-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 12

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 12

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 12
ಲೇಖಕರು : ಮಲ್ಲೇಶಯ್ಯ ಹೆಚ್.ಎಂ. 
ಶಿಕ್ಷಕರು 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ರಾಮಕುಂಜ , ಪುತ್ತೂರು , ದ.ಕ. ಜಿಲ್ಲೆ
                  

    ಮಕ್ಕಳು ಶಾಲೆಯಲ್ಲಿ ಕಲಿಯುವ ಚಂದವೇ ಬೇರೆ ಮಗುವಿನ ಅಭಿರುಚಿಗೆ ತಕ್ಕಂತೆ ಸುಲಲಿತವಾಗಿ ನಾವೀನ್ಯ ರೀತಿಯಲ್ಲಿ ಕಲಿಸುತ್ತಾ ಮಗುವನ್ನು ಶಾಲಾ ವಾತಾವರಣಕ್ಕೆ ಹೊಂದಿಸುವ ಕೆಲಸ ಸಾಮಾನ್ಯವಲ್ಲ. ಮಕ್ಕಳು ಮನೆಯ ಪರಿಸರದಿಂದ ಶಾಲೆಗೆ ಬಂದಾಗ ಅವರಲ್ಲಿ ತಂದೆ ತಾಯಿಗಿಂತಲೂ ಶಾಲೆಯ ಸಂಬಂಧವೇ ಬೇಕು ಎಂಬ ಭಾವನೆಯನ್ನು ಮೂಡಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸಬಲ್ಲರು. 
     ನಾನು ಕೊಪ್ಪಳ ಜಿಲ್ಲೆಯಿಂದ ವರ್ಗಾವಣೆಗೊಂಡು 2022 ಜನವರಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಮಕುಂಜಕ್ಕೆ ಬಂದೆ. ಪ್ರಾರಂಭದಲ್ಲಿ ಇಲ್ಲಿಯ ವಾತಾವರಣ, ಮಕ್ಕಳೊಂದಿಗೆ ಹೊಂದಿಕೊಳ್ಳುವುದು ತುಂಬಾ ಕಷ್ಟವಾಗುತ್ತಿತ್ತು. ಏಕೆಂದರೆ ಇಲ್ಲಿ ಮಾತನಾಡುವ ಭಾಷೆ ತುಳು, ಮಲಯಾಳಂ, ಬ್ಯಾರಿ ಈ ಮೂರು ಭಾಷೆಗಳನ್ನು ಮಾತಾಡುವ ಮಕ್ಕಳು ಮತ್ತು ಶಿಕ್ಷಕರು ಇವರಿಗೆ ನನ್ನ ಘಟ್ಟದ ಭಾಷೆಯ ಕೆಲವು ಪದಗಳು ಅರ್ಥವೇ ಆಗುತ್ತಿರಲಿಲ್ಲ. ಇದನ್ನು ಅರಿತು ನಿಧಾನವಾಗಿ ಅವರೊಂದಿಗೆ ಆತ್ಮೀಯವಾದ ಸಂಬಂಧವನ್ನು ಬೆಳೆಸುತ್ತಾ, ಮಕ್ಕಳ ಮನಸ್ಸನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳುವಲ್ಲಿ ಯಶಸ್ವಿಯಾದೆ. ಮಕ್ಕಳಿಗೆ ಪಾಠಕ್ಕಿಂತ ಇತರ ಸಹಪಠ್ಯ ಚಟುವಟಿಕೆಗಳಲ್ಲಿ ಹೆಚ್ಚು ಬೆರೆಯಲು ಪ್ರಾರಂಭಿಸಿದೆ. ಮಕ್ಕಳೊಂದಿಗೆ ಆಡುವುದು, ಗ್ರಾಮೀಣ ಆಟಗಳನ್ನು ಕಲಿಸುವುದು ಹಾಗೂ ನಾವೀನ್ಯ ರೀತಿಯ ಬೋಧನೆಯ ಮೂಲಕ ಮಕ್ಕಳೊಂದಿಗೆ ಅವಿನಾಭಾವ ಸಂಬಂಧವನ್ನು ಬೆಳೆಸಿಕೊಂಡು ಮಕ್ಕಳೊಂದಿಗೆ ಬೆರೆತು ಹೋದೆ. ದಿನಕಳೆದಂತೆ ಶಾಲೆ ಬಿಡುವ ಸಮಯ ಏಕೆ ಬರುತ್ತದೆ ಎಂಬ ಭಾವನೆ ನನ್ನಲ್ಲಿ ಕಾಡುತ್ತಿತ್ತು. ಪ್ರತಿ ದಿನ ಶಾಲೆಗೆ ಬರುವ ಮಕ್ಕಳೊಂದಿಗೆ ಕೈ ಕುಲುಕುವುದು, ಬೆನ್ನು ತಟ್ಟಿ ಮಾತಾಡಿಸುವುದು, ಶಿಸ್ತಿನಿಂದ ಹೇಗಿರಬೇಕೆಂದು ಪ್ರೀತಿಯಿಂದ ಹೇಳುವುದು, ಇದೆಲ್ಲ ನನಗೆ ದಿನನಿತ್ಯದ ಕರ್ತವ್ಯವಾಗಿತ್ತು. 
        ನಾನು ದೈಹಿಕ ಶಿಕ್ಷಕನಲ್ಲದಿದ್ದರೂ ಪ್ರತಿ ಶನಿವಾರ ಮಕ್ಕಳಿಗೆ ಡಂಬಲ್ಸ್ ಮತ್ತು ಕವಾಯಿತು ಮಾಡಿಸುವ ಚಟುವಟಿಕೆ ನಡೆಸುತ್ತಿದ್ದೆ. ಇದು ಮಕ್ಕಳು ಮತ್ತು ಶಿಕ್ಷಕರೊಂದಿಗೆ ತುಂಬಾ ಉತ್ತಮ ಬಾಂಧವ್ಯ ಬೆಳೆಯಲು ಸಹಕಾರಿಯಾಗಿತ್ತು. ಇದಕ್ಕೆ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಎಲ್ಲಾ ಸಹ ಶಿಕ್ಷಕರ ಸಹಕಾರ ಉತ್ತಮವಾಗಿತ್ತು. 
     ಒಂದು ಸಲ ಕಡಬ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಸೇಸಪ್ಪ ಪ್ಪ ರೈಗಳು ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರು ಮತ್ತು ಹಿರಿಯ ಸಾಹಿತಿಗಳು ಆದಂತಹ ಶ್ರೀ ಟಿ ನಾರಾಯಣ ಭಟ್ ರಾಮಕುಂಜ ರವರು ಆಶಯದಂತೆ ರಾಮ ಕುಂಜದ ಶಾಲೆಗಳಲ್ಲಿ ಮಕ್ಕಳಿಗೆ ಸಾಹಿತಿಕ ಚಟುವಟಿಕೆಗಳನ್ನು ಮಾಡಬೇಕೆಂದು ಚರ್ಚಿಸಲಾಯಿತು. ಇದಕ್ಕೆ ನಾನು ಮತ್ತು ನಮ್ಮ ಶಾಲೆಯ ಮುಖ್ಯೋಪಾಧ್ಯಾಯರಾದಂತಹ ಮಹೇಶ್ ಎಂ ರವರು ಬರಿ ರಾಮಕುಂಜದಲ್ಲಿ ಮಕ್ಕಳಿಗೆ ಸಾಹಿತ್ಯ ಚಟುವಟಿಕೆಗಳನ್ನು ಮಾಡಿದರೆ ಸಾಲದು ಇಡಿ ಕಡಬ ತಾಲೂಕಿನ 10 ಕ್ಲಸ್ಟರ್ಗಳಲ್ಲೂ ಈ ಸಾಹಿತ್ಯ ಚಟುವಟಿಕೆಯನ್ನು ನಾವು ಮಾಡಿ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಬೇಕೆಂದು ತೀರ್ಮಾನಿಸಲಾಯಿತು. ಕಾರ್ಯಕ್ರಮದ ರೂಪರೇಷೆಗಳನ್ನು ಹಿರಿಯ ಸಾಹಿತಿಗಳಾದ ಶ್ರೀ ಐತಪ್ಪ ನಾಯಕ್ ರವರ ಸಲಹೆ ಮೇರೆಗೆ ಸಿದ್ದಪಡಿಸಿಕೊಂಡು, ಮಕ್ಕಳಿಗೆ ಕಥೆ ಮತ್ತು ಕವನ ಬರೆಯುವ ಸ್ಪರ್ಧೆಗಳನ್ನು ಶಾಲಾ ಹಂತದಲ್ಲಿ ಏರ್ಪಡಿಸಿ ಶಾಲಾ ಹಂತದಲ್ಲಿ ಆಯ್ಕೆಯಾದ ಮಕ್ಕಳು ಕ್ಲಸ್ಟರ್ ಹಂತ ಹಾಗೂ ತಾಲೂಕು ಹಂತಕ್ಕೆ ಆಯ್ಕೆ ಮಾಡಲಾಯಿತು. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕಡಬ ಇಲ್ಲಿ ತಾಲೂಕು ಹಂತದ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಕಡಬ ತಾಲುಕಿನ 10 ಕ್ಲಸ್ಟರ್ ನಿಂದ ಕಥೆ ಮತ್ತು ಕವನ ಬರೆಯುವ ಸುಮಾರು 80 ಮಕ್ಕಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ವಿಜೇತರಿಗೆ ಪ್ರಶಸ್ತಿ ಪತ್ರ ಕನ್ನಡ ಶಾಲು ಮತ್ತು ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು. ಮಕ್ಕಳು ಬರೆದಂತಹ ಕಥೆ ಮತ್ತು ಕವನಗಳಲ್ಲಿ ಉತ್ತಮ ಕಥೆ ಮತ್ತು ಕವನಗಳನ್ನು ಆಯ್ಕೆ ಮಾಡಿ ಅಕ್ಷರತೆನೆ ಎಂಬ ಸ್ಮರಣ ಸಂಚಿಕೆ ಸಿದ್ಧಪಡಿಸಲಾಗಿದೆ ಅದು ಸದ್ಯದಲ್ಲಿ ಲೋಕಾರ್ಪಣೆಗೊಳ್ಳಲಿದೆ.
     ಮಕ್ಕಳು ತಾವು ಜೀವಿಸುವ ಪ್ರಪಂಚದ ಜೊತೆ ಉತ್ತಮ ಸಂಬಂಧ ಹೊಂದಬೇಕಾದರೆ ಈ ರೀತಿಯ ಕಾರ್ಯಕ್ರಮಗಳು ಶಾಲಾ ಹಂತದಿಂದಲೇ ಪ್ರಾರಂಭಿಸಿ ಮಕ್ಕಳನ್ನು ಎಲ್ಲಾ ರಂಗದಲ್ಲೂ ಬೆಳೆಸುವ ಕಾರ್ಯ ಶಿಕ್ಷಕರಾದ ನಾವು ಮಾಡಬೇಕು. ಸುಸ್ಥಿರ ಸಮಾಜ ನಿರ್ಮಿಸಬೇಕು ಮಕ್ಕಳಿಗೊಂದು ಉತ್ತಮ ಬದುಕು ಕಟ್ಟಿಕೊಡಬೇಕೆಂಬ ಆಶಯ ಶಿಕ್ಷಕರದ್ದಾಗಬೇಕು.
................................ಮಲ್ಲೇಶಯ್ಯ ಹೆಚ್.ಎಂ. 
ಶಿಕ್ಷಕರು 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ರಾಮಕುಂಜ , ಪುತ್ತೂರು , ದ.ಕ. ಜಿಲ್ಲೆ
******************************************   


Ads on article

Advertise in articles 1

advertising articles 2

Advertise under the article