-->
ಹಕ್ಕಿ ಕಥೆ : ಸಂಚಿಕೆ - 105

ಹಕ್ಕಿ ಕಥೆ : ಸಂಚಿಕೆ - 105

ಹಕ್ಕಿ ಕಥೆ : ಸಂಚಿಕೆ - 105
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

               
         ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಕುಮಾರಪರ್ವತ ಚಾರಣಕ್ಕೆ ಹೋಗಿ ಕರಿ ಪಿಕಳಾರ ನೋಡಿದ್ದನ್ನು ಕಳೆದಬಾರಿ ಹೇಳಿದ್ದೆ. ಅಲ್ಲಿಂದ ಈ ವಾರದ ಕಥೆಯನ್ನು ಮುಂದುವರೆಸೋಣ ಆಗಬಹುದೇ...... 
      ಕುಮಾರ ಪರ್ವತಕ್ಕೆ ಹೊರಟ ನಮಗೆ ಗಿರಿಗದ್ದೆ ಎಂಬ ಬೇಸ್‌ ಕ್ಯಾಂಪ್‌ ವರೆಗೂ ಹೋದರೂ ಅಲ್ಲಿಂದ ಮುಂದೆ ಹೋಗಲು ಅರಣ್ಯ ಇಲಾಖೆಯ ಅನುಮತಿ ಸಿಕ್ಕಿರಲಿಲ್ಲ. ಗಿರಿಗದ್ದೆಯಲ್ಲಿ ಭಟ್ಟರ ಮನೆ ಎಂಬ ಏಕಮಾತ್ರ ಮನೆ ಇದೆ. ಅಲ್ಲೇ ಸಮೀಪದಲ್ಲಿ ಅರಣ್ಯ ಇಲಾಖೆಯ ತಪಾಸಣಾ ಶಿಬಿರವೂ ಇದೆ. ಸುಬ್ರಹ್ಮಣ್ಯದಿಂದ ಕುಮಾರಪರ್ವತದ ಹಾದಿಯಲ್ಲಿ ಗಿರಿಗದ್ದೆಯ ಭಟ್ಟರ ಮನೆ ಒಂದೇ ಉಳಿಯಲು ಸಾಧ್ಯವಾಗುವ ಮತ್ತು ಊಟ ತಿಂಡಿ ಸಿಗುವ ಜಾಗ. ಈ ಗುಡ್ಡದ ಮೇಲೆ ಮನೆಯೊಂದನ್ನು ಮಾಡಿ, ಪುಟ್ಟದೊಂದು ತೋಟ ಮತ್ತು ಗದ್ದೆ ಮಾಡಿ ಹತ್ತಾರು ದನಕರುಗಳನ್ನು ಸಾಕಿ ಇಲ್ಲಿ ಬದುಕಿರುವ ಈ ಮನೆಯವರ ಸಾಹಸವೇ ಒಂದು ದೊಡ್ಡ ಕಥೆ. ಸಂಜೆಯ ಚಹಾ ಕುಡಿದು, ಅಲ್ಲೇ ಸುತ್ತಮುತ್ತ ಸುತ್ತಾಡಿ, ಸೂರ್ಯಾಸ್ತವನ್ನು ನೋಡಿ ಬರೋಣ ಎಂದು ಅಡ್ಡಾಡಿ ಬಂದೆವು. ಕತ್ತಲಾಗುತ್ತಲೇ ಸುಮಾರು ಹತ್ತು ಹನ್ನೆರಡು ದನ ಕರುಗಳ ಹಿಂಡು ಬಂದು ತಾವಾಗಿ ಕೊಟ್ಟಿಗೆ ಸೇರಿಕೊಂಡವು. ಅದನ್ನು ಕಂಡಾಗ ಪುಣ್ಯಕೋಟಿಯ ಕಥೆ ನೆನಪಾಯಿತು. ವಿದ್ಯುತ್‌ ಸಂಪರ್ಕ ಇಲ್ಲದಿದ್ರೂ ಸೂರ್ಯದೇವನ ಶಕ್ತಿಯಿಂದ ಅಲ್ಲೆಲ್ಲ ಬೇಕಾದಷ್ಟು ಬೆಳಕಿನ ವ್ಯವಸ್ಥೆ ಇತ್ತು. ಯಾವುದೇ ಪಂಪ್‌ ಸೆಟ್‌ ಇಲ್ಲದೇ ಬೇಸಗೆಯಲ್ಲೂ ಸಹಜವಾಗಿ ಗುಡ್ಡದಿಂದ ಹರಿದುಬರುವ ನೀರು ಕಂಡು ನಮಗೆ ಆಶ್ಚರ್ಯವಾಯ್ತು. ರಾತ್ರಿ ಊಟ ಮಾಡಿ ಭಟ್ಟರಮನೆ ಹೊಂಸ್ಟೇಯಲ್ಲಿ ಮಲಗಿ ವಿಶ್ರಾಂತಿ ಪಡೆದೆವು. 
     ಬೆಳಗ್ಗೆ ಎದ್ದು ಹಲ್ಲುಜ್ಜಿ ನಿತ್ಯಕರ್ಮ ಪೂರೈಸಿ ಬಂದಾಗ ಬಿಸಿಬಿಸೀ ಚಹಾ ತಯಾರಾಗಿತ್ತು. ಚಹಾ ಕುಡಿದು ಹೊರಗಡೆ ಬಂದಾಗ ಬೆಳಗ್ಗಿನ ಹೊಂಬಿಸಿಲಿಗೆ ಸುತ್ತಲೂ ಹರಡಿದ್ದ ಮಂಜಿನ ಮುಸುಕು ಕಂಡು ಅಲ್ಲಿಂದ ಹೋಗುವುದೇ ಬೇಡ ಎನಿಸಿಬಿಟ್ಟಿತು. ಮಂಜು ಕವಿದ ಆ ಸುಂದರ ವಾತಾವರಣ, ತಣ್ಣನೆ ಗಾಳಿ, ನಿಧಾನವಾಗಿ ಮೂಡುತ್ತಿರುವ ಸೂರ್ಯ, ಸ್ವರ್ಗವೇ ಧರೆಗೆ ಇಳಿದು ಬಂದಹಾಗಿತ್ತು. ಅಲ್ಲೇ ಹುಲ್ಲುಗಾವಲಿನಲ್ಲಿ ಓಡಾಡಿ ಆ ವಾತಾವರಣವನ್ನು ಅನುಭವಿಸುತ್ತಾ ಸುಮಾರು ಹೊತ್ತು ಕಳೆದೆವು. ಈಗ ಬಿಸಿಲು ಚೆನ್ನಾಗಿಯಯೇ ಬಂದಿತ್ತು. ಬೇಸಗೆಗೆ ಒಣಗಿದ್ದ ಹುಲ್ಲಿನ ಹೊಂಬಣ್ಣ ಸುಂದರವಾಗಿ ಕಾಣುತ್ತಿತ್ತು. ಅಲ್ಲೊಂದಿಷ್ಟು ಸಮತಟ್ಟಾದ ಪ್ರದೇಶದಲ್ಲಿ ಹುಲ್ಲಿನ ನಡುವೆ ಅದೇ ಒಣಹುಲ್ಲಿನ ಬಣ್ಣದ ಯಾವುದೋ ಹಕ್ಕಿಯೊಂದು ಓಡಾಡುವುದು ಕಾಣಿಸಿತು. ಬಣ್ಣ ನೋಡಿ ಪಕ್ಕನೇ ಗುಬ್ಬಚ್ಚಿ ಇರಬೇಕು ಅಂದುಕೊಂಡೆ. 
         ಕೈಯಲ್ಲಿದ್ದ ಕ್ಯಾಮರಾ ಜೂಮ್‌ ಮಾಡಿ ನೋಡಿದಾಗ ದೇಹ ಗುಬ್ಬಚ್ಚಿಯ ಬಣ್ಣವೇ ಆದರೂ ಕೊಕ್ಕು ಗುಬ್ಬಚ್ಚಿಗಿಂತ ತೆಳ್ಳಗೆ ಇತ್ತು. ಹೊಟ್ಟೆಯ ಭಾಗ ತುಸು ಬಿಳಿಯಾಗಿತ್ತು. ಬಾಲ ಮತ್ತು ಕಾಲುಗಳೂ ಗುಬ್ಬಚ್ಚಿಗಿಂತ ಉದ್ದ. ನೆಲದಲ್ಲಿ ಸ್ವಲ್ಪದೂರ ಓಡಿ ನೆಲದಲ್ಲಿರುವ ಕೀಟ, ಹುಳು ಹುಪ್ಪಟೆಗಳನ್ನು ಹುಡುಕುತ್ತಿತ್ತು. ಕೆಲವೊಮ್ಮೆ ಬಾಲವನ್ನು ಎತ್ತಿ ಇಳಿಸುತ್ತಿತ್ತು. ಮತ್ತೆ ಇನ್ನೊಂದು ಬದಿಗೆ ಓಡಿ ಅಲ್ಲೂ ಹಾಗೇ ಆಹಾರ ಹುಡುಕುತ್ತಿತ್ತು. ಫೋಟೋ ತೆಗೆಯಲು ಹತ್ತಿರ ಹೋದಾಗ ನೆಲಕ್ಕೆ ಸಮಾಂತರವಾಗಿ ಸ್ವಲ್ಪ ದೂರ ಹಾರಿ ಮತ್ತೆ ತನ್ನ ಕೆಲಸ ಮುಂದುವರೆಸುತ್ತಿತ್ತು. ಒಂದೆರಡು ಫೋಟೋ ತೆಗೆದುಕೊಂಡೆ. ಮನೆಗೆ ಬಂದು ಪುಸ್ತಕದಲ್ಲಿ ಹುಡುಕಿದಾಗ ಇದು ಗುಬ್ಬಚ್ಚಿ ಅಲ್ಲ ಎನ್ನುವುದು ಸ್ಪಷ್ಟವಾಯಿತು. ಹಿರಿಯ ಪಕ್ಷಿವೀಕ್ಷಕ ಮಿತ್ರರಿಗೆ ಕಳುಹಿಸಿ ವಿಚಾರಿಸಿದೆ. ಅವರು ಇದು ಪಿಪಿಳೀಕ ಜಾತಿಗೆ ಸೇರಿದ ಹಕ್ಕಿ ಎಂದು ಹೇಳಿದರು. 
     ಮಾರ್ಚ್‌ ನಿಂದ ಜೂನ್‌ ತಿಂಗಳ ನಡುವೆ ಹುಲ್ಲಿನ ಪೊದೆಗಳ ಎಡೆಯಲ್ಲಿ ಬಟ್ಟಲಿನಾಕಾರದ ಗೂಡು ಮಾಡಿ ಸಂತಾನಾಭಿವೃದ್ಧಿ ಮಾಡುತ್ತದೆಯಂತೆ. ಕಟಾವು ಮಾಡಿದ ಗದ್ದೆಗಳು ಮತ್ತು ಹುಲ್ಲುಗಾವಲಿನಲ್ಲಿ ಇದರ ವಾಸ. ಭಾರತದಾದ್ಯಂತ ಕಾಣಸಿಗುವ ಈ ಹಕ್ಕಿ ನಿಮ್ಮ ಆಸುಪಾಸಿನಲ್ಲೂ ಇರಬಹುದು. 
ಕನ್ನಡದ ಹೆಸರು: ಗದ್ದೆ ಪಿಪಿಳೀಕ
ಇಂಗ್ಲೀಷ್‌ ಹೆಸರು: Padyfield Pipit
ವೈಜ್ಞಾನಿಕ ಹೆಸರು: Anthus rufulus
ಚಿತ್ರ : ಅರವಿಂದ ಕುಡ್ಲ    
         ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article