇ ಮಕ್ಕಳೇ. ಹಾಗಾಗಿ ಪ್ರತಿಕ್ಷಣವನ್ನು ಸುಂದರಗೊಳಿಸೋಣ ಆನಂದ ಪಡೋಣ.
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************