ಜಗಲಿ ಕಟ್ಟೆ : ಸಂಚಿಕೆ - 4
Sunday, June 18, 2023
Edit
ಜಗಲಿ ಕಟ್ಟೆ : ಸಂಚಿಕೆ - 4
ಜಗಲಿಯ ಆತ್ಮೀಯ ಬಂಧುಗಳೇ..... ಮಕ್ಕಳ ಜಗಲಿ ಕೇವಲ ಪತ್ರಿಕೆಯಾಗಿ ಉಳಿದಿಲ್ಲ. ಇದೊಂದು ಮಕ್ಕಳ ಜಗಲಿ ಕುಟುಂಬ. ಇಲ್ಲಿ ಭಾವನಾತ್ಮಕ ಒಡನಾಟವಿದೆ. ವ್ಯವಹಾರಿಕ ಸಂಬಂಧವನ್ನು ಬದಿಗೊತ್ತಿ ಪ್ರೀತಿಯ, ಸೌಜನ್ಯದ ಪ್ರತೀಕವಾಗಿದೆ.... ಹೌದು ಇದಕ್ಕೆ ಕಾರಣವೂ ಇದೆ. ಮಕ್ಕಳ ಜಗಲಿ... ಮಕ್ಕಳ ಬರಹ ಮತ್ತು ಚಿತ್ರಗಳನ್ನು ಪ್ರಕಟಿಸುವುದಕ್ಕೆ ಮಾತ್ರ ಅನ್ನುವುದಕ್ಕಿಂತಲೂ ನೋವಿಗೂ ಸ್ಪಂದಿಸುವ ಜಗಲಿಯಾಗಿರುವುದು ವಿಶೇಷ ಅರ್ಥ ನೀಡಿದೆ..
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
ಕ್ರಿಯಾಶೀಲ, ಪ್ರತಿಭಾವಂತ ಬಾಲಕ ಮಕ್ಕಳ ಜಗಲಿಯ ಶಿಶಿರ್ ನಮ್ಮನ್ನಗಲಿದಾಗ ಇಡೀ ಮಕ್ಕಳ ಜಗಲಿಯ ಪ್ರತಿಯೊಬ್ಬರೂ ಆ ನೋವಿಗೆ ಸ್ಪಂದಿಸಿರುವುದು ಎಣಿಸಲಸಾಧ್ಯ ಸಂಗತಿ. ಮನೆ ಮಗುವಿನಂತೆ ಪ್ರತಿಯೊಬ್ಬರೂ ಗುರುತಿಸಿರುವ ಕಾಳಜಿಯನ್ನು ಕಂಡು ನಿಜವಾಗಲೂ ಬೆರಗಾದೆ...!! ಎಲ್ಲರ ಮೊಬೈಲ್ ಸ್ಟೇಟಸ್ ಗಳಲ್ಲೂ ಶಿಶಿರ್ ನದ್ದೇ ಚಿತ್ರ... ಬರಹಗಳು....!!
ಏನೇ ಇರಲಿ ಬದುಕಿನ ಸಂಭ್ರಮಕ್ಕಾಗಿ ಬದುಕುವ ನಾವುಗಳು ನಾಳೆಗಳ ಪರಿವೆಯಿಲ್ಲದೆಯೇ ಸಾಗುತ್ತಿದ್ದೇವೆ. ಇಂದು ನಾವು ಮಾಡುವ ಒಳ್ಳೆಯ ಕೆಲಸಗಳು ನಾಳೆಗೆ ಉಳಿಯುತ್ತವೆ. ಹಣ, ಆಸ್ತಿ, ಅಂತಸ್ತು, ಅಧಿಕಾರ, ದರ್ಪ ಇದ್ಯಾವುದೂ ಉಪಯೋಗಕ್ಕಿಲ್ಲ ಎನ್ನುವುದನ್ನು ಪುನಃ ಒತ್ತಿ ಹೇಳಬೇಕಾಗಿಲ್ಲ....!!
'ಓ ಮುದ್ದು ಮನಸೇ...' ಅಂಕಣದಲ್ಲಿ ಲೇಖಕರು ಮತ್ತು ಆಪ್ತ ಸಮಾಲೋಚಕರಾದ ಡಾ. ಗುರುರಾಜ ಇಟಗಿಯವರು ಮೊಬೈಲ್ ಕುರಿತಾಗಿ ತನ್ನ ಆತಂಕವನ್ನು ಅನೇಕ ಲೇಖನಗಳಲ್ಲಿ ವ್ಯಕ್ತಪಡಿಸಿದ್ದಾರೆ. ಮಕ್ಕಳ ಜಗಲಿಯಲ್ಲಿ ಚಿತ್ರ ಬರೆಯುವ ಹಾಗೂ ಬರಹಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳು ತಮ್ಮ ಪೋಷಕರ ಸಹಕಾರದೊಂದಿಗೆ ಮಾತ್ರ ಮೊಬೈಲ್ ಬಳಸುವಂತಾದರೆ ಉತ್ತಮ ಬೆಳವಣಿಗೆಯಾಗುತ್ತದೆ. ಲೇಖನ, ಕಥೆ, ವಿವಿಧ ಬಗೆಯ ಅಂಕಣಗಳುಗಳು ಪ್ರಕಟವಾದಾಗ ಒಬ್ಬರು ಓದುತ್ತಾ ಮನೆಯವರೆಲ್ಲ ಸೇರಿ ಆಲಿಸುವಂತಾದರೆ ಸಮಯದ ಉಳಿತಾಯದ ಜೊತೆಗೆ ಮೊಬೈಲ್ ನ ಮಿತ ಬಳಕೆಯೂ ಆಗುತ್ತದೆ.
ಜಗಲಿಯಲ್ಲಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಭಾಗವಹಿಸುವ ಕಾರಣ ನೀವು ಕಳಿಸುವ ಚಿತ್ರ ಹಾಗೂ ಬರಹಗಳು ಪ್ರಕಟವಾಗಲು ಕೆಲವು ದಿನಗಳ / ತಿಂಗಳ ಸಮಯಾವಕಾಶ ಬೇಕಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಚಿತ್ರ ಹಾಗೂ ಬರಹಗಳನ್ನು ಪ್ರಕಟಿಸಬೇಕೆನ್ನುವುದು ನಮ್ಮ ಗುರಿಯಾಗಿದೆ. ಅತ್ಯುತ್ತಮವಾಗಿ ರಚಿಸಿದ ಚಿತ್ರಗಳನ್ನು , ಬರಹಗಳನ್ನು ನಿರಂತರವಾಗಿ ಕಳುಹಿಸಲು ಮರೆಯದಿರಿ.
ಕಳೆದ ಸಂಚಿಕೆಯ ಜಗಲಿಕಟ್ಟೆ ಅಂಕಣದಲ್ಲಿ ಶಿಶಿರನ ಪೋಷಕರಾದ ಶ್ರೀನಿವಾಸ್ ದೈಪಲ, ಶ್ರೀಮತಿ ಕವಿತಾ ಶ್ರೀನಿವಾಸ್, ಹಾಗೂ ವಿದ್ಯಾರ್ಥಿಗಳಾದ ಪ್ರೇಮಾ ಶಿವಪ್ಪ ಶಿರಹಟ್ಟಿ , ಸುನೀತಾ , ಜನನಿ .ಪಿ , ಸಾತ್ವಿಕ್ ಗಣೇಶ್ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
ನಾನು ಮಂಚಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕನಾಗಿದ್ದಾಗ ನನ್ನ ಆತ್ಮೀಯ ಗೆಳೆಯರಲ್ಲಿ ಒಬ್ಬರು ತಾರಾನಾಥ್ ಕೈರಂಗಳ. ಇವರು ಬಹುಮುಖ ಪ್ರತಿಭೆಯ ಶಿಕ್ಷಕರು. ಕೊರೋನಾ ಸಂದರ್ಭದಲ್ಲಿ ನಮ್ಮ ಶಾಲಾ ಮಕ್ಕಳಿಗೆ ವೀಕೆಂಡ್ ಟಾಸ್ಕ್ ನೀಡುವಾಗ ಕಲೆ, ಸಾಹಿತ್ಯ ವಿಜ್ಞಾನ ಮುಂತಾದ ಬೇರೆ ಬೇರೆ ವಿಷಯಗಳನ್ನು ಆಯ್ದುಕೊಂಡಿರುವುದು ಬಹಳ ವಿಶೇಷವಾಗಿತ್ತು. ಎಲ್ಲಾ ವಿಷಯಗಳ ಜೊತೆಗೆ ವಿಜ್ಞಾನ ವಿಷಯದಲ್ಲಿ ಕೈಗೊಂಡ ವೀಕೆಂಡ್ ಟಾಸ್ಕ್ ಗೆ ಮಕ್ಕಳ ಪ್ರತಿಕ್ರಿಯೆ ಅದ್ಭುತವಾಗಿತ್ತು. ಹೀಗೆ ಮುಂದುವರೆದು ಕೊನೆಗೆ ಅದು "ಮಕ್ಕಳ ಜಗಲಿ" ಆನ್ ಲೈನ್ ಪತ್ರಿಕೆ ಹುಟ್ಟಿಗೆ ಕಾರಣವಾದುದು ಇನ್ನೊಂದು ವಿಶೇಷ.
ಮಕ್ಕಳ ಜಗಲಿಯಲ್ಲಿ ಹಲವಾರು ಮಂದಿ ಬಹುಮುಖ ಪ್ರತಿಭೆಯ ಲೇಖಕರು ಹಾಗೂ ಚಿಂತಕರು ಇದ್ದು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಜಗಲಿ ಬೆಳೆಯಲು ಬೆಳಗಲು ಕಾರಣರಾಗಿದ್ದಾರೆ. ಪ್ರತಿ ದಿನ ಹೊಸ ಸಂಚಿಕೆಗಳು ನಮ್ಮ ಜೊತೆಗೆ ಮಕ್ಕಳ ಮನೋವಿಕಾಸವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿವೆ. ಬಿ.ಇ.ಒ ಜ್ಞಾನೇಶ್ ಸರ್ ರವರ ಜೀವನ ಸಂಭ್ರಮ, ಗೋಪಾಲಕೃಷ್ಣ ರವರ ಬದಲಾಗೋಣವೇ ಪ್ಲೀಸ್ , ಅರವಿಂದರವರ ಹಕ್ಕಿ ಕಥೆ, ರಮೇಶ ಬಾಯಾರ್ ರವರ ಸ್ಪೂರ್ತಿಯ ನುಡಿಗಳು, ಗುರುರಾಜ ಇಟಗಿಯವರ ಓ ಮುದ್ದು ಮನಸೇ, ವಿಜಯಾ ಮೇಡಂ ರವರ ನಿಷ್ಪಾಪಿ ಸಸ್ಯಗಳು, ತೇಜಸ್ವಿ ಅಕ್ಕನ ಪತ್ರಗಳು ಮತ್ತು ಅದಕ್ಕೆ ಮಕ್ಕಳ ಸ್ಪಂದನೆ, ಪದಬಂಧ, ಆರ್ಟ್ ಗ್ಯಾಲರಿ ಮೂಲಕ ಚಿತ್ರ ಕಲಾವಿದರ ಪರಿಚಯ, ಸುಭಾಸ್ ರವರ ಸಂಚಾರಿ ಡೈರಿ ಹೀಗೆ ಅನೇಕ ಲೇಖನಗಳನ್ನು ಪ್ರಕಟಿಸುತ್ತಿರುವ ಈ ಬೃಹತ್ ಪತ್ರಿಕೆ ಇತರ ಯಾವುದೇ ಇತರೆ ಪತ್ರಿಕೆಗೂ ಕಡಿಮೆಯಿಲ್ಲ ಎಂದರೆ ತಪ್ಪಾಗಲಾರದು. ಪತ್ರಿಕೆಯಲ್ಲಿ ಮಕ್ಕಳಿಂದ ಕಥೆಗಳು, ಕವನಗಳು, ಚಿತ್ರಗಳನ್ನು ಪ್ರಕಟಿಸುವುದರ ಜೊತೆಗೆ ವಿಶೇಷ ಸಾಧನೆ ಮಾಡಿದ ಮಕ್ಕಳ ಪರಿಚಯವು ಪತ್ರಿಕೆಗೆ ಮತ್ತಷ್ಟು ಮೆರುಗನ್ನು ತಂದಿದೆ.
ಈ ಪತ್ರಿಕೆಗೆ ಬೆನ್ನೆಲುಬಾಗಿರುವವರು ಗೋಪಾಡ್ಕರ್ ಸರ್, ಜೀವನ್ ರಾಂ ರವರು, ದಿನೇಶ್ ಹೊಳ್ಳರವರು, ತುಳಸಿ ಕೈರಂಗಳರವರು ಹೀಗೆ ಇನ್ನೂ ಅನೇಕ ಪ್ರತಿಭಾನ್ವಿತರು. ಇವೆಲ್ಲದರ ನಡುವೆ ಬಿಡುವಿರದ ಸಂದರ್ಭದಲ್ಲೂ ಬಿಡುವು ಮಾಡಿಕೊಂಡು ಪತ್ರಿಕೆ ನಡೆಸುತ್ತಿರುವ ನಿಮಗೆ ನನ್ನ ನಮನಗಳು. ಜೊತೆಗೆ ಪತ್ರಿಕೆ ಇನ್ನಷ್ಟು ಬೆಳಗಲಿ ಎಲ್ಲಾ ಮಕ್ಕಳಿಗೆ ಇದರ ಪ್ರಯೋಜನ ಸಿಗಲಿ ಎಂದು ಆಶಿಸುತ್ತಾ, ನಿಮಗೆ ನನ್ನ ಶುಭ ಹಾರೈಕೆಗಳು....
ನಿವೃತ್ತ ವಿಜ್ಞಾನ ಶಿಕ್ಷಕರು
"ಗೌರಿ ಕೃಪಾ"
ವಾಟೆತ್ತಿಲ, ಅಂಚೆ: ಬಾಯಾರು
ಮಂಜೇಶ್ವರ ತಾಲೂಕು,
ಕಾಸರಗೋಡು ಜಿಲ್ಲೆ, ಕೇರಳ.
ಮೊಬೈಲ್ : +91 94819 74949
********************************************
ಓದುಗರ ಮಾತುಕತೆಯಲ್ಲಿ..... ನನ್ನ ಮಾರ್ಗದರ್ಶಕರು, ಹಿತ ಚಿಂತಕರಾದ ವಿ ಶ್ರೀರಾಮಮೂರ್ತಿ ಇವರು ಸೊಗಸಾದ ಅಭಿಪ್ರಾಯಗಳನ್ನು ತಿಳಿಸಿದ್ದಾರೆ... ಮಕ್ಕಳ ಜಗಲಿಯ ಹುಟ್ಟಿಗೆ ಕಾರಣದವರಲ್ಲಿ ಮೂರ್ತಿ ಸರ್ ಕೂಡಾ ಮುಖ್ಯವಾಗುತ್ತಾರೆ.
ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************