ಪ್ರತಿಫಲನ : ಸಂಚಿಕೆ - 9
Sunday, January 1, 2023
Edit
ಪ್ರತಿಫಲನ : ಸಂಚಿಕೆ - 9
ಮಕ್ಕಳಿಗಾಗಿ ಲೇಖನ ಸರಣಿ
ಅಂದು… ಮುಂದಕ್ಕೆ ಗುರಿಯಿದ್ದು ಹಿಂದಕ್ಕೆ ಗುರುವಿರಲು ಸಾಗಿದುದು ಧೀರ ದಂಡು ಇಂದು… ಮುಂದಕ್ಕೆ ಗುರಿಯಿಲ್ಲ ಹಿಂದಕ್ಕೆ ಗುರುವಿಲ್ಲ ಮುಗ್ಗುತಿದೆ ಹೇಡಿ ಹಿಂಡು.. ಇದು ಪ್ರಖ್ಯಾತ ರಾಷ್ಟ್ರಕವಿ ಕುವೆಂಪುರವರು ಹೇಳಿದ ಮಾತು. ಮುಂದಕ್ಕೆ ಗುರಿ ಇದ್ದು ಹಿಂದಕ್ಕೆ ಗುರುಗಳ ಪ್ರೋತ್ಸಾಹದ ಮಾತುಗಳು ಇದ್ದಾಗ ವಿದ್ಯಾರ್ಥಿಗಳ ಧೀರ ದಂಡು ಗುರಿಯತ್ತ ಸಾಗುತ್ತಿತ್ತು ಅದಕ್ಕಾಗಿ ವಿದ್ಯಾರ್ಥಿಗಳು ಸತತ ಪ್ರಯತ್ನವನ್ನೂ ಮಾಡುತ್ತಿದ್ದರು. ಇಂದು ಕಾಲ ಬದಲಾಗಿದೆ ಗುರುಗಳ ಆದರ್ಶ ಮಾತುಗಳು ಮಕ್ಕಳಿಗೆ ಬೇಕಾಗಿಲ್ಲ. ಆದುದರಿಂದಲೇ ಮುಂದಕ್ಕೊಂದು ಗುರಿಯಿಲ್ಲದೆ ಹಿಂದೆ ಗುರಿ ತೋರುವ ಗುರುವಿಲ್ಲದೆ ವಿದ್ಯಾರ್ಥಿಗಳು ಮುಗ್ಗರಿಸಿ ಬೀಳುತ್ತಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಅನಿವಾರ್ಯವೂ ಅವಶ್ಯವೂ ಆದ ವಿಷಯವೆಂದರೆ ಕಲಿಕೆಯನ್ನು ಗುರಿ ಕೇಂದ್ರೀತವಾಗಿಸುವುದು. ಸಣ್ಣ ತರಗತಿಯಲ್ಲಿ ಇದರ ಅನುಭವ ಬಾರದಿದ್ದರೂ ಸಾಧಾರಣ ಹತ್ತನೇ ತರಗತಿಗೆ ಬಂದಾಗಲಾದರೂ ನಾವೇಕೆ ಕಲಿಯಬೇಕು, ಮುಂದೆ ನಾನೇನಾಗಬೇಕು ಎಂಬ ವಿಷಯದಲ್ಲಿ ಸ್ಪಷ್ಟ ಗುರಿ ನಮ್ಮದಾಗಿರಬೇಕು. ಆ ಗುರಿಯ ಸಾಧನೆಗಾಗಿ ನಮ್ಮನ್ನು ಸತತವಾಗಿ ಪ್ರೋತ್ಸಾಹಿಸುವ ಗುರುಗಳ ಆಶೀರ್ವಾದ ನಮಗಿರಬೇಕು.
ಹಲವಾರು ಸಂದರ್ಭ ಸನ್ನಿವೇಶಗಳನ್ನು ಎದುರಿಸಿದ ಅನುಭವಿ ಗುರುಗಳು ನಮ್ಮ ಬದುಕಿನ ರೂಪುರೇಷೆಗೆ ದಾರಿ ದೀಪವಾಗುತ್ತಾರೆ. ಆದುದರಿಂದ ಗುರುಗಳ ಆಶೀರ್ವಾದದೊಂದಿಗೆ ಗುರಿಯೆಡೆಗೆ ನಡಿಗೆ ಸುಲಲಿತವಾಗಿ ನಡೆಯುತ್ತದೆ.
ಹಿಂದಿನ ಕಾಲದಲ್ಲಿ ಗುರುಗಳು ತಮ್ಮ ಶಿಷ್ಯೋತ್ತಮರನ್ನು ಹರಸಿ, ಅವರ ಸಾಮರ್ಥ್ಯಗಳನ್ನು ಪರೀಕ್ಷಿಸಿ ಮುಂದಕ್ಕೆ ಕಲಿಕೆಯ ಹಾದಿಯನ್ನು ಸೂಚಿಸುತ್ತಿದ್ದರು. ಯಥಾ ಪ್ರಕಾರ ನಡೆದ ಶಿಷ್ಯರು ಗುರಿಯೆಡೆಗೆ ಸಾಗುತ್ತಾ ಗುರುಗಳ ನಿತ್ಯ ಸ್ಮರಣೆ ಮಾಡುತ್ತಿದ್ದರು. ಆದರೆ ಇಂದು ನಮ್ಮ ಮುಂದೆ ಜೀವನದಲ್ಲಿ ಸಾಧಿಸಬೇಕಾದ ಯಾವುದೇ ಒಂದು ಸ್ಪಷ್ಟ ಗುರಿ ಇಲ್ಲದಾಗುತ್ತಿದೆ. ಎಲ್ಲವೂ ಅಯೋಮಯ. ಅಷ್ಟು ಮಾತ್ರವಲ್ಲ ಒಂದೊಂದು ಹಂತದ ವಿದ್ಯಾಭ್ಯಾಸ ಮುಗಿದಂತೆಯೇ ಆ ಗುರುಗಳು ಕಾಲಕಸವಾಗಿ ಅಯ್ಯೋ ಇವರಿಗೆ ಏನು ಗೊತ್ತು ಎಂಬ ಔದಾಸೀನ್ಯ ಬಹುತೇಕ ಶಿಷ್ಯಪರಂಪರೆಯ ಇಂದಿನ ನಿಲುವಾಗಿದೆ. ಆದುದರಿಂದಲೇ ತಮ್ಮ ಜೀವನದಲ್ಲಿ ಗುರಿ ಇಲ್ಲದೆ ಎತ್ತಲೋ ಪಯಣಿಸುವ ನಾವೆಯಂತೆ ದಾರಿತಪ್ಪಿ ಸಾಗುತ್ತಾ ಮುಗ್ಗರಿಸುತ್ತಾರೆ.
ಪ್ರೀತಿಯ ವಿದ್ಯಾರ್ಥಿ ಮಿತ್ರರೇ, ವಿದ್ಯಾರ್ಥಿ ಜೀವನದಲ್ಲಿ ಮುಂದಕ್ಕೆ ನಾನೇನು ಆಗಬೇಕೆಂಬ ಗುರಿ ನಿರ್ಣಯ ಮತ್ತು ಆ ಗುರಿಯಡೆಗೆ ನಿರಂತರವಾದ ಪಯಣ ಅತ್ಯಂತ ಅನಿವಾರ್ಯವಾಗಿದೆ ಗುರಿಯಡೆಗೆ ಸಾಗುವಾಗ ನಮ್ಮಲ್ಲಿ ದೃಢ ವಿಶ್ವಾಸ, ಸಾಧಿಸಿಯೇ ತೀರುತ್ತೇನೆ ಎಂಬ ಮನೋ ಧೈರ್ಯವಿರಬೇಕು. ಆಗ ಮಾತ್ರ ನಮ್ಮ ಜೀವನ ಉತ್ತಮವಾಗುತ್ತದೆ .
ಹಾಗಾದರೆ ಗುರಿಯನ್ನು ನಿರ್ಧರಿಸುವುದು ಹೇಗೆ? ಗುರಿ ನಿರ್ಧಾರಕ್ಕೆ ಇರುವ ಕಾಲವಾದರೂ ಯಾವುದು ?... ಸ್ನೇಹಿತರೇ ನಾವು ಸಾಧಾರಣ 10ನೇ ತರಗತಿಯ ಹಂತದಲ್ಲಾದರೂ ಮುಂದಕ್ಕೆ ಏನಾಗಬೇಕು ಎಂಬ ಗುರಿಯನ್ನು ನಿರ್ಧರಿಸಿರಬೇಕು. ಏಕೆಂದರೆ ತದನಂತರದ ವಿದ್ಯಾಭ್ಯಾಸವು ವಿಷಯಾಧಾರಿತವಾಗಿರುತ್ತದೆ. ವಿಜ್ಞಾನ, ಕಲೆ, ಸಾಹಿತ್ಯ, ತಂತ್ರಜ್ಞಾನ, ಬ್ಯಾಂಕಿಂಗ್ ಕ್ಷೇತ್ರ ಹೀಗೆ ಗುರಿಗಳು ಸಾವಿರಾರು. ಆದಕಾರಣ ಸಾಕಷ್ಟು ಚಿಂತನೆ ಆತ್ಮವಿಶ್ವಾಸಗಳಿಂದ ಪೋಷಕರು ಗುರುಗಳು ಅನುಭವಿಗಳ ಸಹಾಯದೊಂದಿಗೆ ವಿದ್ಯಾರ್ಥಿಗಳಾದ ನೀವು ಮುಂದೇನಾಗಬೇಕೆಂದು…. ನಿಮ್ಮ ಕಲಿಕೆ ಹೇಗೆ ಸಾಗಬೇಕೆಂಬ ಯೋಚನೆ ಯೋಜನೆಗಳೊಂದಿಗೆ ಕಾರ್ಯಪ್ರವೃತ್ತರಾಗಿರಿ. ನಿಮಗೆ ಶುಭವಾಗಲಿ ಪ್ರೀತಿಯಿಂದ ,
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ವಳಾಲು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 99009 00456
*******************************************