ಜಗಲಿಯ ಮಕ್ಕಳಿಗೆ : ಅಕ್ಕನ ಪತ್ರ - 42
Saturday, January 28, 2023
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 42
ಹೇಗಿದ್ದೀರಿ? ಶಾಲಾ ಪರೀಕ್ಷೆಗಾಗಿ ತಯಾರಿ... ಅಲ್ವಾ? ನಿರೀಕ್ಷೆಗಳನ್ನು ಈಡೇರಿಸಲು ನಮ್ಮೊಳಗೊಂದು ಸಣ್ಣ ಹೋರಾಟವೂ ನಡೆಯುತ್ತಿರುತ್ತದೆ.
ಒಂದು ಕಾಗೆ ಒಮ್ಮೆ ಹಂಸವನ್ನು ನೋಡಿ ತನ್ನ ಬಣ್ಣದ ಬಗ್ಗೆ ಬೇಸರ ಪಟ್ಟುಕೊಂಡಿತು. "ಎಷ್ಟೊಂದು ಬೆಳ್ಳಗೆ ನೀನು! ನಾನು ನೋಡು.... ಸುಂದರವಾಗಿಲ್ಲ" ಎಂದಿತು. ಆಗ ಹಂಸವು ನನಗಿಂತಲೂ ನೋಡಲು ಸುಂದರವಾಗಿ ಗಿಳಿ ಇದೆ. ಕೆಂಪು ಮತ್ತು ಹಸಿರು ಎರಡು ಬಣ್ಣಗಳಿವೆ ಎಂದಿತು. ಕಾಗೆ ಗಿಳಿಯ ಬಳಿ ಹೋಗಿ ತನ್ನ ಬೇಸರವನ್ನು ಹೇಳಿಕೊಂಡಿತು. ಆಗ ಗಿಳಿಯು, "ನನಗಿಂತಲೂ ಬಣ್ಣ ಬಣ್ಣ ವಾಗಿರುವುದು ನವಿಲು. ಅದು ನೋಡಲು ತುಂಬಾ ಸುಂದರವಾಗಿದೆ" ಎಂದಿತು. ಕಾಗೆ ಅಲ್ಲಿಂದ ನವಿಲಿನ ಬಳಿಹೋಗಿ ತನ್ನ ಅಸಮಾಧಾನವನ್ನು ಹೇಳಿಕೊಂಡಿತು. ಆಗ ನವಿಲು, ನೀವು ಎಷ್ಟು ಅದೃಷ್ಟವಂತರು! ಎಷ್ಟು ಬಣ್ಣವಿದ್ದರೇನು? ನಾನು ಪಂಜರದೊಳಗಿದ್ದೇನೆ. ಬಂಧನದ ಬದುಕು ಸಾಕಾಗಿದೆ. ನನ್ನೊಳಗಿನ ಕನಸುಗಳ ಬಣ್ಣ ಮಾಸಿದೆ. ಇನ್ನೆಲ್ಲಿಯ ಖುಷಿ ? ಎಂದಿತು. ಇದನ್ನು ಕೇಳಿದ ಕಾಗೆ ಬಹಳಷ್ಟು ಸಮಾಧಾನ ಪಟ್ಟುಕೊಂಡು... ದೇವರು ದೊಡ್ಡವನು! ನಾನೆಷ್ಟು ಸ್ವತಂತ್ರ ವಾಗಿ ಇರಬಲ್ಲೆ...! ನನ್ನ ಅಸ್ತಿತ್ವದ ಕುರುಹು ಈ ಬಣ್ಣ. ಇನ್ನೆಂದೂ ಈ ಬಗ್ಗೆ ಮರುಗಲಾರೆ ಎನ್ನುತ್ತಾ ಸಂತಸದಿಂದ ಹಾರಿಹೋಯಿತು. ಕಥೆ ಇಲ್ಲಿಗೆ ಮುಗಿಯಿತು.
ನಾವೂ ಬಹಳಷ್ಟು ಸಲ ಹೀಗೆಯೇ ಕೊರಗುತ್ತಾ, ಇನ್ನೊಬ್ಬರಿಗೆ ಹೋಲಿಸುತ್ತಾ ಮಾನಸಿಕ ವೇದನೆಯಲ್ಲಿ ಬೇಯುತ್ತೇವೆ. ಈ ಜಗತ್ತಿನಲ್ಲಿ ಎಲ್ಲರೂ ವಿಭಿನ್ನ! ಸುಮಾರು ಎಂಟು ಬಿಲಿಯನ್ ನಷ್ಟಿರುವ ಪ್ರಪಂಚದ ಜನರಲ್ಲಿ ಕೆಲವೊಂದು ಹೋಲಿಕೆಗಳನ್ನು ಹೊರತುಪಡಿಸಿದರೆ, ಸಂಪೂರ್ಣವಾಗಿ ಇನ್ನೊಬ್ಬರಂತಿಲ್ಲ ಅಲ್ವಾ? ಹಾಗಾಗಿಯೇ ಬದುಕು ಇಷ್ಟೊಂದು ಬಣ್ಣ ತುಂಬಿಕೊಂಡಿರುವುದು! ಈ ನಡುವೆ ಇನ್ನೊಬ್ಬರಿಗಿರುವ ಅನುಕೂಲ, ಬಣ್ಣ, ಸೌಂದರ್ಯ, ಜಾಣ್ಮೆ,... ಹೀಗೆ ನಾವೇ ಪಟ್ಟಿಮಾಡಿಕೊಂಡಿರುವ ಇಂತಹ ಕೆಲವು ಹೋಲಿಕೆ ಮಾಡುವ ವಿಚಾರಗಳು ಎಷ್ಟೊಂದು ಅರ್ಥಹೀನ....! ಅವರ ಕೆಟ್ಟತನ ನನ್ನಲ್ಲಿ ಇಲ್ಲ... ಎಂದು ನಾವು ಸಮಾಧಾನ ಪಟ್ಟುಕೊಳ್ಳುವುದಿಲ್ಲ....! ಹೋಲಿಸುವ ವ್ಯಕ್ತಿ, ಸಂದರ್ಭಗಳಲ್ಲಿ ನಮ್ಮ ಪರಿಸ್ಥಿತಿ ಅವರಿಂತ ಹೇಗೆ ವಿಭಿನ್ನ ಅನ್ನುವುದನ್ನು ಧನಾತ್ಮಕವಾಗಿ ಆಲೋಚಿಸುತ್ತಾ ಹೋದಂತೆ ನೆಮ್ಮದಿ ನಮ್ಮದಾಗುತ್ತದೆ. ಇನ್ನೊಬ್ಬರಂತೆ ಉತ್ತಮವಾಗಲು ಪ್ರಯತ್ನಿಸುವ ಬದಲಾಗಿ, ಹೋಲಿಸುತ್ತಾ ವ್ಯಥೆ ಪಟ್ಟುಕೊಂಡೇ ಇದ್ದರೆ ಬದುಕು ಮುಗಿದೇ ಹೋಗುತ್ತದೆ.
ಅರುಣಿಮಾ ಸಿನ್ಹ ಸಾಧನೆಗೆ ಅವರ ಕೃತಕ ಕಾಲು ಅಡ್ಡ ಬರಲಿಲ್ಲ. ರೋವನ್ ಆಟ್ಕಿನ್ಸನ್, ಮಿಸ್ಟರ್ ಬೀನ್ ಆಗಿ ಜನಮಾನಸದಲ್ಲಿ ಸಂಭ್ರಮದ ನೆನಪಾಗಿ ಉಳಿದಿರುವುದು ಸತ್ಯ! ಅಬ್ದುಲ್ ಕಲಾಂ ಅವರ ಬಡತನ 'ಕ್ಷಿಪಣಿ ಮಾನವ' ರಾಗಲು ಅಡ್ಡಿಯಾಗಲಿಲ್ಲ....! ನಿಕೋಲಸ್ ಜೇಮ್ಸ್ ವುಜಿಕಿಕ್ ಎನ್ನುವ ಆಸ್ಟ್ರೇಲಿಯಾ ದ, ಎರಡೂ ಕೈ ಕಾಲುಗಳಿಲ್ಲದ ಈಜುಪಟು, ಲಕ್ಷಾಂತರ ಜನರಿಗೆ ಉಪನ್ಯಾಸ ನೀಡುತ್ತಾ ಬದುಕನ್ನು ಗೆದ್ದವರು! ಇನ್ನು ನೀವೂ ಹೀಗೆಯೇ ಪಟ್ಟಿ ಮಾಡಬಹುದು.....!
ನಮ್ಮೊಳಗಿನ ಸಾಮರ್ಥ್ಯವನ್ನು, ನಮಗಿರುವ ಅವಕಾಶವನ್ನು ಗುರುತಿಸಿಕೊಂಡು, ನಾವಿರುವ ಪರಿಸ್ಥಿತಿಯಲ್ಲಿ ಇನ್ನಷ್ಟು ಉತ್ತಮವಾಗಿ ಬದುಕಲು ಸಾಧ್ಯವಾದರೆ ಜೀವನ ಸಂಭ್ರಮವಾಗುತ್ತದೆ. ನಮ್ಮ ನಡುವೆ ಇರುವ ಗೆಳೆಯ ಗೆಳತಿಯರ ಜೊತೆ ಇಂತಹ ವಿಚಾರಗಳನ್ನು ಹಂಚಿಕೊಳ್ಳೋಣ. ನಿಮ್ಮೊಂದಿಗೆ ಮಾತನಾಡುವ ಬಹಳಷ್ಟು ವಿಚಾರಗಳು ಆಳವಾಗಿ ನನ್ನನ್ನೂ ಕಾಡಿದ್ದಿದೆ.....!
ಬದುಕೆನ್ನುವ ನಿತ್ಯ ಪರೀಕ್ಷೆ ಯ ನಡುವೆ ಶಾಲೆಯ ಪರೀಕ್ಷೆಗೂ ತಯಾರಾಗಬೇಕು... ಈ ನಡುವೆ ನಾವೇ ನಿರ್ಧರಿಸಿಕೊಂಡ ಗುರಿಯೆಡೆಗೆ ತಲುಪುವಲ್ಲಿ ಪ್ರಾಮಾಣಿಕ ಪ್ರಯತ್ನಗಳು ಸಾಗಲಿ. ಪ್ರತಿದಿನವೂ ನಮ್ಮದಾಗಲಿ.
ಕಳೆದ ಬಾರಿಯ ಪತ್ರಕ್ಕೆ ಉತ್ತರವಾದ ಶ್ರಾವ್ಯ, ವೈಷ್ಣವಿ ಕಾಮತ್, ಶಿಶಿರ್ ಎಸ್, ಪ್ರಿಯ, ಗೀತಾಲಕ್ಷ್ಮಿ, ಸ್ರಾನ್ವಿ ಶೆಟ್ಟಿ, ಪ್ರಣಮ್ಯ ಜಿ.... ಹಾಗೂ ಪತ್ರವನ್ನು ಓದುತ್ತಿರುವ ಎಲ್ಲರ ಪ್ರೀತಿಗೆ ವಂದನೆಗಳು.
ಆರೋಗ್ಯ ಜೋಪಾನ. ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************