-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 4

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 4

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 4
ಲೇಖಕರು : ಗೀತಾ ಶ್ಯಾನ್ ಭಾಗ್
ಸರಕಾರಿ ಅಭ್ಯಾಸಿ ಪ್ರೌಢಶಾಲೆ. ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ.
     
        
            ಬೆಳವಣಿಗೆಯ ಹಾದಿಯಲ್ಲಿ ಪ್ರಪಂಚದ ವ್ಯವಹಾರಗಳು ನಮ್ಮೊಳಗೂ ಹೊರಗೂ ಏನೇನೋ ಬದಲಾವಣೆಗಳನ್ನು ತರುತ್ತಾ ಹೊಸತನವನ್ನುಂಟುಮಾಡುವುಂದತೂ ನಿಜ ತಾನೆ?
       ಆದರೆ ಈ ದಾರಿಯಲ್ಲಿ ಯಾರಲ್ಲಿ ಯಾವ ಬದಲಾವಣೆ ಉಂಟಾಗಿದೆ? ಯಾರು ಯಾವ ಹೊಸತನವನ್ನು ಕಂಡಿದ್ದಾರೆ? ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.
      ಶಾಲಾ ಕಲಿಕೆಯೆಂಬ ಅನುಭವದ ಮೂಸೆಯೂ ಹಾಗೆಯೆ. ಅದು ಹಲವು ಕಲಿಕಾ ಅನುಭವಗಳನ್ನು ತನ್ನಲ್ಲಿ ಬೇಯಿಸಿ, ಪಾಕಕಟ್ಟಿ ರಸದೌತಣ ನೀಡುವ ಪರಿಯು ಅದ್ಭುತ ಮತ್ತು ನವನವೀನ.
       ಬದುಕಿನ ಸ್ವಾದ ಮತ್ತು ಸಾರ್ಥಕ್ಯಗಳು ನಾವು ಯಾರೊಂದಿಗೆ, ಯಾವಾಗ, ಹೇಗೆ ಮತ್ತು ಎಷ್ಟು ಬೆರೆತಿದ್ದೇವೆ, ಸ್ಪಂದಿಸಿದ್ದೇವೆ, ಸಹಕರಿಸಿದ್ದೇವೆ, ಅನುನಯದಿಂದಿದ್ದೇವೆ, ನಕ್ಕಿದ್ದೇವೆ, ಅತ್ತಿದ್ದೇವೆ,.... ಈ ಮುಂತಾದ ಅಂಶಗಳನ್ನೇ ಅವಲಂಭಿಸಿವೆ.
       ಶಿಕ್ಷಕನೊಬ್ಬನ ನೆನಪಿನ ಡೈರಿಯೂ ಇಂತಹ ಹಲವು ಸ್ವಾದಭರಿತ ಅನುಭವ ಕಥನಗಳಿಂದ ಭರ್ತಿಯಾಗಿರುತ್ತದೆ. ಹಲವು ಹಂಚಿ ಸುಖಿಸಬಲ್ಲವುಗಳು. ಕೆಲವು ಒಳಗೊಳಗೇ ಹರಿವ ಗುಪ್ತಗಾಮಿನಿಯಂತೆ!!!!
       ನಾವೆಲ್ಲ ಒಪ್ಪಿಕೊಂಡಂತೆ ಪ್ರತಿ ಮಗುವೂ ಸುಂದರ ಮತ್ತು ಅದರದ್ದೇ ರೀತಿಯಲ್ಲಿ ಅನನ್ಯ.
       ಹೀಗೆ ಸುಂದರನೂ ಅನನ್ಯನೂ ಆದ ಗೌರೀಶ (ಹೆಸರನ್ನು ಬದಲಾಯಿಸಲಾಗಿದೆ) ನಮ್ಮ ಶಾಲೆಗೆ ಬಂದ ಪರಿ ಅವನಿಗೇನೂ ಸುಂದರವಾಗಿದ್ದಂತಿರಲಿಲ್ಲ. ಆದರೂ ನಮ್ಮಲ್ಲಿಗೆ ದಾಖಲಾದದ್ದು ಒಂದು ಭಿನ್ನವಾದ ಜೀವಕಳೆ ಎಂಬುದು ನಮಗೆ ಒಂದೆರಡು ದಿನಗಳಲ್ಲೇ ಅರಿವಾಯಿತು.
      ಶಿಕ್ಷಕರಿಗೆಲ್ಲ ಮೆಚ್ಚಿನವನಾಗಬೇಕು, ಸಹಪಾಠಿಗಳಿಗೆಲ್ಲ ಹಿರಿಯಣ್ಣನಾಗಬೇಕೆಂಬ ಒಳತುಡಿತವೋ, ಸದಾ ಗುರ್ತಿಸಿಕೊಳ್ಳಬೇಕೆಂಬ ಹೆದ್ದಾಸೆಯೋ.... ಅವನ ಒಡನಾಟವಂತೂ ತೋರಿಕೆಗೆ ಇದನ್ನೇ ಸ್ಪಷ್ಟಪಡಿಸುತ್ತಿತ್ತು.
ಗಮ್ಮತ್ತೆಂದರೆ ತರಗತಿ ಚಟುವಟಿಕೆಗಳಲ್ಲಿ ಶಿಕ್ಷಕರ ಮಾತಿಗೆ ಪೂರ್ಣವಿರಾಮ ಬೀಳುವ ಮೊದಲೇ ಅವನದ್ದೊಂದು ಶುರುವಾಗಿರುತ್ತಿತ್ತು.!!
      ನಾನು ಮಾಡುತ್ತೇನೆ, ನಾನು ಹೇಳುತ್ತೇನೆ, ಅದು ಹಾಗೆ, ಇದು ಹೀಗೆ.... ಅವನ ಮಾತಿನ ನಿರಂತರತೆಗೆ ಕೊಂಚ ಬ್ರೇಕ್ ಹಾಕಲು "ಮುಚ್ಚುತ್ತೀಯಾ ಒಮ್ಮೆ"" ಎಂಬ ಗದರಿಕೆ ಬೇಕೆ ಬೇಕು. ಅದೂ ಅಷ್ಟೇ ಹೊತ್ತು ಬಿಡಿ. 
           ಇಲ್ಲಿ ಕುತೂಹಲದ ವಿಷಯವೆಂದರೆ ಅವನ ವೇಗ, ನಿರಂತರತೆ, ವಿಷಯ ಗ್ರಹಿಕೆ,... ಎಲ್ಲರಿಗಿಂತ ಭಿನ್ನ. ಇನ್ನೂ ಕುತೂಹಲದ ವಿಷಯವೆಂದರೆ ಅವನಿಗೆ ಯಾರಲ್ಲೂ ಕೋಪ, ದ್ವೇಷ, ಹಗೆಗಳಿಲ್ಲ. ತಾನು ಬಾಯ್ತಪ್ಪಿ ಆಡಿದ ಮಾತು ಅನ್ಯ ಅಪಾರ್ಥವೊಂದು ತರಬಲ್ಲುದೆಂಬ ಅರಿವಾದಾಗಾ "sorry teacher" ಎಂದನೆಂದರೆ ಯಾರಾದರೂ ಕ್ಷಮಿಸಿಬಿಡಬೇಕು.
        ಅವನ ದೇಹವೊಂದು ದಣಿವರಿಯದ ಯಂತ್ರ. ಬಿದ್ದರೂ , ಪೆಟ್ಟಾದರೂ , ಗಾಯಗಳೇನಾದರೂ ಆದರೂ ಯಾವ ಲೆಕ್ಕವಿಲ್ಲ ಅವನಿಗೆ. ರಜೆಯಲ್ಲಿ ದುಡಿದು ಗಳಿಸಿದ್ದನ್ನು ಮನೆಯವರ ಅಗತ್ಯಕ್ಕೆ ನೀಡಿ ತನಗೆಂದು ಇಟ್ಟುಕೊಂಡಿದ್ದರಲ್ಲಿ ಏನಾದರೂ ತಿನ್ನುವಾಗ ಸಹಪಾಠಿಗಳಿಗೆ ಹಂಚುವುದನ್ನು ಮರೆಯುವುದಿಲ್ಲ ಅವನು.
       ಅಂಗಳದಲ್ಲಿಯೇ ತ್ರಿಭುಜದ ವಿಧಗಳನ್ನು ಸರಸರನೆ ಎಳೆದು ತೋರಿಸಿ, ರಚನೆಯನ್ನೂ ಇಲ್ಲೇ ಮಾಡಲೆ? ಸೂತ್ರ ಬರೆಯಲೆ?..... ಎಂಬ ಪ್ರಶ್ನೆಗಳು ನಾವು ಶಾಲೆಯ ಮೆಟ್ಟಿಲೇರುವ ಮೊದಲೇ ತಯಾರಾಗಿರುತ್ತವೆ. ಕ್ವಿಝ್ ರೆಡಿಮಾಡೆಂದರೆ ಎಲ್ಲರಿಗಿಂತ ಮೊದಲು ಅವನದ್ದು ರೆಡಿ!! ಅದೆಲ್ಲಿಂದ ಪ್ರಶ್ನೆಗಳನ್ನು ಕಲೆಹಾಕುತ್ತಾನೋ ಕೆಲವೊಮ್ಮೆ ಉತ್ತರಕ್ಕೂ ಅವನನ್ನೇ ಕೇಳಬೇಕಾಗುತ್ತದೆ.!!!!! 
      ಆರೋಗ್ಯ ಕಾರ್ಯಕ್ರಮವಿರಲಿ, ಆರಕ್ಷಕರ ತರಬೇತಿಯಿರಲಿ, ಪರಿಸರ ಜಾಗೃತಿಯಿರಲಿ, ನಾಟಕ, ಕಬಡ್ಡಿ, ರಿಲೇ, ಪ್ರವಾಸ, ಮಕ್ಕಳ ಹಬ್ಬ... ಏನಾದರಿರಲಿ ಗೌರೀಶನಿದ್ದಾನಾದರೆ ಅಲ್ಲೊಂದು ಜೀವಕಳೆ, ಅಲ್ಲೊಂದು ಪ್ರಶ್ನೋತ್ತರಗಳ ಸುರಿಮಳೆ. ಅವನ ಜೀವಂತಿಕೆ, ನಿರಂತರತೆ ಎಲ್ಲರಲ್ಲೂ ಬೆರಗುಮೂಡಿಸುತ್ತದೆ.
        ಆದರೆ ಅಕ್ಷರಗಳದ್ದೋ ಮಹಾ ಮುಷ್ಕರ.
ಪ್ರತಿದಿನ ಮೂರೂ ಭಾಷೆ ಅರ್ಧರ್ಧ ಪುಟ ಬರೆದು ಓದಿ ತೋರಿಸೆಂದರೆ ಹಾಗೆಯೇ ಮಾಡುತ್ತಾನೆ. ತಿದ್ದಿದರೆ ಒಪ್ಪುತ್ತಾನೆ. ಮನೆಯಿಂದ ಅಕ್ಕ, ಅಮ್ಮನ ಪೋನ್ ಬರುವುದೂ ಉಂಟು ಕೆಲವೊಮ್ಮೆ... "ಮನೆಗೆ ಮಾರಿ ಊರಿಗೆ ಉಪಕಾರಿ". ಎಂದು !!!
        "ತ್ರಾಸು ಕೊಡ್ತೀಯೇನೋ ಮನೆಯವರಿಗೆ? ಮಾತಾಡೋದಿಲ್ಲ ನಿನ್ನ ಹತ್ತಿರ" ಎಂದರೆ "ಇಲ್ಲ teacher, ಅದು ಅಕ್ಕ ಅಮ್ಮನಿಗೆ ಪ್ರೀತಿಯಿಂದ ಸ್ವಲ್ಪ ಕಿರುಕುಳ ಕೊಡೋದು." ಅಂತಾ ಸಣ್ಣ ಮುಖಮಾಡಿ ನಗುತ್ತಾನೆ. 
    ತಮ್ಮಲ್ಲಿ ಬೇಡವೆಂದು ಬೇರೊಂದು ಶಾಲೆಯಿಂದ ನಮ್ಮಲ್ಲಿಗೆ ಬಂದ ಜೀವವದು. ಯಾವ ಭಾವದಲ್ಲಿ ದಾಖಲಾಗಿದೆಯೋ ನಾನರಿಯೆ. ಸಂತೋಷದಿಂದ ಈ ಶಾಲೆಯಿಂದ ಹೋಗುವಂತಾಗಲಿ. ಹಸನಾದ ಬದುಕು ಅವನದ್ದಾಗಲಿ. ರಾಷ್ಟ್ರಸೇವೆಗೈಯಬೇಕೆಂಬ ಅವನ ಹಿರಿದಾಸೆಗೆ ಅಕ್ಷರಗಳು ಅವನಿಗೆ ಸಾತ್ ನೀಡಲಿ. ಅವನಲ್ಲಿರುವ ಮುಗ್ಧತೆಯನ್ನು, ಅಹಂಕಾರ ರಹಿತ ಸದ್ಗುಣಗಳನ್ನು ಸಮಾಜ ಕೆಡಿಸದೇ ಕಾಪಾಡಲಿ.... ಶುಭವಾಗಲೆಂದು ನೀವೂ ಹಾರೈಸುವಿರಿ ತಾನೆ....??  
.................................... ಗೀತಾ ಶ್ಯಾನ್ ಭಾಗ್
ಸರಕಾರಿ ಅಭ್ಯಾಸಿ ಪ್ರೌಢಶಾಲೆ. ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ.
*******************************************


Ads on article

Advertise in articles 1

advertising articles 2

Advertise under the article