-->
ಅಕ್ಕನ ಪತ್ರ - 43 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 43 ಕ್ಕೆ ಮಕ್ಕಳ ಉತ್ತರ : ಸಂಚಿಕೆ - 1

ಅಕ್ಕನ ಪತ್ರ - 43 ಕ್ಕೆ
ಮಕ್ಕಳ ಉತ್ತರ : ಸಂಚಿಕೆ - 1



ಅಕ್ಕನ ಪತ್ರ 43ಕ್ಕೆ ಶಿಶಿರನ ಉತ್ತರ
     ಪ್ರೀತಿಯ ಅಕ್ಕನಿಗೆ ಶಿಶಿರ್ ಮಾಡುವ ಪ್ರೀತಿ ಮತ್ತು ಗೌರವದ ನಮಸ್ಕಾರಗಳು. ನಾನು ಕ್ಷೇಮವಾಗಿರುವೆನು. ನೀವು ನಿಮ್ಮ ಪತ್ರದಲ್ಲಿ ಬರೆದ ಕತೆ ತುಂಬಾ ಸ್ವಾರಸ್ಯಕರವಾಗಿತ್ತು. ಈ ಬಾರಿ ನನಗೆ ಜಪಾನಿನ ವೈದ್ಯರಾದ ಡಾ| ಹಿನೋಹರಾ (Shigeaki Hinahara) ಅವರ ಜೀವನೋತ್ಸಾಹದ ಬಗ್ಗೆ ಬರೆಯಬೇಕೆನಿಸಿತು.
      ಡಾ| ಹಿನೋಹರಾರವರು ಜಗತ್ತಿನ ಅತ್ಯಂತ ದೀರ್ಘಕಾಲ ವೈದ್ಯರಾಗಿ, ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಹಿರಿಯ ವ್ಯಕ್ತಿ. ತನ್ನ 75ರ ಇಳಿವಯಸ್ಸಿನಲ್ಲಿ ಪುಸ್ತಕಗಳನ್ನು ಬರೆಯಲು ಆರಂಭಿಸಿದ ಇವರು,150 ಪುಸ್ತಕಗಳನ್ನು ಬರೆದಿದ್ದಾರೆ. ಇವರ "ಲಿವಿಂಗ್ ಲಾಂಗ್, ಲಿವಿಂಗ್ ಗುಡ್" ಎಂಬ ಪುಸ್ತಕದ 12ಲಕ್ಷ ಕಾಪಿಗಳು ಮಾರಾಟವಾಗಿದೆ. ಅವರ ಪ್ರಕಾರ ಸಂತಸ ಎನ್ನುವುದು ನಿಜವಾದ ಔಷಧಿ. ಅವರು 98ರ ವಯಸ್ಸಿನಲ್ಲೂ 18ಗಂಟೆ, ವಾರಕ್ಕೆ 7ದಿನ ಕೆಲಸ ಮಾಡುತ್ತಿದ್ದರು. ಹಾಗೂ ಕೆಲಸದ ಒಂದೊಂದು ಕ್ಷಣವನ್ನು ಉತ್ಸಾಹ ಮತ್ತು ಸಂತಸದಿಂದ ಕಳೆಯುತ್ತಿದ್ದರು, ಎಂದು ಲೇಖಕಿ ನೇಮಿಚಂದ್ರ ರವರು ಬರೆದ ಬದುಕು ಬದಲಿಸಬಹುದು ಅಂಕಣದಿಂದ ನಾನು ತಿಳಿದೆ.
      ನನ್ನಿಂದ ಇನ್ನು ಕೆಲಸ ಮಾಡಲಾಗದು, ನನಗೆ ವಯಸ್ಸಾಯಿತು ಎಂದು ತನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಲ್ಲದವರಿಗೆ ಡಾ| ಹಿನೋಹರಾರವರೇ ಸ್ಪೂರ್ತಿ.
        ನಾನು 9ನೇ ತರಗತಿಯಲ್ಲಿದ್ದಾಗ ಅಕ್ಕನ ಪತ್ರವನ್ನು ಓದಲು ಆರಂಭಿಸಿದೆ. ನನಗೆ ಪತ್ರಕ್ಕೆ ಉತ್ತರಿಸಬೇಕೆಂಬ ಆಸೆ ಇದ್ದರೂ ನನ್ನಿಂದಾದೀತೆ? ನಾನು ಬರೆಯುವ ಪತ್ರ ಸರಿಯಾದೀತೆ..? ಎಂಬ ಭಯ ನನ್ನನ್ನು ಕಾಡುತ್ತಿತ್ತು. ಆದರೂ ತಂದೆ ತಾಯಿಯ ಪ್ರೋತ್ಸಾಹದಿಂದ ನಾನು ಪತ್ರವನ್ನು ಬರೆಯಲಾರಂಭಿಸಿದೆ. ತಪ್ಪಾದರೆ ಅಕ್ಕ ನಮ್ಮನ್ನು ಕ್ಷಮಿಸುತ್ತಾರೆ ಎಂಬ ನಂಬಿಕೆ. ಈಗ ಅಕ್ಕನ ಪತ್ರ ಯಾವಾಗ ಬರುತ್ತದೆ, ಅಕ್ಕ ಯಾವ ವಿಷಯದ ಬಗ್ಗೆ ಬರೆದಿರುತ್ತಾರೆ ಎಂಬ ತವಕದಿಂದ ಪತ್ರಕ್ಕೆ ಕಾಯುತ್ತಿರುತ್ತೇನೆ. ಎಷ್ಟು ಪ್ರೀತಿಯಿಂದ ನಮಗಾಗಿ ಹೊಸ ವಿಚಾರದೊಂದಿಗೆ ಪತ್ರ ಬರೆಯುತ್ತೀರಿ ಅಕ್ಕ ನಿಮಗೆ ಧನ್ಯವಾದಗಳು.
       ಶಂಭೂರು ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕಲಿಕಾ ಹಬ್ಬದಲ್ಲಿ ನಲ್ಮೆಯ ಮಕ್ಕಳ ಜಗಲಿ ಬಳಗವನ್ನು ಭೇಟಿಯಾದದ್ದು ನನಗೆ ತುಂಬಾ ಸಂಭ್ರಮ ತಂದಿದೆ. ನನಗೆ ಇದೊಂದು ಅವಿಸ್ಮರಣೀಯ ನೆನಪು. ನಿಮ್ಮೆಲ್ಲರ ಪ್ರೋತ್ಸಾಹ ಸದಾ ನಮಗಿರಲಿ. ನಿಮ್ಮ ಮುಂದಿನ ಪತ್ರಕ್ಕೆ ಕಾಯುತ್ತಾ ನನ್ನ ಪತ್ರವನ್ನು ಕೊನೆಗೊಳಿಸುತ್ತೇನೆ.
......................................... ಶಿಶಿರ್ ಎಸ್
10ನೇ ತರಗತಿ 
ಎಸ್.ಎಲ್. ಎನ್. ಪಿ. ವಿದ್ಯಾಲಯ 
ಪಾಣೆಮಂಗಳೂರು 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


       ಪ್ರೀತಿಯ ಅಕ್ಕನಿಗೆ ಭವ್ಯಶ್ರೀ ಮಾಡುವ ನಮಸ್ಕಾರಗಳು. ನಿಮ್ಮ ಪತ್ರ ತಲುಪಿತು. ಈ ಸಂಚಿಕೆಯಲ್ಲಿ ನಂಬಿಕೆಯ ಕುರಿತು ತಿಳಿಸಿದ್ದೀರಿ.
ಆತ್ಮವಿಶ್ವಾಸ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅವಶ್ಯಕವಾದ ಒಂದು ಅಂಶವಾಗಿದೆ. ನಾವು ಅಂದುಕೊಂಡಿದ್ದನ್ನು ಸಾಧಿಸಬೇಕಾದರೆ ಆತ್ಮವಿಶ್ವಾಸ, ದೃಢ ನಿಶ್ಚಯ ಇರಬೇಕು.
      ನೀವು ಹೇಳಿದ ಕಥೆಯಲ್ಲಿದ್ದ ಆನೆಯ ಹಾಗೆ ನಾವು ಎಷ್ಟೋ ಭಾರಿ ಹೀಗೆ ಮೋಸ ಹೋಗುವುದಿದೆ. ಎಂದೋ ಒಂದು ದಿನ, ಯಾವುದೋ ಕೆಲಸದಲ್ಲಿ ನಮಗೆ ಸೋಲು ಉಂಟಾಗಿದೆ ಎಂದಾದರೆ ಮುಂದೆ ನಮಗೆ ಆ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂಬ ಅಪ ನಂಬಿಕೆಯು ನಮ್ಮನ್ನು ಜೀವನದಲ್ಲಿ ಮುಂದುವರಿಯಲು ಬಿಡುವುದಿಲ್ಲ. ಗುರಿ ತಲುಪಬೇಕಾದರೆ ಪ್ರಯತ್ನ ಮಾಡುತ್ತಲೇ ಇರಬೇಕು. ಒಮ್ಮೆ, ಮತ್ತೊಮ್ಮೆ, ಹೀಗೆ ಮತ್ತೆ ಮತ್ತೆ ಪ್ರಯತ್ನ ಪಟ್ಟು ಕ್ರಿಯಾಶೀಲರಾದಾಗ ಕೊನೆಗೆ ನಮಗೆ ಯಶಸ್ಸು ಖಂಡಿತಾ ಲಭಿಸುತ್ತದೆ.
      ಹಾಗೆಯೇ ಮತ್ತೊಂದು ವಿಷಯ...
ಒಂದು ನಿಮಿಷದಲ್ಲಿ ಎಷ್ಟು ಸೊನ್ನೆ ಬರೆಯಬಲ್ಲೆನೆಂದು ಪ್ರಯೋಗಿಸಿ ನೋಡಿದೆ..
ಆದರೆ ಅಂದುಕೊಂಡದ್ದಕ್ಕಿಂತ ಮೂರು ಪಟ್ಟು ಹೆಚ್ಚಿನ ಸೊನ್ನೆಗಳನ್ನು ಬರೆದೆ. ಒಂದು ಕ್ಷಣ ಅಚ್ಚರಿಯಾಯಿತು ನನಗೆ.. ಆದರೆ ಇದರಿಂದ ನನಗೆ ಅರ್ಥವಾದದ್ದು ಇಷ್ಟೇ.. ನನಗೆ ನನ್ನ ಸಾಮರ್ಥ್ಯದ ಬಗ್ಗೆ ಸರಿಯಾದ ಅರಿವಿಲ್ಲ ಅಥವಾ ಕೀಳರಿಮೆ. ಆದರೆ ಸಾಧಿಸುವ ಛಲವಿದ್ದರೆ ಎಂದಿಗೂ ಗೆಲ್ಲಬಲ್ಲೆನು ಎಂದು.. ಅಬ್ಬಾ! ಜಗಲಿಯಿಂದ ಎಷ್ಟೊಂದು ವಿಷಯ ಕಲಿತೆ.
ಒಂದು ಹೊಸ ಲೋಕಕ್ಕೆ ಹೆಜ್ಜೆ ಇರಿಸಿದಂತಾಯಿತು. ಸಾಗರದಷ್ಟು ಆಳವಾದ ಹಾಗೂ ವಿಶಾಲವಾದ ಕಲಿಕೆಯು ನನಗೆ ಜಗಲಿಯಿಂದ ಇನ್ನೂ ದೊರಕುತ್ತದೆ. ಹೆಜ್ಜೆ ಹೆಜ್ಜೆಗೂ ಓದುವಿಕೆ ಹಾಗೂ ಬರೆಯುವಿಕೆಗೆ ಅವಕಾಶ ನೀಡುತ್ತಿರುವ ಜಗಲಿಗೆ ಸದಾ ಆಭಾರಿ.
ಇನ್ನಷ್ಟು ಹೊಸ ವಿಷಯಗಳೊಂದಿಗೆ ಮುಂದಿನ ಪತ್ರದಲ್ಲಿ ಭೇಟಿಯಾಗಿ ಅಕ್ಕ ಅಲ್ಲಿಯವರೆಗೂ ನಮಸ್ಕಾರಗಳು 
................................................... ಭವ್ಯಶೀ 
ಪ್ರಥಮ ಪಿಯುಸಿ 
ಸರಕಾರಿ ಪದವಿ ಪೂರ್ವ ಕಾಲೇಜು, ಕೋಣಾಲು
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ.
******************************************



      ನಮಸ್ತೆ ಅಕ್ಕ, ನಾವು ಚೆನ್ನಾಗಿದ್ದೇವೆ. ನಿಮ್ಮ ಕ್ಷೇಮವನ್ನು ಬಯಸುತ್ತೇವೆ. ಪರೀಕ್ಷೆ ಹತ್ತಿರ ಬರುತ್ತಿರುವ ಸಮಯದಲ್ಲಿ ಈ ಪತ್ರದ ಮೂಲಕ ನೀವು ನೀಡುತ್ತಿರುವ ಕಿವಿಮಾತು ನಮಗೆ ಆದರ್ಶ. ಆನೆಯಕತೆ ಕೇಳುವಾಗ ತಮಾಷೆ ಎಂದೆನಿಸಿದರೂ, ಪ್ರಯತ್ನಿಸಿದ ಹೊರತು ಗೆಲುವು ನಮ್ಮದಲ್ಲ ಎನ್ನುವ ಸತ್ಯ ವಿಚಾರವನ್ನು ನಮಗೆ ತಿಳಿಹೇಳುತ್ತದೆ. ಮನಸಿದ್ದರೆ ಮಾರ್ಗ ಎನ್ನುವ ಮಾತು ಹಿರಿಯರು ಸುಮ್ಮನೆ ಹೇಳಿಲ್ಲ. Positivity removes negative remarks. ಪ್ರಯತ್ನಂ ಸರ್ವತ್ರ ಸಾಧನಂ. ಹೀಗೆ ಅನೇಕ ನುಡಿ ಮುತ್ತುಗಳು ನಮ್ಮನ್ನು ಸದಾ ಪ್ರಯತ್ನ ಶೀಲರನ್ನಾಗಿಸಲು ಹುರಿದುಂಬಿಸುತ್ತದೆ. ಎಷ್ಟೋ ಬಾರಿ ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ತಿಳಿದಿರುವುದಿಲ್ಲ ನಮ್ಮ ದಿಟ್ಟ ಪ್ರಯತ್ನ ಕೆಲವೊಮ್ಮೆ ನಮ್ಮನ್ನೇ ಆಶ್ಚರ್ಯ ಪಡಿಸುತ್ತದೆ. ಪ್ರಯತ್ನಕ್ಕೆ ಫಲ ಖಂಡಿತಾ ಒಂದಲ್ಲ ಒಂದು ರೀತಿಯಿಂದ ಸಿಕ್ಕೇ ಸಿಗುತ್ತದೆ. ಅದಕ್ಕೆ ಹೇಳಿರುವುದು ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಒಂದಲ್ಲ ಒಂದು ದಿನ ಫಲ ಕೊಡುತ್ತದೆ. ಫಲಾಪೇಕ್ಷೆ ಇಲ್ಲದೆ ಶುದ್ಧ ಮನಸ್ಸಿನಿಂದ ಮಾಡುವ ಕಾರ್ಯ ಯಾವತ್ತೂ ಯಶಸ್ಸು ಪಡೆಯುತ್ತದೆ. ಪ್ರಯತ್ನವಿಲ್ಲದ ಹೊರತು ಗೆಲವು ಇಲ್ಲ, ಆಲಸಿತನವನ್ನು ಬಿಟ್ಟು ಕಾರ್ಯಶೀಲರಾಗೋಣ. ನಮ್ಮ ಸಾಮರ್ಥ್ಯವನ್ನು ಮೊದಲು ನಾವು ಕಂಡುಕೊಳ್ಳೋಣ.
.................................................. ಶ್ರಾವ್ಯ
ದ್ವಿತೀಯ ಪಿಯುಸಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************         
              

     ಅಕ್ಕಾ, ನಾನು ಸಾನ್ವಿ ಸಿ ಎಸ್. ನಾನು ಚೆನ್ನಾಗಿದ್ದೇನೆ. ನಿಮ್ಮ ಪತ್ರ ತಲುಪಿತು. ನಾವು ಒಮ್ಮೆ ಸೋತರೂ ನಮ್ಮ ಪ್ರಯತ್ನವನ್ನು ಮುಂದುವರಿಸಬೇಕು ಎಂಬುದನ್ನು ನಾನು ಅರಿತುಕೊಂಡೆ. ನಮಗೆ ಅವಕಾಶ ಮುಗಿಯಿತು ಎಂದು ತಿಳಿದುಕೊಳ್ಳಬಾರದು. ನಮ್ಮ ಪ್ರಯತ್ನಕ್ಕೆ ಖಂಡಿತವಾಗಿಯೂ ಯಶಸ್ಸು ಸಿಕ್ಕಿಯೇ ಸಿಗುತ್ತದೆ. ಪ್ರಾಣಿಗಳಿಗಿಂತ ನಾವು ಬುದ್ಧಿವಂತರಲ್ಲವೆ ? ಆದುದರಿಂದ ನಾವು ನಮ್ಮಿಂದ ಆಗುವಷ್ಟು ಪ್ರಯತ್ನ ಮಾಡಬೇಕು ಎಂಬುದು ನನ್ನ ಅಭಿಪ್ರಾಯ. ನಮ್ಮಿಂದ ಆಗದಂತದ್ದು ಯಾವುದೂ ಇಲ್ಲ. ಆದರೆ ಎಲ್ಲದಕ್ಕೂ ಪ್ರಯತ್ನ ಮುಖ್ಯ. ನೀವು ಹೇಳಿದಂತೆ ನಾನು ಮನಸ್ಸಿನಲ್ಲಿ 6೦ ಸೊನ್ನೆಗಳಾಗಬಹುದೆಂದು ಊಹಿಸಿದೆ. ಆದರೆ ನನಗೆ 89 ಸೊನ್ನೆಗಳನ್ನು ಹಾಕಲು ಸಾಧ್ಯವಾಯಿತು. ಇದರಿಂದ ನಾನು ಏನನ್ನು ತಿಳಿದುಕೊಂಡೆ ಎಂದರೆ, ನಾವೆಲ್ಲರೂ ನಮ್ಮಲ್ಲಿ ಇರುವ ಪ್ರತಿಭೆ ಇಷ್ಟೇ ಎಂದು ತಿಳಿದುಕೊಳ್ಳುತ್ತೇವೆ. ಆದರೆ ಅದು ನಾವು ಊಹಿಸಿದ್ದಕ್ಕಿಂತಲು ಹೆಚ್ಚಿರುತ್ತದೆ. ಧನ್ಯವಾದಗಳು... ನಿಮ್ಮ ನಲ್ಮೆಯ ತಂಗಿ ಸಾನ್ವಿ ಸಿ ಎಸ್....
........................................ ಸಾನ್ವಿ ಸಿ ಎಸ್ 
5ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************         



      ಅಕ್ಕನ ಪತ್ರಕ್ಕೆ ನನ್ನ ನಮಸ್ಕಾರಗಳು. ಹೇಗಿದ್ದೀರ ಅಕ್ಕ... ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ನಾನು ಪೂಜಾ. ನೀವು ಹೇಳಿದ ಕಥೆಯು ಬಹಳ ಚೆನ್ನಾಗಿತ್ತು. ನೀವು ಹೇಳಿದ ಹಾಗೆ ಪ್ರಯತ್ನಿಸದ ಹೊರತು ಕೈ ಗೆಟುಕುವ ಯಾವ ಗೆಲುವು ನಮ್ಮದ್ದಲ್ಲ. ಹೌದು, ಸುಮ್ಮನಿರುವ ಸೋಮಾರಿತನವನ್ನು ರೂಡಿಸಿಕೊಂಡರೆ ಅತ್ಯಂತ ಸಮೀಪದಲ್ಲಿ ಕೈಗೆಟುಕುವ ಗೆಲುವು ಸಿಗದಾಗುತ್ತದೆ. ನೀವು ಹೇಳಿದ ಹಾಗೆ ನಾನು ಮನಸ್ಸಿನಲ್ಲಿ ಸೊನ್ನೆಯನ್ನು ಊಹಿಸಿದೆ. ಆದರೆ ಒಂದು ನಿಮಿಷದಲ್ಲಿ ನೂರಾ ಐವತ್ತನಾಲ್ಕು ಸೊನ್ನೆಗಳನ್ನು ಹಾಕಿದ್ದೇನೆ. ಇಂತಹ ಘಟನೆಯು ನನ್ನ ಜೀವನದಲ್ಲಿಯೂ ನಡೆದಿದೆ. ನಾನು ಚಿತ್ರಕಲಾ ಗ್ರೇಡ್ ಪರೀಕ್ಷೆಯನ್ನು ಬರೆದಿದ್ದೆ. ಶಾಲಾ ಶಿಕ್ಷಕರಾದವರು ಒಂದು ವಾರದ ಮೊದಲೇ ಇದರ ತಯಾರಿಯನ್ನು ನಡೆಸಿದರು. ಶಿಕ್ಷಕರು ಇದು ತುಂಬಾ ಕಷ್ಟಕರವಾಗುತ್ತದೆ ಎಂದು ಹೇಳುತ್ತಿದ್ದರು. ಆದರೆ ಪ್ರಯತ್ನ ಪಟ್ಟರೆ ಯಾವುದು ಕಷ್ಟಕರವಲ್ಲ ಎಂದು ಹೇಳಿದರು. ಆಗ ನಾನು ಮನಸ್ಸಿಗೆ 600 ರಲ್ಲಿ 400 ಬಂದರೆ ಸಾಕು ಎಂದು ಹೇಳಿಕೊಂಡೆ. ನಾನು ಸುಮ್ಮನಿರುವ ಸೋಮಾರಿತನವನ್ನು ರೂಢಿಸಿಕೊಂಡಿದ್ದೆ. ನನ್ನ ಗುರುಗಳಾದವರು ನಂಗೆ ತುಂಬಾ ಚಿತ್ರ ಮಾಡಲು ಪ್ರೋತ್ಸಾಹ ನೀಡಿದರು. ಆಗ ನಾನು ಪ್ರಯತ್ನ ಪಟ್ಟ ಕಾರಣ ನಂಗೆ 600 ರಲ್ಲಿ 531 ಅಂಕವು ಗಳಿಸಿ ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದೇನೆ. ನಾವು ಸೋಮಾರಿತನವನ್ನು ತೋರಿಸದಿದ್ದರೆ ನಮಗೆ ಗೆಲುವು ಸಿಗುತ್ತದೆ. ಎಂದು ಹೇಳುತ್ತಾ ನನ್ನ ಪ್ರಣಾಮಗಳು......
............................................... ಪೂಜಾ 
8ನೇ ತರಗತಿ
ವಿವೇಕಾನಂದ ಕನ್ನಡ ಮಾದ್ಯಮ ಶಾಲೆ ತೆಂಕಿಲ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


       ನಮಸ್ತೆ ಅಕ್ಕ, ನಾನು ಚೆನ್ನಾಗಿದ್ದೇನೆ ನೀವು ಕೂಡ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ನನ್ನ ಹೆಸರು ಸಿಂಚನಾ. ನಿಮ್ಮ ಪ್ರೀತಿಯ ಪತ್ರ ನನಗೆ ತಲುಪಿತು. ನನಗೆ ತುಂಬಾ ಸಂತೋಷವಾಯ್ತು. ನೀವು ಹೇಳಿದ ಹಾಗೆ ದಿನಗಳು ಗೊತ್ತಾಗುತ್ತಿಲ್ಲ. ನೋಡುತ್ತಿದ್ದ ಹಾಗೆ ಫೆಬ್ರವರಿ ಬಂತು. ಮಾರ್ಚ್ ತಿಂಗಳಲ್ಲಿ ನಮಗೆ ಪಬ್ಲಿಕ್ ಪರೀಕ್ಷೆ ಇದೆ ಅಕ್ಕ ‌. ನಾನು ಪರೀಕ್ಷೆಗೆ ಓದುತ್ತಿದೆ. ಪ್ರಯತ್ನ ಪಟ್ಟರೆ ಫಲವಿದೆ. ನೀವು ಹೇಳಿದ ಹಸುವಿನ ಕಥೆ ತುಂಬಾ ಚೆನ್ನಾಗಿತ್ತು. ಒಂದು ಬೇಸರ ಸಂಗತಿ ಏನೆಂದರೆ ನಮ್ಮ ಮನೆಯಲ್ಲಿ ಹಸು ಇಲ್ಲ. ಆದರೆ ನನಗೆ ಹಸುವಿನ ಹಾಡು ಗೊತ್ತು. ಮನುಷ್ಯನಿಗೆ ಪ್ರಾಣಿಗಳೆಂದರೆ ತುಂಬಾ ಇಷ್ಟ. ಹಾಗೆ ಪ್ರಾಣಿಗಳಿಗೆ ಮನುಷ್ಯನೆಂದರೆ ತುಂಬಾ ಇಷ್ಟ. ಇಷ್ಟು ಮಾತನಾಡಲು ಅವಕಾಶ ಮಾಡಿಕೊಟ್ಟ ಪ್ರತಿಯೊಬ್ಬರಿಗೂ ನನ್ನ ಪರವಾಗಿ ಧನ್ಯವಾದಗಳು ಮುಂದಿನ ಪತ್ರದಲ್ಲಿ ಮತ್ತೆ ಭೇಟಿಯಾಗೋಣ ಅಲ್ಲಿವರೆಗೆ ಪ್ರೀತಿಯ ಸಿಂಚನಾಳ ನಮನಗಳು.
...........................................ಸಿಂಚನಾ ಶೆಟ್ಟಿ 
5ನೇ ತರಗತಿ 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇಡಿಗುಳಿ 
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************
  


ಮಕ್ಕಳ ಜಗಲಿ...
ಅಕ್ಕನ ಪತ್ರ--೪೩
   ಪ್ರೀತಿಯ ಅಕ್ಕನಿಗೆ ನಿಮ್ಮ ಪ್ರೀತಿಯ ಲಹರಿಯು ಮಾಡುವ ನಮಸ್ಕಾರಗಳು... ನಿಮ್ಮ ಪತ್ರ ಓದಿ ತುಂಬಾ ಸಂತೋಷವಾಯಿತು... ಈ ಸಲ ನಮಗೆ ಹೊಸದೊಂದು ಚಟುವಟಿಕೆಯನ್ನು ಕೊಟ್ಟಿದ್ದೀರಿ.... ಹೌದು... ನೀವಂದತೆ ನಾನು ಊಹಿಸಿದ ಲೆಕ್ಕಾಚಾರಕ್ಕೂ ಆನಂತರ ಬರೆದ ಸೊನ್ನೆಗೂ ತುಂಬಾ ವ್ಯತ್ಯಾಸವಿದ್ದುವು.... ಪ್ರಯತ್ನ ಪಡದೆ ಯಾವ ಕಾರ್ಯವು ಸಾಧ್ಯವಾಗದು ಎನ್ನುವುದನ್ನು ಈ ಚಟುವಟಿಕೆಯು ತೋರಿಸಿ ಕೊಟ್ಟಿತು... ಧನ್ಯವಾದಗಳು ಅಕ್ಕ... ನಿಮಗೊಂದು ನನ್ನ ಪ್ರೀತಿಯ ಕವನ
ಮಾತಿನಿಂದಲೇ ಮೋಡಿ 
ಮಾಡುವ ಅಕ್ಕ...
ಕುತೂಹಲ ಭರಿತ ಕಥೆ
ಹೇಳುವ ಅಕ್ಕ...
ಚಟುವಟಿಕೆ ಕೊಟ್ಟು ನೀತಿ ಪಾಠ
ಹೇಳಿಕೊಡುವ ಅಕ್ಕ....
ನಿಮ್ಮ ಮುಂದಿನ ಪತ್ರಕ್ಕಾಗಿ ನಮ್ಮನ್ನು...
ಕಾಯುತ್ತಿರುವಂತೆ ಮಾಡುತ್ತಿದೆ ನಿಮ್ಮ ಪತ್ರ....
ಅನಂತಾನಂತ ಧನ್ಯವಾದಗಳು ನಿಮಗೆ.. 
ನಮ್ಮ ಪ್ರೀತಿಯ ಅಕ್ಕ...
................................................. ಲಹರಿ ಜಿ.ಕೆ.
8ನೇ ತರಗತಿ,
ತುಂಬೆ ಆಂಗ್ಲ ಮಾಧ್ಯಮ ಶಾಲೆ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


       ಎಲ್ಲರಿಗೂ ನಮಸ್ಕಾರಗಳು. ನಾನು ಪ್ರಣಮ್ಯ.ಜಿ. ಒಂದರ ಮೇಲೊಂದರಂತೆ ನಡೆಯುತ್ತಿರುವ ಶಾಲಾ ಪರೀಕ್ಷೆಗಳ ಕಾರಣ ಅಕ್ಕನ ಪತ್ರಗಳಿಗೆ ಬಹಳ ತಡವಾಗಿಯೇ ಉತ್ತರಿಸುತ್ತಿದ್ದೇನೆ. ಆದರೆ ಅಕ್ಕನ ಪತ್ರವನ್ನು ಓದುವುದನ್ನು ಮಾತ್ರ ಮಿಸ್ ಮಾಡಿಕೊಳ್ಳುವುದಿಲ್ಲ. ಯಾಕೆಂದರೆ, ಮೆದುಳಿಗೆ ಜ್ಞಾನ ತುಂಬಬಲ್ಲ ನೀತಿಪಾಠಗಳನ್ನು ಹೊತ್ತು ತರುತ್ತಿರುವ ಪ್ರತಿಯೊಂದು ಲೇಖನ ಪತ್ರವೂ ಬಹಳಷ್ಟು ಸೊಗಸಾಗಿದೆ. ನಮ್ಮಲ್ಲಿ ತುಂಬಿರುವ ಆಲಸ್ಯ, ಕೀಳರಿಮೆಗಳನ್ನು ತೊಡೆದು, ಸಕಾರಾತ್ಮಕವಾಗಿ ಕ್ರಿಯಾಶೀಲರಾದರೆ ಜೀವನದಲ್ಲಿ ಸಫಲರಾಗಬಹುದೆಂಬ ಇಂದಿನ ನೀತಿಕತೆ ನನಗೆ ತುಂಬಾನೇ ಇಷ್ಟವಾಯಿತು. ಸಂಕುಚಿತ ಮನೋಭಾವನೆಗಳು, ನಮ್ಮಲ್ಲಿರುವ ಪ್ರತಿಭೆಗಳಿಗೆ ಅಡ್ಡಗೋಡೆಯಿದ್ದಂತೆ. ನಮ್ಮನ್ನು ನಾವೇ ಪ್ರೊತ್ಸಾಹಿಸುತ್ತಾ ಮುನ್ನಡೆಯುವುದು ಜಾಣತನದ ಲಕ್ಷಣವಾಗಿದೆ. ಅಕ್ಕ ಈ ವಾರ ನೀವು ಕೊಟ್ಟ ಮನೆ ಕೆಲಸ ನಾನು ಮಾಡಿರುವೆ. ಒಂದು ನಿಮಿಷದಲ್ಲಿ ನಾನಂದುಕೊಂಡಿರುವುದಕ್ಕಿಂತ ಇಪ್ಪತ್ತು ಸೊನ್ನೆ ಗಳು ಜಾಸ್ತಿಯೇ ಹಾಕಿದ್ದೆ. ಬಹುಶಃ ನಮ್ಮ ಪ್ರಯತ್ನ ಜಾಸ್ತಿಯಿದ್ದರೆ , ಫಲವೂ ಜಾಸ್ತಿಯೇ ದೊರೆಯುತ್ತದೆಯೆಂಬುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ ಎಂದರೆ ತಪ್ಪಲ್ಲ ಎಂಬುವುದು ನನ್ನ ಅಭಿಪ್ರಾಯ.
ಎಲ್ಲರಿಗೂ ವಂದನೆಗಳು.
................................................. ಪ್ರಣಮ್ಯ ಜಿ 
10 ನೆ ತರಗತಿ
ಸಂತ ಜಾರ್ಜ್ ಆಂಗ್ಲಮಾಧ್ಯಮ 
ಪ್ರೌಢ ಶಾಲೆ ನೆಲ್ಯಾಡಿ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************


    ನಮಸ್ತೆ ಅಕ್ಕಾ, ನಾನು ಧೀರಜ್.ಕೆ.ಆರ್.
ನಾನು ಪರೀಕ್ಷೆಯ ತಯಾರಿಯಲ್ಲಿದ್ದೇನೆ. ಹಾಗಾಗಿ ನಿಮ್ಮ ಹಿಂದಿನ ಪತ್ರಗಳಿಗೆ ಉತ್ತರಿಸಲಾಗಿರಲಿಲ್ಲ.
ಇಂದಿನ ನಿಮ್ಮ ಪತ್ರ ಬಹಳ ಸೊಗಸಾಗಿದೆ. ನೀವು ಪತ್ರದಲ್ಲಿ ನಮಗೆ ಹೇಳಿರುವ ಕಥೆಯು ಬಹಳ ನೀತಿಯುತವಾಗಿದೆ. ನಮ್ಮ ಮನೆಯಲ್ಲಿಯೂ ಸಹ ಈ ರೀತಿ ಒಮ್ಮೆ ಆಗಿತ್ತು. ನಾನು ಒಮ್ಮೆ ನಮ್ಮ ಮನೆಯ ನಾಯಿಯನ್ನು ಕಟ್ಟಿ ಹಾಕಿ ತೋಟಕ್ಕೆ ಹೋಗಿದ್ದೆ. ತೋಟಕ್ಕೆ ಹೋಗಿ ಬರುವಾಗ ನಾಯಿಯನ್ನು ಕಟ್ಟಿ ಹಾಕಿದ್ದ ಸರಪಣಿಯು ಬಿಚ್ಚಿತ್ತು. ಆದರೆ ನಾಯಿ ಮಾತ್ರ ಅಲ್ಲಿಂದ ಕದಲಿರಲಿಲ್ಲ. ನಾಯಿಯು ತನ್ನನ್ನು ಕಟ್ಟಿ ಹಾಕಿದ್ದಾರೆ ಎಂದು ಅಲ್ಲಿಯೇ ಮಲಗಿತ್ತು. ಇನ್ನು ನೀವು ಹೇಳಿದ ಹಾಗೆ ಒಂದು ಪುಟದಲ್ಲಿ 1 ನಿಮಿಷ ಸೊನ್ನೆಯನ್ನು ಬರೆದೆ. ನನ್ನ ಊಹೆಯು 90 ಆಗಿತ್ತು. ಆದರೆ ನನ್ನ ಊಹೆಯನ್ನು ಮೀರಿ 1 ನಿಮಿಷದಲ್ಲಿ ನಾನು 97 ಸೊನ್ನೆಯನ್ನು ಬರೆದಿದ್ದೇನೆ. ಇದರಿಂದ ನನಗೆ ತಿಳಿದದ್ದು ಏನೆಂದರೆ ನಮಗೆ ಅಸಾಧ್ಯವಾದದ್ದನ್ನು ಕೂಡ ಸಾಧಿಸುವ ಶಕ್ತಿ ನಮ್ಮಲ್ಲಿದೆ. ನಮ್ಮ ಗುರಿಗಿಂತ ಹೆಚ್ಚು ಸಾಧಿಸುವ ಸಾಮರ್ಥ್ಯ ನಮ್ಮಲ್ಲಿದೆ.
ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ ಅಕ್ಕಾ. ಧನ್ಯವಾದಗಳು.
.......................................... ಧೀರಜ್.ಕೆ.ಆರ್.
10ನೇ ತರಗತಿ
ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ 
ಪ್ರೌಢ ಶಾಲೆ, ರಾಮಕುಂಜ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************



        ಹರಿ ಓಂ ನಾನು ಸ್ರಾನ್ವಿ ಶೆಟ್ಟಿ, ನೀವು ಹೇಗಿದ್ದೀರಾ ನಿಮ್ಮ ಪತ್ರ ಓದಿದೆ. ನೀವು ಬರೆದ ಕಥೆಯ ಈ ಕತೆ ಎಷ್ಟು ನಿಜ ಅಲ್ವ ಅಕ್ಕ. ನೀವು ಹೇಳಿದ ಹಾಗೆ ನಾನು ಕೂಡ ಒಂದು ನಿಮಿಷ ದಲ್ಲಿ 95ಸೊನ್ನೆಗಳನ್ನು ಬರೆಯುತ್ತೇನೆ ಅಂದುಕೊಂಡಿದ್ದೆ. ಆದರೆ ನಾನು ಬರೆದ ಸಂಖ್ಯೆ 150 ಮೀರಿದ್ದು. ನಾನು ಯಾವ ಕೆಲಸವಾದರೂ ಒಂದು ಸಲ ಆಗುವುದಿಲ್ಲವೆಂದು ಕುಳಿತರೆ ಮಾಡಲು ಸಾಧ್ಯವೇ. ನಾನು ಮಾಡುತ್ತೇನೆ ಎಂಬ ಮನಸಿದ್ದರೆ ಎಲ್ಲ ಕೆಲಸವು ಸಾದ್ಯ. ಅಲ್ಲವೆ ಅಕ್ಕ. ಧನ್ಯವಾದ ಅಕ್ಕ
................................................. ಸ್ರಾನ್ವಿ ಶೆಟ್ಟಿ   
9ನೇ ತರಗತಿ 
ಓಂ ಜನಹಿತಾಯ ಇಂಗ್ಲಿಷ್ ಮೀಡಿಯಂ 
ಸ್ಕೂಲ್ ಗುಡ್ಡೆಯಂಗಡಿ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************




      ನಮಸ್ತೇ ಅಕ್ಕಾ.... ನಾನು ಪ್ರಣೀತ್. ನಾವೆಲ್ಲರೂ ಚೆನ್ನಾಗಿದ್ದೇವೆ. ನಿಮ್ಮ ಪತ್ರ ಓದಿದೆವು... ಸಂತೋಷವಾಯಿತು. ಪ್ರಯತ್ನಿಸದ ಹೊರತು ಕೈ ಗೆಟುಕಿದ ಯಾವ ಗೆಲುವೂ ನಮ್ಮದಲ್ಲ.. ಹೌದು ಅಕ್ಕಾ. ಗೆಲುವು ಎಂಬುದು ಅಷ್ಟು ಸುಲಭವಾಗಿ ಯಾರ ಕೈಗೂ ಸಿಗುವುದಿಲ್ಲ. ಗೆಲ್ಲಲೇಬೇಕೆಂಬ ಅದಮ್ಯ ಆಸೆ ಮತ್ತು ಸತತ ಪ್ರಯತ್ನ ಪ್ರಾಮಾಣಿಕವಾದ ಹೋರಾಟದಿಂದ ಗೆಲುವನ್ನು ಪಡೆಯಬಹುದು. ಹೋರಾಡಿ ಸೋಲುವುದು ನಿಜವಾದ ಸೋಲಲ್ಲ. ಪ್ರಯತ್ನಿಸದೇ ಒಪ್ಪಿಕೊಳ್ಳುವುದು ನನ್ನ ಪ್ರಕಾರ ನಿಜವಾದ ಸೋಲು.. ನಿಜ ಅಲ್ಲವೇ ಅಕ್ಕಾ.. ಮುಂಬರುವ ಪರೀಕ್ಷೆಗಳಲ್ಲಿ ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಪಡೆಯಬೇಕೆಂಬುದು ನನ್ನ ಆಸೆ ಅಕ್ಕಾ.. ಆಶೀರ್ವಾದ ಇರಲಿ ಧನ್ಯವಾದಗಳು 
................................. ಪ್ರಣೀತ್ ಡಿ.ಪೂಜಾರಿ  
4ನೇ ತರಗತಿ. 
ಎಸ್. ವಿ. ಎಸ್. ಆಂಗ್ಲ ಮಾಧ್ಯಮ ಶಾಲೆ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************


ನಮಸ್ತೆ ಅಕ್ಕಾ..... ನಾನು ನಿಭಾ. ನಿಮ್ಮ ಪತ್ರಕ್ಕಾಗಿಯೇ ಕಾಯುತ್ತಿದ್ದೆ. ಓದಿ ತುಂಬಾ ಸಂತೋಷವಾಯಿತು. ನೀವು ಹೇಳಿದಂತೆ ಪ್ರಯತ್ನ ಮಾಡುವುದನ್ನು ನಿಲ್ಲಿಸಿದರೆ ಜೀವನವೇ ನಿಂತಂತೆ. ಒಮ್ಮೆ ನಮ್ಮ ಕೈಯಲ್ಲಿ ಆಗಲಿಲ್ಲವೆಂದು ಬಿಟ್ಟುಬಿಡಬಾರದು. ಪ್ರಯತ್ನಿಸಿದರೆ ಅಸಾಧ್ಯವಾದದ್ದು ಯಾವುದು ಇಲ್ಲ. ಆದ್ದರಿಂದ ಪ್ರಯತ್ನಿಸುವುದು ಅತ್ಯುತ್ತಮ. ನೀವು ಹೇಳಿದ ಉದಾಹರಣೆಯ ಕಥೆ ತುಂಬಾ ಚೆನ್ನಾಗಿತ್ತು. ನಾವು ನಮ್ಮ ಸಣ್ಣ ವಯಸ್ಸಿನಲ್ಲಿಯೇ ಪ್ರಯತ್ನದ ಜೊತೆ ನಡೆದರೆ ಮುಂದೆಯೂ ಅದೇ ಅಭ್ಯಾಸವಾಗುತ್ತದೆ. ಅದಕ್ಕಾಗಿ ಈಗಿನಿಂದಲೇ ಪ್ರಯತ್ನಿಸುವುದನ್ನು ಕಲಿಯಬೇಕು. ನಿಮ್ಮ ಮುಂದಿನ ಪತ್ರಕ್ಕಾಗಿ ಕಾಯುತ್ತಿರುತ್ತೇನೆ. ಮುಂದಿನ ಪತ್ರದಲ್ಲಿ ಮತ್ತೊಮ್ಮೆ ಭೇಟಿಯಾಗೋಣ. ಧನ್ಯವಾದಗಳು. 
.................................................. ನಿಭಾ
9ನೇ ತರಗತಿ
ಸ ಪ ಪೂ ಕಾಲೇಜು ಕೊಂಬೆಟ್ಟು
ಪ್ರೌಢ ಶಾಲಾ ವಿಭಾಗ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************  

Ads on article

Advertise in articles 1

advertising articles 2

Advertise under the article