-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 56

ಸ್ಫೂರ್ತಿಯ ಮಾತುಗಳು : ಸಂಚಿಕೆ - 56

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                  
         ಪತಂಜಲಿ ಮಹರ್ಷಿಗಳು ಜ್ಞಾನ ಪಡೆಯಲು ಯಮ, ನಿಯಮ, ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಎಂಟು ಅಂಗಗಳಲ್ಲಿ ಸಾಧನೆ ಮಾಡಬೇಕು ಎಂದು ವಿವರಿಸುತ್ತಾರೆ. ಅವರು ಹೇಳುವ ಎಂಟು ಅಂಗಗಳಲ್ಲಿ ಯಮ ನಿಯಮಗಳು ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಅಹಿಂಸೆ, ಸತ್ವ, ಆಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಈ ಮೌಲ್ಯಗಳೇ ಮಹರ್ಷಿಗಳು ಹೇಳುವ ಯಮಗಳು. ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ ಮತ್ತು ಭಗವಂತನ ಉಪಾಸನೆ ಇವು ನಿಯಮಗಳು. ಜೈನ ಧರ್ಮದಲ್ಲೂ ಯಮದಲ್ಲಿ ನಿರೂಪಿಸಲಾದ ಐದು ತತ್ವಗಳು ಪ್ರಮುಖ ಸ್ಥಾನ ಪಡೆಯುತ್ತವೆ.
         ಅಹಿಂಸೆ ಎಂದರೆ ಹಿಂಸೆ ಮಾಡದಿರುವುದು ಎಂದರ್ಥ. ಅದು ಯಾವುದೇ ರೀತಿಯ ಹಿಂಸೆಯ ಪ್ರಯೋಗವಿಲ್ಲದೆ ಜೀವನ ಸಾಗಿಸುವ ಅಥವಾ ಗುರಿಯನ್ನು ಸಾಧಿಸುವ ಒಂದು ತತ್ವ. ಮಾತುಗಳಿಂದಾಗಲೀ, ಆಂಗಿಕ ಕ್ರಿಯೆಗಳಿಂದಾಗಲೀ ಜೀವಜಗತ್ತನ್ನು ಘಾಸಿಗೊಳಿಸಬಾರದು. ಅಹಿಂಸಾ ಪರಮೋ ಧರ್ಮ ಎಂದು ಆರ್ಯರು ಹೇಳಿರುವುದನ್ನೂ ಇದನ್ನೇ.
     ಸತ್ವವೆಂದರೆ ಆತ್ಮಾವಲೋಕನ ಮತ್ತು ಉನ್ನತ ಶಕ್ತಿಯ ಸಾಂಗತ್ಯದಿಂದ ಬರುವ ಶಾಂತ ಮನೋಭಾವ. ಸತ್ವದ ಸ್ಥಿತಿಯಲ್ಲಿ ಮನಸ್ಸು ಶಾಂತವಾಗಿದ್ದು, ಬುದ್ಧಿಯು ಚುರುಕಾಗಿರುತ್ತದೆ, ನಮ್ಮ ನಡತೆಯು ಅತ್ಯುತ್ಕೃಷ್ಟವಾಗಿರುತ್ತದೆ. ಈ ಮೂರೂ ಗುಣಗಳು ನಮ್ಮಲ್ಲಿರುವವರೆಗೆ ನಾವು ಲೌಕಿಕದೊಂದಿಗೆ ಪ್ರಬಲವಾದ ಸಂಬಂಧವನ್ನು ಹೊಂದಿರುತ್ತೇವೆ. ಸರಳವಾಗಿ ಹೇಳುವುದಾದರೆ ಆಸ್ತೇಯ ಎಂದರೆ ಕದಿಯದಿರುವುದು ಎಂದು ಅರ್ಥ. ಪರರಲ್ಲಿರುವ ವಸ್ತುಗಳನ್ನು ತನ್ನದಾಗಿಸಬೇಕೆಂಬ ಬಯಕೆಯೂ ಆಸ್ತೇಯ ಎಂದು ಹೇಳಲಾಗುತ್ತದೆ. ಬ್ರಹ್ಮಚರ್ಯವು ವಿಶಾಲ ಅರ್ಥ ಮತ್ತು ತತ್ವವನ್ನೊಳಗೊಂಡಿದೆ. ಮನುಸ್ಮೃತಿ ಮತ್ತು ಹಿಂದೂ ಧರ್ಮದಲ್ಲಿನ ನಂತರದ ಶಾಸ್ತ್ರೀಯ ಸಂಸ್ಕೃತ ಪಠ್ಯಗಳಲ್ಲಿ ಪ್ರಕಟಗೊಳಿಸಲಾದ ವಯಸ್ಸು ಆಧಾರಿತ ಸಾಮಾಜಿಕ ವ್ಯವಸ್ಥೆಗಳಿವೆ. ಬ್ರಹ್ಮಚರ್ಯ, ಗೃಹಸ್ಥ, ವನಪ್ರಸ್ಥ ಮತ್ತು ಸನ್ಯಾಸ ಇವುಗಳೇ ಆ ನಾಲ್ಕು ವ್ಯವಸ್ಥೆಗಳು. ಬ್ರಹ್ಮಚರ್ಯವು ಪ್ರೌಢಾವಸ್ಥೆಯ ವಯಸ್ಸಿಗೆ ಮೊದಲು ಆರಂಭವಾಗುವ ಹದಿನಾಲ್ಕರಿಂದ ಇಪ್ಪತ್ತು ವರ್ಷ ವಯೋಮಾನದವರೆಗಿನ ಶೈಕ್ಷಣಿಕ ಅವಧಿಯಲ್ಲಿ ಹೇಗಿರಬೇಕೆಂದು ವಿವರಿಸುತ್ತದೆ. ದುರಾಸೆಯಿರಬಾರದು ಎಂಬ ಪರಿಕಲ್ಪನೆಯೇ ಅಪರಿಗ್ರಹ. ಸಮಯ ಹಾಗೂ ಅವಧಿಯೊಂದಿಗೆ ಬದಲಾಗುವ ವಸ್ತುಗಳನ್ನು ಅಗತ್ಯವಿದ್ದಷ್ಟಕ್ಕೆ ಮಿತಿಗೊಳಿಸಬೇಕು. ಯಾವುದೇ ಸ್ವತ್ತುಗಳನ್ನು ಹೊಂದಿರದ ಸಾಧುಗಳಂತೆ ಜೀವನವಿರಬೇಕು. ಕೊಳ್ಳುಬಾಕತನವನ್ನು ಅಪರಿಗ್ರಹವು ನಿಷೇಧಿಸುತ್ತದೆ.
      ಶೌಚ ಎಂದರೆ ಶುಚಿತ್ವದ ಕುರಿತಾದ ವಿವರಣೆಗಳನ್ನು ನೀಡುತ್ತದೆ. ಇದು ಆರೋಗ್ಯ ಸೂತ್ರವೂ ಆಹಾರ ಸೂತ್ರವೂ ಪರಿಸರ ಸೂತ್ರವೂ ಸೇರಿದಂತೆ ಶುಚಿತ್ವದ ಮಹತ್ವವನ್ನು ಸಾರುವ ನಿಯಮವಾಗಿದೆ. ಅಂತರಂಗ ಮತ್ತು ಬಹಿರಂಗದ ಶುಚಿತ್ವವೂ ಶೌಚವೇ ಆಗಿದೆ. ನಿರ್ಮಲ ಮನಸ್ಸು ಮತ್ತು ನಿರ್ಮಲ ನಡವಳಿಕೆಯಿರುವಲ್ಲಿ ಗೊಂದಲಗಳಾಗುವುದಿಲ್ಲ, ಜನರ ನೆಮ್ಮದಿಗೆ ಭಂಗವಿಲ್ಲ. ಸಂತೋಷವು ಮನಸ್ಸಿಗೆ ಸಂಬಂಧಿಸಿದೆ. ಸಂತೋಷ ಸಂಸ್ಕೃತ ಪದವಾಗಿದೆ. ಸಂ ಹಾಗೂ ತೋಷ ಸೇರಿದರೆ ಸಂತೋಷ. ಸಂ ಅಂದರೆ ಸಂಪೂರ್ಣ, ತೋಷ ಅಂದರೆ ತೃಪ್ತಿ. ಸಮಾಧಾನ, ಆರಾಮ, ಎಂದೂ ವಿವರಣೆಯಿದೆ. ತೃಪ್ತವಾಗಿರುವುದು, ಸಮಾಧಾನವಾಗಿರುವುದು ಎಂದೇ ಒಟ್ಟರ್ಥವಾಗಿದೆ. ತುಷ್ಟ ಮತ್ತು ತೋಷ ಸಮಾನಾರ್ಥಕ ಪದಗಳು.
      ತಪಸ್ಸು ಎಂದರೆ ಜ್ಞಾನೋದಯದ ಬಹಳ ಕಠಿಣ ಗುರಿಯನ್ನು ಸಾಧಿಸಲು, ಆತ್ಮ ನಿಯಂತ್ರಣ, ಏಕಚಿತ್ತತೆ ಹಾಗೂ ಕೇಂದ್ರೀಕರಣ. ಸರಳತೆ, ವಿವೇಕ ಮತ್ತು ಸಮಗ್ರತೆಯನ್ನು ಪೋಷಿಸಲು ಮಾಡುವ ಪ್ರಯತ್ನ. ಅದನ್ನು ಶರೀರ, ಮನಸ್ಸು ಹಾಗು ನಡತೆಯನ್ನು ಬೆಳೆಸಲು ಮತ್ತು ಹಿಡಿತದಲ್ಲಿಡಲು ಬಳಸಲಾಗುತ್ತದೆ. ಶಾರೀರಿಕ, ವಾಚಿಕ ಮತ್ತು ಮಾನಸಿಕ ನಿಯಂತ್ರಣದಲ್ಲಿ ತಪಸ್ಸು ಪ್ರಭಾವ ಬೀರುತ್ತದೆ.
     ಸ್ವಾಧ್ಯಾಯವು ಸ್ವ, ಅಧಿ ಮತ್ತು ಅಯ ಪದಗಳ ಸಂಯೋಜಿತ ಪದ. ಸ್ವ ಎಂದರೆ ತನ್ನ, ಅಧಿ ಎಂದರೆ ಜ್ಞಾನ ಮತ್ತು ಅಯ ಎಂದರೆ ಪಡೆಯುವುದು ಎಂದರ್ಥ. ಅಪಾರ ಜ್ಞಾನವನ್ನು ತನ್ನದಾಗಿಸಲು ಮಾಡುವ ಎಲ್ಲ ಪ್ರಯತ್ನಗಳಿಗೆ ಸ್ವಾಧ್ಯಾಯ ಎನ್ನುವುದು ಉಚಿತ.
      ಉಪಾಸನೆ ಎಂದರೆ ಸೇವೆ ಅಥವಾ ಭಗವಂತನ ಆರಾಧನೆ. ದೇವರನ್ನು, ಹಿರಿಯರನ್ನು ಮತ್ತು ಗುರುಗಳನ್ನು ಉಪಚರಿಸುವುದು ಎಂದೂ ಅರ್ಥ ಮಾಡುತ್ತೇವೆ. ಆಂಗ್ಲ ಭಾಷೆಯಲ್ಲಿ ಉಪಾಸನೆಗೆ worship ಎಂಬ ಸಂವಾದಿ ಪದವಿದೆ. Work is worship ಎಂಬ ಸೊಲ್ನುಡಿಯಂತೆ ಯೋಚಿಸಿದಾಗ ಕಾಯಕವೇ ಕೈಲಾಸ ಎಂದಂತಾಗುತ್ತದೆ. ಬದುಕು ಕಾಯಕದಿಂದ ಕೂಡಿರಬೇಕು ಎಂಬ ವಿಶಾಲ ಮನೋಭಾವವೂ ಉಪಾಸನೆಯಲ್ಲಿ ಧ್ವನಿಸುತ್ತದೆ. ಹಿರಿಯರ ಮಾತು ಎಷ್ಟು ಅರ್ಥಪೂರ್ಣವಲ್ವೇ...? ಮಕ್ಕಳೇ ನಮಸ್ಕಾರ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 

Ads on article

Advertise in articles 1

advertising articles 2

Advertise under the article