-->
ಜಗಲಿಯ ಮಕ್ಕಳಿಗೆ : ಅಕ್ಕನ ಪತ್ರ - 49

ಜಗಲಿಯ ಮಕ್ಕಳಿಗೆ : ಅಕ್ಕನ ಪತ್ರ - 49

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 49

      ನಮಸ್ತೆ ಮಕ್ಕಳೇ.... ಹೇಗಿದೆ ರಜೆಯ ಗಮ್ಮತ್ತು...? ನೀವೆಲ್ಲರೂ ಬೇಸಗೆ ಶಿಬಿರಗಳಲ್ಲಿ ಭಾಗವಹಿಸಿರಬಹುದು ಅಲ್ವಾ..? ಏನೆಲ್ಲಾ ಪಡೆದುಕೊಂಡಿದ್ದೀರಿ...? ‌
    ನನ್ನ ಈ ಬಾರಿಯ ಪತ್ರ ನಾನು ಭಾಗವಹಿಸಿದ ಶಿಬಿರದ ಬಗ್ಗೆ.. ಬದುಕಿನ ಪ್ರತಿ ಕ್ಷಣವನ್ನೂ ಉಸಿರಾಡಬಹುದೆನ್ನುವ ಅರಿವು ಮೂಡಿಸಿದ ಶಿಬಿರ. ನನ್ನ ಜೀವನದ ಇದುವರೆಗಿನ ಬೇಸಗೆ ರಜೆಗಳಲ್ಲಿಯೇ ಅತ್ಯಮೂಲ್ಯವಾದ ದಿನಗಳಿವು.
      ಸುಮಾರು 60 ಶಿಬಿರಾರ್ಥಿಗಳು. ಮೂರನೆಯ ತರಗತಿಯ ಮಗುವಿನಿಂದ ಪದವಿ ವರೆಗಿನ ಮಕ್ಕಳು.. ಪೋಷಕರು.. ಶಿಕ್ಷಕರೂ... ಎಲ್ಲರೂ.. ಕಲಿಯಲು ಬಂದವರು...! ಆರಂಭದ ದಿನಗಳು.... ಎಲ್ಲರ ಚಪ್ಪಲಿಗಳೂ ಹೊರಗಡೆ ಅಸ್ತವ್ಯಸ್ತವಾಗಿ ಬಿದ್ದುಕೊಂಡಿದ್ದವು.
     ಎರಡು ದಿನಗಳವರೆಗೆ ಮಾತ್ರ... ಮತ್ತೆಂದೂ ಅದನ್ನು ಹೇಳುವ ಪರಿಸ್ಥಿತಿ ಬರಲಿಲ್ಲ. ಎಲ್ಲಿಯೂ ಕಸ ಬೀಳುತ್ತಿರಲಿಲ್ಲ. ಪ್ರತಿಯೊಬ್ಬರೂ ಸ್ವಚ್ಛತೆ ಯನ್ನು ಸ್ವಯಂ ಪಾಲಿಸುತಿದ್ದರು. ಒಂದೊಂದು ಅನ್ನದ ಅಗುಳಿನ ಬೆಲೆಯನ್ನೂ ಎಲ್ಲರೂ ಅರಿತುಕೊಂಡರು. ಹನಿ ನೀರಿನ ಮೌಲ್ಯವೂ ಅರಿವಾಗತೊಡಗಿತು. ಕೈ ಜೋಡಿಸಿ ನಮಸ್ಕರಿಸುವ ವಿಧೇಯತೆಯ ಗುಣವನ್ನು ಅರಿವಿಲ್ಲದೆ ಮೈಗೂಡಿಸಿಕೊಂಡರು. ನಡೆ ನುಡಿಗಳಲ್ಲಿ ಸೌಜನ್ಯತೆಯನ್ನು ತುಂಬಿಕೊಂಡರು.
      ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಂಡ ಎಲ್ಲರಿಗೂ ತಮ್ಮಲ್ಲಿನ ಅಗಾಧ ಸಾಮರ್ಥ್ಯದ ಅರಿವಾಯಿತು. ಬದುಕಿನಲ್ಲಿ ಸಾಧಿಸುವ ಛಲ ಗಟ್ಟಿಯಾಯಿತು. ರೂಬಿಕ್ ಕ್ಯೂಬ್ ಎಲ್ಲರ ಕೈಯಲ್ಲಿಯೂ ಪರಿಹಾರವನ್ನು ಕಾಣುತ್ತಿತ್ತು. ಪಾಠವನ್ನು ಸುಲಭ ರೀತಿಯಲ್ಲಿ ನೆನಪಿಟ್ಟುಕೊಳ್ಳುವ, ಸೂತ್ರ, ಸಿದ್ಧಾಂತಗಳಿಗೆ ಹಾಡುಗಳನ್ನು ಅಳವಡಿಸಿಕೊಂಡು ಮುಂದಿನ ದಿನಗಳ ತರಗತಿ ಕೋಣೆಯಲ್ಲಿ ನಡೆಯುವ ಕಲಿಕಾ ಪ್ರಕ್ರಿಯೆಗಳನ್ನು ಆನಂದಿಸಲು ತಯಾರಾಗಿದ್ದೇವೆ. ಗೊತ್ತಿಲ್ಲದ್ದನ್ನು ಕೇಳಿ ಕೇಳಿ ತಿಳಿದುಕೊಂಡರು. ಸಂಕೋಚ ಅಹಂಕಾರಗಳನ್ನೆಲ್ಲಾ ಬದಿಗಿಟ್ಟು ಗೌರವವನ್ನು ಹೆಚ್ಚಿಸಿಕೊಂಡರು. ತಮ್ಮ ದೌರ್ಬಲ್ಯಗಳನ್ನು ಅರಿತುಕೊಂಡು ಹೆಚ್ಚು ಹೆಚ್ಚು ಅಭ್ಯಾಸದಲ್ಲಿ ನಿರತರಾದರು. ಇವತ್ತು ಸ್ವರೂಪ Memory camp ನ‌ ಕೊನೆಯ ದಿನ. ಶಿಕ್ಷಣದ ಕುರಿತು ಅತ್ಯಂತ ಕಾಳಜಿಯ ವಿಭಿನ್ನ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದು ಸಾರ್ಥಕತೆಯ ಭಾವದಲ್ಲಿ ನಿರ್ಮಲ ನಗು ಬೀರುವ ಸಾಧಕ ಪ್ರೇರಕ ಗುರುಗಳಾದ ಗೋಪಾಡ್ಕರ್ ಎನ್ನುವ ಶಕ್ತಿಯಿಂದ, ಸುಮಾಡ್ಕರ್ ಮತ್ತು ಆದಿ ಸ್ವರೂಪ ಇವರ ಪ್ರೇರಣೆಯಿಂದ ಶಿಬಿರದಲ್ಲಿ ಭಾಗವಹಿಸಿರುವ ನಾವೆಲ್ಲರೂ ಬದಲಾವಣೆಗೆ ಒಪ್ಪಿಕೊಂಡು ಕಲಿಯುವ, ಕರೆದುಕೊಂಡು ಹೋಗುವ, ಪ್ರಶ್ನಿಸುವ ಮತ್ತು ಎಲ್ಲ ಸಮಯವನ್ನೂ ಸದುಪಯೋಗ ಪಡಿಸಿಕೊಳ್ಳುವ ಗುಣಗಳನ್ನು ಪಡೆದುಕೊಂಡಿದ್ದೇವೆ. ನನ್ನ ‌ಈ ವರ್ಷದ ಬೇಸಗೆಯ ಸಾರ್ಥಕ ದಿನಗಳಿವು.
       ಅಂದ ಹಾಗೆ ಮೇ10 ಮತದಾನ. ರಾಜ್ಯ ವಿಧಾನ ಸಭೆಗೆ ನಡೆಯುವ ಚುನಾವಣೆ... ನಾವೆಲ್ಲರೂ ಪ್ರಜ್ಞಾವಂತರು. ಪ್ರತಿಯೊಂದು ಮನೆಯ ಮನಸ್ಸುಗಳೂ ಈ ಕುರಿತು ಜಾಗೃತರಾಗಿ ತಪ್ಪದೆ ಮತದಾನ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಪಾತ್ರ ಬಹಳ ದೊಡ್ಡದಿದೆ. ಎಲ್ಲರೂ ಪ್ರಜಾಪ್ರಭುತ್ವದ ಶಕ್ತಿಯನ್ನು ಉಳಿಸೋಣ.
     ಕಳೆದ ಬಾರಿಯ ಪತ್ರಕ್ಕೆ ಅಕ್ಷರ ಪ್ರೀತಿಯನ್ನು ಹಂಚಿದ ಶಿಶಿರ್, ನಿಭಾ, ಸಾನ್ವಿ, ಪ್ರಣಮ್ಯ, ವೈಷ್ಣವಿ, ಲಹರಿ, ಸಿಂಚನಾ, ಜನನಿ, ಜೆನಿಶಾ ಪಿರೇರಾ... ನಿಮಗೆಲ್ಲರಿಗೂ ಅಕ್ಕರೆಯ ನಮನಗಳು.
        ಎಲ್ಲರಿಗೂ ಪತ್ರ ಹಂಚಿ.. ನೀವೂ ಬರೆಯಿರಿ. ನಿಮ್ಮ ಅನುಭವಗಳಿಗೆ ಕಾಯುತ್ತಿರುತ್ತೇನೆ. ಆರೋಗ್ಯ ಜೋಪಾನ. ಮುಂದಿನ ಪತ್ರ 50ನೆಯ ಸಂಚಿಕೆ. ಪತ್ರ ಸರಣಿಯ ಕೊನೆಯ ಪತ್ರ ಕಾಯುತ್ತಿರುತ್ತೇನೆ ನಿಮಗಾಗಿ. ಅಲ್ಲಿಯವರೆಗೆ ಅಕ್ಕನ ನಮನಗಳು.
................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
*********************************************


Ads on article

Advertise in articles 1

advertising articles 2

Advertise under the article