ಕಾಯಂಕುಲಂನ ಯಕ್ಷಿ - ಕಥೆ ರಚನೆ : ಶರ್ಮಿಳಾ ಕೆ.ಎಸ್ 9ನೇ ತರಗತಿ
Wednesday, May 24, 2023
Edit
ಕಥೆ ರಚನೆ : ಶರ್ಮಿಳಾ ಕೆ.ಎಸ್
9ನೇ ತರಗತಿ
ವಿವೇಕ ಗರ್ಲ್ಸ್ ಹೈಸ್ಕೂಲ್, ಕೋಟ
ಉಡುಪಿ ಜಿಲ್ಲೆ
ಎಲ್ಲರಿಗೂ ನನ್ನ ನಮಸ್ಕಾರ. ನಾನು ಇಂದು ಯಾವಾಗಲೋ ಒಂದು ಪುಸ್ತಕದಲ್ಲಿ ಓದಿದ ಕೇರಳದ ಪಣಯನ್ನಾರ್ಕಾವು ಕ್ಷೇತ್ರದ ಹಿಂದಿನ ಕಥೆಯನ್ನು ಒಂದು ಸಣ್ಣ ಕಥೆಯ ರೂಪದಲ್ಲಿ ಬರೆದಿದ್ದೇನೆ.......... ಶರ್ಮಿಳಾ ಕೆ.ಎಸ್
ಹಿಂದಿನ ಕಾಲದಲ್ಲಿ ಕೇರಳದ ಸುತ್ತ ಕಾಡುಗಳೇ ಹೆಚ್ಚಾಗಿದ್ದವು. ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಬೇಕಾದರೆ ಮೈಲುಗಟ್ಟಲೆ ದೂರ ಕಾಲುದಾರಿಯಲ್ಲಿ ನಡೆಯಬೇಕಾಗಿತ್ತು. ಹೀಗೆ ತಿರುವನಂತ ಪುರದಿಂದ ಪದ್ಮನಾಭಪುರಕ್ಕೆ ಹೋಗಬೇಕಾದರೆ ಒಂದು ಕಾಲು ದಾರಿ ಇತ್ತು. ಈ ದಾರಿ ಕಾಯಂಕುಲಂ ಎಂಬಲ್ಲಿ ಒಂದು ಕಾಡಿನ ನಡುವೆ ಸಾಗುತ್ತಿತ್ತು.
ಕಾಯಂಕುಲಂ ನ ಕಾಡಿನ ನಡುವೆ ಒಂದು ಆಲದ ಮರದಲ್ಲಿ ಒಬ್ಬಳು ಯಕ್ಷಿ ವಾಸವಾಗಿದ್ದಾಳೆ ಎಂದು ಸುದ್ದಿ ಇತ್ತು. ಜನರು ಆ ದಾರಿಯಲ್ಲಿ ಹೋಗಲು ಭಯಪಡುತ್ತಿದ್ದರು. ಕತ್ತಲಿನ ಆ ಕಾಡಿನ ಪಕ್ಕದಲ್ಲಿ ಯಾರೂ ಸುಳಿಯುತ್ತಿರಲಿಲ್ಲ. ಕೆಲವೊಮ್ಮೆ ಅವಳ ಬಗ್ಗೆ ಕೇಳಿ ತಿಳಿದಿಲ್ಲದ ಹೊಸಬರು ಆ ದಾರಿಯಲ್ಲಿ ಹೋಗುತ್ತಿದ್ದರು. ಯಕ್ಷಿ ಸುಂದರ ತರುಣಿ ರೂಪದಲ್ಲಿ ಬಂದು ಅವರನ್ನು ಮರುಳು ಮಾಡುತ್ತಿದ್ದಳು. ಅವರನ್ನು ದಾರಿ ತಪ್ಪಿಸಿ ಬೇರೆಲ್ಲೋ ಒಯ್ಯುತಿದ್ದಳು.
ಅವರು ಯಕ್ಷಿಯನ್ನು ಮುಟ್ಟುತ್ತಲೇ ಆಕೆ ತನ್ನ ನಿಜರೂಪಕ್ಕೆ ಮರಳುತ್ತಿದ್ದಳು. ಕಿಡಿ ಹಾರುವ ಕಣ್ಣುಗಳು, ಕೋರೆ ಹಲ್ಲುಗಳು, ಕೆದರಿದ ಕೂದಲಿನ ಅವಳ ರೂಪವನ್ನು ಕಂಡು ದಾರಿಹೋಕರು ಎದೆಯೊಡೆದು ಸಾಯುತ್ತಿದ್ದರು. ಯಕ್ಷಿ ರಕ್ತ ಕುಡಿಯುತ್ತಾಳೆ, ಮಾಂಸ ತಿನ್ನುತ್ತಾಳೆ ಎಂದು ಜನ ಹೇಳುತ್ತಿದ್ದರು. ಅದೇನೇ ಇರಲಿ ರಾತ್ರಿ ಆ ದಾರಿಯಲ್ಲಿ ಹೋಗುವ ಯಾರೂ ಜೀವಂತವಾಗಿ ಮರಳುತ್ತಿರಲಿಲ್ಲ.
ಆ ಕಾಲದಲ್ಲಿ ಕುಮಾರಮಂಗಲಂ ನಲ್ಲಿ ಒಬ್ಬ ನಂಬೂದಿರಿ ಬ್ರಾಹ್ಮಣ ಇದ್ದ. ಅವನು ಮಂತ್ರ ವಿದ್ಯೆಯಲ್ಲಿ ಸಿದ್ದ ಹಸ್ತನಾಗಿದ್ದ. ಭೂತಪ್ರೇತಗಳನ್ನು ಹಿಡಿಯುವುದರಲ್ಲಿ ಅವನು ಎತ್ತಿದ ಕೈ. ಅವನಿಗೆ ಕಾಯಂಕುಲಂ ನ ಯಕ್ಷಿಯ ಬಗ್ಗೆ ಸುದ್ದಿ ಸಿಕ್ಕಿತು. ಅವಳ ಕೈಯಲ್ಲಿ ನೂರಾರು ಜನರು ಸತ್ತಿದ್ದಾರೆ ಎಂದು ತಿಳಿದು ಅವನಿಗೆ ಬಹಳ ದುಃಖವಾಯಿತು. ಈ ಯಕ್ಷಿಯ ಕಾಟ ನಿವಾರಣೆ ಮಾಡಬೇಕೆಂದು ಒಬ್ಬ ಬಡ ಬ್ರಾಹ್ಮಣನ ವೇಷದಲ್ಲಿ ಹೋದನು. ಅವನು ಕಾಡನ್ನು ತಲುಪಿದಾಗ ರಾತ್ರಿ ಆಗಿತ್ತು. ದಾರಿಯಲ್ಲಿ ನಡೆಯುವಾಗ ಘಲ್ ಘಲ್ ಶಬ್ದ ಕೇಳಿತು. ಆದರೆ ಅವನು ಹಿಂತಿರುಗಿ ನೋಡಲೇ ಇಲ್ಲ. ಆಗ ಯಕ್ಷಿ ಮುಂದೆ ಬಂದು ವೀಳ್ಯದೆಲೆ ಕೊಡುವಂತೆ ಕೇಳಿದಳು. ಆಗ ನಂಬೂದಿರಿ ನಿನಗೆ ಬೇಕಾದೆಲ್ಲ ಕೇಳು ಕೊಡುತ್ತೇನೆ ಎಂದನು.
ಯಾರಾದರೂ ಯಕ್ಷಿಯನ್ನು ಮುಟ್ಟಿದರೆ ಮಾತ್ರ ಅವಳು ಅವರನ್ನು ಕೊಲ್ಲಬಹುದಿತ್ತು ಎಂದು ನಂಬೂದಿರಿಗೆ ತಿಳಿದಿತ್ತು. ಅವನು ಒಂದು ಉದ್ದದ ಮೊಳೆಯಿಂದ ಸುಣ್ಣ ತೆಗೆದುಕೊಟ್ಟನು. ಆ ಮೊಳೆಯನ್ನು ಮುಟ್ಟಿದಾಗ ಯಕ್ಷಿ ತನ್ನ ಶಕ್ತಿಯನ್ನೆಲ್ಲ ಸಂಪೂರ್ಣವಾಗಿ ಕಳೆದುಕೊಂಡು ಸಾಮಾನ್ಯ ರೂಪಕ್ಕೆ ಬಂದಳು. ಅದು ಮಂತ್ರದ ಮೊಳೆಯಾಗಿತ್ತು ಅವಳು ಚೀರಿದಳು, ಅತ್ತಳು ಏನು ಮಾಡಿದರು ನಂಬೂದಿರಿ ಮಾತ್ರ ಅವಳನ್ನು ಬಿಡಲಿಲ್ಲ. ಅವಳ ನೆತ್ತಿಗೆ ಮೊಳೆಯನ್ನು ಚುಚ್ಚಿದನು. ಅವಳೀಗ ನಂಬೂದಿರಿಯ ಗುಲಾಮಳಾಗಿದ್ದಳು. ಅವನು ಹೇಳಿದಂತೆ ಅವಳು ಕೇಳಬೇಕಿತ್ತು. ನಂಬೂದಿರಿಯು ಅವಳನ್ನು ಕರೆದುಕೊಂಡು ಕಾಯಂಕುಲಂನ ಹಳ್ಳಿಗೆ ಹೋದನು. ಅಲ್ಲಿ ಅವನ ಸೋದರತ್ತೆ ವಾಸವಾಗಿದ್ದಳು.
ಅತ್ತೆ ಅವನನ್ನು ಒಳಗೆ ಕರೆದು ಊಟ ಹಾಕಿದಳು. ಊಟದ ಬಳಿಕ ನಂಬೂದಿರಿ ಮಲಗಿದ. ಯಕ್ಷಿ ಬಾಗಿಲ ಬಳಿಯಲ್ಲಿ ತಲೆಕೆರೆದು ಕೂತು ಅಳುವುದನ್ನು ಅತ್ತೆ ನೋಡಿದಳು. ಆಗ ಅವಳು ತಲೆ ಬಾಚ ತೊಡಗಿದಳು. ಆಗ ಯಕ್ಷಿಯ ನೆತ್ತಿಯಲ್ಲಿದ್ದ ಮೊಳೆಯನ್ನು ನೋಡಿ "ಇದೇನಮ್ಮ ಇದೇಕೆ ನಿನ್ನ ತಲೆ ಮೇಲಿದೆ" ಎಂದು ಕೇಳಿದಳು. ಆಗ ಯಕ್ಷಿ ಹೇಳಿದಳು, "ಅದೇನೆಂದು ಗೊತ್ತಿಲ್ಲ. ನನಗೆ ಬುದ್ದಿ ಬಂದಾಗಲಿಂದಲೂ ಅದು ಅಲ್ಲೇ ಇದೆ" ಎಂದಳು. ಆಗ ಅತ್ತೆ "ಅದನ್ನು ತೆಗೆದುಹಾಕಲೇ" ಎಂದು ಕೇಳಿದಳು. ಆಗ ಯಕ್ಷಿ "ಆಯಿತು ಅದನ್ನು ತೆಗೆದುಹಾಕಿ" ಎಂದಳು.
ಆಗ ಅತ್ತೆಯ ಮೊಳೆಯನ್ನು ತೆಗೆಯಲಾಗಿ ಅವಳ ಶಕ್ತಿ ಮರಳಿ ಬಂದು ಅವಳು ಎತ್ತರಕ್ಕೆ ಹಾರಿ ಜೋರಾಗಿ ನಕ್ಕಳು. ಅವಳ ಆ ರೌದ್ರ ರೂಪವನ್ನು ಕಂಡು ಅತ್ತೆ ಹೆದರಿ ಕೂಗಿದಳು. ಆಗ ನಂಬೂದಿರಿ ನಿದ್ದೆ ಬಿಟ್ಟು ಓಡಿ ಬಂದನು. ಆ ಹೊತ್ತಿಗಾಗಲೇ ಯಕ್ಷಿ ಹೋಗಿದ್ದಳು. ಅತ್ತೆ ನಡೆದಿದ್ದನ್ನೆಲ್ಲ ಹೇಳಿದಳು. ಆಗ ನಂಬೂದಿರಿ ಮನಸ್ಸಿನೊಳಗೆ "ಚಾಲಾಕಿ ಯಕ್ಷಿ, ನನ್ನ ಕೈಯಿಂದ ತಪ್ಪಿಸಿಕೊಂಡಳು ಅವಳನ್ನು ಇನ್ನೊಮ್ಮೆ ಹಿಡಿಯಲು ಹೋಗಬೇಕು. ಇಲ್ಲದಿದ್ದರೆ ಜನರಿಗೆ ಅಪಾಯ ಕಾದಿದೆ." ಎಂದು ನಂಬೂದಿರಿ ಅವಳನ್ನು ಹುಡುಕಲು ಹೊರಟ.
ನಂಬೂದಿರಿ ಒಂದು ದೊಂದಿ ಉರಿಸಿ ಹೊರಟ. ಅವನು ಮಂತ್ರ ಹೇಳುತ್ತ ನಡೆದಾಗ ಗಾಳಿಯಲ್ಲಿ ಯಕ್ಷಿಯ ನೆರಳು ತೋರಿತು. ಬಹಳ ದೂರ ನಡೆದಾಗ ಮನ್ನಾರ್ ಎಂಬ ಜಾಗದಲ್ಲಿ ಅವನಿಗೆ ಯಕ್ಷಿ ಕಾಣಿಸಿದಳು. ಅವಳು ಅವನಿಂದ ಪಾರಾಗಲು ಓಡುತ್ತಿದ್ದಳು. ನಂಬೂದಿರಿ ಅವಳನ್ನು ಬೆನ್ನಟ್ಟಿ ಹೋದ. ದಾರಿಯಲ್ಲಿ ಯಕ್ಷಿಗೆ ಒಂದು ನದಿ ಅಡ್ಡ ಸಿಕ್ಕಿತು. ತೀರದಲ್ಲಿ ಒಂದು ದೋಣಿ ಇತ್ತು ಅದರಲ್ಲಿ ಕುಳಿತು ಯಕ್ಷಿ ಮುಂದಕ್ಕೆ ಸಾಗಿದಳು ನಂಬೂದಿರಿ ಓಡೋಡಿ ಬಂದ ಆದರೆ ದೋಣಿ ಇರಲಿಲ್ಲ. ಅವನು ಒಂದು ಬಾಳೆ ಎಲೆ ಕತ್ತರಿಸಿದ. ನಂತರ ಅದರ ಮೇಲೆ ನಿಂತುಕೊಂಡು ಮಂತ್ರ ಹೇಳತೊಡಗಿದಾಗ ಆ ಬಾಳೆ ಎಲೆ ಮುಂದೆ ಸಾಗಿತು. ಯಕ್ಷಿ ಕಾಡನ್ನು ಪ್ರವೇಶಿಸಿ ಅಡಗಿಕೊಂಡಳು. ಆದರೆ ನಂಬೂದಿರಿ ಮಾತ್ರ ಅವಳನ್ನು ಪತ್ತೆ ಹಚ್ಚಿ, ಅವಳ ಮೇಲೆ ಮಂತ್ರಿಸಿದ ನೀರು ಎಸೆದ. ಅದು ಅವಳನ್ನು ಕಟ್ಟಿ ಹಾಕಿತು.
ಯಕ್ಷಿ ಅವನ ಕಾಲಿಗೆ ಬಿದ್ದಳು. "ನನ್ನನ್ನು ಕ್ಷಮಿಸಿ ಬಿಡಿ ಒಡೆಯಾ ನೀವು ಏನು ಹೇಳಿದರೂ ಮಾಡುತ್ತೇನೆ ಆದರೆ ನನ್ನನ್ನು ಮನೆ ಕೆಲಸದವಳನ್ನಾಗಿ ಮಾತ್ರ ಮಾಡಬೇಡ ನಾನು ಯಾರಿಗೂ ತೊಂದರೆ ಕೊಡುವುದಿಲ್ಲ. ನಾನು ಎಲ್ಲಾದರೂ ದೂರ ಹೋಗುತ್ತೇನೆ ನನ್ನನ್ನು ಬಿಟ್ಟು ಬಿಡಿ" ಎಂದು ಅಂಗಲಾಚಿ ಬೇಡಿದಳು.
ಆಗ ನಂಬೂದಿರಿ "ನಿನ್ನನ್ನು ಅಷ್ಟು ಸುಲಭವಾಗಿ ಬಿಟ್ಟು ಬಿಡುವುದಿಲ್ಲ. ನೀನು ಆಮೇಲೆ ಯಾರಿಗಾದರೂ ತೊಂದರೆ ಕೊಡುತ್ತಿ. ನಿನ್ನನು ನನ್ನ ಬಳಿಯೇ ಇಟ್ಟುಕೊಳ್ಳುತ್ತೇನೆ. ಆದರೆ ನಿನಗೆ ಒಂದು ಗುಡಿ ಕಟ್ಟಿಸುತ್ತೇನೆ. ನನ್ನ ಮನೆಯ ದೈವ ಆಗಿ ನಿನ್ನನು ನೇಮಿಸುತ್ತೇನೆ. ಜನರು ನಿನಗೆ ಪೂಜೆಯನ್ನು ಮಾಡುತ್ತಾರೆ. ಆದರೆ ನೀನು ಯಾರ ತಂಟೆಗೂ ಹೋಗಬಾರದು, ಯಾರ ಪ್ರಾಣವನ್ನು ಕೂಡ ತೆಗೆಯಬಾರದು, ಎಂದು ನಂಬೂದಿರಿ ಹೇಳಿದನು.
ನಂಬೂದಿರಿ ತನಗಾಗಿ ಗುಡಿ ಕಟ್ಟಿಸುತ್ತಾನೆ ಎಂದು ತಿಳಿದಾಗ ಅವಳ ಕೋಪವೆಲ್ಲ ಇಳಿದು ಶಾಂತ ದೇವತೆಯಾದಳು. ಮಾತಿನಂತೆ ನಂಬೂದಿರಿ ಅವಳಿಗಾಗಿ ಗುಡಿಯನ್ನು ಕಟ್ಟಿಸಿದ. ಕಾಯಂಕುಲಂನ ರಾಜ ದತ್ತಿಯನ್ನು ನೀಡಿದ.
ಅದು ಇಂದಿಗೆ "ಪಣಯನ್ನಾರ್ ಕಾವು" ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಇದು ಕೇರಳ ರಾಜ್ಯದಲ್ಲಿದೆ. ಕುಮಾರ ಮಂಗಲಂನಲ್ಲಿ ನಂಬೂದಿರಿ ಕಟ್ಟಿಸಿದ ಯಕ್ಷಿಗುಡಿ ಇಂದಿಗೂ ಇದೆ. ಅಲ್ಲಿ ತಪ್ಪದೆ ಪೂಜೆ ನೇಮ, ಕೋಲಗಳು ನಡೆಯುತ್ತವೆ.
ಇಂದಿಗೂ ಹುಣ್ಣಿಮೆಯ ರಾತ್ರಿಯಲ್ಲಿ ಕೆಲವೊಮ್ಮೆ ಒಂಟಿಯಾಗಿ ತಿರುಗುವ ಜನರಿಗೆ ಯಕ್ಷಿ ಸುಂದರ ತರುಣಿ ರೂಪದಲ್ಲಿ ಕಾಣುತ್ತಾಳೆ ಮತ್ತು ವೀಳ್ಯದೆಲೆಯನ್ನು ಕೇಳುತ್ತಾಳೆ. ಆದರೆ ಅವಳು ನಂಬೂದಿರಿಗೆ ಕೊಟ್ಟ ಮಾತಿನಂತೆ ಯಾರಿಗೂ ತೊಂದರೆ ಕೊಡಲಿಲ್ಲ ಇಂದಿಗೂ ಯಾರ ಪ್ರಾಣವನ್ನು ಕೂಡ ತೆಗೆಯಲಿಲ್ಲ.
9ನೇ ತರಗತಿ
ವಿವೇಕ ಗರ್ಲ್ಸ್ ಹೈಸ್ಕೂಲ್, ಕೋಟ
ಉಡುಪಿ ಜಿಲ್ಲೆ
*******************************************