-->
ಸಂಚಾರಿಯ ಡೈರಿ : ಸಂಚಿಕೆ - 38

ಸಂಚಾರಿಯ ಡೈರಿ : ಸಂಚಿಕೆ - 38

ಸಂಚಾರಿಯ ಡೈರಿ : ಸಂಚಿಕೆ - 38

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ

          
      ಈಶಾನ್ಯ ರಾಜ್ಯಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬುಡಕಟ್ಟು ಜನಾಂಗಗಳನ್ನು ಹೊಂದಿರುವ ಪ್ರದೇಶಗಳಾಗಿವೆ. ಅದರಲ್ಲಿ ದಿಮಾಸಾ ಎನ್ನುವ ಜನಾಂಗವೂ ಒಂದು.
    ಅಸ್ಸಾಂನಲ್ಲಿ ಹಲವಾರು ಊರುಗಳ ಹೆಸರು 'ದಿ‌' ಅಕ್ಷರದಿಂದ ಆರಂಭವಾಗುತ್ತವೆ. ಉದಾಹರಣೆಗೆ ದಿಮಾಪುರ್, ದಿಬ್ರೂಗಢ್ ಇತ್ಯಾದಿ.. ದಿ ಅಂದರೆ, ಪವಿತ್ರ ನೀರು ಎಂಬರ್ಥ, ದಿಮಾಸಾ ಭಾಷೆಯ ಶಬ್ದ ಅದಾಗಿದೆ. ದಿಮಾಸಾ ಎಂದರೆ ಪವಿತ್ರ ಜಲದ ಪಕ್ಕ ನೆಲೆಸಿರುವ ಜನಾಂಗ ಎಂಬರ್ಥವಿದೆ. ದಿಮಾಸಾ ಜನಾಂಗದ ನಂಬಿಕೆಯ ಪ್ರಕಾರ ಅವರು 42 ಪಿತೃ ವಂಶ (ಸೆಂಗ್‌ಫೊಂಗ್),42 ಮಾತೃ ವಂಶ (ಜುಲಿ) ಮೂಲಕ ಹುಟ್ಟಿದರಂತೆ. ಇವರು ಬೋರೋ-ಕಾಸಾರಿ ಪಂಥಕ್ಕೆ ಸೇರಿದವರಾಗಿದ್ದಾರೆ.
   
            ವಿಶೇಷ ಅಂದರೆ ಉಳಿದ ಬುಡಕಟ್ಟು ಜನಾಂಗಗಳ ತರಹ ಇವರು ತಮ್ಮ ಬಟ್ಟೆಗಳನ್ನ ತಾವೇ ಹೊಲಿದುಕೊಳ್ಳುತ್ತಾರೆ. ದಿಮಾಸಾ ಜನಾಂಗದ ವಿಶಿಷ್ಟ ಬಣ್ಣ ಹಳದಿ, ಹೀಗಾಗಿ ಹಳದಿ ನೂಲಿನಿಂದ ಬಟ್ಟೆಗಳನ್ನ ತಯಾರಿಸಿ ಧರಿಸುತ್ತಾರೆ. ಹಳದಿ ಮತ್ತು ಕೆಂಪು ಬಣ್ಣದ ಗಾಮೂಸಾ (ಪವಿತ್ರ ಶಾಲು) ವನ್ನು ವಿಶೇಷ ದಿನಗಳಲ್ಲಿ ಧರಿಸುತ್ತಾರೆ.   

             ಉಳಿದೆಲ್ಲಾ ಕಡೆ ಬೋರ್‌ವೆಲ್‌ಗಳಿದ್ದರೆ ದಿಮಾಸಾ ಜನರಿರುವ ಕಡೆ ಬಾವಿಯಿಂದ ನೀರೆಳೆಯುತ್ತಾರೆ. ಅದಕ್ಕಾಗಿ ಉದ್ದನೆಯ ಬಿದಿರನ್ನ ಕಂಬಕ್ಕೆ ಅಡ್ಡ ಕಟ್ಟಿ ಅದಕ್ಕೆ ಹಗ್ಗ ಕಟ್ಟಿ ನೀರೆಳೆಯುತ್ತಾರೆ.
                 
         ಇವರಿಗೆ ಅಕ್ಕಿ ಮುಖ್ಯ ಬೆಳೆ. ಹೀಗಾಗಿ ಅನ್ನದ ಜತೆ ಸರಳವಾದ ಅಡುಗೆಗಳನ್ನ ಮಾಡುತ್ತಾರೆ. ಸ್ಥಳೀಯವಾಗಿ ಲಭ್ಯವಾಗೋ ತರಕಾರಿ, ಸೊಪ್ಪುಗಳನ್ನೇ ಬಳಸಿ ಆಹಾರ ತಯಾರಿಸುತ್ತಾರೆ. ಮಾಂಸಾಹಾರವೂ ಇವರಿಗೆ ಪ್ರಿಯವಾದದ್ದೆ. ಇತ್ತೀಚಿನ ಅಡುಗೆಗಳೆಲ್ಲಾ ಅಸ್ಸಾಮಿಗರ ಪ್ರಭಾವಕ್ಕೆ ಒಳಗಾಗಿರುವುದನ್ನ ಕಾಣುತ್ತೇವೆ.
ದಿಮಾಸಾ ಜನಾಂಗದವರೂ ಬೀಹೂ ಆಚರಿಸುತ್ತಾರೆ. ಹಾಗೆ ಕಪಿಲಿ ಎನ್ನುವ ನದಿಯನ್ನ ತಾಯಿಯೆಂದು‌ ಕರೆದು ಪೂಜೆ ಮಾಡುತ್ತಾರೆ. ಒಟ್ಟಾರೆ ದಿಮಾಸಾ ಜನಾಂಗದವರ ಜತೆ ಕಳೆದ ಒಂದು ದಿನ ಬಹಳಷ್ಟು ಅದ್ಭುತವಾಗಿತ್ತು ಎಂದರೆ ತಪ್ಪಾಗಲಾರದು.
......................................... ಸುಭಾಸ್ ಮಂಚಿ 
ಕಾಡಂಗಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
YouTube : The Silent Sanchari
Link :
https://youtu.be/hgBGZHhGz7Y
******************************************


Ads on article

Advertise in articles 1

advertising articles 2

Advertise under the article