ಜೀವನ ಸಂಭ್ರಮ : ಸಂಚಿಕೆ - 80
Sunday, April 9, 2023
Edit
ಜೀವನ ಸಂಭ್ರಮ : ಸಂಚಿಕೆ - 80
ಲೇಖಕರು : ಎಂ.ಪಿ. ಜ್ಞಾನೇಶ್
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಈ ಪ್ರಸಂಗವನ್ನು ಓದಿ. ಒಂದು ಊರಿನಲ್ಲಿ ರಾಮಣ್ಣ ಎಂಬ ರೈತನಿದ್ದನು. ಇವನಿಗೆ ಎರಡು ಜನ ಗಂಡು ಮಕ್ಕಳು. ಮೊದಲನೇ ಮಗ ಓದುವುದರಲ್ಲಿ ಅಷ್ಟಾಗಿ ಇರಲಿಲ್ಲ. ಎರಡನೆಯ ಮಗ ಓದುವುದರಲ್ಲಿ ಮುಂದಿದ್ದನು. ಇವರಿಬ್ಬರ ನಡುವೆ ಒಂದು ವರ್ಷ ವ್ಯತ್ಯಾಸ ಇತ್ತು. ಮೊದಲನೆಯ ಮಗ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಎರಡನೇ ಮಗ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಹಿರಿಯ ಮಗ 6ನೇ ತರಗತಿಯಲ್ಲಿ ನಪಾಸಾದನು. ಆಗ ಎರಡನೇ ಮಗನು ಆರನೇ ತರಗತಿಗೆ ಪಾಸಾಗಿ ಬಂದನು. ತಂದೆ ತಾಯಿಗೆ ಎರಡನೇ ಮಗನ ಮೇಲೆ ಹೆಚ್ಚು ಪ್ರೀತಿ. ಚೆನ್ನಾಗಿ ಓದುತ್ತಾನೆ ಎಂದು. ಹಿರಿಯ ಮಗನ ಮೇಲೆ ಅಷ್ಟಕಷ್ಟೇ ಪ್ರೀತಿ. ಇಬ್ಬರೂ ಆರನೇ ತರಗತಿ ಪಾಸ್ ಆಗಿ 7ನೇ ತರಗತಿಗೆ ದಾಖಲಾದರು. ಶಾಲೆಯಲ್ಲೂ ಅಷ್ಟೇ. ಶಿಕ್ಷಕರಿಗೆ ಕಿರಿಯ ಹುಡುಗನ ಮೇಲೆ ಪ್ರೀತಿ, ಹಿರಿಯ ಹುಡುಗನ ಬಗ್ಗೆ ಅಷ್ಟೇನೂ ಪ್ರೀತಿ ಇಲ್ಲ. ಎಲ್ಲಾ ತಂದೆ ತಾಯಿಗಳು ಮತ್ತು ಶಿಕ್ಷಕರಿಗೂ ಓದುವ ಮಕ್ಕಳ ಮೇಲೆ ಮಾತ್ರ ಪ್ರೀತಿ. ಇವರು ಕುಟುಂಬಕ್ಕೆ, ಶಾಲೆಗೆ, ಊರಿಗೆ ಹೆಸರು ತರುತ್ತಾರೆ ಎಂದು. ಆದರೆ ದುರ್ದೈವ ಏನೆಂದರೆ ಶಿಕ್ಷಕರ ಅಗತ್ಯ ಇರುವುದು ಕಲಿಕೆಯಲ್ಲಿ ಹಿಂದಿರುವ ಮಕ್ಕಳಿಗೆ. ಆದರೆ ಶಿಕ್ಷಕರ ಪ್ರೀತಿ ಇರುವುದು ಕಲಿಕೆಯಲ್ಲಿ ಮುಂದಿರುವ ಮಕ್ಕಳ ಮೇಲೆ. ಏಕೆಂದರೆ ಇವರು ಜಾಸ್ತಿ ಶ್ರಮ ನೀಡುವುದಿಲ್ಲ ಅದಕ್ಕೆ. ಕಲಿಕೆಯಲ್ಲಿ ಹಿಂದಿರುವ ಮಕ್ಕಳಿಗೆ ಹೆಚ್ಚು ಶ್ರಮ ಹಾಕಬೇಕು, ಅದಕ್ಕಾಗಿ ಅವರ ಮೇಲೆ ಪ್ರೀತಿ ಕಡಿಮೆ.
ತಂದೆ ತಾಯಿಗಳು ಮತ್ತು ಶಿಕ್ಷಕರು ಏನು ಮಾಡುತ್ತಾರೆಂದರೆ ಯಾರಾದರೂ ಹೊಸಬರು ಬಂದರೆ, ಕಲಿಕೆಯಲ್ಲಿ ಮುಂದಿರುವ ಮಕ್ಕಳನ್ನು ಅವರ ಮುಂದೆ ಹೊಗಳುತ್ತಾರೆ. ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ತೆಗಳುತ್ತಾರೆ. ಅಣ್ಣ - ತಮ್ಮಂದಿರು 7ನೇ ತರಗತಿ ಪರೀಕ್ಷೆ ಬರೆದರು. ಫಲಿತಾಂಶ ಬಂದಿತ್ತು. ಅಣ್ಣ ನಪಾಸ್ ಆಗಿದ್ದ. ತಮ್ಮ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ. ಅಣ್ಣ ತಮ್ಮ ಇಬ್ಬರೂ ಫಲಿತಾಂಶ ನೋಡಿದರು. ಅಣ್ಣ ಫೇಲಾಗಿದ್ದ. ತಮ್ಮನ ಫಲಿತಾಂಶ ನೋಡಿದ, ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ. ಅಣ್ಣ ಕೂಡಲೇ ಅಂಗಡಿಗೆ ಹೋಗಿ ಚಾಕ್ಲೇಟ್ ಖರೀದಿಸಲು ಹೊರಟನು. ತಮ್ಮ, ಅಣ್ಣನನ್ನು ನೋಡಿ ಏನೂ ಪ್ರಯೋಜನಕ್ಕೆ ಬಾರದವನೆಂಬ ಭಾವನೆಯಲ್ಲಿ, ತನ್ನ ಫಲಿತಾಂಶ ತಿಳಿಸಲು ಖುಷಿಯಿಂದ ಮನೆಗೆ ಹೋದನು. ಅಣ್ಣ ಚಾಕಲೇಟನ್ನು ಎಲ್ಲರಿಗೂ ಹಂಚುತ್ತಾ ಹೇಳುತ್ತಿದ್ದ, "ನನ್ನ ತಮ್ಮ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾನೆ" ಎಂದು. ಹೀಗೆ ಹಂಚುತ್ತ ಶಾಲೆಗೂ ಬಂದ. ಶಿಕ್ಷಕರಿಗೂ ಚಾಕಲೇಟ್ ನೀಡಿದ. ತಮ್ಮ ಪ್ರಥಮ ದರ್ಜೆಯಲ್ಲಿ ಪಾಸಾದುದ್ದಕ್ಕೆ ಎಂದು ಹೇಳಿದ. ಆಗ ಶಿಕ್ಷಕ ಕೇಳಿದ "ಅಲ್ಲಪ್ಪ, ನೀನು ಫೇಲಾಗಿದ್ದೀಯ, ಆದರೆ ತಮ್ಮ ಪಾಸಾದುದ್ದಕ್ಕೆ ಚಾಕಲೇಟ್ ಹಂಚುತ್ತಿದ್ದಿಯಲ್ಲ, ನೀನು ಫೇಲಾದದ್ದಕ್ಕೆ ಬೇಜಾರಾಗಲಿಲ್ಲವೇ" ಎಂದರು. "ನಾನು ಫೇಲಾದರೆ ಏನು, ನನ್ನ ತಮ್ಮ ಪಾಸಾಗಿದ್ದಾನೆ ಅದಕ್ಕಾಗಿ ಸಂಭ್ರಮ ಪಡುತ್ತಿದ್ದೇನೆ" ಎಂದನು. ಆಗ ಶಿಕ್ಷಕ ಹೇಳಿದ ಮಾತು "ನಿನ್ನ ತಮ್ಮ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾನೆ ಅಷ್ಟೇ, ಆದರೆ ನೀನು ನಿನ್ನ ಜೀವನವೇ ಪ್ರಥಮ ದರ್ಜೆ ಪಾಸ್ ಆಗಿದ್ದೀಯಾ" ಎಂದರು.
ಚಾಕಲೇಟ್ ತೆಗೆದುಕೊಂಡು ಮನೆಗೆ ಅಣ್ಣ ಸಂತೋಷದಿಂದ ಬರುತ್ತಿದ್ದರೆ, ಮನೆಯಲ್ಲಿ ತಂದೆ ತಾಯಿ ತಮ್ಮನಿಗೆ ವಿಶೇಷ ಗೌರವ ನೀಡುತ್ತಾ, ತಿಂಡಿ ತಿನಿಸು ತಿನಿಸುತ್ತಿದ್ದಾರೆ. ಅಣ್ಣನನ್ನು ನೋಡಿ ತಾತ್ಸಾರದಿಂದ, ಈತ ಯಾವುದಕ್ಕೂ ಬಾರದ ನಾಲಾಯಕ್ಕು ಎಂದರು. ಅಣ್ಣ ಇದಾವುದನ್ನು ತಲೆಗೆ ಹಾಕಿಕೊಳ್ಳಲಿಲ್ಲ. ವಿದ್ಯಾಭ್ಯಾಸಕ್ಕೆ ತಿಲಾಂಜಲಿ ನೀಡಿ, ವ್ಯವಸಾಯ ಮಾಡಲು ಶುರು ಮಾಡಿದನು. ತಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ನಗರಕ್ಕೆ ಹೋದನು. ಅಲ್ಲೇ ಪದವಿಗಳಿಸಿದ, ವಿದೇಶದಲ್ಲಿ ಕೆಲಸ ಸಿಕ್ಕಿತು. ಅಷ್ಟರಲ್ಲಿ ಅಣ್ಣನಿಗೆ ಬಡ ಮನೆತನದಿಂದ ಹೆಣ್ಣು ತಂದು ಮದುವೆ ಮಾಡಿದರು. ತಮ್ಮನಿಗೆ ವಿದ್ಯಾವಂತ ಶ್ರೀಮಂತ ಮನೆಯಿಂದ ವಿದ್ಯಾವಂತ ಹೆಣ್ಣು ತಂದು ಮದುವೆ ಮಾಡಿದರು. ಆ ಹುಡುಗಿಗೆ ಗಂಡನ ಮನೆಯೆಂದರೆ ಅಷ್ಟಕ್ಕಷ್ಟೇ. ಕಿರಿಯ ಮಗ, ಸೊಸೆ ವಿದೇಶಕ್ಕೆ ಹೋದರು. ಇಲ್ಲಿ ಹಿರಿಯ ಮಗ ಹಿರಿಯ ಸೊಸೆ ವ್ಯವಸಾಯ ಮಾಡಿ, ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೂ ತಂದೆ ತಾಯಿಗಳಿಗೆ ಕಿರಿಯ ಮಗ, ಸೊಸೆ ಮೇಲೆ ಪ್ರೀತಿ. ಅವನು ಓದಿ ಒಳ್ಳೆಯ ಉದ್ಯೋಗದಲ್ಲಿ ಇದ್ದಾನೆ, ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು. ಆದರೆ ಆತ ವರ್ಷಕ್ಕೊಮ್ಮೆ ಬಂದು ತಂದೆ ತಾಯಿ ನೋಡಿ, ತಕ್ಷಣವೇ ಪತ್ನಿ ಯೊಂದಿಗೆ ಪತ್ನಿಯ ತವರು ಮನೆಗೆ ಹೋಗಿ ಬಿಡುತ್ತಿದ್ದನು. ಕೇವಲ ಬಾಯಿ ಮಾತಿನಿಂದ ತಂದೆ ತಾಯಿಗೆ ತೃಪ್ತಿಪಡಿಸುತ್ತಿದ್ದ ಅಷ್ಟೇ. ಅಣ್ಣನನ್ನು ನೋಡಿದರೆ ತಾತ್ಸಾರ ಮಾಡುತ್ತಿದ್ದ. ಅಣ್ಣ ತನ್ನ ಪತ್ನಿಯೊಂದಿಗೆ ವ್ಯವಸಾಯ ಮಾಡಿ, ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ, ಊರಿನಲ್ಲಿ ಸಮಾಜ ಕಾರ್ಯ ಮಾಡಿ, ಊರಿಗೆ ಬೇಕಾಗಿದ್ದನು. ತನ್ನ ತಮ್ಮನನ್ನು ತಮ್ಮನ ಹೆಂಡತಿಯನ್ನು ಪ್ರೀತಿಸುತ್ತಿದ್ದನು. ತಮ್ಮನಿಂದ ತಂದೆ- ತಾಯಿಗಾಗಲಿ ಊರಿಗಾಗಲಿ ಏನೂ ಉಪಯೋಗ ಇರಲಿಲ್ಲ. ತಾನು ತನ್ನ ಪತ್ನಿ ಮತ್ತು ಮಕ್ಕಳಿಗೆ ಮಾತ್ರ ಆತನ ಜೀವನವಿತ್ತು.
ಈ ಘಟನೆ ಓದಿದ ಮೇಲೆ ಹೇಳಿ ಯಾರು ವಿದ್ಯಾವಂತರು, ಪ್ರೀತಿವಂತರು ಅಂತ. ಪದವಿ ಪಡೆದು ಉದ್ಯೋಗದಲ್ಲಿದ್ದ ತಮ್ಮ, ಕೇವಲ ಹೆಂಡತಿ ಮಕ್ಕಳನ್ನು ನೋಡಿಕೊಳ್ಳತ್ತಿದ್ದವನು ವಿದ್ಯಾವಂತನೊ, ಪ್ರೀತಿವಂತನೊ?, ಅಲ್ಲ, ಕಡಿಮೆ ಓದಿ, ವ್ಯವಸಾಯ ಮಾಡಿ, ತಂದೆ ತಾಯಿಗಳನ್ನು, ತನ್ನ ಮಕ್ಕಳನ್ನು, ಊರಿನ ಜನರನ್ನು ಪ್ರೀತಿಸಿ, ಅವರಿಗಾಗಿ ಒಂದಷ್ಟು ಒಳ್ಳೆಯ ಕೆಲಸ ಮಾಡುವ ಅಣ್ಣನು ವಿದ್ಯಾವಂತನೊ, ಪ್ರೀತಿವಂತನೊ....?
ವಿದ್ಯಾವಂತ ಎಂದರೆ ಕೇವಲ ಪದವಿ ಪಡೆದು ಉದ್ಯೋಗ ಪಡೆದರೆ ಅಲ್ಲ, ತನ್ನವರಿಗೆ ಸಮಾಜಕ್ಕೆ ಕಿಂಚಿತ್ತಾದರು ಸಹಾಯ ಮಾಡದವನು ವಿದ್ಯಾವಂತನಲ್ಲ, ಸ್ವಾರ್ಥಿ.... ಅಲ್ಲವೇ ಮಕ್ಕಳೇ....
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************