ಜೀವನ ಸಂಭ್ರಮ : ಸಂಚಿಕೆ - 73
Sunday, February 19, 2023
Edit
ಜೀವನ ಸಂಭ್ರಮ : ಸಂಚಿಕೆ - 73
ಮಕ್ಕಳೇ, ನಾವೆಲ್ಲಾ ಪತಂಜಲಿ ಮಹರ್ಷಿ ಬಗ್ಗೆ ಕೇಳಿದ್ದೇವೆ. ಜಗತ್ತಿಗೆ ಭಾರತ ನೀಡಿದ ಕೊಡುಗೆ ಯೋಗ. ಆ ಯೋಗ ಶಾಸ್ತ್ರದ ಪಿತಾಮಹ ಪತಂಜಲಿ ಮಹರ್ಷಿ. ಪತಂಜಲಿ ಮಹರ್ಷಿ ಹೇಳುತ್ತಾನೆ, "ಜಗತ್ತಿನ ಪ್ರತಿಯೊಂದು ವಸ್ತು ಮೂರು ಗುಣಗಳಿಂದ ಆಗಿದೆ. ಅವೇ ಸಾತ್ವಿಕ ರಜಸ್ಸು ಮತ್ತು ತಮಸ್ಸು. ಪ್ರತಿಯೊಂದರ ಬಗ್ಗೆ ತಿಳಿದುಕೊಳ್ಳೋಣ.
ಸಾತ್ವಿಕ: ಸಾತ್ವಿಕ ಎಂದರೆ ಜ್ಞಾನ ಮತ್ತು ಪ್ರಕಾಶ ಎಂದರ್ಥ. ಪ್ರತಿಯೊಂದರಲ್ಲೂ ಜ್ಞಾನ ಇದೆ. ಸುಂದರ ಜೀವನ ಕಟ್ಟಿಕೊಳ್ಳಲು ಜ್ಞಾನ ಅಗತ್ಯ. ಜ್ಞಾನ ಇಲ್ಲದಿದ್ದರೆ ಸತ್ಯ ಯಾವುದು? ಅಸತ್ಯ ಯಾವುದು? ಸೌಂದರ್ಯ ಯಾವುದು? ಕುರೂಪ ಯಾವುದು? ಒಳ್ಳೆಯದು ಯಾವುದು? ಕೆಟ್ಟದ್ದು ಯಾವುದು? ತಿಳಿಯುವುದಿಲ್ಲ. ಅದಕ್ಕೆ ಜಗತ್ತಿನಲ್ಲಿ ಜ್ಞಾನಕ್ಕೆ ಅಷ್ಟು ಮಹತ್ವ. ಆದರೆ ಸಾತ್ವಿಕತೆ ಇದ್ದು ರಜಸ್ಸು ಮತ್ತು ತಮಸ್ಸು ಇಲ್ಲದಿದ್ದರೆ ಜೀವನ ಸುಂದರ ಆಗುವುದಿಲ್ಲ.
ರಜಸ್ಸು: ರಜಸ್ಸು ಎಂದರೆ ಚಲನೆ, ಕ್ರಿಯೆ ಎಂದರ್ಥ. ಜಗತ್ತು ಎಂದರೆ ಚಲಿಸುವುದು ಎಂದರ್ಥ. ಆಕಾಶಕಾಯಗಳು ಪ್ರತಿಯೊಂದು ಚಲಿಸುತ್ತಿರುತ್ತದೆ. ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತು ಚಲಿಸುತ್ತಿರುತ್ತದೆ. ಮೇಘವಾಗಲಿ, ಗಾಳಿಯಾಗಲಿ, ನೀರಾಗಲಿ ಚಲಿಸುತ್ತಿರುತ್ತದೆ. ಪ್ರತಿಯೊಂದು ವಸ್ತುಗಳು ಚಲಿಸುತ್ತಿವೆ ಎಂದರೆ ಕೆಲಸ ಮಾಡುತ್ತಿವೆ ಎಂದರ್ಥ. ಕ್ರಿಯೆ ಇಲ್ಲದ ಯಾವ ವಸ್ತು ಇಲ್ಲ. ಪ್ರತಿಯೊಂದು ಗಿಡ ಪ್ರತಿ ಸೆಕೆಂಡ್ ಕೆಲಸ ಮಾಡುತ್ತಿರುವುದರಿಂದ ಪ್ರತಿದಿನ ಹೊಸ ಹೂ, ಹೊಸ ಹಣ್ಣು, ಹೊಸ ಚಿಗುರು ಕಾಣಲು ಸಾಧ್ಯ. ಜಗತ್ತಿನಲ್ಲಿ ಪ್ರತಿದಿನ ಹೊಸದು ಹೊಸದು ನೀಡುವುದೆಂದರೆ ಈ ನಿಸರ್ಗ. ಆದ್ದರಿಂದ ನಿಸರ್ಗ ಸದಾ ಸೌಂದರ್ಯದಿಂದ ಕೂಡಿದೆ. ಪ್ರತಿಯೊಂದು ವಸ್ತು ಸದಾ ಕೆಲಸ ಮಾಡುವುದರಿಂದ, ಅದು ಇದ್ದಂತೆ ಇರುವುದಿಲ್ಲ. ಪ್ರತಿ ಕ್ಷಣ ಬದಲಾಗುತ್ತದೆ ಮತ್ತು ನಾಶ ಹೊಂದುತ್ತದೆ.
ನಮ್ಮಲ್ಲೂ ಕೂಡ ರಜೋಗುಣ ಇದೆ. ಹಾಗಾಗಿ ನಾವು ಕೂಡ ಕೆಲಸ ಮಾಡುತ್ತೇವೆ. ಈ ಕೆಲಸದಲ್ಲಿ ಸಾತ್ವಿಕ ಗುಣ ಕೂಡಿದರೆ ಅಂದರೆ ಜ್ಞಾನದಿಂದ ಕೂಡಿದ ಕೆಲಸ ಮಾಡಿದರೆ, ಅದು ಉತ್ಪಾದಕ ಕೆಲಸವಾಗುತ್ತದೆ, ನಿರ್ಮಾಣ ಕೆಲಸವಾಗುತ್ತದೆ. ಜ್ಞಾನವಿಲ್ಲದ ಕೆಲಸದಿಂದ ಒಳ್ಳೆಯದು ಆಗಬಹುದು, ವಿನಾಶವೂ ಆಗಬಹುದು. ಜ್ಞಾನವಿದ್ದಾಗ ಪರಿಣಾಮದ ತಿಳಿವು ಇರುವುದರಿಂದ ಕಾರ್ಯಗಳು ಸುಂದರವಾಗಿರುತ್ತದೆ, ಉತ್ಪಾದಕವಾಗುತ್ತದೆ ಮತ್ತು ನಿರ್ಮಾಣ ಕೆಲಸಗಳು ಆಗುತ್ತದೆ. ನಾವು ಕೆಲಸ ಮಾಡಬೇಕಾದರೆ ತಿಳಿದು, ಜ್ಞಾನ ಪಡೆದು, ಕೆಲಸ ಮಾಡಬೇಕಾಗುತ್ತದೆ. ಇದರಿಂದ ಸುಂದರ ಜೀವನ, ಸುಂದರ ಸಮಾಜ ಮತ್ತು ಸುಂದರ ರಾಷ್ಟ್ರ ನಿರ್ಮಾಣವಾಗುತ್ತದೆ. ಕೇವಲ ಸಾತ್ವಿಕ ಮತ್ತು ರಜಸ್ಸಿನಿಂದ ಜೀವನ ಸುಂದರವಾಗುವುದಿಲ್ಲ. ತಮವೂ ಬೇಕು.
ತಮಸ್ಸು: ತಮಸ್ಸು ಎಂದರೆ ವಿಶ್ರಾಂತಿ, ಶಾಂತ ಸ್ಥಿತಿ. ಮನುಷ್ಯ ಶಾಂತಿ ಪಡೆಯುತ್ತಾ ಸೋಮಾರಿಯಾದರೆ, ಸುಂದರ ಜೀವನ ಸಾಧ್ಯವಿಲ್ಲ. ಕೆಲವು ಸಂದರ್ಭದಲ್ಲಿ ಮೌನವಾಗಿರುವುದು ಒಳ್ಳೆಯದು. ಮೌನವು ಅಗತ್ಯವಿರುವಾಗ ಮೌನವಿಲ್ಲದಿರುವುದು ಕೆಟ್ಟ ಪರಿಣಾಮವಾಗುತ್ತದೆ. ಚೆನ್ನಾಗಿ ಕೆಲಸ ಮಾಡಿದಾಗ ವಿಶ್ರಾಂತಿ ಅಗತ್ಯ. ಆ ವಿಶ್ರಾಂತಿ ಎಷ್ಟಿರಬೇಕು ಅಷ್ಟು ಇದ್ದರೆ ಉತ್ತಮ. ಕೆಲಸದಲ್ಲಿ ವಿಶ್ರಾಂತಿ ಪಡೆಯುವ ಕಲೆ ಗೊತ್ತಿದ್ದರೆ ಜೀವನ ತುಂಬಾ ಸೊಗಸಾಗುತ್ತದೆ. ಕೆಲಸದಲ್ಲೇ ವಿಶ್ರಾಂತಿ ಪಡೆಯಲು ಸಾತ್ವಿಕ ಮತ್ತು ರಜಸ್ಸು ಅಗತ್ಯ. ಅಂದರೆ ಜ್ಞಾನದಿಂದ ಕೂಡಿದ ಕೆಲಸದ ಸ್ವರೂಪ ಅರಿತು ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ. ಕೆಲಸದ ಬದಲಾವಣೆಯ ವಿಶ್ರಾಂತಿ. ಇದಾಗಬೇಕಾದರೆ ಸಾತ್ವಿಕತೆ ಮತ್ತು ರಜಸ್ಸಿನ ಬೆಂಬಲ ಬೇಕಾಗುತ್ತದೆ. ಹೀಗೆ ಜೀವನ ಸುಂದರವಾಗಲು ಸಾತ್ವಿಕ ರಜಸ್ಸು ಮತ್ತು ತಮಸ್ಸು ಒಂದನ್ನೊಂದು ಅವಲಂಬಿಸಿದೆ. ಈ ಮೂರು ಗುಣಗಳು ಪ್ರತಿಯೊಬ್ಬರಲ್ಲೂ, ಪ್ರತಿಯೊಂದರಲ್ಲೂ ಇದೆ ಎನ್ನುವುದು ಪತಂಜಲಿ ಮಹರ್ಷಿಯ ಅಭಿಪ್ರಾಯ. ಈ ಮೂರು ಗುಣಗಳು ಒಂದಕ್ಕೊಂದು ಪೂರಕವಾಗದಿದ್ದರೆ ಜೀವನ ಮಧುರವಾಗುವುದಿಲ್ಲ, ದುಃಖಮಯವಾಗುತ್ತದೆ. ಕೇವಲ ಜ್ಞಾನ ಮಾತ್ರ ಪಡೆದು, ಕ್ರಿಯೆ ಮತ್ತು ವಿಶ್ರಾಂತಿ ಇಲ್ಲದಿದ್ದರೂ ಜೀವನ ಒಳ್ಳೆಯದಾಗುವುದಿಲ್ಲ. ಅದೇ ರೀತಿ ಕ್ರಿಯೆ ಇಲ್ಲದೆ ಜ್ಞಾನ ಮತ್ತು ವಿಶ್ರಾಂತಿ ಇದ್ದರೂ ಜೀವನ ಒಳ್ಳೆಯದಾಗುವುದಿಲ್ಲ. ಹಾಗೆಯೇ ಜ್ಞಾನ ಮತ್ತು ಕ್ರಿಯೆ ಇಲ್ಲದೆ ವಿಶ್ರಾಂತಿಯಿದ್ದರೂ ಜೀವನ ಒಳ್ಳೆಯದಾಗುವುದಿಲ್ಲ. ಈ ಜ್ಞಾನಕ್ಕೆ ಶ್ರೇಷ್ಠತೆ ಇದ್ದರೂ ಅದು ಕ್ರಿಯೆ ಮತ್ತು ವಿಶ್ರಾಂತಿಗೆ ಬೆನ್ನೆಲುಬಾಗಬೇಕು. ಜ್ಞಾನದಿಂದ ಕೂಡಿದ ಕ್ರಿಯೆ ಮತ್ತು ಜ್ಞಾನದಿಂದ ಕೂಡಿದ ವಿಶ್ರಾಂತಿಯೆ ಸುಂದರ ಬದುಕು ಅಲ್ಲವೇ ಮಕ್ಕಳೆ.
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************