-->
ಸಂಚಾರಿಯ ಡೈರಿ : ಸಂಚಿಕೆ - 37

ಸಂಚಾರಿಯ ಡೈರಿ : ಸಂಚಿಕೆ - 37

ಸಂಚಾರಿಯ ಡೈರಿ : ಸಂಚಿಕೆ - 37

       ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ

          
     ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಾಗ ನನ್ನ ಗೆಳೆಯ ಮ್ಯಾಗಿ ತಯಾರಿಸುತ್ತಿದ್ದ. (ಅರುಣಾಚಲ ಚಿಕ್ಕಪುಟ್ಟ ನಗರಗಳಲ್ಲಿ ಮ್ಯಾಗಿ ಮತ್ತು ಕೋಲಾ ಇದ್ದರೆ ಬೇರೇನೂ ಬೇಡ !) ಸುವಾಸನೆ ಮಾತ್ರ ಗೋಡೆಗಳಿಗೂ ಅಂಟಿತ್ತು. ಅಷ್ಟು ಹೊತ್ತಿಗೆ ಆತ ಅದಕ್ಕೊಂದು ವಸ್ತು ಹಾಕಿದ, ಅದರಿಂದ ವಿಭಿನ್ನ ವಾಸನೆ ಬರತೊಡಗಿತ್ತು. ಅದೇನು ಹಾಕಿದೆ ಅಂದಾಗ, ಇದು ಬ್ಯಾಂಬೂ ಟೆಂಙಾ, ಅರುಣಾಚಲದ ಬುಡಕಟ್ಟು ಜನಾಂಗಗಳ ಆಹಾರದಲ್ಲಿ ಇದು ಬೇಕೇ ಬೇಕು ಎಂದ. ಅಂದಹಾಗೆ ಅಂಗಡಿಗಳ ಮುಂದೆ ಪೆಪ್ಸಿ, ಕೋಲಾ ಬಾಟಲಿಗಳಲ್ಲಿ ಬಿಳಿ ಬಣ್ಣದ ವಸ್ತು ಮಾರುತ್ತಿದ್ದರು.         ಅದೇ ನಮ್ಮ ಊರಿನಲ್ಲಿ ಸಿಗುವ ಎಳೆ ಬಿದಿರು (ಕಳಲೆ) ಯನ್ನ ಬೇಯಿಸಿ, ತಿಂಗಳುಗಟ್ಟಲೆ ಸಂಗ್ರಹಿಸಿಟ್ಟು ಅದನ್ನ ಆಹಾರಕ್ಕೆ ಬಳಸುತ್ತಾರೆ. ಇದರಲ್ಲಿ ಹಸಿ, ಒಣ ಎಲ್ಲಾ ಬಗೆಯೂ ಸಿಗುತ್ತವೆ. ಅದನ್ನೇ ಸ್ಥಳೀಯ ಭಾಷೆಯಲ್ಲಿ ಬ್ಯಾಂಬೂ ಟೆಂಙಾ ಅನ್ನುತ್ತಾರೆ. ಟೆಂಙಾ/ಟೆಂಗಾ ಅಂದರೆ ಅಸ್ಸಾಮಿ ಭಾಷೆಯಲ್ಲಿ ಹುಳಿ ಎಂದರ್ಥ. 
      ಈಶಾನ್ಯ ರಾಜ್ಯದವರಿಗೆ ಹುಳಿ ಅಂದರೆ ಪಂಚಪ್ರಾಣ. ಓ‌ ಟೆಂಙಾ ಎಂಬ ಆನೆಯ ಕಾಲು ಹೋಲುವ ಹಣ್ಣಿದೆ, ಅದನ್ನ ಕತ್ತರಿಸಿ ಮೀನಿನ ಜತೆ ಬೇಯಿಸುತ್ತಾರೆ. ನಮ್ಮ ಕರಾವಳಿಯಲ್ಲಿ ಮನೆಮನ ಜನಜನಿತ ಅಮಟೇಕಾಯಿ (ತುಳು:ಅಂಬಟೆ) ಯನ್ನ ಈ ಭಾಗದವರು ಯಥೇಚ್ಛವಾಗಿ ಬಳಸುತ್ತಾರೆ. ಚಿಕ್ಕ ಗಾತ್ರದ ಅಮಟೆಯ ಹುಳಿಯನ್ನ ಬೇಳೆ ಸಾರು ಮಾಡಿ ಸೇವಿಸುತ್ತಾರೆ. ಅಮಟೆಕಾಯಿಯನ್ನೇ ಹೋಲುವ ಜಲ್ಪಾಯಿ ಎನ್ನುವ ಕಾಯಿಯನ್ನ ಕತ್ತರಿಸಿ, ಉಪ್ಪು/ಅರಶಿನ ಬೆರೆಸಿ ಒಣಗಿಸಿಡುತ್ತಾರೆ. ಅದಕ್ಕೆ ಸಾಸಿವೆ ಎಣ್ಣೆ ಸುರಿದು ಸಂಗ್ರಹಿಸಿಡುತ್ತಾರೆ. ಇನ್ನ ಅನ್ನಾಹಾರ ಸೇವಿಸುವಾಗ ಈ ಭಾಗದ ಜನರು ಲಿಂಬೆ ಮತ್ತು ಮೆಣಸನ್ನ ನೆಂಚಿಕೊಳ್ಳುತ್ತಾರೆ.
     ದಕ್ಷಿಣ ಭಾರತದ ಅಡಿಗೆ ಮನೆಗಳಲ್ಲಿ ರಾರಾಜಿಸುವ ಹುಣಸೇಹುಳಿಗೆ ಇಲ್ಲಿ ಅಷ್ಟು ದೊಡ್ಡ ಪ್ರಾಧಾನ್ಯತೆ ಇಲ್ಲ. ನಮ್ಮಲ್ಲಿ ಮೀನು, ಕೋಳಿ, ಮೊಟ್ಟೆ, ಬೇಳೆ, ಹುಳಿ, ತೊಕ್ಕು, ತಂಬುಳಿ, ಶರಬತ್ ಅಂತೆಲ್ಲಾ ಉಪಯೋಗಗೊಂಡರೂ ಇಲ್ಲಿ ಮಾತ್ರ ಚಿಣ್ಣಾರಿ ಮಕ್ಕಳೇ ಮರದಿಂದ ತಿಂದು ಮುಗಿಸುತ್ತಾರೆ.
      ಈಶಾನ್ಯ ರಾಜ್ಯದಲ್ಲಿ ಒಂದು ಮಾತಿದೆ. ಮಾಸೊರ್ ಟೆಂಙಾ + ಹಾ ಕೊಮೊರಾ + ಗುಂಧೊ ಸಾವುಲ್ ಸೇವಿಸಲೇಬೇಕು (ಮೀನಿನ ಹುಳಿ+ಬಾತುಕೋಳಿ ಕುಂಬಳಕಾಯಿ ಸಾರು+ಗಂಧಸಾಲೆ). ಒಟ್ಟಾರೆ ದಕ್ಷಿಣದಂತೆ ವ್ಯಾಪಕವಾಗಿ ಹುಳಿ ಅಡಿಗೆ ಈಶಾನ್ಯ ರಾಜ್ಯದವರು ಮಾಡದೇ ಇದ್ದರೂ, ಇರೋದ್ರಲ್ಲಿ ಕೆಲವು ಅಡಿಗೆಗಳನ್ನ ಮಾಡುತ್ತಾರೆ. ಎಲ್ಲದಕ್ಕೂ ಹೆಚ್ಚಾಗಿ ಬಿದಿರಿನ ಕಳಲೆಯೇ ಹೆಚ್ಚು ಪ್ರಿಯ!
........................................... ಸುಭಾಸ್ ಮಂಚಿ 
ಕಾಡಂಗಡಿ , ಮಂಚಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
Mob : 9663135413
YouTube : The Silent Sanchari
Link :
https://youtu.be/hgBGZHhGz7Y
******************************************


Ads on article

Advertise in articles 1

advertising articles 2

Advertise under the article