ಸಂಚಾರಿಯ ಡೈರಿ : ಸಂಚಿಕೆ - 35
ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
ಮನೆ ಅಂದಾಗ ಹೇಗಿರಬೇಕು? ಗಟ್ಟಿಯಾದ ಪಂಚಾಂಗ, ಅದರ ಮೇಲೆ ಕಲ್ಲು-ಸಿಮೆಂಟಿನ ಜೋಡಣೆ, ಅದರ ಮೇಲೆ ಒಂದು ಛಾವಣಿ. ಇದು ನಾವೆಲ್ಲಾ ಸಾಮಾನ್ಯವಾಗಿ ಕಾಣುವ ಮನೆಗಳು. ಇದು ಭಾರತಾದ್ಯಂತ ಕಾಣುವ ಮನೆಗಳು. ಆದರೆ ಭಾರತದಲ್ಲಿ ಒಂದು ವಿಶಿಷ್ಟ ಬುಡಕಟ್ಟು ಜನಾಂಗವಿದೆ. ಇವರ ಮನೆಯ ರಚನೆಯೇ ಅತ್ಯಂತ ವಿಶಿಷ್ಟ. ಆ ಜನಾಂಗದ ಹೆಸರು 'ಮಿಶಿಂಗ್ ಬುಡಕಟ್ಟು ಜನಾಂಗ' (ಭಾರತದ ಅಸ್ಸಾಂ & ಅರುಣಾಚಲ ಪ್ರದೇಶದಲ್ಲಿ ವಾಸಿಸುವ ಇವರ ಮೂಲ ತಾನಿ ವಂಶ. ಈ ತಾನಿ ವಂಶದಿಂದ ಇನ್ನೂ ಕೆಲವಾರು ಬುಡಕಟ್ಟು ಜನಾಂಗಗಳ ಉದ್ಭವವಾಗಿವೆ.)
ಮನುಷ್ಯನಿಗೆ ನೀರು ಒಂದು ಅತ್ಯವಶ್ಯಕ ವಸ್ತು. ಅದಿಲ್ಲದೆ ಚಟುವಟಿಕೆ ನಡೆಯದು. ಅದೇ ಕಾರಣಕ್ಕೆ ಹಿಂದಿನ ಕಾಲದಲ್ಲಿ ನದಿ, ಸರೋವರಗಳ ಪಕ್ಕದಲ್ಲಿ ಮನೆ ಕಟ್ಟುತ್ತಿದ್ದರು. ಆದರೆ ಕಾಲಕ್ರಮೇಣ ನಗರೀಕರಣ ಮತ್ತು ಮಾನವ ಕುಲದ ವಿವಿಧ ಆಲೋಚನೆಗಳಿಂದಾಗಿ ಮನೆಗಳ ರಚನೆಯಲ್ಲಿ ಭಿನ್ನ ಭಿನ್ನ ರೂಪಗಳು ಬಂದವು. ಆದರೆ ಮಿಶಿಂಗ್ ಬುಡಕಟ್ಟು ಜನಾಂಗದವರು ಮೂಲತಃ ಅಲೆಮಾರಿಗಳಾದ ಕಾರಣ ನದಿ ಪಕ್ಕದಲ್ಲಿ ಮನೆ ಮಾಡಿಕೊಂಡಿದ್ದರು. ನದಿಯಲ್ಲಿ ಪ್ರವಾಹ ಬಂದಾಗ ಮನೆಯ ಸಾಮಾಗ್ರಿಗಳು ಕೊಚ್ಚಿ ಹೋಗತೊಡಗಿದಾಗ ಮನೆಯ ರಚನೆ ಬದಲಿಸುವ ನಿರ್ಧಾರ ಕೈಗೊಂಡರು. ಅದಕ್ಕಾಗಿ ಮನೆಯ ಪಂಚಾಂಗಕ್ಕೆ ಬಿದಿರಿನ ಆಧಾರ ಕೊಟ್ಟು, ಅದರ ಮೇಲೆ ಬಿದಿರನ್ನ ಸೀಳಿ ಸಾಲಾಗಿ ಪೇರಿಸಿಟ್ಟು ಅದರ ಮೇಲೆ ಕೋಣೆಗಳನ್ನು ರೂಪಿಸಿ ವಾಸಿಸತೊಡಗಿದರು. ನಮ್ಮೂರಿನ ಅಟ್ಟದ ಮನೆಗಳ ತರಹ. ಇಂತಹ ಮನೆಗಳನ್ನ ನಾನು ಕಂಡಿದ್ದು ಅಸ್ಸಾಂನ ಲಖಿಂಪುರ ಎಂಬಲ್ಲಿ. ಅಟ್ಟದ ಮೇಲೆ ಸೀಳು ಬಿದಿರಿನ ಸಂದಿಯಲ್ಲಿ ನಮ್ಮ ಕೈಯಿಂದ ಚಿಕ್ಕಪುಟ್ಟ ವಸ್ತುಗಳು ಬಿದ್ದರೆ ಅದನ್ನ ಹೆಕ್ಕಲು ಕೆಳಗೆ ಇಳಿಯಬೇಕಾಗುತ್ತಿತ್ತು. ಪುಟ್ಟ ಮಕ್ಕಳ ಪುಟ್ಟ ಪಾದ ಕೆಲವೊಮ್ಮೆ ಸಂದಿಯಲ್ಲಿ ಸಿಕ್ಕಿಹಾಕಿಕೊಂಡಾಗ ಜೋರಾಗಿ ಅಳುತ್ತಿದ್ದರು!ಅಲ್ಲೇ ಅಡುಗೆ ಕೋಣೆ, ಅಕ್ಕ ಪಕ್ಕ ಮೂರ್ನಾಲ್ಕು ಕೋಣೆಗಳು. ತಲೆ ಎತ್ತಿ ಮೇಲೆ ನೋಡಿದರೆ ವಿವಿಧ ಬಗೆಯ ಸಾಮಾಗ್ರಿಗಳು. ಮಿಶಿಂಗ್ ಜನರು ಬಹಳ ಇಷ್ಟಪಡುವ ಅಪೊಂಙ್ ಅಂದರೆ ಅನ್ನದ ಜತೆ ಭತ್ತದ ಸಿಪ್ಪೆ (ಉಮಿ) ಸುಟ್ಟು ಬೇಯಿಸಿ, ಮೂರ್ನಾಲ್ಕು ದಿನ ಇಟ್ಟು ಕುಡಿಯುವ ಈ ನೀರನ್ನ ಮಡಕೆಯಲ್ಲಿ ಸಂಗ್ರಹಿಸಿಟ್ಟಿರುತ್ತಾರೆ. ಮಿಶಿಂಗ್ ಜನರಿಗೆ ಒಣಗಿಸಿಟ್ಟ ಮೀನು ಸಹ ಬಲು ಇಷ್ಟ. ಆಹಾರ ತಯಾರಿಕೆಯಲ್ಲಿ ಬರೀ ಸೊಪ್ಪುಗಳನ್ನ ಬೇಯಿಸಿ (ಉಪ್ಪು/ಮಸಾಲೆ ಇಲ್ಲದೆ) ಅನ್ನದ ಜತೆ ಸೇವಿಸುತ್ತಾರೆ..
ಮಿಶಿಂಗ್ ಜನಾಂಗದ ಗ್ರಾಮದಲ್ಲಿ ಮೂರು ದಿನ ತಂಗಿದ್ದ ನನಗೆ ಬಹಳಷ್ಟು ಅತ್ಯದ್ಭುತ ಅನುಭವಗಳು ಒದಗಿದ್ದವು. ದ್ವೀಪ ದಾಟಿ ಇನ್ನೊಂದು ದ್ವೀಪದಲ್ಲಿ ಮಾಡಿದ ಗದ್ದೆಗೆ ತೆರಳಲು ದೋಣಿ ಏರಬೇಕಾಗಿ ಬರುತ್ತಿತ್ತು. ಶುಭನ್‌ಶ್ರೀ ನದಿಯ ಮೇಲಿನ ಪಯಣವೂ ಅದ್ಭುತ. ಒಂಥರಾ ನಭೂತೋ ನಭಿವ್ಯಷತಿ ಎಂಬ ನವಾನುಭವ ನೀಡಿದ್ದಂತೂ ಸುಳ್ಳಲ್ಲ.
......................................... ಸುಭಾಸ್ ಮಂಚಿ
ಕಾಡಂಗಾಡಿ , ಮಂಚಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : 9663135413
YouTube : The Silent Sanchari
Link :
https://youtu.be/hgBGZHhGz7Y
******************************************