ಜೀವನ ಸಂಭ್ರಮ : ಸಂಚಿಕೆ - 85
Sunday, May 14, 2023
Edit
ಜೀವನ ಸಂಭ್ರಮ : ಸಂಚಿಕೆ - 85
ಲೇಖಕರು : ಎಂ.ಪಿ. ಜ್ಞಾನೇಶ್
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಈ ಕಥೆ ಓದಿ. ಒಂದು ಸಣ್ಣ ಊರು. ಅಲ್ಲಿ ಒಬ್ಬಳು ತಾಯಿ ಮತ್ತು 8 ವರ್ಷದ ಮಗಳು ಇದ್ದರು. ಮನೆಯ ಯಜಮಾನ ತೀರಿ ಹೋಗಿದ್ದನು. ತೀರ ಬಡತನ. ಸಣ್ಣ ಗುಡಿಸಲಿನಲ್ಲಿ ತಾಯಿ ಮತ್ತು ಮಗಳು ವಾಸವಾಗಿದ್ದರು. ಒಂದು ದಿನ ಬಂತು ಅದು ತಾಯಿಯ ಜನ್ಮದಿನ. ಮಗಳಿಗೆ, ತಾಯಿಗೆ ಒಂದು ಹೂ ನೀಡಬೇಕೆಂದು ಆಸೆಯಾಯಿತು. ಆ ಮಗಳು ಒಂದು ರಸ್ತೆಗೆ ಬಂದಳು. ಅಲ್ಲಿ ಒಬ್ಬ ಹೂವ ಮಾರುವವ ತಳ್ಳುಗಾಡಿಯಲ್ಲಿ ಹೂವುಗಳನ್ನು ಮಾರುತ್ತಿದ್ದನು. ಅವನಲ್ಲಿ ಗುಲಾಬಿ, ಮಲ್ಲಿಗೆ, ಕೇದಿಗೆ, ಸಂಪಿಗೆ ಮತ್ತು ಚೆಂಡು ಮಲ್ಲಿಗೆ ಸೇರಿದಂತೆ ಬೇರೆ ಬೇರೆ ಮಾದರಿಯ ಹೂಗಳು ಇದ್ದವು. ಆತನೇ ಸುಂದರವಾಗಿ ಕಟ್ಟಿದ ಹೂ ಮಾಲೆಗಳಿದ್ದವು. ಆ ಹುಡುಗಿ ಹೂವನ್ನೇ ನೋಡುತ್ತಿದ್ದಳು. ಆ ಹೂ ಮಾರುವವನ ಬಳಿ ಮಕ್ಕಳು ಹೆಂಗಸರು ಬಂದು ಹಣ ನೀಡಿ ಹೂಗಳನ್ನು ಕೊಂಡೊಯ್ಯುತ್ತಿದ್ದರು. ಆ ಹುಡುಗಿ ಬಹಳ ಹೊತ್ತು ನಿಂತು ಹೂಗಳನ್ನೇ ನೋಡುತ್ತಿದ್ದುದ್ದನ್ನು ಹೂ ಮಾರುವವನ ಕಣ್ಣಿಗೆ ಬಿದ್ದಳು. ಆ ಹೂವು ಮಾರುವವನು ಕೇಳಿದನು, ಅದೇಕೆ ಅಷ್ಟು ಹೊತ್ತಿನಿಂದ ಹೂವನ್ನೇ ನೋಡುತ್ತಿದ್ದೆ? ಎಂದು ಕೇಳಿದ.
ಹುಡುಗಿ: ನನಗೆ ಒಂದು ಸುಂದರ ಹೂ ಬೇಕಿತ್ತು, ಅದಕ್ಕಾಗಿ ನೋಡುತ್ತಿದ್ದೇನೆ.
ಹೂ ಮಾರುವವ: ಬಾ ತೆಗೆದುಕೋ ಎಂದನು.
ಹುಡುಗಿ : ನನ್ನ ಬಳಿ ಹಣವಿಲ್ಲ .ನಾವು ಬಡವರು. ಈ ದಿನ ನನ್ನ ತಾಯಿ ಹುಟ್ಟಿದ ದಿನ. ನಾನು ಆಕೆಗೆ ಹೂ ಕೊಡಬೇಕೆಂದಿರುವೆ ಎಂದಳು.
ಹೂವು ಮಾರುವ: ಅದಕ್ಕೇನು ತೆಗೆದುಕೋ ಹೂ ಎಂದನು.
ಹುಡುಗಿ: ನೀನು ಕೊಟ್ಟ ಹೂ ತೆಗೆದುಕೊಂಡು ಹೋಗಿ ನೀಡಿದರೆ ಅದು ನನ್ನದು ಹೇಗಾಗುತ್ತದೆ?. ಮೊದಲು ಹೂವು ನನ್ನದಾಗಬೇಕು. ಅದಕ್ಕೆ ನನಗೆ ಮೊದಲು ಕೆಲಸ ಕೊಡು. ಕೆಲಸ ಮಾಡಿದ ಮೇಲೆ ಆ ಹೂವು ನನ್ನದಾಗುತ್ತದೆ ಎಂದಳು.
ಹೂ ಮಾರುವವ: ಕೆಲಸ ಮಾಡಿದರೆ ಆ ವಸ್ತು ನನ್ನದಾಗುತ್ತದೆ ಎಂದು ಯಾರು ಕಲಿಸಿದರು? ಹುಡುಗಿ : ಮತ್ತೆ ಯಾರು?. ನನಗೆ ತಾಯಿ ಮತ್ತು ಗುರು ಒಬ್ಬಳೇ. ಅವಳೇ ನನಗೆ ಕಳಿಸಿದ್ದು.
ಹೂ ಮಾರುವವ: ಹಾಗಾದರೆ ನಾನು ನಿನ್ನ ತಾಯಿಯನ್ನು ನೋಡಬೇಕಲ್ಲ.
ಹುಡುಗಿ: ಮೊದಲು ಕೆಲಸ. ಆಮೇಲೆ ಹೂ ನನ್ನದಾಗಬೇಕು. ಆನಂತರ ನನ್ನ ತಾಯಿ ತೋರಿಸುತ್ತೇನೆ. ಈಗ ನಾನು ಹೂವಿನ ಗಾಡಿ ತಳ್ಳುತ್ತೇನೆ. ನೀವು ವ್ಯಾಪಾರ ಮಾಡಿ ಎಂದವಳೇ ಎರಡು ಗಂಟೆಯ ಕಾಲ ವ್ಯಾಪಾರ ಮಾಡಬೇಕಾದ ಸ್ಥಳಕ್ಕೆ ಆ ಹುಡುಗಿ ಗಾಡಿ ತಳ್ಳುತ್ತಿದ್ದಳು. ವ್ಯಾಪಾರಿ ಹೂ ಮಾರುತ್ತಿದ್ದ. ಎರಡು ಗಂಟೆಯ ನಂತರ ಆ ಹುಡುಗಿಗೆ ಹೂವನ್ನು ನೀಡಿದ. ಆಗ ಹುಡುಗಿ ಆ ವ್ಯಾಪಾರಿಯನ್ನು ಕರೆದುಕೊಂಡು ತನ್ನ ಗುಡಿಸಲಿಗೆ ಹೋದಳು. ಹೋಗುವಾಗ ತಾನೇ ಕಟ್ಟಿದ್ದ ಸುಂದರಮಾಲೆಯನ್ನು ತೆಗೆದುಕೊಂಡು ಹೋದನು ಹೂ ಮಾಲಿಕ.
ಮಗಳು ತಾಯಿ ಬಳಿ ಹೋಗಿ ಹೂವನ್ನು ತಾಯಿಯ ಕೂದಲಿಗೆ ಮುಡಿಸುತ್ತಾ ಹೇಳಿದಳು. ಅಮ್ಮ ಇದು ನನ್ನ ಹೂ. ಇದನ್ನು ನಿನ್ನ ಹುಟ್ಟಿದ ಹಬ್ಬದ ದಿನಕ್ಕಾಗಿ ತಂದಿರುವೆ ಎಂದಳು .
ತಾಯಿ: ಅದು ಹೇಗೆ ತಂದೆ?
ಹೂ ವ್ಯಾಪಾರಿ: ನಿನ್ನ ಮಗಳು ಎರಡು ಗಂಟೆ ನನ್ನ ಬಳಿ ಕೆಲಸ ಮಾಡಿ ಆ ಹೂವನ್ನು ತನ್ನದಾಗಿಸಿಕೊಂಡು ನೀಡಿದ್ದಾಳೆ. ಇಂಥ ಮಗಳನ್ನು ಪಡೆದ ನೀವೇ ಧನ್ಯರು. ಯಾವುದೇ ವಸ್ತು ತನ್ನದಾಗಬೇಕಾದರೆ ಮೊದಲು ಕೆಲಸ ಮಾಡಿ ತನ್ನದಾಗಿಸಿಕೊಳ್ಳಬೇಕು ಎಂಬುದನ್ನು ಕಲಿಸಿದ ತಾವು ನಿಜವಾಗಿಯೂ ಧನ್ಯರು. ಇದಕ್ಕಾಗಿ ನಾನು ನನ್ನ ಕೈಯಾರೆ ಕಟ್ಟಿದ ಈ ಮಾಲೆಯನ್ನು ತಂದಿರುವೆ ಸ್ವೀಕರಿಸಿ ಎಂದು ತಾನು ತಂದ ಹೂಮಾಲೆಯನ್ನು ಆ ತಾಯಿಗೆ ನೀಡಿದನು. ತಾಯಿಯ ಕಣ್ಣಲ್ಲಿ ಆನಂದ ಭಾಷ್ಪ ಹರಿಯುತ್ತಿತ್ತು. ಎಂತೆಂಥ ತಾಯಂದಿರು ಭಾರತದಲ್ಲಿ ಹುಟ್ಟಿದ್ದಾರೆ?. ಅಲ್ಲವೇ
ಇಂದು ಬೇರೆಯವರಿಂದ ಪಡೆದು, ಉಚಿತವಾಗಿ ಸಿಕ್ಕಿದ್ದನ್ನು ನೀಡುವವರು ಯೋಚಿಸುವಾಗ, ಆ ವಸ್ತು ನನ್ನದಲ್ಲ ಎಂದು, ನನ್ನದಲ್ಲದ ವಸ್ತು ಕೊಡುಗೆ ಹೇಗಾಗುತ್ತದೆ ಅಲ್ಲವೇ ಮಕ್ಕಳೇ. ಚಿಕ್ಕವರಿರುವಾಗಲೇ ಇಂತಹ ಮೌಲ್ಯ ಕಲಿತರೆ ಭಾರತ ಶ್ರೀಮಂತ ರಾಷ್ಟ್ರವಾಗುವುದರಲ್ಲಿ ಅನುಮಾನವೇ ಇಲ್ಲ. ಅಲ್ಲವೇ ಮಕ್ಕಳೇ....
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************