-->
ಪಶ್ಚಿಮಘಟ್ಟ ವೆಂಬ ವಿಸ್ಮಯದೊಳಗೆ ಬೆಂಕಿಯ ಕೆನ್ನಾಲಿಗೆ

ಪಶ್ಚಿಮಘಟ್ಟ ವೆಂಬ ವಿಸ್ಮಯದೊಳಗೆ ಬೆಂಕಿಯ ಕೆನ್ನಾಲಿಗೆ

ಲೇಖನ : ಚೇತನ್ ಮುಂಡಾಜೆ
ಸಹಾಯಕ ಪ್ರಾಧ್ಯಾಪಕರು
ಕೇಂದ್ರೀಯ ವಿಶ್ವವಿದ್ಯಾಲಯ ಕೇರಳ
ಪೆರಿಯ, ಕಾಸರಗೋಡು
Mob : +91 97313 25093       
            ಕರ್ನಾಟಕದ ಯಾವುದೋ ಹಳ್ಳಿಯ ಮೂಲೆಯಿಂದ ಕಡುಬಡತನದಲ್ಲಿ ಶಿಕ್ಷಣ ಮುಗಿಸಿ, ಕಣ್ಣುಗಳ ತುಂಬ ಕನಸು, ಭರವಸೆಯನ್ನು ಹೊತ್ತು ನಗರಗಳ ಕಡೆ ಹೆಜ್ಜೆ ಇಡುವ ಯುವ ಸಮುದಾಯದ ಮುಂದಿರುವುದು ಒಂದೇ ಗುರಿ: ಉದ್ಯೋಗ; ಆ ಮೂಲಕ ಸ್ವಾವಲಂಬನೆಯ ಬದುಕು. ಹೀಗೆ ಬದುಕು ಕಟ್ಟುವಲ್ಲಿ ಬಹುಬಗೆಯ ಅಭಿರುಚಿಯ, ಕೌಶಲವಿರುವ ಮಂದಿ ತಮ್ಮೆಲ್ಲ ಪ್ರತಿಭೆಯನ್ನು ಮೂಟೆಕಟ್ಟಿ ಅಜ್ಞಾತವಾಗಿ ಕಾರ್ಪೊರೇಟ್ ಜಗತ್ತಿನಲ್ಲಿ ತಮ್ಮ ಇರವನ್ನು ಹುಡುಕುತ್ತಿದ್ದಾರೆ. ಇಂತಹ ಉಸಿರುಗಟ್ಟುವ ಒತ್ತಡದ ಬದುಕಿನಿಂದ ಬಿಡುಗಡೆಗಾಗಿ ಅವರು ಹಪಹಪಿಸುತ್ತಿದ್ದಾರೆ.
       ಮಾನಿಟರ್ ಎಂಬ ಪರದೆಯ ಮುಂದೆ ಕೀಬೋರ್ಡ್ ಮೇಲೆ ಬೆರಳಾಡಿಸುವ ಯಾಂತ್ರಿಕ ಬದುಕು ಯಾರಿಗೆ ಇಷ್ಟ ಹೇಳಿ? ಕಾರ್ಪೋರೆಟ್ ಜಗತ್ತಿನ ಮಾಯಾ ಪೆಟ್ಟಿಗೆಯೊಳಗೆ ಮೈಯೆಲ್ಲ ಕಣ್ಣಾಗಿ ಪಾಳಿಯಲ್ಲಿ ದುಡಿಯುವ ಅದೆಷ್ಟೋ ಯುವಕರ ದಂಡು ವಾರಂತ್ಯದ ಬಿಡುಗಡೆಗಾಗಿ ಆಯ್ದುಕೊಳ್ಳುವುದು ಟ್ರೆಕ್ಕಿಂಗ್, ಬೋಟಿಂಗ್, ರೈಡಿಂಗ್ ಎನ್ನುವ ಅದ್ಬುತ ಲೋಕವನ್ನು ತಂಡ ತಂಡಗಳಾಗಿ ಹೊರಡುವ ಈ ಯುವಕರ ತಂಡಕ್ಕೆ ಮೊದಲ ಅಕರ್ಷಣೆ ಪರ್ವತಗಳ ಮಾಯಾಲೋಕದ ಅಲೆದಾಟ.
          ಹೌದು, ನಗರದ ಬಿಡುವಿಲ್ಲದ ಕಾರ್ಪೋರೆಟ್ ಜಗತ್ತಿನ ಒತ್ತಡದ ಕೆಲಸದ ಜಂಜಡದೊಳಗೆ ಲಯ ತಪ್ಪುವ ಬದುಕಿನ ಹೆಜ್ಜೆಗೆ ಬಿಡುಗಡೆಯ ನೆಲೆ ಅದು ನಮ್ಮ ಪಶ್ಚಿಮಘಟ್ಟಗಳ ಮೇಲೆ ಸಾಗುವ ಸಾಹಸಮಯ ನಡಿಗೆ. ಸಾಂತ್ವಾನ ನೀಡುವ ಟ್ರೆಕ್ಕಿಂಗ್ ಎಂಬ ಕಾಡಿನ ಪಯಣದ ಸವಿ ಉಂಡವ ಮಾತ್ರ ಬಲ್ಲ ಅದರ ಸವಿಯ.... ಎನ್ನುವಂತೆ ವಾರಾಂತ್ಯದಲ್ಲಿ ಕುಮಾರಪರ್ವತವೋ, ಕುದುರೆಮುಖ ತಪ್ಪಲೋ, ಎತ್ತಿನಭುಜವೋ ಎಲ್ಲೆಡೆಯೂ ಜನ... ಜನ.. ಜನ. ಇಲ್ಲಿ ಬರುವವರೆಲ್ಲರೂ ಚಾರಣ ಪ್ರೀಯರೇನೂ ಆಗಿರಬೇಕೆಂದಿಲ್ಲ. ಬಹುಬಗೆಯ ಅಭಿರುಚಿಯ ಮಂದಿ ಹೀಗೆ ಬರುತ್ತಾರೆ. ಪ್ರಕೃತಿಯ ರಮ್ಯಾಧ್ಬುತವನ್ನು ಸವಿಯಲು ಬರುವವರ ಜೊತೆಗೆ ಮೋಜು ಮಸ್ತಿಗಾಗಿ ಬರುವವರ ಸಂಖ್ಯೆಯೂ ಕಡಿಮೆ ಇಲ್ಲ. ಆದರೆ ಜೀವಸೂಕ್ಷ್ಮ ಪ್ರದೇಶವಾಗಿರುವ ಈ ಪಶ್ಚಿಮಘಟ್ಟದ ಒಡಲ ದನಿಗೆ ಕಿವಿಗೊಡದೆ ಅಲ್ಲಿ ನಮ್ಮ ಮಾನವ ಸಹಜ ತೀಟೆಗಳಿಗೆ ಪ್ರೇರಕವಾದ ಪ್ಲಾಸ್ಟಿಕ್, ಮದ್ಯಪಾನ, ಧೂಮಪಾನ ದಂತಹ ಕೃತ್ಯಗಳನ್ನು ಎಸಗಿ ಅದರ ತ್ಯಾಜ್ಯವನ್ನು ಅಲ್ಲೇ ಎಸೆಯುವುದರಿಂದ ಆಗುವ ಪರಿಣಾಮ ಮಾತ್ರ ಘೋರ ಸ್ವರೂಪದ್ದು!!! ಈ ಕುರಿತು ಈಗಾಗಲೇ ಅನೇಕ ಪರಿಸರ ತಜ್ಞರು, ಪರಿಸರಪರ ಹೋರಾಟಗಾರರು ಹೇಳುತ್ತಲೇ ಬಂದಿದ್ದಾರೆ. ಆದರೆ ಸ್ವಯಂ ನಿಯಂತ್ರಣ ವಿಲ್ಲದ ಉಪಭೋಗದ ಮನಸ್ಥಿತಿಯು ವರ್ತಮಾನದ ಅನೇಕ ಘಟನೆಗಳಿಗೆ ಕಾರಣವಾಗಿದೆ.
       ಕಾಡುವ ಕಾಡು; ಕಾಡುವ ಕಡಲು ಇವೆರಡೂ ವಿಸ್ಮಯ ಲೋಕಗಳು, ಎರಡೂ ಅನಂತ.. ಅನೂಹ್ಯ... ನಿಗೂಢ, ವಿಸ್ಮಯಗಳು. ಮೊಗೆದಷ್ಟು ಸವಿ; ಕಣ್ಣಿಗೆ ಹಬ್ಬ; ಮನಸಿಗೆ ರಸದೂಟ. ಈ ಎರಡೂ ಪ್ರಾಕೃತಿಕ ವಿಸ್ಮಯಗಳಿಗೆ ಸ್ವಲ್ಪ ವ್ಯತ್ಯಾಸವಾದರೂ (ತೊಂದರೆಯಾದರೂ) ಅದರ ಪರಿಣಾಮ ಮಾತ್ರ ಘೋರವಾದದ್ದು. ಕಳೆದ ಎರಡು ಮೂರು ವರ್ಷಗಳ ಹಿಂದೆ ಪ್ರಾಕೃತಿಕ ವಿಕೋಪಗಳಿಂದಾದ ದುರಂತಗಳೇ ಇದಕ್ಕೆ ಸಾಕ್ಷಿ. ಇರಲಿ, ಈ ಪೂರ್ವಪೀಠಿಕೆಯ ಉದ್ದೇಶ ಇಷ್ಟೇ. ನಗರಕೇಂದ್ರಿತ ಲಯತಪ್ಪಿದ ಬದುಕಿನ ಬಿಡುಗಡೆಗಾಗಿ ಆಶ್ರಯಿಸುವ ಈ ಎರಡು ನಿಲ್ದಾಣಗಳು ಅಪಾಯದ ಗಂಟೆ ಭಾರಿಸುತ್ತಿವೆ. ಕಳೆದ ಹಲವಾರು ದಿನಗಳಿಂದ ಪತ್ರಿಕೆಗಳಲ್ಲಿ ಸುದ್ದಿಯಾಗಿ ಬರುತ್ತಿರುವುದು ಪಶ್ಚಿಮಘಟ್ಟವನ್ನು ಬೆಂಕಿಯ ಕೆನ್ನಾಲಿಗೆ ಆಪೋಷಣ ತೆಗೆದುಕೊಂಡಿರುವುದು. ಈ ಸುದ್ದಿ ನಮ್ಮನ್ನು ಕೆರಳಿಸದಿರಬಹುದು; ಕೆಲವೇ ದಿನಗಳಲ್ಲಿ ದೊಡ್ಡ ಸುದ್ದಿಯಾಗದೆ ಸದ್ದಡಗಿ ಹೋಗಲೂಬಹುದು. ಇಂತಹ ಕಾಡ್ಗಿಚ್ಚು ದೇಶದ ಯಾವ ಮೂಲೆಯಲ್ಲಿ ನಡೆದರೂ ಒಂದಷ್ಟು ದಿನ ಜನರು ಕ್ರಿಯಾಶೀಲ ರಾಗಬಹುದು; ಪತ್ರಕರ್ತರು ನುಡಿಚಿತ್ರಗಳನ್ನು ಬರೆಯಬಹುದು, ಪರಿಸರವಾದಿ ಹೋರಾಟಗಾರರು ಕರಪತ್ರಗಳನ್ನು ಹಂಚಬಹುದು. ಆದರೆ ಈ ಬೆಂಕಿಯ ರುದ್ರನರ್ತನದಿಂದ ನಾವು ಕಳಕೊಳ್ಳುವ, ಮತ್ತೆ ಸೃಷ್ಟಿಸಲು ಅಸಾಧ್ಯವಾಗುವ ಸಂಗತಿಗಳು ಎಷ್ಟು!? 
        ಕಾಡು; ಕಾಡಿನೊಳಗಿನ ಅಪರೂಪದ ಸಸ್ಯ ಸಂಪತ್ತು; ಮರ, ಮರವನ್ನ ಆಶ್ರಯಿಸಿರುವ ಬಳ್ಳಿ, ಬಳ್ಳಿಯನ್ನು ಹೊದ್ದುಕೊಂಡಿರುವ ಪೊದೆ, ಪೊದೆಯೊಳಗೆ ಚಿಗರಲು ತಯಾರದ ಮಣ್ಣ ಎವೆಯಲ್ಲಡಗಿದ ಬಿತ್ತ; ಆನೆ, ಕರಡಿ, ಹುಲಿ, ಹುಲ್ಲೆ, ಜಿಂಕೆ, ಕಾಡುಕುರಿ, ಹಂದಿ ಹೀಗೆ ಆ ಕಾಡನ್ನೇ ಆಶ್ರಯಿಸಿರುವ ಪಕ್ಷಿಸಂಕುಲ, ಕೀಟ, ಚಿಟ್ಟೆ, ಅಪರೂಪದ ಸರೀಸೃಪಗಳು ಹೀಗೆ ಎಲ್ಲಾ ಜೀವಜಂತುಗಳು.... ನೋಡ ನೋಡುತ್ತಿದ್ದಂತೆ ಇಲ್ಲವಾಗಿಬಿಡಬಹುದು. ಕಣ್ಣನೋಟದಿಂದ ಮರೆವಿಗೆ ಸಂದುಬಿಡಬಹುದು. ಪ್ರತಿವರ್ಷದಂತೆ ಮೋಡಕಟ್ಟಿ ಮತ್ತೆ ಮಳೆಸುರಿಯಬಹುದು, ಮತ್ತೆ ಬತ್ತಿದ... ಇಲ್ಲ ಹೊತ್ತಿದ ನೆಲ ಚಿಗುರಬಹುದು... ಆದರೆ.... ಆದರೆ... ಕಳಕೊಂಡವನ್ನೆಲ್ಲಾ ಮರುಸೃಜಿಸಲು ಅಸಾಧ್ಯವೆಂಬ ಸತ್ಯ ನಮ್ಮ ಮುಂದಿದೆ. ಈಗ ಆಗಬೇಕಾಗಿರುವುದು ಇಷ್ಟೇ.. ಮಾನವ ಮತಿಯಲ್ಲಿ 'ವಸುಧೈವ ಕುಟುಂಬಕಂ' ಎಂಬ ಅರಿವಿನ ಬೀಜ ಕುಡಿಯೊಡೆಯಬೇಕಷ್ಟೆ! 
      ಬಿತ್ತಕಟ್ಟುವ ಬಿತ್ತಬಿತ್ತುವ ಕಾಯಕ ನಮ್ಮ ಮುಂದಿದೆ.....
...................................... ಚೇತನ್ ಮುಂಡಾಜೆ
ಸಹಾಯಕ ಪ್ರಾಧ್ಯಾಪಕರು
ಕೇಂದ್ರೀಯ ವಿಶ್ವವಿದ್ಯಾಲಯ ಕೇರಳ
ಪೆರಿಯ, ಕಾಸರಗೋಡು
Mob : +91 97313 25093
*******************************************


Ads on article

Advertise in articles 1

advertising articles 2

Advertise under the article