ಜಗಲಿಯ ಮಕ್ಕಳಿಗೆ : ಅಕ್ಕನ ಪತ್ರ - 47
Sunday, April 9, 2023
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 47
ನಮಸ್ತೆ ಮಕ್ಕಳೇ.... ಹೇಗಿದ್ದೀರಿ...? ಎಂದಿನ ದಿನಗಳಿಗಿಂತ ಮುಂದಿನ ದಿನಗಳನ್ನು ಸಂತಸದಿಂದ ಎದುರು ನೋಡ್ತಿದ್ದೀರಿ..! ತರಗತಿ ಕೋಣೆ, ಶಾಲೆಯಂಗಳದ ಕಲಿಕಾ ಪ್ರಕ್ರಿಯೆಗಳಿಗೆ ಬಿಡುವು. ಎಲ್ಲ ಸರಿ ತಪ್ಪುಗಳೂ ಕಲಿಕೆಯೇ....!
ಒಮ್ಮೆ ' ಹೀಗೆಯೇ ನಡೆದುಕೊಂಡು ಹೋಗುತ್ತಿರುವಾಗ ಕೋತಿಗಳ ಒಂದು ಹಿಂಡು ಅವರನ್ನು ಅಟ್ಟಿಸಿಕೊಂಡು ಬರುತ್ತಿದ್ದವು. ಗಾಬರಿಗೊಂಡ ಸ್ವಾಮೀಜಿ ಜೋರಾಗಿ ಓಡಲಾರಂಭಿಸಿದರು. ಕೋತಿಗಳೂ ವೇಗವಾಗಿ ಅವರನ್ನು ಹಿಂಬಾಲಿಸಿದವು. ಆಗ ಅಲ್ಲೊಬ್ಬ ವ್ಯಕ್ತಿ ಸ್ವಾಮೀಜಿಯವರಲ್ಲಿ, ನೀವು ಹೆದರಿದಷ್ಟೂ ಅವು ಹೆದರಿಸುತ್ತವೆ. ಒಮ್ಮೆ ತಿರುಗಿ ಎದುರಿಸಿ ಎಂದರು. ಸ್ವಾಮೀಜಿಯವರು ಕೂಡಲೇ ಹಿಂದೆ ತಿರುಗಿ, ಜೋರಾಗಿ ಗದರಿದರು. ಕೋತಿಗಳೆಲ್ಲವೂ ಓಡಿ ಹೋದವು..!
ಕಷ್ಟ... ಋಣಾತ್ಮಕ ಆಲೋಚನೆಗಳೂ ಹೀಗೆಯೇ... ನಾವು ಹೆದರಿದಷ್ಟೂ ನಮ್ಮನ್ನು ಕುಗ್ಗಿಸಿಬಿಡುತ್ತವೆ. ಎಲ್ಲ ಸಮಸ್ಯೆಗಳಿಗೂ ಒಂದೊಂದು ಪರಿಹಾರ ಖಂಡಿತವಾಗಿಯೂ ಇದೆ ಅಲ್ವಾ!
ಎಲ್ಲ ಅನುಭವಗಳೂ ಬದುಕಿನ ಪಾಠವಾಗುತ್ತವೆ. ನಿನ್ನೆ, ಝೀ ಕನ್ನಡ ಚಾನೆಲ್ ನ ಸಾಧಕರ ಸೀಟ್ ನಲ್ಲಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಡಾ.ಸಿ ಆರ್ ಮಂಜುನಾಥ್ ಬದುಕಿನ ಪುಟಗಳನ್ನು ತೆರೆದಿಟ್ಟರು...! ಬಾಲ್ಯದ ಅನುಭಗಳಿಂದ ವೈದ್ಯನಾಗಬೇಕೆಂದೆನಿಸಿ ಬಡವರ ಪಾಲಿನ ದೇವರಾಗಿ ಸೇವೆ ಮಾಡುತ್ತಿರುವ ಸಾರ್ಥಕ ಭಾವ...! ಸಾಮಾನ್ಯ ಹಳ್ಳಿಯಿಂದ ಬಂದು ದೂರದ ಅಮೇರಿಕಾದ ವರೆಗೂ ತನ್ನ ಪ್ರಭಾವವನ್ನು ಬೀರಿದ ಅಪೂರ್ವ ವ್ಯಕ್ತಿತ್ವ...! ಸಮಾಜಕ್ಕಾಗಿ ಬದುಕನ್ನು ಅರ್ಪಿಸಿ ಸಾವಿರಾರು ಹೃದಯಗಳಿಗೆ ಉಸಿರು ನೀಡುತ್ತಿರುವವರು. ಸಾಧ್ಯವಾದರೆ ಅವರ ಮಾತುಗಳನ್ನು ಕೇಳಿ. ಅಬ್ಬಾ..! ವೈದ್ಯರಾದರೆ ಇಂತಹ ವೈದ್ಯಾರಗಬೇಕು ಎನ್ನುವ ವ್ಯಕ್ತಿತ್ವ. ಬದುಕು ಎಷ್ಟು ಚಂದ ....!
ನಾನು ಯಾರು...? ನಾನು ಏನಾಗಬೇಕು...? ಸಾಧಕರ ಜೀವನಗಳೇ ನಮಗೆ ಬಹಳಷ್ಟು ಕಲಿಸುತ್ತದೆ. ರಜೆ ಆರಂಭ... ಮಜಾ ಮಾಡೋದನ್ನು ಯಾವ ಕಾರಣಕ್ಕೂ ತಪ್ಪಿಸಿಕೊಳ್ಬೇಡಿ. ಹೊಸದನ್ನು
ಕಲಿಯುವುದನ್ನು ಕೂಡಾ!
ಮೊನ್ನೆಯ ಪತ್ರಕ್ಕೆ ಜೀವ ತುಂಬಿದ ಶ್ರಾವ್ಯ, ವೈಷ್ಣವಿ, ಪ್ರಣಮ್ಯ, ನಿಭಾ, ಭವ್ಯಶ್ರೀ, ಸಿಂಚನಾ... ಎಲ್ಲರಿಗೂ ಪ್ರೀತಿಯ ವಂದನೆ ಗಳು.
ರಜೆ ನಿತ್ಯ ಖುಷಿಕೊಡಲಿ. ಆ ಖುಷಿಯೊಳಗೆ ಹೊಸತನದ ಹುಡುಕಾಟವಾಗಲಿ. ಆರೋಗ್ಯ ಜೋಪಾನ. ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************