-->
ಹಕ್ಕಿ ಕಥೆ : ಸಂಚಿಕೆ - 87

ಹಕ್ಕಿ ಕಥೆ : ಸಂಚಿಕೆ - 87

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ               
     ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ.. ಇದೇ ತಿಂಗಳ ಮೊದಲವಾರದಲ್ಲಿ ನಾಗರಹೊಳೆ ಅಭಯಾರಣ್ಯದಲ್ಲಿ ಹಕ್ಕಿಗಣತಿ ಕಾರ್ಯದಲ್ಲಿ ಭಾಗವಹಿಸುವ ಅವಕಾಶ ನನಗೂ ಒದಗಿ ಬಂದಿತ್ತು. ನಾಗರಹೊಳೆ ಎಂದರೆ ಹುಲಿಗಳು ಮತ್ತು ಆನೆಗಳಿಗೆ ಹೆಸರಾದ ಜಾಗ. ಇಡೀ ದೇಶದಲ್ಲೇ ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾಡು ಎಂದು ಅಲ್ಲಿನ ಅರಣ್ಯಾಧಿಕಾರಿಗಳು ಹೇಳಿಕೊಳ್ಳುತ್ತಾರೆ. ಅಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಆನೆಗಳು ಇರುವ ಕಾಡೂ ಹೌದು. ಅಂತಹ ಕಾಡಿನಲ್ಲಿ ಹಕ್ಕಿಗಣತಿ ಮಾಡುವುದು ಏಕೆ ಎಂದು ನೀವು ಕೇಳಬಹುದು. ಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸುವ ಕಾಡಿನಲ್ಲಿ ಹಕ್ಕಿಗಳೂ ಯಥೇಚ್ಛವಾಗಿ ಇರಬಹುದು, ಅದನ್ನು ಗುರುತಿಸುವ ಕಾರ್ಯ ಆಗಬೇಕು ಎಂಬುದು ಅರಣ್ಯ ಇಲಾಖೆಯ ಆಶಯವಾಗಿತ್ತು. 
        ನಾಗರಹೊಳೆಗೆ ಪ್ರವೇಶ ಮಾಡುವ ವೀರನಹೊಸಹಳ್ಳಿ ಎಂಬ ವಲಯದಲ್ಲಿ ನಮಗೆ ಹಕ್ಕಿ ಗಣತಿ ಮಾಡಿ ವರದಿ ಮಾಡಲು ಅವಕಾಶ ನೀಡಲಾಗಿತ್ತು. ಬಯಲುಸೀಮೆಯ ಒಣ ಮತ್ತು ಎಲೆ ಉದುರಿಸುವ ಕುರುಚಲು ಕಾಡು ಅದಾಗಿತ್ತು. ಅರಣ್ಯ ಸಿಬ್ಬಂದಿಯ ಗಸ್ತು ವಾಹನಗಳು ಓಡಾಡಲು ಮಾಡಲಾದ ರಸ್ತೆಗಳಲ್ಲಿ ನಡೆದುಕೊಂಡು ಹಕ್ಕಿಗಳನ್ನು ಗುರುತಿಸಿ ದಾಖಲಿಸುವ ಕೆಲಸ ನಮ್ಮದಾಗಿತ್ತು. ಹಕ್ಕಿಗಳನ್ನು ಗುರುತಿಸಿ ಅವುಗಳ ಸಂಖ್ಯೆಯ ಜೊತೆಗೆ ಇಬರ್ಡ್ ಎಂಬ ಮೊಬೈಲ್ ಆಪ್ ನಲ್ಲಿ ಹಕ್ಕಿಗಳ ಮಾಹಿತಿ ದಾಖಲೆ ಮಾಡುತ್ತಾ ಬಿಸಿಲೇರುವ ಹೊತ್ತಿಗೆ ಕಾಡಿನ ನಡುವೆ ಇದ್ದ ಸಣ್ಣ ಕೆರೆಯೊಂದಕ್ಕೆ ಬಂದು ತಲುಪಿದೆವು. 
      ಅಲ್ಲೇ ಕುಳಿತು ದಣಿವಾರಿಸಿಕೊಳ್ಳುತ್ತಾ ತೆಗೆದುಕೊಂಡು ಬಂದ ಬೆಳಗ್ಗಿನ ಉಪಾಹಾರವನ್ನು ತಿಂದೆವು. ಕೆರೆಯ ಸುತ್ತಲೂ ಸ್ವಲ್ಪ ದೊಡ್ಡ ಮರಗಳು ಇದ್ದು ಅವುಗಳಲ್ಲಿ ಅನೇಕ ಕಾಡು ಹಣ್ಣುಗಳು ಇದ್ದುದರಿಂದ ಹಕ್ಕಿಗಳ ಕಲರವ ಸ್ವಲ್ಪ ಹೆಚ್ಚಾಗಿತ್ತು. ಅವುಗಳನ್ನು ಗಮನಿಸುತ್ತಿದ್ದಾಗ ನಮ್ಮ ಜೊತೆಗಿದ್ದ ದಾಸಪ್ಪ ಎಂಬ ಅರಣ್ಯ ಸಿಬ್ಬಂದಿ ಆಕಾಸದಲ್ಲಿ ಯಾವುದೋ ಹದ್ದು ಹಾರ್ತಾ ಐತೆ ನೋಡಿ ಸಾರ್ ಎಂದರು. ನಮ್ಮ ಬಳಿ ಇದ್ದ ಬೈನಾಕುಲರ್ ನಿಂದ ನೋಡಿದರೆ ಅದು ಒಂದು ರಣಹದ್ದು ಎಂಬುದು ಸ್ಪಷ್ಟವಾಯಿತು. ಕೆರೆಯ ಮೇಲೆ ಎತ್ತರದಲ್ಲಿ ಹಾರಾಡಿದ ಅದನ್ನು ಕಣ್ತುಂಬಿಕೊಂಡು, ನಮ್ಮ ಬಳಿ ಇದ್ದ ಹಕ್ಕಿ ಪುಸ್ತಕ ತೆಗೆದು ಇದು ಯಾವ ರಣಹದ್ದು ಎಂದು ಹುಡುಕಿದೆವು. 
      ನಮ್ಮ ಜೊತೆಗಿದ್ದ ದಾಸಪ್ಪ, ವಸಂತ ಮತ್ತು ನಿಂಗಣ್ಣ ಅರಣ್ಯ ಇಲಾಖೆಯಲ್ಲಿ ವಾಚರ್ ಕೆಲಸ ಮಾಡುವವರು. ಅವರು ಹಿಂದೆ ನಾಗರಹೊಳೆ ಕಾಡಿನೊಳಗೆ ವಾಸವಾಗಿದ್ದ ಜೇನುಕುರುಬ ಮತ್ತು ಕಾಡುಕುರುಬ ಸಮುದಾಯಕ್ಕೆ ಸೇರಿದವರು. ಅವರ ಕಾಡಿನ ಬಗೆಗಿನ ತಿಳುವಳಿಕೆ ಅಗಾಧ. ಕೇವಲ ಪರಿಮಳ ಅಥವಾ ಶಬ್ದದಿಂದಲೇ ಇಂತಹ ಪ್ರಾಣಿ ಇದೆ, ಇಂತಹ ಮರ ಇದೆ ಎಂದು ಹೇಳಬಲ್ಲವರು ಅವರು. ಕೆರೆಯ ಮೇಲೆ ಹಾರಿದ ರಣಹದ್ದುಗಳನ್ನು ನೋಡಿದ್ದೀರಾ ಎಂದು ಕೇಳಿದಾಗ ಅವರು ಹೇಳಿದ ಮಾಹಿತಿ ಹೀಗಿತ್ತು. ಈ ಕಾಡಿನಲ್ಲಿ ಹುಲಿಗಳು ಬಹಳ ಇವೆ. ಅವುಗಳು ಜಿಂಕೆಯಂತಹ ಪ್ರಾಣಿಯನ್ನು ಬೇಟೆಯಾಡಿ ತಿಂದನಂತರ ನೀರು ಕುಡಿದು ದಣಿವಾರಿಸಿಕೊಳ್ಳುತ್ತವೆ. ಹುಲಿ ತಿಂದು ಉಳಿದ ಶವವನ್ನು ಹುಡುಕುತ್ತಾ ಇವುಗಳು ಹಾರಾಡುತ್ತವೆ. ಶವ ಕಾಣಿಸಿದರೆ ಅಲ್ಲಿ ಹೋಗಿ ಹೆಣದ ಮೂಳೆ ಒಂದನ್ನು ಬಿಟ್ಟು ಉಳಿದುದನ್ನೆಲ್ಲ ಹರಿದು ತಿನ್ನುತ್ತವೆ. ಅಂತಹ ಜಾಗಗಳಲ್ಲಿ ಒಂದಕ್ಕಿಂತ ಹೆಚ್ಚು ರಣಹದ್ದುಗಳು ಇರ್ತವೆ ಸಾರ್. ಹುಲಿ ತಿಂದು ಬಿಟ್ಟ ಪ್ರಾಣಿಯ ಶವ ಮಾತ್ರವಲ್ಲ, ಸತ್ತ ಯಾವುದೇ ಪ್ರಾಣಿಯ ಶವ ಸಿಕ್ಕರೂ ಇವುಗಳು ಬಿಡುವುದಿಲ್ಲ. ಎತ್ತರದ ಮರಗಳ ಮೇಲೆ ದೊಡ್ಡ ಅಟ್ಟಳಿಗೆ ತರಹ ಮಾಡಿ ಅಲ್ಲಿ ಮೊಟ್ಟೆ ಇಟ್ಟು ಮರಿಮಾಡುತ್ತವೆ. ಗಾತ್ರದಲ್ಲಿ ಸುಮಾರು ನವಿಲಿನಷ್ಟು ದೊಡ್ಡದಿರುತ್ತದೆ ಎಂದೆಲ್ಲ ತಮಗೆ ತಿಳಿದ ಮಾಹಿತಿಯನ್ನು ಹಂಚಿಕೊಂಡರು.
      ಸತ್ತ ಪ್ರಾಣಿಗಳ ಶವವನ್ನು ತಿಂದು ಮುಗಿಸುವ ಈ ಹಕ್ಕಿಗಳು ಊರಿನಲ್ಲಿ ಇಲ್ಲವೆನ್ನುವಷ್ಟು ಅಪರೂಪ. ಹಾಗೊಂದು ಪ್ರಾಣಿ ಸತ್ತರೂ ವಾಸನೆ ಬರುವ ಮತ್ತು ರೋಗಗಳು ಬರಬಹುದು ಎಂಬ ಕಾರಣಕ್ಕೆನಾವು ಹಳ್ಳ ತೆಗೆದು ಹೂಳುವುದರಿಂದ ಈ ಹಕ್ಕಿಗಳಿಗೆ ಸತ್ತ ಪ್ರಾಣಿಗಳ ಶವ ಸಿಗುವುದಿಲ್ಲ. ರಸ್ತೆ ಅಪಘಾತದಲ್ಲಿ ಸಾಯುವ ಸಣ್ಣ ಪುಟ್ಟ ಪ್ರಾಣಿಗಳನ್ನು ಕಾಗೆ, ನಾಯಿ ಮೊದಲಾದವು ತಿಂದು ಮುಗಿಸುವುದರಿಂದ ರಣಹದ್ದುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹಾಗಾಗಿ ರಣಹದ್ದುಗಳನ್ನು ಅಳಿವಿನ ಅಂಚಿನಲ್ಲಿರುವ ಜೀವಿಗಳು ಎಂದು ಪರಿಗಣಿಸಲಾಗಿದೆ. ನಾಗರಹೊಳೆಯಂತಹ ಅಭಯಾರಣ್ಯ ಹುಲಿಗಳಿಗಾಗಿ ಮಾಡಿದರೂ ಅವುಗಳ ಕಾರಣದಿಂದ ರಣಹದ್ದುಗಳು ಉಳಿದಿರುವುದು ಸಂತೋಷದ ಸಂಗತಿ. ಪರಿಸರದಲ್ಲಿರುವ ಅಂತರ್ ಸಂಬಂಧ ಮತ್ತು ಕಾಡುಗಳು ಉಳಿಯುವುದರ ಅಗತ್ಯವನ್ನು ಮತ್ತೆ ಬೇರೆಯೇ ವಿವರಿಸಬೇಕಿಲ್ಲ ತಾನೇ? ಹಕ್ಕಿಗಳ ಆಸಕ್ತಿ ಹುಟ್ಟಿದ ಹತ್ತುವರ್ಷಗಳಲ್ಲಿ ಇದೇ ಮೊದಲಬಾರಿಗೆ ರಣಹದ್ದುಗಳನ್ನು ನೋಡಿ ನನಗೂ ಬಹಳ ಸಂತೋಷವಾಯಿತು.
ಕನ್ನಡ ಹೆಸರು: ಕೆಂದಲೆ ರಣಹದ್ದು
ಇಂಗ್ಲೀಷ್ ಹೆಸರು: Red-headed Vulture
ವೈಜ್ಞಾನಿಕ ಹೆಸರು: Sarcogyps calvus
ಚಿತ್ರ ಕೃಪೆ: ಶ್ರೀಧರ ಎಲ್
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************

Ads on article

Advertise in articles 1

advertising articles 2

Advertise under the article