-->
ಜೀವನ ಸಂಭ್ರಮ : ಸಂಚಿಕೆ - 87

ಜೀವನ ಸಂಭ್ರಮ : ಸಂಚಿಕೆ - 87

ಜೀವನ ಸಂಭ್ರಮ : ಸಂಚಿಕೆ - 87
ಲೇಖಕರು : ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

                     
      ಮಕ್ಕಳೇ, ಈ ಘಟನೆ ಓದಿ... ಕೌಶಲ ಎಂದರೇನು? ಎಂಬುವುದು ತಿಳಿಯುತ್ತದೆ. ನನಗೆ ಒಬ್ಬ ಗೆಳೆಯ ಇದ್ದನು. ಆತನ ಹೆಸರು ಮಹೇಶ. ಆತ ವೃತ್ತಿಯಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿದ್ದನು. ಆತನಿಗೆ ಸಿರಿವಂತರ ಮನೆಯಲ್ಲಿ ಕನ್ಯೆ ನೋಡಿ ವಿವಾಹ ಮಾಡಿಕೊಂಡನು. ಆತನ ಬದುಕಿಗೆ ಕೊರತೆ ಏನೂ ಇರಲಿಲ್ಲ. ಆದರೆ ಆತನದು ದುರಾಸೆಗುಣ. ಮದುವೆ ಸಮಯದಲ್ಲಿ ಮಾವ ವರದಕ್ಷಿಣೆಯಾಗಿ ಏನೂ ನೀಡಿರಲಿಲ್ಲ. ಹುಡುಗಿ ಸುಂದರಿಯಾಗಿದ್ದರಿಂದ ಮೆಚ್ಚಿ ಮದುವೆ ಮಾಡಿಕೊಂಡಿದ್ದನು. ಹೀಗೆ ಕೆಲವು ವರ್ಷ ನಡೆದಿತ್ತು. ಒಮ್ಮೆ ಮಾವ ಅಳಿಯನ ಮನೆಗೆ ಬಂದಿದ್ದನು. ಆಗ ಒಂದು ಮಾತು ಅಳಿಯನಿಗೆ ಹೇಳಿದನು. ಈ ನಗರದಲ್ಲಿ ನನ್ನ ಹೆಸರಿನಲ್ಲಿ ಒಂದು ಖಾಲಿ ನಿವೇಶನವಿದೆ. ನೀನೇ ನಿಂತುಕೊಂಡು ಒಂದು ಸುಂದರ ಮನೆ ನಿರ್ಮಾಣ ಮಾಡು. ಅದಕ್ಕೆ ಎಷ್ಟು ಖರ್ಚಾದರೂ ಪರವಾಗಿಲ್ಲ ಎಂದರು. ಈ ಮನೆ ಯಾರಿಗಾಗಿ ಅಂತ ಹೇಳಲಿಲ್ಲ. ಮಹೇಶನಿಗೆ ಬಹಳ ಸಂತೋಷವಾಯಿತು. ಮನೆ ಕೆಲಸ ಶುರು ಮಾಡಿಸಿದ. ಕಳಪೆ ಸಾಮಾಗ್ರಿ ತರುವುದು, ಹೆಚ್ಚು ಹಣ ಹೇಳುವುದು. ಹೀಗೆ ಶುರು ಮಾಡಿದ. ಮನೆ ನಿರ್ಮಾಣವಾಯಿತು. ಒಳ್ಳೆ ಬಣ್ಣ ಹಾಕಿಸಿ, 99 ಲಕ್ಷದ ಬಿಲ್ಲನ್ನು ಮಾವನಿಗೆ ನೀಡಿದ. ಆದರೆ ಮನೆಗೆ ಆಗಿದ್ದು ಕಡಿಮೆ ಖರ್ಚು. ನೋಡಲು ಸುಂದರವಾಗಿತ್ತು. ಆದರೆ ಬಳಸಿದ ಸಾಮಗ್ರಿ ಕಳಪೆಯಾಗಿತ್ತು. ಮಾವ ಇದನ್ನು ಗಮನಿಸುತ್ತಿದ್ದ. ಅಳಿಯನ ಗುಣ ಗೊತ್ತಿತ್ತು ಮಾವನಿಗೆ. ಗೃಹಪ್ರವೇಶದ ದಿನ ನಿಗದಿಯಾಯಿತು. ಗೃಹಪ್ರವೇಶ ಆದಮೇಲೆ, ಬಂದಿದ್ದ ಗೆಳೆಯರನ್ನೆಲ್ಲ ಸೇರಿಸಿ ಹೇಳಿದ. ಈ ಮನೆಗೆ 99 ಲಕ್ಷ ಆಗಿದೆ. ನನ್ನ ಅಳಿಯ ಬಹಳ ದೊಡ್ಡ ಮನುಷ್ಯ. ಮದುವೆಯಲ್ಲಿ ಏನೂ ಕೇಳಲಿಲ್ಲ. ನಾನು ಏನೂ ಕೊಡಲಿಲ್ಲ. ಹಾಗಾಗಿ ಈ ಮನೆಯನ್ನು ನನ್ನ ಮಗಳು ಮತ್ತು ಅಳಿಯನಿಗೆ ನೀಡುತ್ತಿದ್ದೇನೆ ಎಂದು ಘೋಷಿಸಿ ಮನೆಯ ಕೀಯನ್ನು ಅಳಿಯನಿಗೆ ನೀಡಿದ. ಬಹಳ ಸಂತೋಷದಿಂದ ಓಡಾಡುತ್ತಿದ್ದ ಮಹೇಶನ ಮುಖ ಕಳೆಗುಂದಿತು. ಚಿಂತಾಕ್ರಾಂತನಾದ. ಮಾವ ಇದನ್ನು ಗಮನಿಸಿ, "ಯಾಕಪ್ಪ?. ಸಂತೋಷದಿಂದ ಓಡಾಡುತ್ತಿದ್ದೆ, ಮನೆ ಕೀ ಕೊಟ್ಟ ಮೇಲೆ ಸಂತೋಷ ಪಡುವುದು ಬಿಟ್ಟು, ಚಿಂತಿಸುತ್ತಿರುವೆಯಲ್ಲ ಏಕೆ...?" ಎಂದನು. ಆಗ ಮಗಳು ಹೇಳಿದಳು, "ಅಪ್ಪ ಅದು ನಿನಗೆ ತಿಳಿಯುವುದಿಲ್ಲ ಸುಮ್ಮನಿರಿ" ಎಂದಳು. ಏಕೆಂದರೆ ಗಂಡ ಮಾಡುತ್ತಿದ್ದುದನ್ನು ಚೆನ್ನಾಗಿ ತಿಳಿದಿದ್ದಳು. ಆದರೆ ಆತನ ಮುಖ ಮನಸ್ಸು ತುಂಬಾ ಕೊರಗುತ್ತಿತ್ತು. ಮಾವ ಮೊದಲೇ ಹೇಳಿದ್ದರೆ ಕಳಪೆ ಸಾಮಗ್ರಿ ಬಳಸುತ್ತಲೇ ಇರಲಿಲ್ಲವಲ್ಲ ಎಂದು. ಅದೇ ಮನೆಯಲ್ಲಿ ಒಲ್ಲದ ಮನಸ್ಸಿನಲ್ಲಿ ವಾಸಿಸುತ್ತಿದ್ದ. ಇದೇ ರೀತಿ ಕಳ್ಳತನದಿಂದ ಹಣ ಕೂಡಿಸ್ತಿದ್ದ. ಸಾಕಷ್ಟು ದುಡ್ಡು ಇಟ್ಟಿದ್ದ. ಈತನಿಗೆ ಆಗದವರು ತನಿಖಾ ಸಂಸ್ಥೆಗೆ ಮಾಹಿತಿ ನೀಡಿದರು. ಹಣದ ಮೂಲ ಹೇಗೆ ಬಂದಿತ್ತು ಎನ್ನುವುದನ್ನು ಸಾಬೀತು ಮಾಡುವಲ್ಲಿ ವಿಫಲನಾದ. ಹಣ ಎಲ್ಲಾ ಸರ್ಕಾರದ ಪಾಲಾಯಿತು. ಈತ ಜೈಲು ಸೇರಬೇಕಾಯಿತು. 
         ಈ ಜಗತ್ತು ನೋಡಿದಾಗ ಬಹುತೇಕ ಜನರು ಹೀಗೆ ಇರುವುದನ್ನು ಕಾಣುತ್ತೇವೆ. ಮನೆ ಮಾವನಿಗೊ ಅಥವಾ ನನಗೋ ಅನ್ನದೆ ಸ್ವಚ್ಛ, ಸುಂದರವಾಗಿ, ಒಳ್ಳೆ ಸಾಮಗ್ರಿ ಬಳಸಿ ನಿರ್ಮಿಸಿದ್ದರೆ ಮಾವನಿಗೂ, ಪತ್ನಿಗೂ ಮತ್ತು ತನಗೂ ಸಂತೋಷವಾಗುತ್ತಿತ್ತು. ಅಂದರೆ ನಾವು ಮಾಡುವ ಕೆಲಸ ಸ್ವಚ್ಛವು, ಸುಂದರವು ಹಾಗೂ ಬಲಿಷ್ಠವು ಆಗಿರಬೇಕು. ಚೆನ್ನಾಗಿ ಮಾಡಿರಬೇಕು. ಅದು ನಮಗೂ ಸಮಾಜಕ್ಕೂ ಸಂತೋಷ ಕೊಡುವಂತಿರಬೇಕು. ಈ ರೀತಿ ಮಾಡುವ ಕೆಲಸಕ್ಕೆ ಕೌಶಲಯುಕ್ತ ಕೆಲಸ ಎನ್ನುವರು.
       ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ದೇವಾಲಯ ಈಗಲೂ ಎಷ್ಟು ಸುಂದರವಾಗಿದೆ. ಆ ಕೆಲಸ ಮಾಡುವಾಗ ಮಾಡುವವರು ಮತ್ತು ಮಾಡಿಸಿದವರು ಸಂತೋಷಪಟ್ಟಿದ್ದರು. ಅಷ್ಟೇ ಸುಂದರವಾಗಿ, ಸ್ವಚ್ಛವಾಗಿ, ಅಚ್ಚುಕಟ್ಟಾಗಿ ಮಾಡಿದ್ದರು. ಇಷ್ಟು ವರ್ಷವಾದರೂ ನಾವು ನೋಡಿ ಸಂತೋಷ ಪಡುತ್ತಿದ್ದೇವೆ. ಇದಕ್ಕೆ ಕೌಶಲ ಎನ್ನುವರು.
       ಬರಿ ನಿರ್ಮಾಣ ಮಾತ್ರ ಕೌಶಲದ ಕೆಲಸವಲ್ಲ. ದಾಹದಿಂದ ಬಂದವರಿಗೆ ಪ್ರೀತಿಯಿಂದ ನೀರು ಕೊಡುವುದು. ಹಸಿದವರಿಗೆ ಒಂದು ತುತ್ತು ಅನ್ನ ಪ್ರೀತಿಯಿಂದ ನೀಡುವುದು. ಕಷ್ಟದಲ್ಲಿರುವವರಿಗೆ ಪ್ರೀತಿಯಿಂದ ನೆರವಾಗುವುದು. ದುಃಖಿತನಿಗೆ ಪ್ರೀತಿಯಿಂದ ದುಃಖ ನಿವಾರಿಸುವ ಸುಂದರ ಸಾಂತ್ವನದ ಮಾತು ಕೂಡ ಕೌಶಲ್ಯ ಕರ್ಮ. ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************


Ads on article

Advertise in articles 1

advertising articles 2

Advertise under the article