-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 03

ನಿಷ್ಪಾಪಿ ಸಸ್ಯಗಳು : ಸಂಚಿಕೆ - 03

ನಿಷ್ಪಾಪಿ ಸಸ್ಯಗಳು : ಸಂಚಿಕೆ - 03
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ



                     ಬೇಲಿಗುಲಾಬಿ ಗಿಡ
ಪ್ರೀತಿಯ ಮಕ್ಕಳೇ...... ಹೇಗಿದ್ದೀರಿ?
    ಮಳೆರಾಯ ಅಷ್ಟಿಷ್ಟು ಮುನಿಸಿಕೊಂಡೇ ಕಾಲ ಕಳೆಯುತ್ತಿದ್ದರೂ ಮುಂಗಾರು ಮಳೆಯ ಘಮದಲ್ಲಿ ನಮ್ಮ ಭೂ ತಾಯಿ ಹಸುರುಡುಗೆ ತೊಡಲಾರಂಭಿಸಿದ್ದಾಳೆ ಅಲ್ಲವೇ..
      ನಾವು ಪ್ರಕೃತಿಯ ಮಡಿಲಲ್ಲಿ ಅತ್ತಿತ್ತ ಒಂದಿಷ್ಟು ಹೆಜ್ಜೆ ಹಾಕಿದರೂ ಸಾಕು... ಹಸಿರ ಮರೆಯಲ್ಲಿ ಅಷ್ಟಿಷ್ಟು ಕೆಂಪು, ಕೇಸರಿ ಬಣ್ಣಗಳ ಎಸೆಯುತ್ತಾ ನಗು ತುಳುಕಿಸುವ ಹೂಗಳ ಹೊತ್ತ ನಿಷ್ಪಾಪಿ ಸಸ್ಯವೊಂದು ಗೋಚರಿಸದಿರದು.
      ಹೌದು ಮಕ್ಕಳೇ, ನಿಮ್ಮ ಊಹೆ ಸರಿಯಾದುದು. ಅದೇ ಬೇಲಿಗುಲಾಬಿ...! ಪೇಟೆಯಲ್ಲಿ ದುಡ್ಡು ಕೊಟ್ಟು ಪಡಕೊಂಡು ಖುಷಿ ಪಡುವ ಗುಲಾಬಿಯಲ್ಲವದು. ಮನೆಯಲ್ಲಿ ನೆಟ್ಟು ಜೋಪಾನ ಮಾಡುತ್ತಾ ಹೂವಿನಂದಕ್ಕೆ ಕಾಯಬೇಕಾದ ಹೂಗಳ ರಾಣಿಯೂ ಅಲ್ಲ. ಇದೇನಿದ್ದರೂ ಕಾಡ ಕುಸುಮ.
      ಇದನ್ನು ಲಾಂಟಾನಾ ಎಂದು ಎಲ್ಲೆಡೆ ಗುರುತಿಸಿದರೂ ಕಸೂತಿ ಹೂ, ಕಾಡುಜೋಳ, ಚದುರಂಗ, ಲಂಟವಾಣಿ, ರೋಜನ್ ಗಿಡ ಎಂದು ಮಾತ್ರವಲ್ಲದೆ ಹೇಸಿಗೆ ಹೂವೆಂದೂ ಕರೆಯುತ್ತಾರಂತೆ.
       ದಕ್ಷಿಣ ಅಮೆರಿಕ ಮೂಲದ ಈ ಪೊದರಿನ ಗಿಡ 18ನೇ ಶತಮಾನದಲ್ಲಿ ಪೋರ್ಚುಗೀಸರ ಮೂಲಕ ಭಾರತಕ್ಕೆ ಅಲಂಕಾರಿಕ ಸಸ್ಯವಾಗಿಯೇ ಬಂದಿತ್ತೆಂದರೆ ಈ ಸಸ್ಯದ ಗೌರವವನ್ನು ಮನಗಾಣಬಹುದು. ಕುರುಚಲು ಸಸ್ಯಾವರಣದಲ್ಲಿ ಮಾತ್ರವಲ್ಲದೆ ಬೀಳು ಭೂಮಿಯಲ್ಲೂ ಸುಲಭವಾಗಿ ಸಂತಾನ ವೃದ್ಧಿಸಿಕೊಳ್ಳುತ್ತಾ ಸಾಗಿ ಬಂದ ಈ ಸಸ್ಯ ಕೆಲವೆಡೆ ಬೇಲಿಗಿಡವಾಗಿದೆ ಮಾತ್ರವಲ್ಲದೆ ಕಣ್ಮನ ತಣಿಸುವ ಹಲವು ತಳಿಗಳು ಹಲವಾರು ಬಣ್ಣಗಳಲ್ಲಿ ಹೂಗಳನ್ನು ಬಿಡುತ್ತಾ ಮನೆಯಂಗಳದಲ್ಲೂ, ಹೂತೋಟಗಳಲ್ಲೂ ರಂಗೇರಿಸಿದೆ.
      ಸುವಾಸನೆ ಇರುವ ಈ ಸಸ್ಯದ ಎಲೆಗಳು ಅಭಿಮುಖವಾಗಿ ಜೋಡಣೆಯಾಗಿರುತ್ತವೆ. ಎಲೆಗಳ ಕಂಕುಳಲ್ಲಿ ಪುಷ್ಪಮಂಜರಿ ಇರುತ್ತದೆ. ಅರಳಿದಾಗ ಹೂಗಳು ತಿಳಿ ಬಣ್ಣವನ್ನು ಹೊಂದಿದ್ದು ಮರುದಿನ ಗಾಢಬಣ್ಣ ತಳೆಯತ್ತವೆ. ಗಿಡದುದ್ದಕ್ಕೂ ಕೆಳಕ್ಕೆ ಬಾಗಿದ ಪುಟ್ಟ ಮುಳ್ಳುಗಳಿವೆ. ಎಲೆಗಳೂ ಒಂದಿಷ್ಟು ಒರಟೆಂದರೂ ಚಿಗುರು ಬಹಳ ಮುದ್ದಾಗಿರುತ್ತದೆ. ಕಡಿದೆಸೆದರೂ ಒಮ್ಮೆಲೇ ಸಾಯದೆ ಸಾಗರದಲೆಗಳಂತೆ ಮತ್ತಷ್ಟು ಶಕ್ತಿಯುತವಾಗಿ ಚಿಗುರುತ್ತಲೇ ಇರುವುದುಂಟು.
     ಈ ಗಿಡದ ವೈಜ್ಞಾನಿಕ ಹೆಸರು ಲಾಂಟಾನ ಕ್ಯಾಮರ. (Lantana camara). ವರ್ಬಿನೇಸಿ(Verbenaceae) ಕುಟುಂಬದ ಈ ಗಿಡದ ಎಲೆಗಳನ್ನು ಸುಣ್ಣದ ಜೊತೆ ಅರೆದು ಹರಿತವಾದ ಆಯುಧಗಳಿಂದಾದ ಗಾಯಗಳಿಗೆ ಹಚ್ಚಿದರೆ ಗಾಯ ಬೇಗನೆ ಗುಣವಾಗುತ್ತದೆ. ಧನುರ್ವಾಯು, ಸಂಧಿವಾತ, ಮಲೇರಿಯಾ ಗಳ ವಿರುದ್ಧವೂ ಈ ಸಸ್ಯದ ಬಳಕೆ ಮಾಡಲಾಗುತ್ತದೆ.
       ಬಾಲ್ಯದಲ್ಲಿ ಮೈಲುಗಟ್ಟಲೆ ನಡೆದು ಶಾಲೆಗೆ ಹೋಗುವಾಗ ಲಂಟಾಣದ ಹಣ್ಣುಗಳನ್ನೂ ಬಾಯಿಗೆ ಹಾಕಿಕೊಳ್ಳುವುದಿತ್ತು. ಮುತ್ತಿನಂತಹ ಪುಟಾಣಿ ಕಪ್ಪು ಹಣ್ಣುಗಳಿರುವ ಗೊಂಚಲು ನೋಡಲೂ ಸುಂದರವಾಗಿರುತ್ತದೆ. ರಂಗವಲ್ಲಿ ಸ್ಪರ್ಧೆ ನಡೆಯುವುದಿದ್ದರೆ ಈ ಬೇಲಿಗುಲಾಬಿ ಹೂವುಗಳನ್ನು ಆಯುವುದೇ ಮಧುರವಾದ ಅನುಭವ. ಇದು ತಾಳ್ಮೆಯ ಪರೀಕ್ಷೆಯೂ ಆಗುವುದಿದೆ.
       ಮಕ್ಕಳೇ, ಈ ಗಿಡವನ್ನು ನೀವು ಖಂಡಿತವಾಗಿಯೂ ನೋಡಿರುತ್ತೀರಿ ಅಲ್ಲವೇ?ಸಸ್ಯಗಳು ಹೇಗೆಂದರೆ ಹಾಗೆ ಎಲ್ಲೆಂದರೆ ಅಲ್ಲಿ ಬೆಳೆದು ಬಂದವುಗಳಲ್ಲ. ಇವುಗಳ ವೈವಿಧ್ಯತೆ, ಮಿಶ್ರಣ, ಸಹಯೋಗಗಳು ಪ್ರಕೃತಿಯ ಕೈವಾಡ ಅಥವಾ ಪವಾಡವೆಂದೂ ಹೇಳಬಹುದು. ಎಲ್ಲಿಂದೆಲ್ಲಿಗೋ ಬಂದು ಬದುಕುವುದು ಅವುಗಳಿಗೂ ಒಂದು ಸವಾಲೇ ಸರಿ. ಹಾಗೆ ಬೆಳೆದು ಜೊತೆಗಿರುವ ಈ ಹಸಿರ ಸಿರಿಯನ್ನು ಪ್ರೀತಿಯಿಂದ ಕಾಣೋಣ ಅಲ್ಲವೇ...
     ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗೋಣ, ಏನಂತೀರಾ...
............ ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************


Ads on article

Advertise in articles 1

advertising articles 2

Advertise under the article