ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 11
Friday, May 26, 2023
Edit
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 11
ಲೇಖಕರು : ತುಳಸಿ ಕೈರಂಗಳ
ಹಿಂದಿ ಭಾಷಾ ಶಿಕ್ಷಕಿ
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕ - ವಿದ್ಯಾರ್ಥಿ - ಪೋಷಕ ಈ ಮೂರು ಜೀವಂತ ಸಾಕ್ಷಿಗಳು. ಇವುಗಳ ನಡುವಿನ ಜೀವಂತಿಕೆಯೇ ಶಿಕ್ಷಣದ ಯಶಸ್ಸಿನ ಕೈ ಕನ್ನಡಿ.
ಜೀವಂತಿಕೆಗಳೊಂದಿಗೆ ಉದ್ಯೋಗ ನಡೆಸುವ ಕೈಂಕರ್ಯಕ್ಕೆ ಪಾದಾರ್ಪಣೆಗೈದು 13 ವರ್ಷಗಳ ಕಾಲ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಭಡ್ತಿಗೊಂಡು ಪ್ರೌಢ ಶಾಲೆಗೆ ಬಂದಾಗ ಪ್ರಾಥಮಿಕ ಶಾಲಾ ಮಕ್ಕಳ ಮುಗ್ಧತೆಯಿಂದ ಪ್ರೌಢ ವಿದ್ಯಾರ್ಥಿಗಳ ಪ್ರೌಢಿಮೆಗೆ ಹೊಂದಿಕೊಳ್ಳುವ ಬಗ್ಗೆ ತುಸು ತಳಮಳ ಇದ್ದಿದ್ದು ಖಂಡಿತಾ ಸತ್ಯ.
ಶಾಲೆಯಲ್ಲಿ ಅತ್ಯಂತ ಕಿರಿಯಳಾದ ನನಗೆ 8ನೇ ತರಗತಿಯ ತರಗತಿ ಅಧ್ಯಾಪಕಿಯ ಸ್ಥಾನ ದೊರೆತಾಗ ಬಹಳಷ್ಟು ಖುಷಿ ಪಟ್ಟೆ. ಪ್ರಾಥಮಿಕ ವರ್ಗದ ಅದೇ ಮನಸ್ಥಿತಿಯ ಮಕ್ಕಳ ಜೊತೆಗಿನ ಒಡನಾಟ ಹೈಸ್ಕೂಲು ಜೀವನಕ್ಕೆ ಸಂಭ್ರಮದ ಮುನ್ನುಡಿಯನ್ನು ಬರೆದಿತ್ತು.
ಒಂದು ದಿನ ನನ್ನ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮಧ್ಯಾಹ್ನ ಓಡಿ ಬಂದು
"ಟೀಚರ್ ನಾನು ಶನಿವಾರ ಶಾಲೆಗೆ ಬರೋದಿಲ್ಲ ನನಗೆ ರಜೆ ಬೇಕಿತ್ತು" ಅಂತ ಒಂದೇ ಉಸಿರಿಗೆ ಉಸುರಿದಳು. ಹೈಸ್ಕೂಲು, 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆಯ ಬಿಸಿ - ಬಿಸಿಯ ಜೊತೆಗೆ ಮಾರ್ಚ್ ತಿಂಗಳ ವಾತಾವರಣದ ಬಿಸಿಯ ನಡುವೆ ನಾನೂ ತುಸು ಬಿಸಿಯಾಗಿ ಒಂದೇ ಉಸಿರಿಗೆ.... "ನೀನು ಹೈಸ್ಕೂಲು ಹುಡುಗಿ... ಪರೀಕ್ಷೆ ಸಮಯ ಬೇರೆ ರಜೆ ನೀಡಲು ಆಗೋದಿಲ್ಲ. ನಾಳೆ ಖಂಡಿತಾ ನೀನು ಶಾಲೆಗೆ ಬರಲೇಬೇಕು." ಅಂತ ನುಡಿದೆ. ವಿದ್ಯಾರ್ಥಿನಿ ಅಲ್ಲಿಂದ ಮೆಲ್ಲ ತರಗತಿಯ ಕಡೆಗೆ ನಡೆದಳು. ತುಸು ಹೊತ್ತಿನಲ್ಲಿ ವಿದ್ಯಾರ್ಥಿನಿಯರ ದಂಡೇ ಬಂದಿತ್ತು. "ಟೀಚರ್ ಅವಳು ಅಳುತ್ತಿದ್ದಾಳೆ. ನೀವು ನಾಳೆ ರಜೆ ನೀಡಲು ಆಗಲ್ಲ ಅಂದಿರಂತೆ." ತಕ್ಷಣ ತರಗತಿಗೆ ಹೋದಾಗ ಹುಡುಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಕಲಿಕೆಯಲ್ಲಿ ತುಂಬಾ ಜಾಣೆ ವಿದ್ಯಾರ್ಥಿನಿಯ ಕಣ್ಣ ತುಂಬಾ ನೀರು. "ಯಾಕೆ ಅಳೋದು" ಅಂದಾಗ ಟೀಚರ್ ನನ್ನ ಅಮ್ಮ ತೀರಿ ಹೋದ ವರ್ಷಾಂತಿಕ ಹರಕೆ ಕಾರ್ಯ ನಾಳೆ. ಹಾಗೆ ನನಗೆ ರಜೆ ಬೇಕಿತ್ತು ಟೀಚರ್. ಅಂದಾಗ ಒಮ್ಮೆಲೆ ಆಶ್ಚರ್ಯ ದುಃಖ ಬೇಸರದೊಂದಿಗೆ ಆ ಹುಡುಗಿಯನ್ನು ಅಪ್ಪಿಕೊಂಡೆ.
ಛೇ ಒಂದು ವರುಷಗಳ ಕಾಲ ನನ್ನ ಜೊತೆಗಿದ್ದ ಮಗುವಿಗೆ ಅಮ್ಮನಿಲ್ಲದ ವಿಷಯ ನನ್ನ ಅರಿವಿಗೇ ಬಂದಿಲ್ಲವಲ್ಲ. ಒಬ್ಬ ಶಿಕ್ಷಕಿಯಾಗಿ ನಾನು ನನ್ನ ತರಗತಿಯ ಪ್ರತೀ ಮಗುವಿನ ಮನೆಯ ವಾತಾವರಣದ ಬಗ್ಗೆ ತಿಳಿದುಕೊಳ್ಳುವ.... ನನ್ನ ಶಾಲಾ ಮಕ್ಕಳ ಮನೆಗೊಮ್ಮೆ ಭೇಟಿ ನೀಡುವ ಮೌಲಿಕ ಅಗತ್ಯದ ಅರಿವು ಅಂದು ನನನಾಗಿಯಿತು. ಅಂದಿನಿಂದ ನನ್ನ ತರಗತಿಯ ಹಾಗೂ ವಿಶೇಷವಾಗಿ 10ನೇ ತರಗತಿಯ ಎಲ್ಲಾ ಪೋಷಕರಲ್ಲಿ ಕನಿಷ್ಠ ದೂರವಾಣಿ ಕರೆಯನ್ನು ಮಾಡಿ ಮಾತಾನಾಡುವ ಹವ್ಯಾಸ ಬೆಳೆಸಿಕೊಂಡೆ.
ವಿದ್ಯಾರ್ಥಿ ಹಾಗೂ ಪೋಷಕರ ಒಡನಾಟ ನನ್ನ ಶಿಕ್ಷಕ ವೃತ್ತಿಗೆ ಜೀವಂತಿಕೆ ತಂದು ನೀಡಿದೆ. ಧನಾತ್ಮಕ ಸಂಬಂಧಕ್ಕೆ ಅಡಿಪಾಯ ಹಾಕಿದ ವಿದ್ಯಾರ್ಥಿನಿ ನಿಜಕ್ಕೂ ನನ್ನ ವರ್ತನೆಯಲ್ಲಿನ ಪರಿವರ್ತನೆಗೆ ಸಾಕ್ಷಿಯಾಗಿದ್ದಾಳೆ.
ಹಿಂದಿ ಭಾಷಾ ಶಿಕ್ಷಕಿ
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************