-->
ಹಕ್ಕಿ ಕಥೆ : ಸಂಚಿಕೆ - 94

ಹಕ್ಕಿ ಕಥೆ : ಸಂಚಿಕೆ - 94

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ               
          
        ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ನನ್ನ ಹಳೆಯ ಶಾಲೆ ಸಂಸೆಯಲ್ಲಿ ಪಾಠ ಮಾಡುತ್ತಿದ್ದ ದಿನಗಳು ಅವು. ಪ್ರತಿದಿನ ನನ್ನ ಕ್ಯಾಮರಾ ಚೀಲ ಬೆನ್ನಿನ ಚೀಲ ಏರಿ ತಪ್ಪದೇ ಶಾಲೆಗೆ ಬರುತ್ತಿತ್ತು. ಪಕ್ಷಿಯ ಫೋಟೋ ತೆಗೆದು ಗುರುತು ಹಿಡಿಯಲು ಸಾಧ್ಯವಾಗದಿದ್ದರೆ, ನಮ್ಮ ಶಾಲಾ ವಿಜ್ಞಾನ ಶಿಕ್ಷಕರಾದ ಲೋಕೇಶ್ ಸರ್ ಹತ್ತಿರ ಅದರ ಫೋಟೋ ತೋರಿಸಿ ಕೇಳುತ್ತಿದ್ದೆ. ತಮ್ಮ ಪದವಿಯ ದಿನಗಳಲ್ಲಿ ಪ್ರಾಣಿಶಾಸ್ತ್ರ ಕಲಿಕೆಯ ಭಾಗವಾಗಿ ಪಕ್ಷಿಗಳ ಕುರಿತು ಅಧ್ಯಯನ ಮಾಡಿದ ಕಾರಣ ಪಕ್ಷಿಗಳನ್ನು ಗುರುತಿಸುವ ಪ್ರಾಥಮಿಕ ಜ್ಞಾನ ಅವರಿಗಿತ್ತು. ಮಧ್ಯಾಹ್ನದ ಊಟದ ವೇಳೆ ಅಥವಾ ಸಂಜೆ ಆಟದ ಅವಧಿಗೆ ನಾವಿಬ್ಬರೂ ಬಿಡುವಾದಾಗ ಇವತ್ತು ಯಾವ ಹಕ್ಕಿ ಸಿಕ್ಕಿತು  ಎಂದು ನಮ್ಮ ಚರ್ಚೆ ಪ್ರಾರಂಭ ಆಗುತ್ತಿತ್ತು. ಹಕ್ಕಿಗಳ ಕೊಕ್ಕು, ಗಾತ್ರ, ಬಾಲ, ಕಾಲಿನ ಆಕಾರ, ಹೀಗೆ ಹಲವು ವಿಚಾರಗಳ ಆಧಾರದಲ್ಲಿ ಪಕ್ಷಿಗಳನ್ನು ಗುರುತಿಸುವ ವಿಧಾನವನ್ನು ಅವರಿಂದಲೇ ನಾನು ಕಲಿತದ್ದು.
        ಒಂದು ದಿನ ಲೋಕೇಶ್ ಸರ್ ಗೆಳೆಯ ಬಾಳೆಹೊಳೆ ಪದವಿಪೂರ್ವ ಕಾಲೇಜಿನ ಶಿಕ್ಷಕ ಪ್ರೇಂಸಾಗರ್ ಅವರ ಕರೆ ಬಂದಿತ್ತು. ಮಾತಿನ ಮಧ್ಯೆ ಅವರ ಕಾಲೇಜಿನ ಹತ್ತಿರ ಗುಡ್ಡದ ಇಳಿಜಾರಿನಲ್ಲಿ ಯಾವುದೋ ಹಸುರು ಬಣ್ಣದ ಹಕ್ಕಿ ತೂತು ಕೊರೆದು ಗೂಡು ಮಾಡುತ್ತಿದೆ, ಗಾತ್ರದಲ್ಲಿ ಪಾರಿವಾಳದಷ್ಟು ದೊಡ್ಡದು ಎಂದು ಹೇಳಿದರು. ಸಾದ್ಯವಾದರೆ ಬಂದು ಪೋಟೋ ತೆಗೀರಿ ಎಂಬ ಆಮಂತ್ರಣವನ್ನೂ ಕೊಟ್ಟರು. ಮಾರ್ಚ್ ತಿಂಗಳ ಕೊನೆಯಾದ್ದರಿಂದ ಹತ್ತನೇ ತರಗತಿಯ ಪರೀಕ್ಷೆಗಳು ನಡೆಯುತ್ತಿದ್ದವು. ಪರೀಕ್ಷೆಯ ಜವಾಬ್ದಾರಿ ಮುಗಿಸಿ ಸಂಜೆ ಆ ಕಡೆ ಹೋಗಿಬರೋಣ ಎಂದು ಇಬ್ಬರೂ ತೀರ್ಮಾನ ಮಾಡಿಕೊಂಡೆವು. ನಾವು ಹೋಗುವಾಗ ಪೂರ್ತಿ ಶಾಲಾ ಆವರಣ ನಿಶ್ಶಬ್ದವಾಗಿತ್ತು. ಪರೀಕ್ಷೆ ಮುಗಿಸಿ ಎಲ್ಲ ಮಕ್ಕಳು ಮತ್ತು ಶಿಕ್ಷಕರು ಮನೆಗೆ ಹೋಗಿದ್ದರು. ಪ್ರೇಂಸಾಗರ್ ಕೂಡ ಪರೀಕ್ಷಾ ಕಾರ್ಯದ ಮೇಲೆ ಹೋಗಿದ್ದರು. ಶಾಲೆಯ ಆವರಣದಲ್ಲಿ ಹುಡುಕುತ್ತಾ ಅವರು ಹೇಳಿದ ಜಾಗ ತಲುಪಿದೆವು. ಶಾಲೆಯ ಕಟ್ಟಡಕ್ಕಾಗಿ ಗುಡ್ಡದ ಇಳಿಜಾರಿನಲ್ಲಿ ಬೆಟ್ಟ ಕಡಿದು ಜಾಗ ಮಾಡಿದ್ದರು. ಅಲ್ಲೇ ಗುಡ್ಡದ ಕಡಿದಾದ ಇಳಿಜಾರಿನಲ್ಲಿ ಕೆಲವು ದೊಡ್ಡ ದೊಡ್ಡ ತೂತುಗಳು ಕಾಣಿಸಿದವು. 
         ನಮ್ಮ ಶಾಲೆಯಲ್ಲಿ ಗಣಿಗಾರ್ಲೆ ಹಕ್ಕಿ ಗೂಡು ಮಾಡುವುದನ್ನು ನೋಡಿದ್ದ ನನಗೆ ಇದೂ ಅದೇ ರೀತಿಯ ಗೂಡು ಇರಬೇಕು ಎಂಬುದು ಖಾತ್ರಿಯಾಯಿತು. ಇಲ್ಲವೆಂದರೆ ಅಷ್ಟು ಎತ್ತರದಲ್ಲಿ ಹೆಗ್ಗಣಗಳು ಗುಡ್ಡ ಕೊರೆಯಲು ಸಾಧ್ಯವಿಲ್ಲ. ಗೂಡಿನ ಗಾತ್ರ ನೋಡಿದರೆ ಸುಮಾರು ಪಾರಿವಾಳದ ಗಾತ್ರದ ಹಕ್ಕಿ ಸುಲಭವಾಗಿ ಒಳಹೋಗುವಂತಿತ್ತು. ಸುಮಾರು ಒಂದು ಗಂಟೆ ಹೊತ್ತು ಕಾದರೂ ಹಕ್ಕಿಯ ಸುಳಿವೇ ಇರಲಿಲ್ಲ. ಆಕಾಶದಲ್ಲಿ ಮೋಡಗಳು ಸೇರತೊಡದಿದವು. ಮಳೆ ಬರುವ ಸಾದ್ಯತೆ ಇದೆ ಎಂದೆನಿಸಿ ಇನ್ನು ಹೊರಡೋಣ ಎಂದು ಲೋಕೇಶ್ ಸರ್ ಹೇಳಿದರು. ಛೇ ಇಲ್ಲಿವರೆಗೆ ಬಂದು ಹಕ್ಕಿಯನ್ನು ನೋಡದೇ ಹಾಗೇ ಹೋಗುವಂತಾಯ್ತಲ್ಲಾ ಎಂದು ಹೊರಡುವಷ್ಟರಲ್ಲಿ ಎಲ್ಲಿಂದಲೋ ಎರಡು ಹಸಿರು ಬಣ್ಣದ ಪಾರಿವಾಳದ ಗಾತ್ರದ ಹಕ್ಕಿಗಳು ಹಾರಿ ಬಂದು ನಮ್ಮ ಮುಂದೆಯೇ ಕುಳಿತವು. ದೇಹವಿಡೀ ಹಸಿರು ಬಣ್ಣ, ಕುತ್ತಿಗೆಯಿಂದ ಎದೆವರೆಗೂ ಚಂದದ ನೀಲಿಬಣ್ಣ, ಹೊಟ್ಟೆಯ ಭಾಗ ತಿಳಿ ಹಳದಿಬಣ್ಣ. ಕುತ್ತಿಗೆಯ ಭಾಗದ ಚಂದದ ನೀಲಿಬಣ್ಣ ಸುಂದರವಾದ ಗಡ್ಡದಂತೆ ಕಾಣುತ್ತಿತ್ತು.
    ಕೊನೆಗೂ ಹುಡುಕಿಕೊಂಡು ಬಂದದ್ದು ಸಾರ್ಥಕ ಎಂದು ನಮಗಿಬ್ಬರಿಗೂ ಅನ್ನಿಸಿತು. ಭಾರತದ ಪಶ್ಚಿಮ ಘಟ್ಟ, ಹಿಮಾಲಯದ ತಪ್ಪಲು ಮತ್ತು ಪೂರ್ವದ ರಾಜ್ಯಗಳಲ್ಲಿ ಮಾತ್ರ ವಾಸಿಸುವ ಈ ಹಕ್ಕಿ ಬೇರೆಲ್ಲೂ ನೋಡಲು ಸಿಗುವುದಿಲ್ಲ. ಗುಡ್ಡದ ಇಳಿಜಾರಿನಲ್ಲಿ ಸುಮಾರು ಮೂರು ಮೀಟರ್ ಉದ್ದದ ತೂತು ಕೊರೆದು ಅದರೊಳಗೆ ಮೊಟ್ಟೆ ಇಟ್ಟು ಮರಿ ಮಾಡುತ್ತದೆ ಎಂದು ಸಲೀಂ ಅಲಿ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಹತ್ತಾರು ಕಿಲೋಮೀಟರ್ ದೂರ ಹೋಗಿ ಬರಿಕೈಯಲ್ಲಿ ಹಾಗೇ ಬರಲಿಲ್ಲ ಎಂಬ ಸಂತಸ ಅಂದು ನಮ್ಮದಾಗಿತ್ತು. 
ಕನ್ನಡ ಹೆಸರು: ನೀಲಿ ಗಡ್ಡದ ಕಳ್ಳಪೀರ ಅಥವಾ ನೀಲಿ ಗಡ್ಡದ ಗಣಿಗಾರ್ಲೆ ಹಕ್ಕಿ
ಇಂಗ್ಲೀಷ್ ಹೆಸರು: Blue-bearded Bee-eater
ವೈಜ್ಞಾನಿಕ ಹೆಸರು: Nyctyornis athertoni
ಚಿತ್ರ : ಅರವಿಂದ ಕುಡ್ಲ
    ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article