-->
 ನನ್ನ ನಾನು ಅರಿತರೆ ಬಾಳು ಬಂಗಾರ

ನನ್ನ ನಾನು ಅರಿತರೆ ಬಾಳು ಬಂಗಾರ

ಲೇಖಕರು : ಮಹೇಶ್ ಕುಮಾರ್. ವಿ. ಕರ್ಕೇರ
ಸಮಾಜವಿಜ್ಞಾನ ಅಧ್ಯಾಪಕರು
ಸರಕಾರಿ ಪದವಿಪೂರ್ವ ಕಾಲೇಜು 
ಪ್ರೌಢಶಾಲಾ ವಿಭಾಗ ಸಿದ್ದಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
            
           ಪ್ರಿಯ ವಿದ್ಯಾರ್ಥಿಗಳೇ.. ಇದು ಪರೀಕ್ಷೆಯ ಪರ್ವಕಾಲ. ಮನೆ, ಶಾಲೆ ಎಲ್ಲಾ ಕಡೆ ಪೋಷಕರು, ಶಿಕ್ಷಕರಿಗೆ ಮಕ್ಕಳ ಫಲಿತಾಂಶದ ಚಿಂತೆ. ಅದರಲ್ಲೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಮೇಲಂತೂ ಒತ್ತಡವೋ ಒತ್ತಡ. ಎಲ್ಲರೂ ಕೇಳೋದೊಂದೇ ಪ್ರಶ್ನೆ. ಎಷ್ಟು ಪರ್ಸೆಂಟ್ ಮಾರ್ಕ್ ಬರ್ಬೋದು.? ಮುಂದೇನು? ಸೈನ್ಸ್ ತಗೋ.. ಕಾಮರ್ಸ್ ಆದ್ರೂ ಓಕೆ. ಆರ್ಟ್ಸ್ ಯಾಕೆ? ಹೀಗೆ ಮನೆಯಲ್ಲಿ ಪೋಷಕರು, ಬಂಧು ಬಾಂಧವರು ಎಲ್ಲರೂ ತಲೆಗೊಂದು ಸಲಹೆ ಕೊಡುವವರೆ. ಕೋರ್ಸ್ ಆಯ್ಕೆಯೂ ಮನೆಮಂದಿಗೆ ಪ್ರತಿಷ್ಠೆಯ ಪ್ರಶ್ನೆ. ಡಿಸ್ಟಿಂಕ್ಷನ್ ತಗೊಂಡ ಮಗುವೇನಾದರೂ ಆರ್ಟ್ಸ್ ತಗೊಳ್ತೇನೆ ಎಂದರೆ ಮನೆಮಂದಿಯ ಆತಂಕ ಹೇಳತೀರದು. ಶಿಕ್ಷಕರ ಮೂಲಕವೂ ಸೈನ್ಸ್ ತಗೊಳ್ಳಲು ಮಗುವಿನ ಮೇಲೆ ಒತ್ತಡ ಹಾಕಿಸುವ ಪ್ರಯತ್ನ.
             ಪ್ರಿಯ ವಿದ್ಯಾರ್ಥಿಗಳೇ.. ಪ್ರೌಢಶಾಲಾ ಹಂತದಲ್ಲಿ ಮುಂದೆ ನೀವೇನಾಗಬೇಕು ಎಂಬ ಗುರಿ ನಿರ್ಧರಿಸಿಕೊಳ್ಳಿ. ನಿಮ್ಮ ನೆಚ್ಚಿನ ವಿಷಯ ಯಾವುದೆಂಬ ಖಚಿತತೆ ನಿಮಗಿರಲಿ. ನೆಚ್ಚಿನ ವಿಷಯಕ್ಕೂ ಜೀವನದ ಗುರಿಗೂ ತಾಳಮೇಳವಿರಲಿ. ಹಲಸಿನ ಹಣ್ಣು ಬೇಕೆಂದಾದರೆ ಮಾವಿನ ಗಿಡ ಬೆಳೆಸಿದರಾದೀತೇ? ಇಲ್ಲ ತಾನೆ? ಹಾಗಾದರೆ ನೆಚ್ಚಿನ ವಿಷಯ ಯಾವುದೆಂದು ನಿರ್ಧರಿಸುವುದು ಹೇಗೆ...? ಉತ್ತರ ತುಂಬಾ ಸರಳ. ಯಾವ ವಿಷಯದ ಕಲಿಕೆ ನಿಮಗೆ ಖುಷಿ ಕೊಡುವುದೋ, ಸಮಯದ ಪರಿವೆಯಿಲ್ಲದೆ ಕಲಿಕೆಯಲ್ಲಿ ತೊಡಗುತ್ತೀರೋ, ಕಂಠಪಾಠ ದ ಅಗತ್ಯವಿಲ್ಲದೆ ಕಲಿಕೆ ಸಲೀಸಾಗುವುದೋ, ಯಾವ ವಿಷಯದ ಬಗ್ಗೆ ಹೊಸ ವಿಚಾರಗಳನ್ನು ಆಸಕ್ತಿಯಿಂದ ಸಂಗ್ರಹಿಸಿ ತರಗತಿಯಲ್ಲಿ ಮಂಡಿಸುತ್ತೀರೋ ನಿಸ್ಸಂದೇಹವಾಗಿ ಅದು ನಿಮ್ಮ ನೆಚ್ಚಿನ ವಿಷಯ. ಮನೆಯವರ ಮುಂದೆ ಚರ್ಚಿಸಿ ಪ್ರೌಢಶಾಲಾ ಶಿಕ್ಷಣದ ಬಳಿಕ ನೆಚ್ಚಿನ ವಿಷಯದಲ್ಲಿ ಅಧ್ಯಯನ ಮುಂದುವರಿಸಿ. 
       ಸಚಿನ್ ತೆಂಡೂಲ್ಕರ್ ಕಾಲೇಜು ಶಿಕ್ಷಣ ಮುಂದುವರಿಸಿದ್ದರೆ ಯಾವುದೋ ಕಂಪನಿಯ ಉದ್ಯೋಗಿಯಾಗಿ ಇರುತ್ತಿದ್ದರು ಅಲ್ಲವೇ..? ಇಡೀ ಜಗತ್ತು ಅವರನ್ನು ಗುರುತಿಸಿದ್ದು ಅವರು ತನ್ನ ಆಸಕ್ತಿಯ ಕ್ರಿಕೆಟ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರಿಂದ. ಮೊದಲು ನಿಮ್ಮೊಳಗಿನ ಶಕ್ತಿಯನ್ನು ಪರಿಚಯಿಸಿಕೊಳ್ಳಿ. ನೀವು ಯಾರು? ಒಬ್ಬ ವಿಜ್ಞಾನಿಯೇ? ವೈದ್ಯನೇ? ಶಿಕ್ಷಕನೇ?ಚಿತ್ರಕಾರನೇ? ಸಂಗೀತಗಾರನೇ? ಆಡಳಿತಾಧಿಕಾರಿಯೇ? ಕ್ರೀಡಾ ಪಟುವೇ? ನಿಮ್ಮ ಪ್ರತಿಭೆಯ ಕ್ಷೇತ್ರದಲ್ಲಿ ಮುಂದುವರಿದರೆ ಯಶಸ್ಸು ಖಚಿತ. ಆದರೆ ಕೆಸರಲ್ಲಿ ಊರಿದ ಗೂಟದಂತೆ ಪದೇ ಪದೇ ನಿರ್ಧಾರ ಬದಲಿಸಬೇಡಿ. ನಿಮ್ಮ ಭವಿಷ್ಯದ ನಿರ್ಮಾಪಕರು ನೀವೇ.      
       ಬದುಕಿಗೊಂದು ಗುರಿ ಇರಲಿ, ಸಾಧಿಸುವ ಛಲವಿರಲಿ. ಪೋಷಕರಿಗೊಂದು ಕಿವಿ ಮಾತು. ನಿಮ್ಮ ಮಗುವಿನ ಪ್ರತಿಭೆಗೆ ನೀರೆರೆದು ಪೋಷಿಸಿ. ನಿಮ್ಮ ಆಕಾಂಕ್ಷೆಗಳನ್ನು ಮಕ್ಕಳ‌ ಮೇಲೆ ಹೇರಿ ಅವರ ಭವಿಷ್ಯವನ್ನು ಮುರುಟಿಸದಿರಿ.
ಓಡುವ ಕುದುರೆಯನ್ನು ಓಡಲು ಬಿಡದೆ ಮರಹತ್ತು ಎಂದರೆ...? ಸಲೀಸಾಗಿ ಮರ ಹತ್ತೋ ಮಂಗನನ್ನು ಕುದುರೆಯ ಜೊತೆ ಓಡಿಸಿದರೆ...? ಹರಿಯೋ ನೀರಿನ ವಿರುದ್ಧ ಈಜಬಲ್ಲ ಮೀನನ್ನು ಮಂಗನಂತೆ ಮರ ಹತ್ತು ಎಂದರೆ...? ಸಾಧನೆ ಸಾಧ್ಯವಾದೀತೇ....? ಇಷ್ಟು ಸರಳ ವಿಚಾರದ ಅರಿವು ನಮಗಿರಲಿ. ಶಿಕ್ಷಣ ಪ್ರತಿಷ್ಠೆಯ ವಸ್ತುವಾಗದಿರಲಿ. ಮಕ್ಕಳ ಬಾಳು ಬೆಳಗಿಸುವ ದೀವಿಗೆಯಾಗಲಿ. ಬಾಲ್ಯವನ್ನು ಸವಿಯುತ್ತಾ, ಭವಿಷ್ಯದ ಕನಸು ಕಾಣುತ್ತಾ ನಮ್ಮ ಮಕ್ಕಳು ಒತ್ತಡವಿಲ್ಲದೆ ಬದುಕನ್ನು ಕಟ್ಟಿಕೊಳ್ಳಲಿ.
…..................ಮಹೇಶ್ ಕುಮಾರ್. ವಿ. ಕರ್ಕೇರ
ಸಮಾಜವಿಜ್ಞಾನ ಅಧ್ಯಾಪಕರು
ಸರಕಾರಿ ಪದವಿಪೂರ್ವ ಕಾಲೇಜು 
ಪ್ರೌಢಶಾಲಾ ವಿಭಾಗ ಸಿದ್ದಕಟ್ಟೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : 9480763133
*******************************************

Ads on article

Advertise in articles 1

advertising articles 2

Advertise under the article