-->
ಬದಲಾಗೋಣವೇ ಪ್ಲೀಸ್ - 86

ಬದಲಾಗೋಣವೇ ಪ್ಲೀಸ್ - 86

ಬದಲಾಗೋಣವೇ ಪ್ಲೀಸ್ - 86

ಲೇಖಕರು : ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
            
              ನರಿಯೊಂದು ದ್ರಾಕ್ಷಿ ತೋಟದ ಬಳಿ ಬಂದು ದ್ರಾಕ್ಷಿಗೊಂಚಲು ತಿನ್ನಲು ಸಾಕಷ್ಟು ಪ್ರಯತ್ನ ಪಟ್ಟಿತ್ತು. ಕೊನೆವರೆಗೂ ದ್ರಾಕ್ಷಿ ಎಟಕದಿದ್ದಾಗ ಅದು ಅಲ್ಲೇ ನಿಲ್ಲದೆ ಏನೂ ಬೇಸರ ಪಡದೆ "ಕೈಗೆಟುಕದ ದ್ರಾಕ್ಷಿ ಹುಳಿ" ಎಂದು ತನ್ನ ಪಾಡಿಗೆ ತಾನೇ ಸಮಾಧಾನ ಪಟ್ಟು ತನ್ನ ಮುಂದಿನ ಪಯಣವನ್ನು ಮುಂದುವರಿಸಿತು. ಸ್ವಲ್ಪ ದೂರದಲ್ಲಿ ಅದಕ್ಕೆ ಕೈಗೆಟುಕುವ ಅಂತರದಲ್ಲಿ ದ್ರಾಕ್ಷಿ ಹಣ್ಣು ಸಿಕ್ಕಿತು. ಅದನ್ನು ತಿಂದು ಸಂತಸದಿಂದ ಪಯಣ ಮುಂದುವರಿಸಿತು.
       ಈ ಕಥೆಗೆ ವಿವಿಧ ಆಯಾಮಗಳಿವೆ. ಆದರೆ ನೊಂದ ಮನಸ್ಸಿಗೆ ಸಮರ್ಥನೀಯವಾದ ಪರಿಹಾರಾತ್ಮಕ ಸಲಹೆ ಇದೆ. ನಾವು ಕೂಡ ನಮ್ಮ ಬದುಕಿನಲ್ಲಿ ನಾನಾ ಆಶೆಗಳನ್ನು ಹೊತ್ತು ನೆಮ್ಮದಿಯ ಸುಖ-ಶಾಂತಿಯ ಬದುಕಿಗಾಗಿ ಶಕ್ತಿಮೀರಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತೇವೆ. ಆದರೆ ಗುರಿ ಮುಟ್ಟಲಾಗುವುದಿಲ್ಲ. ಆಗ ಸೋಲಿನ ಛಾಯೆ ಆವರಿಸುತ್ತದೆ. ಅದರ ಪ್ರಭಾವದಿಂದ ಬದುಕಿನಲ್ಲಿ ನಿರಾಶೆ... ಏನೂ ಬೇಡ ಎಂಬ ನಿರ್ಲಿಪ್ತ - ನೊಂದ ಭಾವದಲ್ಲಿ ಮೌನವಾಗಿ ನಿಷ್ಟ್ರೀಯರಾಗಿ ಬಿಡುತ್ತೇವೆ. ನಮ್ಮ ಅದಮ್ಯ ಶಕ್ತಿ ಸಾಮರ್ಥ್ಯ ಹಾಗೂ ಕ್ರಿಯಾಶೀಲತೆಯನ್ನು ಮರೆತು ಖಿನ್ನರಾಗುತ್ತೇವೆ. ಆಗ ನಾವು ಈ ಕಥೆಯನ್ನು ನೆನಪಿಸಿದರೆ ಮಾನಸಿಕವಾಗಿ ಗೊಂದಲದಿಂದ ಮುಕ್ತರಾಗಬಹುದು.  
      ನಾವು ಪ್ರಯತ್ನ ಮಾಡದೆ ಸುಮ್ಮನೆ ಕೈಕಟ್ಟಿ ಕೂತು, ಗುರಿ ಮುಟ್ಟಲಿಲ್ಲ ಎಂದು ಚಿಂತಿಸಿದರೆ ಅದು ನಮ್ಮ ತಪ್ಪು. ನಾವು ಶಕ್ತಿ ಮೀರಿ ಪ್ರಯತ್ನಪಟ್ಟರೂ ಕೈಗೆ ಸಿಗದಿದ್ದರೆ ಅದು ನಮ್ಮ ತಪ್ಪಲ್ಲ. ನಾವು ಶಕ್ತಿಮೀರಿ ಪ್ರಯತ್ನಿಸಿದರೂ ಗುರಿ ಮುಟ್ಟಲಾಗದಿದ್ದಾಗ ಫಲಿತಾಂಶದ ಬಗ್ಗೆ ನಕಾರ ಭಾವ ಅಥವಾ ನಿರಾಶಭಾವ ಹೊಂದದೆ "ಕೈಗೆಟುಕದ ಫಲಿತಾಂಶಕ್ಕೆ ನಾನು ಕಾರಣನಲ್ಲ" ಎಂದು ಭಾವಿಸಿ ಮುಂದಿನ ದಾರಿಯಲ್ಲಿ ಪ್ರಯಾಣಿಸಬೇಕು. ಆ ನಿರ್ದಿಷ್ಟ ಗುರಿಗೆ ಅಂತ್ಯ ವಿರಾಮ ಹಾಕಿ ಹೊಸ ಸ್ಫೂರ್ತಿ - ಹೊಸ ಬದಲಾವಣೆಯಿಂದ ಮೈ ಕೊಡವಿ ಎದ್ದು ನಿಂತು ಮತ್ತೊಂದು ಗುರಿಯೊಂದಿಗೆ ಬದುಕು ಮುಂದುವರಿಸಬೇಕು. ಅಲ್ಲಿ ಪ್ರಯತ್ನಿಸಿದರೆ ಖಂಡಿತಾ ಗುರಿಮುಟ್ಟುವ ಸಾಧ್ಯತೆ ಇದ್ದೇ ಇರುತ್ತದೆ. ಆದರೆ ಪ್ರಯತ್ನ ನಿರಂತರವಾಗಿರಲೇಬೇಕು. ಪ್ರಯತ್ನ ನಮ್ಮ ಕೈಯಲ್ಲಿದೆ ಆದರೆ ಫಲಿತಾಂಶ ಮಾತ್ರ ನಮ್ಮ ಕೈಯಲ್ಲಿಲ್ಲ.  
     ಭೂಮಿಗೆ ಬಿದ್ದ ಬೀಜ - ಎದೆಗೆ ಬಿದ್ದ ಅಕ್ಷರ - ಫಲಿತಾಂಶಕ್ಕೆ ಪಟ್ಟ ಪ್ರಯತ್ನ ಒಂದಲ್ಲ ಒಂದು ದಿನ ಫಲ ನೀಡುತ್ತದೆ. ಆ ದಿನದವರೆಗೆ ಅವಸರ ಮಾಡದೇ ತಾಳ್ಮೆಯಿಂದ ಮುಂದುವರೆಯುತ್ತಾ ಇರೋಣ. ನಮ್ಮ ಕನಸು ನನಸಾಗುವ ಭರವಸೆಯೊಂದಿಗೆ ಧನಾತ್ಮಕವಾಗಿ ಕ್ರಿಯಾಶೀಲರಾಗೋಣ. ಭರವಸೆಯ ಬದುಕಿಗಾಗಿ ಬದಲಾಗೋಣ. ಈ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article