-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 15

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 15

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 15
ಲೇಖಕರು : ಲೋಕೇಶ್ ಸರ್ಕುಡೇಲು
ಹಿಂದಿ ಭಾಷಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಬಿಳಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 99018 57627
           
               
     ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡುವವರಿಗೆ ವಿಷಯದ ಬಗ್ಗೆ ಹೆಚ್ಚಿನ ಜ್ಞಾನದ ಅವಶ್ಯತೆ ಇಲ್ಲ. ಸಣ್ಣ ಮಕ್ಕಳಿಗೆ ದೊಡ್ಡ ದೊಡ್ಡ ವಿಷಯವನ್ನು ಹೇಳಿದರೆ ಅರ್ಥವಾಗುವುದಿಲ್ಲ. ಅವರ ಮಟ್ಟಕ್ಕೆ ಅರ್ಥವಾಗುವಂತೆ ಹೇಳಿದರೆ ಸಾಕು ಎಂಬ ಮಾತನ್ನು ನಾನು ಹಲವು ಬಾರಿ ಕೇಳಿದ್ದೇನೆ. ಆದರೆ ಈ ಮಾತನ್ನು ನಂಬಿ ಶಿಕ್ಷಕನಾದವನು ತನ್ನ ತಿಳುವಳಿಕೆಯ ಪರಿಧಿಯನ್ನು ಸೀಮಿತಗೊಳಿಸಿದರೆ ಕೆಲವೊಮ್ಮೆ ಮುಖಭಂಗ ಅನುಭವಿಸಬೇಕಾದೀತು. 
        ನಾನಾಗಲೇ ಶಿಕ್ಷಕ ವೃತ್ತಿಗೆ ಬಂದು ಮೂರ್ನಾಲ್ಕು ವರ್ಷವಾಗಿರಬಹುದು. ಪ್ರಾಥಮಿಕ ಶಾಲೆಯ ಶಿಕ್ಷಕರು ಎಲ್ಲಾ ವಿಷಯಗಳನ್ನು ಬೋಧಿಸಬೇಕಾಗಿದ್ದುದರಿಂದ ವಿಜ್ಞಾನ ವಿಷಯ ಪಾಠ ಮಾಡುತ್ತಿದ್ದೆ. ಭೂಮಿಯ ಹೊರಪದರದ ಮಣ್ಣಿನ ಕಲ್ಲಿನ ಬಗ್ಗೆ ಹೇಳುವಾಗ ಅನೇಕ ವರ್ಷಗಳ ರೂಪಾಂತರದ ನಂತರ ಕಲ್ಲಿನಿಂದಲೇ ಮಣ್ಣು ರೂಪುಗೊಳ್ಳುತ್ತದೆ. ಇದೊಂದು ನಿರಂತರ ಪ್ರಕ್ರಿಯೆ ಎಂದು ಹೇಳುತ್ತಿದ್ದೆ. ಅಷ್ಟರಲ್ಲಿ ಒಬ್ಬಳು ವಿದಾರ್ಥಿನಿ ಎದ್ದುನಿಂತು "ಅಲ್ಲ ಸಾರ್ ಕೆಲವು ಕಡೆ ಕೇವಲ ಕಲ್ಲುಬಂಡೆಗಳೇ ಇರುತ್ತವೆ. ಇನ್ನು ಕೆಲವು ಕಡೆ ತೆಗೆದಷ್ಟೂ ಮಣ್ಣೀ ಸಿಗುತ್ತದೆ. ಕಲ್ಲಿನಿಂದಲೇ ಮಣ್ಣಾಗುವುದಾದರೆ ಎಲ್ಲಾ ಕಡೆ ಒಂದೇ ರೀತಿ ಆಗ ಬೇಕಿತ್ತಲ್ಲ. ಇದಕ್ಕೇನು ಕಾರಣ" ಎಂದು ಕೇಳಿಯೇ ಬಿಟ್ಟಳು. ಒಂದು ಕ್ಷಣ ನಾನೂ ಯೋಚನೆಯಲ್ಲೇ ಬಿದ್ದೆ. ಹೌದಲ್ಲಾ ಇದಕ್ಕೆ ಕೊಡುವ ಉತ್ತರ ಬಹುಶ: ಪ್ರೌಢ ಶಾಲಾ ಹಂತದಲ್ಲಿದೆ. ನನಗೆ ತಿಳಿದ ರೀತಿಯಲ್ಲಿ ಅವಳನ್ನು ಒಪ್ಪಿಸುವ ಉತ್ತರ ನೀಡಿ ಹೊರಬಂದೆ.
       ಮತ್ತೊಮ್ಮೆ ನಾನು ಅದೇ ತರಗತಿಯಲ್ಲಿ ಮೋಡ, ಮಿಂಚು, ಗುಡುಗು, ಮಳೆಯ ಬಗ್ಗೆ ಹೇಳುತ್ತಿದ್ದೆ. "ನೀರಿನ ಕಣಗಳಿರುವ ಮೋಡಗಳ ಮದ್ಯೆ ವಿದ್ಯುತ್ ಪ್ರವಾಹದ ಕಾರಣ ಮಿಂಚು ಮತ್ತು ಗುಡುಗು ಉಂಟಾಗುತ್ತದೆ." ಎಂದು ಹೇಳುತ್ತಿದ್ದೆ. ಅಷ್ಟರಲ್ಲಿ ಅದೇ ವಿದ್ಯಾರ್ಥಿನಿ ಎದ್ದುನಿಂತು, "ಸರ್ ಆಕಾಶಲ್ಲಿ ಎರಡು ಮೋಡಗಳು ಇದ್ದಂತೆ ಇಲ್ಲಿ ಭೂಮಿಯಲ್ಲಿ ಎರಡು ಮಂಜುಗಡ್ಡೆಯನ್ನು ಹತ್ತಿರ ಹತ್ತಿರ ತಂದರೆ ಅದೇ ರೀತಿ ಆಗಬಹುದಾ?" ಎಂದು ಕೇಳಿದಳು. ಒಂದು ಕ್ಷಣ ನಾನೂ ಅವಾಕ್ಕಾದೆ. ಭೂಮಿಯ ವಾತಾವರಣದ ಭಿನ್ನತೆ ಮತ್ತು ಆಕಾಶದಲ್ಲಿ ಜರಗುವ ಅದ್ಭುತ ಪ್ರಾಕೃತಿಕ ವಿಸ್ಮಯದ ಬಗ್ಗೆ ಒಂದಷ್ಟು ಹೊತ್ತು ವಿವರಿಸಿದೆ. ಸಣ್ಣ ತರಗತಿಯಲ್ಲೂ ಇಂತಹ ಪ್ರಶ್ನೆಗಳು ಬಂದರೆ ಅವರ ಮಟ್ಟದಲ್ಲಿ ನಾವು ಉತ್ತರಿಸುವುದಾದರೂ ಹೇಗೆ...? ಈ ಎರಡೂ ಪ್ರಶ್ನೆಗಳಲ್ಲಿ ದೊಡ್ಡ ಮಟ್ಟದ ವಿಜ್ಞಾನ ವಿಷಯಗಳಿವೆ. ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಕೆಲವೊಮ್ಮೆ ನಮಗೆ ಖುಷಿ ಕೊಡಬಹುದು. ಕೆಲವೊಮ್ಮ ಪೇಚಿಗೆ ಸಿಲುಕಿಸಬಹುದು. ಅಥವಾ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವಂತೆ ಮಾಡಬಹುದು. ತರಗತಿಯಿಂದ ಹೊರ ನಡೆದಾಗ ಇನ್ನೂ ಶಿಕ್ಷಕನಾಗಿ ಪಕ್ಟಗೊಳ್ಳುವ ಅವಶ್ಯಕತೆ ಇದೆ. ಹೆಚ್ಚು ಹೆಚ್ಚು ಓದಬೇಕು, ತಿಳಿಯಬೇಕು ಅಂತ ನನ್ನ ಒಳ ಮನಸ್ಟು ಎಚ್ಚರಿಸಿತು...!!
................................ ಲೋಕೇಶ್ ಸರ್ಕುಡೇಲು
ಹಿಂದಿ ಭಾಷಾ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಬಿಳಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 99018 57627
******************************************   


Ads on article

Advertise in articles 1

advertising articles 2

Advertise under the article