ಹಕ್ಕಿ ಕಥೆ : ಸಂಚಿಕೆ - 96
Wednesday, April 26, 2023
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ನಮ್ಮ ಮನೆಯಿಂದ ಮುಖ್ಯರಸ್ತೆಗೆ ಬರುವ ದಾರಿಯಲ್ಲಿ ಕೆಲವು ಗದ್ದೆಗಳು ಇದ್ದವು. ಮಳೆಗಾಲದಲ್ಲಿ ಬೀಳುವ ನೀರು ಎಲ್ಲಾ ಕಡೆ ತುಂಬಿಕೊಳ್ಳುತ್ತಿತ್ತು. ಒಂದು ಗದ್ದೆಯಿಂದ ಇನ್ನೊಂದಕ್ಕೆ ಹರಿದು ಮುಂದೆ ಸಣ್ಣ ತೋಡಿನಲ್ಲಿ ಸೇರಿಕೊಂಡು ಅಲ್ಲಿಂದ ಮುಂದೆ ನದಿಯಲ್ಲಿ ಸೇರಿಕೊಳ್ಳುತ್ತಿತ್ತು. ಇದೊಂದು ಗದ್ದೆ ಬಹಳ ತಗ್ಗಿನಲ್ಲಿತ್ತು. ಹಲವಾರು ವರ್ಷಗಳಿಂದ ಅಲ್ಲಿ ಯಾವುದೇ ಬೆಳೆಯನ್ನು ಬೆಳೆಯದ ಕಾರಣ ಅಲ್ಲಿ ಸದಾ ನೀರು ತುಂಬಿರುತ್ತಿತ್ತು. ಜೊತೆಗೆ ಜಲಸಸ್ಯಗಳು ಬೆಳೆದುಕೊಂಡು ಅದೊಂದು ಸುಂದರ ಕೆರೆಯಾಗಿ ಮಾರ್ಪಟ್ಟಿತ್ತು. ಬೇಸಗೆ ಕಾಲದಲ್ಲಿಯೂ ಅಲ್ಲಿ ಸಾಕಷ್ಟು ನೀರು ಇರುತ್ತಿತ್ತು. ವರ್ಷಪೂರ್ತಿ ತಾವರೆ ಹೂಗಳು ಅರಳುತ್ತಿದ್ದವು. ಆದರೆ ಆ ಕೆರೆಯಲ್ಲಿ ಕೋಣಗಳು ಮಾತ್ರ ಬೇಸಗೆಯಲ್ಲಿ ಮಲಗಿಕೊಂಡು ಬಿಸಿಲಿನಿಂದ ತಂಪು ಮಾಡಿಕೊಳ್ಳುತ್ತಿದ್ದವು. ನಾವು ತಾವರೆ ಹೂ ಕೊಯ್ಯಲು ಹೋದರೆ ಕೆಸರಿನಲ್ಲಿ ಕಾಲು ಹೂತು ಹೋಗುತ್ತಿತ್ತು. ಮಧ್ಯದಲ್ಲಿ ತುಂಬಿರುವ ನೀರಿನಲ್ಲಿ ಸದಾ ಕೆಲವು ಬಾತುಕೋಳಿಗಳು ಇರುತ್ತಿದ್ದವು. ಯಾವಾಗ ಪಕ್ಷಿ ವೀಕ್ಷಣೆಯ ಹವ್ಯಾಸ ಪ್ರಾರಂಭವಾಯಿತೋ ಅವುಗಳನ್ನು ಸೂಕ್ಷ್ಮವಾಗಿ ಗಮನಿಸಲು ಪ್ರಾರಂಭ ಮಾಡಿದೆ. ನೀರಿನಲ್ಲಿ ಈಜುತ್ತಾ ಜಲಸಸ್ಯಗಳನ್ನು ತಿನ್ನುವ ಹಲವಾರು ಬಾತುಗಳು ಇದ್ದವು. ಒಂದು ದಿನ ಸೂಕ್ಷ್ಮವಾಗಿ ನೋಡಿದಾಗ ಕಂದು ಬಣ್ಣದ ಸಿಳ್ಳೆಬಾತುಗಳ ಜೊತೆಗೆ ಅವುಗಳಿಗಿಂತ ಸ್ವಲ್ಪ ಚಿಕ್ಕದಾದ ಬಿಳೀ ಬಣ್ಣದ ಬಾತುಗಳು ಕಾಣಿಸಿದವು. ಆ ಮೇಲೆ ಪ್ರತಿದಿನವೂ ಗಮನಿಸುವಾಗ ಈ ಬಿಳಿ ಬಣ್ಣದ ಬಾತುಗಳು ಕಾಣಸಿಗುತ್ತಿದ್ದವು. ಕೆಲವೊಮ್ಮೆ ಬಿಳಿಬಾತುಗಳ ಗುಂಪು ಬೇರೆಯಾಗಿ ಈಜುವಾಗ ಅವುಗಳಲ್ಲಿ ಗಂಡು ಹಕ್ಕಿಗೆ ಮಾತ್ರ ಈ ಬಿಳಿ ಬಣ್ಣ ಎದ್ದು ಕಾಣುವುದು ತಿಳಿಯಿತು. ರೆಕ್ಕೆಯ ವಿನ್ಯಾಸ ಗಾತ್ರ ಮತ್ತು ಮೈಮೇಲಿನ ಗೆರೆಗಳು ಹೆಣ್ಣು ಹಕ್ಕಿಗೂ ಅದೇ ರೀತಿ ಇತ್ತು. ತಲೆಯಮೇಲೆ ಬಾಚಿದ ಕೂದಲಿನಂತಹ ಕೇಶವಿನ್ಯಾಸ, ರೆಕ್ಕೆಯ ಮೇಲಿನ ಪಟ್ಟೆಗಳು ಈ ಹಕ್ಕಿಯನ್ನು ಉಳಿದ ಸಿಳ್ಳೆ ಬಾತುಗಳಿಗಿಂತ ಸುಂದರವಾಗಿ ಕಾಣುವಂತೆ ಮಾಡುತ್ತಿದ್ದವು. ಕೆರೆಯಲ್ಲಿ ಬೆಳೆಯುವ ಜಲಸಸ್ಯಗಳು ಮತ್ತು ಕೀಟಗಳೇ ಇದರ ಮುಖ್ಯ ಆಹಾರ. ಜುಲೈ ನಿಂದ ಆಗಸ್ಟ್ ತಿಂಗಳ ನಡುವೆ ಮಾನ್ಸೂನ್ ಕಾಲದಲ್ಲಿ ಕೆರೆಯ ನಡುವೆ ಅಥವಾ ಬದಿಯಲ್ಲಿ ಬೆಳೆದ ಮರಗಳ ಮೇಲೆ ಗೂಡುಕಟ್ಟಿ ಸಂತಾನಾಭಿವೃದ್ಧಿ ಮಾಡುತ್ತವೆ.
ಆದರೆ ಒಂದು ದಿನ ಆ ಗದ್ದೆಗೆ ಮಣ್ಣು ತುಂಬಿಸಲು ಪ್ರಾರಂಭ ಮಾಡಿದರು. ಕೆಲವೇ ದಿನಗಳಲ್ಲಿ ಎಲ್ಲಿಂದಲೋ ತಂದ ಕಟ್ಟಡದ ಒಡೆದ ಕಾಂಕ್ರೀಟ್ ತುಂಡುಗಳನ್ನೆಲ್ಲ ತುಂಬಿ, ಮಣ್ಣುಹಾಕಿ ಚಂದದ ಕೆರೆಯನ್ನು ಮುಚ್ಚಿಬಿಟ್ಟರು. ಕೆಲವು ದಿನ ಆ ಜಾಗ ಕ್ರಿಕೆಟ್ ಆಟದ ಮೈದಾನವಾಗಿತ್ತು. ಆದರೆ ಈಗ ಅಲ್ಲೊಂದು ದೊಡ್ಡ ವಸತಿ ಸಂಕೀರ್ಣ ತಲೆ ಎತ್ತುತ್ತಿದೆ. ಅಲ್ಲೊಂದು ಕೆರೆ ಇತ್ತು, ಅಲ್ಲಿ ಹಕ್ಕಿಗಳು ಇತ್ತು ಎನ್ನುವ ಕುರುಹೂ ಇಲ್ಲದಾಗಿದೆ. ಇದು ನಮ್ಮ ಮನೆಯ ಹತ್ತಿರದ ಈ ಗದ್ದೆಯ ಸ್ಥಿತಿ ಮಾತ್ರವಲ್ಲ ಕರಾವಳಿ ಜಿಲ್ಲೆಗಳ ಹಲವಾರು ಕಡೆ, ರಾಷ್ಟ್ರೀಯ ಹೆದ್ದಾರಿಯ ಬದಿಗಳಲ್ಲಿ ಇಂತಹ ಕೆರೆಗಳು ಹಲವು ಕಡೆ ಇದ್ದವು. ಅದರಲ್ಲಿ ಕನಿಷ್ಟ ಹತ್ತಿಪ್ಪತ್ತು ಬಗೆಯ ಹಕ್ಕಿಗಳು, ಹಲವು ಬಗೆಯ ಜಲಸಸ್ಯಗಳು ಕಣ್ಣಿಗೆ ಕಾಣದ ಇನ್ನೆಷ್ಟೋ ಜೀವಿಗಳು ಇರುತ್ತಿದ್ದವು. ಸುತ್ತಮುತ್ತಲಿನ ಬಾವಿಗಳಲ್ಲಿ ಬೇಸಿಗೆಯಲ್ಲೂ ನೀರು ಇರುತ್ತಿತ್ತು. ಆದರೆ ಅಭಿವೃದ್ಧಿ ಅದನ್ನೆಲ್ಲ ಮುಚ್ಚಿಹಾಕುತ್ತಿದೆ. ಕೆಲವು ಕಡೆ ಕೆರೆಗಳ ಸುತ್ತ ಬೆಳೆದ ಮರಗಳನ್ನು ಕಡಿದು, ಕಟ್ಟೆಯನ್ನು ಕಟ್ಟಿ, ಸುತ್ತಲೂ ಕಬ್ಬಿಣದ ಬೇಲಿಯನ್ನು ನಿರ್ಮಿಸಿ ಅದರ ಸುತ್ತಲೂ ಇಂಟರ್ಲಾಕ್ ಅಳವಡಿಸಿ ಮಾನವರ ವಾಯುವಿಹಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ. ಆದರೆ ಕೆರೆಯಲ್ಲಿ ನೀರು ಮತ್ತು ಹಕ್ಕಿಗಳು ಕಡಿಮೆಯಾಗುತ್ತಿವೆ.
ಕನ್ನಡ ಹೆಸರು: ಬಿಳಿ ಬಾತು
ಇಂಗ್ಲೀಷ್ ಹೆಸರು: Cotton Pygmy-goose, Cotton Teel
ವೈಜ್ಞಾನಿಕ ಹೆಸರು: Nettapus coromandelianus
ಚಿತ್ರ ಕೃಪೆ: ಡಾ. ಎಸ್. ಶಿಶುಪಾಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************