-->
ಹಕ್ಕಿ ಕಥೆ : ಸಂಚಿಕೆ - 100

ಹಕ್ಕಿ ಕಥೆ : ಸಂಚಿಕೆ - 100

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

               
     ಮಕ್ಕಳೇ ನಮಸ್ತೇ ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ಈಗಿನ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಎಂಬಲ್ಲಿ ಒಂದು ಪಕ್ಷಿ ಸಂರಕ್ಷಿತ ಪ್ರದೇಶ ಇದೆ. ಅರಣ್ಯ ಇಲಾಖೆ ಸ್ಥಳೀಯ ಪಕ್ಷಿವೀಕ್ಷಕರ ಸಂಘದ ಸಹಕಾರದಲ್ಲಿ ಅಲ್ಲೊಂದು ಪಕ್ಷಿಹಬ್ಬ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಅದರಲ್ಲಿ ಭಾಗವಹಿಸಬೇಕೆಂದು ಯೋಚಿಸಿದಾಗ ಶಿಕ್ಷಕ ಮಿತ್ರರಾದ ರಂಗನಾಥ ಹವಾಲ್ದಾರ್ ತಮ್ಮ ಮನೆಯಲ್ಲೇ ಉಳಿಯುವ ವ್ಯವಸ್ಥೆ ಮಾಡಿ ಅಂಕಸಮುದ್ರಕ್ಕೆ ಕರೆದುಕೊಂಡು ಹೋಗಿದ್ದರು. ಜೊತೆಗೆ ಅಲ್ಲೇ ಸಮೀಪದಲ್ಲಿದ್ದ ತಮ್ಮ ಊರಾದ ತಂಬ್ರಳ್ಳಿ ಗೆ ಕರೆದುಕೊಂಡು ಹೋಗಿ ಅಲ್ಲಿನ ಹೊಲ, ಗದ್ದೆ, ತಾವು ಕಲಿತ ಶಾಲೆ ಎಲ್ಲ ತೋರಿಸಿದರು. ಅಲ್ಲೇ ಸಮೀಪದಲ್ಲಿ ಸ್ವಲ್ಪ ಎತ್ತರವಾದ ಗುಡ್ಡದಮೇಲೆ ಒಂದು ದೇವಸ್ಥಾನ ಇತ್ತು, ಗುಡ್ಡದ ಮೇಲೇರಿ ನಿಂತರೆ ಸುತ್ತಲಿನ ಪ್ರದೇಶವೆಲ್ಲ ಸುಂದರವಾಗಿ ಕಾಣುತ್ತಿತ್ತು. ಗುಡ್ಡವನ್ನು ಸುತ್ತಿಕೊಂಡು ಹೋದಂತೆ ಕಾಣುವ ತುಂಗಭದ್ರಾ ನದಿ ಮತ್ತು ಅದರ ಹಿನ್ನೀರಿನ ಪ್ರದೇಶ ಬಹಳ ಸೊಗಸಾಗಿ ಕಾಣುತ್ತಿತ್ತು. 
ದೇವಸ್ಥಾನದ ಆವರಣದಲ್ಲಿ ಹಲವಾರು ಬಗೆಯ ಹಕ್ಕಿಗಳು ಕಾಣಸಿಕ್ಕವು. ಮೈನಾ ಗಾತ್ರದ ಎರಡು ಹಕ್ಕಿಗಳು ಅಲ್ಲೆಲ್ಲ ನೆಲದ ಮೇಲೆ ಓಡಾಡುತ್ತಿದ್ದವು. ದೇಹವೆಲ್ಲ ಹಳದಿ ಮಿಶ್ರಿತ ಕಂದುಬಣ್ಣ, ರೆಕ್ಕೆಗಳು ಬೂದುಬಣ್ಣ ರೆಕ್ಕೆ ಮತ್ತು ಬಾಲದ ತುದಿ ಕಪ್ಪು ಬಣ್ಣ. ಕೊಕ್ಕಿನ ಅರ್ಧಭಾಗ ಹಳದಿ ಬಣ್ಣ ಉಳಿದರ್ಧ ಬೂದುಬಣ್ಣ. ಬಿಳೀ ಬಣ್ಣದ ಕಣ್ಣಿನ ನಡುವೆ ಕಪ್ಪು ಬಣ್ಣದ ಚುಕ್ಕೆ. ತಲೆಯ ಮೇಲೆ ಎಣ್ಣೆ ಹಚ್ಚಿ ಬಾಚಿ ಹಿಂದಕ್ಕೆ ಜುಟ್ಟು ಹಾಕಿದಂತೆ ಕಾಣುವ ಕಪ್ಪು ಬಣ್ಣದ ಗರಿಗಳು ಸೆಲೂನ್ ಗೆ ಹೋಗಿ ಹೇರ್ ಸ್ಟೈಲ್ ಮಾಡಿಸಿಕೊಂಡು ಬಂದಂತೆ ವಿಶೇಷವಾಗಿ ಕಾಣುತ್ತಿತ್ತು. ಎರಡು ಹಕ್ಕಿಗಳು ಪರಸ್ಪರ ಮಾತನಾಡಿಕೊಂಡಂತೆ ಶಬ್ದ ಮಾಡುತ್ತಾ ನೆಲದ ಮೇಲೆಲ್ಲಾ ಚುರುಕಾಗಿ ನಡೆದಾಡುತ್ತಿದ್ದವು. ಈ ಹಕ್ಕಿಗೆ ನಿಮ್ಮೂರಲ್ಲಿ ಏನು ಹೆಸರು ಎಂದು ರಂಗನಾಥ ಮೇಷ್ಟ್ರನ್ನು ವಿಚಾರಿಸಿದೆ. ಇದನ್ನು ನಮ್ಮೂರಲ್ಲಿ ಬೈತಲೆ ಬಸವಿ ಎಂದು ಕರೆಯುತ್ತಾರೆ ಎಂದವರು ಹೇಳಿದಾಗ ಇದರ ತಲೆಮೇಲಿನ ಕಪ್ಪು ಕೂದಲಿನಂತಹ ಗರಿಗಳಿಗೂ ಹೆಣ್ಣುಮಕ್ಕಳ ಕೇಶ ವಿನ್ಯಾಸಕ್ಕೂ ಸಂಬಂಧ ಕಲ್ಪಿಸಿ ಸ್ಥಳೀಯರು ಕರೆಯುವ ಹೆಸರು ವಿಶಿಷ್ಟವೂ ಸೂಕ್ತವೂ ಅನಿಸಿತು.
        ನೆಲದ ಮೇಲೆ ಬಿದ್ದ ಕಾಳುಗಳು, ಹುಳುಗಳನ್ನು ಹೆಕ್ಕಿ ತಿನ್ನುತ್ತಾ ನೆಲದ ಮೇಲೆಲ್ಲ ಚುರುಕಾಗಿ ನಡೆದಾಡುತ್ತಿದ್ದವು. ಕಟ್ಟಡ ಮತ್ತು ಮರದ ಸಂಧಿಗಳನ್ನೆಲ್ಲ ಹತ್ತಿ ಹುಳು ಹುಪ್ಪಟೆಗಳಿಗಾಗಿ ಹುಡುಕಾಡುತ್ತಿದ್ದವು. ಮರದ ಮೇಲೆ ಹತ್ತಿ ಕಾಡುಹಣ್ಣುಗಳನ್ನು ತಿನ್ನುತ್ತಿದ್ದವು. ಹೊಟ್ಟೆ ತುಂಬಿದಾಗ ಮರದಲ್ಲಿ ಕುಳಿತು ಇಂಪಾಗಿ ಹಾಡುತ್ತಿದ್ದವು. ಹರಟೆಮಲ್ಲಗಳು ಮತ್ತು ಇತರೆ ಮೈನಾಗಳ ಜೊತೆಗೆ ಬಯಲು ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಎಪ್ರಿಲ್ ತಿಂಗಳಿನಿಂದ ಸಪ್ಟೆಂಬರ್ ವರೆಗಿನ ಕಾಲದಲ್ಲಿ ಮರದಮೇಲೆ ಗೂಡು ಕಟ್ಟಿ ಸಂತಾನಾಭಿವೃದ್ಧಿ ಮಾಡುತ್ತವೆಯಂತೆ. ಭಾರತ ದೇಶದ ಹೆಚ್ಚಿನ ಕಡೆಗಳಲ್ಲಿ ಕಾಣಸಿಗುವ ಈ ಹಕ್ಕಿ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಮತ್ತು ಹಿಮಾಲಯದ ಪ್ರದೇಶಗಳಲ್ಲಿ ಅಪರೂಪ. ಬಯಲುಸೀಮೆಯ ಹಳ್ಳಿಗಳಲ್ಲಿ, ಹೊಲಗಳ ಆಸುಪಾಸಿನಲ್ಲಿ, ಒಣಪ್ರದೇಶಗಳಲ್ಲಿ ಸಾಮಾನ್ಯವಾಗಿ ಸಿಗುವ ಹಕ್ಕಿ ಇದು. ಸದಾ ಜೋಡಿಯಾಗಿ ಓಡಾಡುವ ಬೈತಲೆ ಬಸವಿ ನಿಮ್ಮ ಆಸುಪಾಸಿನಲ್ಲೂ ಇರಬಹುದು. ನಿಮ್ಮೂರಿನಲ್ಲಿ ಇದಕ್ಕೇನಾದರೂ ವಿಶಿಷ್ಟ ಹೆಸರು ಇದೆಯಾ? ನಿಮ್ಮ ಆಸುಪಾಸಿನಲ್ಲಿ ಈ ಹಕ್ಕಿಯನ್ನು ಗಮನಿಸ್ತೀರಲ್ಲ.
       ಕನ್ನಡ ಹೆಸರು: ಕರಿತಲೆ ಕಬ್ಬಕ್ಕಿ, ಬೈತಲೆ ಬಸವಿ
ಇಂಗ್ಲೀಷ್ ಹೆಸರು: Brahminy Starling
ವೈಜ್ಞಾನಿಕ ಹೆಸರು: Sturnia pagodarum
ಚಿತ್ರ : ಅರವಿಂದ ಕುಡ್ಲ
      ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹದ ಕಾರಣ ಹಕ್ಕಿಗಳ ಪರಿಚಯದ ಈ ಸರಣಿ ಇಂದು ನೂರನೆಯ ಸಂಚಿಕೆಗೆ ತಲುಪಿದೆ. ಆಸಕ್ತಿಯ ವಿಷಯವನ್ನು ಅಕ್ಷರ ರೂಪಕ್ಕೆ ಇಳಿಸುವ ಈ ಕಾರ್ಯಕ್ಕೆ ಅವಕಾಶ ಮಾಡಿಕೊಟ್ಟ ಮಕ್ಕಳ ಜಗಲಿ ಬಳಗದ ಎಲ್ಲರಿಗೂ ಮತ್ತು ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದ ಎಲ್ಲ ಹಿತೈಶಿಗಳಿಗೂ ಹೃದಯ ಪೂರ್ವಕ ವಂದನೆಗಳು.
         ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************


Ads on article

Advertise in articles 1

advertising articles 2

Advertise under the article