ಜಗಲಿಯ ಮಕ್ಕಳಿಗೆ : ಅಕ್ಕನ ಪತ್ರ - 41
Saturday, January 14, 2023
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 41
ನಮಸ್ತೆ ಮಕ್ಕಳೇ, ಹೇಗಿದ್ದೀರಿ...? ವಿವೇಕಾನಂದ ಜಯಂತಿ, ಸಂಕ್ರಾಂತಿ - ಎಳ್ಳು ಬೆಲ್ಲ, ಪೊಂಗಲ್, ಗಣರಾಜ್ಯೋತ್ಸವ.... ಸಂಭ್ರಮಕ್ಕೆ ಎಷ್ಟೊಂದು ಕಾರಣಗಳು! ನಮ್ಮ ದೇಶದ ಇಂತಹ ವೈವಿಧ್ಯಮಯ ಸಂಪ್ರದಾಯಗಳು ರಾಷ್ಟ್ರವನ್ನು ಶ್ರೀಮಂತ ಗೊಳಿಸಿವೆ. ಬದುಕನ್ನು ಹೆಚ್ಚು ಅರ್ಥಪೂರ್ಣವನ್ನಾಗಿಸುತ್ತವೆ.
ಒಬ್ಬ ರಾಜನಿದ್ದ. ಪ್ರಜೆಗಳಿಗೆ ಅವನೊಂದು ಅವಕಾಶವನ್ನಿತ್ತ. ಅವರು ಯಾವ ವಸ್ತುಗಳನ್ನು ತಂದರೂ ಅದಕ್ಕೆ ಯೋಗ್ಯ ಬೆಲೆಯನ್ನು ನೀಡಿ ಖರೀದಿಸುತ್ತೇನೆ ಎಂದ. ಜನರೆಲ್ಲರೂ ಅತ್ಯಂತ ಉತ್ಸಾಹದಿಂದ ಏನೇನೋ ವಸ್ತುಗಳನ್ನು ತಂದು ಹಣವನ್ನು ಪಡೆದುಕೊಂಡರು. ವರ್ಷಕ್ಕೊಮ್ಮೆ ಇಂತಹ ದಿನವನ್ನು ಇಟ್ಟುಕೊಂಡಿದ್ದ. ತನ್ನ ಪ್ರಜೆಗಳೆಲ್ಲರೂ ಶ್ರೀಮಂತರಾಗಿರಬೇಕು ಎನ್ನುವ ಬಯಕೆ ಅವನದು. ಆ ದಿನದ ಕೊನೆಯ ವ್ಯಕ್ತಿ ತನ್ನ ಸರದಿಗಾಗಿ ಕಾಯ್ತಾ ಇದ್ದ. ಎಲ್ಲರೂ ತೆರಳಿದ ಬಳಿಕ ರಾಜನ ಬಳಿ ಬಂದ. ಅವನಲ್ಲಿ ಕೊಡುವುದಕ್ಕೆ ಏನೇನೂ ಇರಲಿಲ್ಲ. ಹರಿದ ಬಟ್ಟೆಯಲ್ಲಿ ಕಟ್ಟಿದ ಗಂಟನ್ನು ರಾಜನೆದುರು ತೆರೆದ. "ಮಹಾರಾಜ.. ನಾನು ಬಡವ. ಬಹಳ ಕಾಲಗಳಿಂದ ಉಪಯೋಗಿಸಿ ಹರಿದ ಬಟ್ಟೆಗಳದ್ದೇ ಗಂಟು ಇದು. ನನ್ನ ಅರುವತ್ತು ವರ್ಷಗಳ ಬಡತನವನ್ನೇ ಹೊತ್ತು ತಂದಿದ್ದೇನೆ.. ಸ್ವೀಕರಿಸುತ್ತೀರಾ?" ಎಂದ. ರಾಜ ಒಂದು ಕ್ಷಣ ಏನೂ ತೋಚದೆ ಸುಮ್ಮನಾದ. ಆದರೆ ಏನು ತಂದರೂ ಸ್ವೀಕರಿಸುತ್ತೇನೆಂದು ಪ್ರಜೆಗಳಿಗೆ ಮಾತು ಕೊಟ್ಟಿದ್ದ. ಇಲ್ಲಿಯೂ ಪಾಲಿಸುತ್ತೇನೆ ಎಂದ. ಬಡವ ರಾಜನನ್ನು ಎಚ್ಚರಿಸಿದ. ಯೋಚನೆ ಮಾಡಿ. "ನನ್ನ ಬಡತನವನ್ನು ಖರೀದಿಸಿ ಮುಂದೆ ಪಶ್ಚಾತ್ತಾಪ ಪಡಬೇಡಿ"ಎಂದ. ಆಗ ರಾಜನು, "ನಾನು ನುಡಿದ ಮಾತುಗಳಿಗೆ ವಿರುದ್ಧವಾಗಿ ನಡೆಯುವುದಿಲ್ಲ. ಸತ್ಯವನ್ನು ಪಾಲಿಸುತ್ತೇನೆ. ನನ್ನ ಇಡೀ ರಾಜ್ಯವನ್ನೇ ನಿನಗೆ ಬಿಟ್ಟುಕೊಡುತ್ತೇನೆ" ಎಂದ. ಆಗ ಬಡವನು, ನನ್ನ ವಸ್ತುವಿಗೆ ನಾನೇ ಬೆಲೆಯನ್ನು ನಿರ್ಧರಿಸುತ್ತೇನೆ. ನನಗೆ ನಿನ್ನ ರಾಜ್ಯ ಬೇಡ. ಖಜಾನೆಯಿಂದ ಬೇಕಾದ್ದಷ್ಟನ್ನು ತೆಗೆದುಕೊಳ್ಳುತ್ತೇನೆ ಎಂದ. ರಾಜ ಒಪ್ಪಿದ. ಬಡವ ಖುಷಿಯಿಂದ ಮನೆಗೆ ತೆರಳಿದ.
ರಾಜನು ಬಡವನ ದಾರಿದ್ರ್ಯವನ್ನು ಖರೀದಿಸಿದ. ಆ ದಿನ ರಾಜನಿಗೊಂದು ಕನಸು ಬಿತ್ತು. ಆ ಕನಸಿನಲ್ಲಿ, ಲಕ್ಷ್ಮಿ ದೇವಿ ಬಂದು ನೀನು ದಾರಿದ್ರ್ಯ ವನ್ನು ಮನೆಗೆ ತಂದ ಮೇಲೆ ನಾನಿಲ್ಲಿ ಇರುವುದಿಲ್ಲ ಎಂದಳು. ಆಗ ರಾಜನು, ಹೊರಟು ಹೋಗು. ನಿನ್ನ ಅವಶ್ಯಕತೆ ಇಲ್ಲ ಎಂದನು. ನಂತರ ಅಧಿಕಾರ ದೇವತೆ, ಬಳಿಕ ವಿಜಯ ದೇವತೆ. ಹೀಗೆ ಮೂವರೂ ಹೊರಟು ಹೋದರು. ಐಶ್ವರ್ಯದಿಂದ ಅಧಿಕಾರ, ಅಧಿಕಾರದಿಂದ ವಿಜಯ ಎನ್ನುವುದು ಅವರ ವಾದವಾಗಿತ್ತು. ಮೂವರನ್ನೂ ಕಳುಹಿಸಿದ ರಾಜ. ನಾಲ್ಕನೆಯವಳಾಗಿ ಸತ್ಯ ದೇವತೆ ಬಂದು, ರಾಜಾ... ನಾನೂ ತೆರಳುತ್ತೇನೆ ಎಂದಳು. ಆಗ ರಾಜನು, ನೀನು ಯಾರು ಎಂದ. ನಾನು ಸತ್ಯ ದೇವತೆ ಎಂದಳಾಕೆ. ಆಗ ರಾಜನು, ನಿನಗೆ ಹೋಗುವ ಅಧಿಕಾರವಿಲ್ಲ. ನಾನು ನಿನ್ನನ್ನು ಖರೀದಿಸಿದ್ದೇನೆ. ನಿನಗಾಗಿ ಎಲ್ಲರನ್ನೂ ತ್ಯಾಗ ಮಾಡಿದ್ದೇನೆ ಎಂದ. ಅದಕ್ಕೆ ಸತ್ಯ ದೇವತೆಯು, ಅಧಿಕಾರ, ಐಶ್ವರ್ಯ, ವಿಜಯ ಇದ್ದರೇನೇ ಸತ್ಯಕ್ಕೆ ಬೆಲೆ. ಇಲ್ಲದಿದ್ದರೆ ನನ್ನನ್ನು ಕೇಳುವವರಾರು?ಎಂದಳು. ಯಾರು ಕೇಳದಿದ್ದರೂ ನಾನು ಕೇಳುತ್ತೇನೆ ಎಂದ ರಾಜ. ಸತ್ಯ ದೇವತೆ ಸಂತೋಷಿತಳಾದಳು. ಹೋದವರೆಲ್ಲಾ ಹಿಂತಿರುಗಿ ಬಂದರು. ನೀವ್ಯಾಕೆ ಬಂದಿರಿ? ಎಂದ ರಾಜ. ಆಗ ಆ ಮೂವರೂ, ಸತ್ಯವೇ ಇಲ್ಲದ ಮೇಲೆ, ಐಶ್ವರ್ಯ, ಅಧಿಕಾರ, ವಿಜಯ ಎಲ್ಲವೂ ಸುಳ್ಳಾಗುತ್ತದೆ. ನಮಗೆ ಬೆಲೆಯೇ ಇರುವುದಿಲ್ಲ ಎಂದರು!
ಮೌಲಿಕ ಬದುಕನ್ನು ಕಟ್ಟಿಕೊಳ್ಳುವುದೆಂದರೆ ಇದು. ಇತಿಹಾಸ, ಪುರಾಣಗಳು ಬದುಕಿನ ಪಾಠವಾಗುವುದು ಹೀಗೆಯೇ. ಯುವಜನರ ಮೇಲೆ ಅಪಾರ ನಂಬಿಕೆಯನ್ನು ಇಟ್ಟುಕೊಂಡವರು ಸ್ವಾಮಿ ವಿವೇಕಾನಂದರು. ದೇಶಕ್ಕಾಗಿ ನನ್ನ ಕೊಡುಗೆ ಏನು? ನನ್ನ ದೇಶವನ್ನು ಸಾಂಸ್ಕೃತಿಕ ವಾಗಿ, ಆರ್ಥಿಕವಾಗಿ ಶ್ರೀಮಂತ ಗೊಳಿಸುವಲ್ಲಿ ನಾವೇನು ಮಾಡಬಹುದು? ಬದುಕಿನ ಸಿಹಿ - ಕಹಿಗಳನ್ನು ಸಮಾನವಾಗಿ ಸ್ವೀಕರಿಸುತ್ತಾ, ಸಿಕ್ಕಿರುವ ಸೀಮಿತ ದಿನಗಳ ಬದುಕಿನಲ್ಲಿ ಖುಷಿಯನ್ನು ಹಂಚುತ್ತಾ, ಸ್ವಾಭಿಮಾನದಿಂದ ಬಾಳುವಂತಾಗಬೇಕಾದರೆ ನಾವು ಹೇಗಿರಬೇಕು?ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವದ ಮಣ್ಣಿನಲ್ಲಿ ಹುಟ್ಟಿ, ಏಕತೆಯ ಮಡಿಲಿನಲ್ಲಿ ಬೆಳೆಯುತ್ತಿರುವ ನಾವು ಪುಣ್ಯವಂತರಲ್ವೇ?
ಯೋಚನೆಗಳು ವಿಸ್ತಾರವಾಗಲಿ. ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ತೀರಲ್ಲಾ? ಕಳೆದ ಬಾರಿಯ ಪತ್ರವನ್ನೋದಿ ಉತ್ತರ ಬರೆದ ಭವ್ಯಶೀ, ಪ್ರಣಮ್ಯ ಜಿ, ಲಹರಿ.ಜಿ.ಕೆ., ಸಾತ್ವಿಕ್ ಗಣೇಶ್, ನಿಭಾ, ಶಿಶಿರ್ ಎಸ್, ಸಿಂಚನಾ ಶೆಟ್ಟಿ ಹಾಗೂ ಓದಿದ ಎಲ್ಲರಿಗೂ ವಂದನೆಗಳು.
ಆರೋಗ್ಯ ಜೋಪಾನ. ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ. ಅಲ್ಲಿಯವರೆಗೆ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************