ಸಂಚಾರಿಯ ಡೈರಿ : ಸಂಚಿಕೆ - 26
Friday, January 13, 2023
Edit
ಸಂಚಾರಿಯ ಡೈರಿ : ಸಂಚಿಕೆ - 26
ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಶುಭಕೋರಿಕೆ ಸ್ವಲ್ಪ ತಡವಾಯಿತು ಕ್ಷಮಿಸಿ. ಸಂಚಾರಿ ಡೈರಿಯ 2022ರ ಅನುಭವ ಕಥನ ಕೇಳಿ.....
1 ಜನವರಿ 2022ರಂದು ಹೊಸ ವರ್ಷ ಆಚರಿಸಿದ್ದು ಅಸ್ಸಾಂನ ಗೋಗಾಮುಖ್ ಎಂಬ ಸಣ್ಣ ಹಳ್ಳಿಯಲ್ಲಿ. ಸಾಸಿವೆ ಹೊಲದ ಹಳದಿ ಹೂವಿನ ಸೌಂದರ್ಯೋಪಾಸನೆಗೆ ತುಡಿತಗೊಂಡಿತ್ತು. ಒಂದು ವಾರದ ಬಳಿಕ ಅಲ್ಲಿಂದ ತುಂಬಾ ದೂರವಲ್ಲದ ಲಖಿಂಪುರ್‌ಗೆ ಪ್ರಯಾಣ ಬೆಳೆಸಿ ಅಲ್ಲೂ ಹಳ್ಳಿ ಸೌಂದರ್ಯ ಕಂಡು ಉಲ್ಲಸಿತಗೊಂಡೆ. ಲಖಿಂಪುರ್‌ನಿಂದ ಉಡಾಲ್ಗುರಿಗೆ ಬಂದು ಅಲ್ಲಿ ಜನವರಿ ತಿಂಗಳಿನ ಅಸ್ಸಾಮಿನ ದೊಡ್ಡ ಹಬ್ಬ ಭೋಗಾಲಿ ಬಿಹುವಿನ ಸಿಹಿ ತಿನಿಸುಗಳು, ಹುಲ್ಲಿನ ಮನೆಯನ್ನು ದಹನ ಮಾಡುವ, ನೃತ್ಯ ಎಲ್ಲವನ್ನೂ ಕಂಡೆ.
ಉಡಾಲ್ಗುರಿಯಿಂದ ನಾನು ಯೋಜಿಸಿದ್ದು ಮಣಿಪುರ್‌ಗೆ ಆದರೆ ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ಏಪ್ರಿಲ್‌ನಲ್ಲಿ ಬೋಹಾಗ್ ಬೀಹೂ ಇದ್ದಿದ್ದರಿಂದ ನಾನು ಮತ್ತೆ ಅಸ್ಸಾಮ್ ಬರೋಣ ಎಂದು ಒಡಿಶಾ ರಾಜ್ಯದ ಪ್ರವಾಸದ ಯೋಜನೆ ಹಾಕಿಕೊಂಡಿದ್ದೆ. ಒಡಿಶಾದ ರಾಜಧಾನಿ ಭುವನೇಶ್ವರದ ಅಕ್ಕಪಕ್ಕದ ಪ್ರವಾಸೀ ತಾಣಗಳ ಸಂದರ್ಶನ ಶುರುವಾಗಿತ್ತು. ಬೌದ್ಧ ತಾಣ ಧೌಳಿ, ಜೈನರ ಗುಹಾಂತರ ವಿಹಾರಗಳಾದ ಖಂದಗಿರಿ-ಉದಯಗಿರಿ ಗುಹೆಗಳನ್ನು ಕಂಡೆ. ತದನಂತರ ಅತ್ಯದ್ಭುತ ವಾಸ್ತುಶಿಲ್ಪಕ್ಕೆ ಹೆಸರಾದ ಲಿಂಗರಾಜ ದೇವಾಲಯವನ್ನೂ ಕಂಡು ಪುರಿಯ ಜಗನ್ನಾಥನ ಸನ್ನಿಧಿಗೆ ತೆರಳಿದೆ. ಅದು ನನ್ನ ಜೀವಮಾನದ ಮೊದಲ ಭೇಟಿ. ಒಡಿಶಾದ ಬಗ್ಗೆ ಕೇಳಿದ್ದೆನಾದರೂ, ಭೇಟಿ ನೀಡಿರಲಿಲ್ಲ. ಜಗದೊಡೆಯ ಜಗನ್ನಾಥನ ದರ್ಶನದ ಬಳಿಕ ನಾನು ಕೊನಾರ್ಕ್‌ನ ಸೂರ್ಯ ದೇವಾಲಯಕ್ಕೆ ತೆರಳಿದೆ. ಅಲ್ಲಿನ ವಾಸ್ತುಶಿಲ್ಪ !ವ್ಹಾಹ್! ಅಮೋಘ ! ಅಲ್ಲಿಂದ ಪಕ್ಕದಲ್ಲೇ ಇದ್ದ ಕಾಕತ್‌ಪುರ್ ಎಂಬ ಸಣ್ಣ ಹಳ್ಳಿಯಲ್ಲಿ ಒಡಿಶಾದ ಇನ್ನಷ್ಟು ವಿಚಾರಗಳನ್ನು ತಿಳಿದೆ.
ಅದಾದ ಕೆಲವು ದಿನಗಳ ನಂತರ ಮತ್ತೆ ಅಸ್ಸಾಂಗೆ ತೆರಳೋ ಅವಕಾಶ ಬಂದೊದಗಿತು. (ಏಪ್ರಿಲ್ ತಿಂಗಳ ಭೋಹಾಗ್ ಬೀಹೂ ಇನ್ನು ಬಂದಿರಲಿಲ್ಲ) ಅಸ್ಸಾಂನ ಜೋರ್ಹಾಟ್, ಅಲ್ಲಿಂದ ವಿಶ್ವದ ಅತೀ ದೊಡ್ಡ ನದೀದ್ವೀಪ ಮಾಜುಲಿಗೆ ತೆರಳಿದೆ. ಅಲ್ಲಿಂದ ಬೆಂಗಳೂರಿಗೆ ಬಂದು, ಉತ್ತರ ಕನ್ನಡ ಜಿಲ್ಲೆಯ ಕೆಲವಾರು ಪ್ರವಾಸೀ ತಾಣಗಳಾದ ಶಿರಸಿ, ಗೋಕರ್ಣ ಅಂತೆಲ್ಲಾ ತಿರುಗಾಡಿದಾಗ, ಏಪ್ರಿಲ್ ತಿಂಗಳು ಬಂದಾಗಿತ್ತು. ಅಸ್ಸಾಂನ ಬೋಹಾಗ್ ಬೀಹೂ ವೈಭವ ನೋಡಲೇ ಬೇಕಿತ್ತು, ಬೀಹೂ ನೃತ್ಯ ಮಾಡಲೇಬೇಕಿತ್ತು. ಆ ಮಧ್ಯೆ ಅಸ್ಸಾಂನ ಕಾರ್ಬಿ ಬುಡಕಟ್ಟು ಜನಾಂಗದವರೇ ನೆಲೆಸಿರೋ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯನ್ನೂ ಸಹ ನೋಡಿ ಬಂದೆ. ಅದೇ ಸಮಯಕ್ಕೆ ನನ್ನ ಅಸ್ಸಾಂನ ಮಿತ್ರ ಕರ್ನಾಟಕ ನೋಡಬೇಕು ಕಣೋ, ಈ ಬಾರಿನಾದ್ರೂ ಮೈಸೂರು ಅರಮನೆ ತೋರಿಸು ಅಂದಿದ್ದ. ಆತನ ಇಚ್ಛೆಯಂತೆ ಬೆಂಗಳೂರು, ಮೈಸೂರು, ಉಡುಪಿ, ಮಂಗಳೂರು ಎಂದೆಲ್ಲಾ ಸುತ್ತಾಡಿಸಿ, ನಾನು ತ್ರಿಪುರಾ ರಾಜ್ಯದ ಪ್ರವಾಸ ಕೈಗೊಂಡಿದ್ದೆ. ಅಲ್ಲಿ ತೆರಳೊ ದಾರೀಲಿ ಅಸ್ಸಾಂನ ಬೊಂಙಾಯಿಗಾಂವ್, ಜೋಗಿಗುಫಾ ನೋಡಿ, ತ್ರಿಪುರಾ ರಾಜ್ಯದ ಕೈಲಾಶ್‌ಶಹರ್ ತೆರಳಿದೆ. ಅಲ್ಲಿ ತ್ರಿಪುರಾದ ಹಳ್ಳಿ ಜೀವನದ ಮತ್ತೊಂದು ನೋಟ ಕಂಡಿತ್ತು. ಅಲ್ಲಲ್ಲಿ ಮಾನವ ನಿರ್ಮಿತ ಕೆರೆಗಳು ಅದರಲ್ಲಿ ಯಥೇಚ್ಛ ಮೀನು ಸಾಕಣೆ, ರಬ್ಬರ್ ತೋಟಗಳ ಜತೆ ಕೆಲವು ಕಡೆ ಚಹಾ ತೋಟಗಳು ಕಾಣಸಿಕ್ಕವು. ಅಲ್ಲಿಂದ ತ್ರಿಪುರಾ ರಾಜಧಾನಿ ಅಗರ್ತಲಾ ತೆರಳಿ ಅಲ್ಲಿಂದ ತ್ರಿಪುರಾ ಸುಂದರಿ ದೇವಿಯ ಆಲಯ ಸಂದರ್ಶಿಸಿದೆ. ಮೇಲಾಘರ್ ಅನ್ನೋ ಮತ್ತೊಂದು ಪುಟ್ಟ ನಗರದಲ್ಲಿ ನೀರ ಮೇಲಿರೋ ಅರಮನೆಯನ್ನೂ ನೋಡಿ ಮನ ಪ್ರಫುಲ್ಲಗೊಂಡಿತು. ತ್ರಿಪುರಾದಿಂದ ನನ್ನ ಪ್ರಯಾಣ ತೆರಳಿದ್ದು ಹರ್ಯಾಣ ರಾಜ್ಯಕ್ಕೆ. ಹರ್ಯಾಣದಲ್ಲಿ ಪ್ರವಾಸೀ ತಾಣಗಳಿಗೆ ಭೇಟಿ ನೀಡದಿದ್ದರೂ ಭಿವಾಣಿ, ಹಿಸಾರ್‌ನಂತಹ ಪ್ರದೇಶಗಳ ಗ್ರಾಮ್ಯ ಜೀವನದ ದಿಗ್ದರ್ಶನವಾಗಿತ್ತು. ಅಲ್ಲಿ ಮೂರು ಹೊತ್ತು ಚಪಾತಿ, ಖಾರ ಪಲ್ಯ ಕರ್ನಾಟಕದ ಬಯಲುಸೀಮೆಯನ್ನೇ ನೆನಪಿಸಿತ್ತು. ಹರ್ಯಾಣದ ಮೇಲಿರೋ ಪಂಜಾಬ್ ಪ್ರಯಾಣ ಅದಾಗಲೇ ಶುರುವಾಗಿತ್ತು. ಅಮೃತಸರದ ಸ್ವರ್ಣಮಂದಿರ, ಪಕ್ಕದಲ್ಲೇ ಇದ್ದ ಜಲಿಯನ್ ವಾಲಾಭಾಗ್, ಇಂಡೋ-ಪಾಕ್ ಸೀಮೆಯಾದ ವಾಘಾ ಬಾರ್ಡರ್ ಕೂಡಾ ಸಂದರ್ಶಿಸಿದೆ.
ಇಪ್ಪತ್ತ ನಾಲ್ಕು ಗಂಟೆಯೂ ಜಾತಿ-ಭೇದದ ಹಂಗಿಲ್ಲದೆ ಆಹಾರ ನೀಡುತ್ತಿದ್ದ ಸ್ವರ್ಣ ಮಂದಿರ ನಿಜವಾಗಿಯೂ ಆದರ್ಶಪ್ರಾಯವಾಗಿತ್ತು. ಪಂಜಾಬ್‌ನಿಂದ ಪ್ರಯಾಣ ತಿರುವನಂತಪುರಂಗೆ ತೆರಳಿತ್ತು. ಅಲ್ಲಿನ ಶ್ರೀಮದ್ ಅನಂತ ಪದ್ಮನಾಭ ಸ್ವಾಮಿ ಆಲಯ, ಅಟ್ಟಿಂಗಲ್ ಭಗವತಿ ಆಲಯ, ಒಂದು ಕಾಲದ ಹಿಪ್ಪೀ (ಪ್ರವಾಸೀ ತಂಡ) ಗಳ ಪ್ರಿಯ ಕಿನಾರೆ ಕೋವಳಂ ಬೀಚ್ ಕೂಡಾ ಕಂಡು ತ್ರಿಶ್ಶೂರ್ ಕಡೆ ಹೆಜ್ಜೆ ಹಾಕಿದ್ದೆ. ನಗರದಲ್ಲಿ ಸುತ್ತು ಹಾಕಿ, ಕೇರಳದ ಅತೀ ದೊಡ್ಡ ಉತ್ಸವ ತ್ರಿಶೂರ್ ಪೂರಂ ನಡೆಯೋ ವಡಕ್ಕುನಾಥನ್ ಆಲಯ ಕಂಡೆ. ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಜಗತ್ಪ್ರಸಿದ್ಧ ಶ್ರೀ ಕೃಷ್ಣಾಲಯ ಇರೋ ಗುರುವಾಯೂರ್‌ಗೆ ಕೂಡಾ ಭೇಟಿ ನೀಡಿದೆ. ಗುರುವಾಯೂರ್‌ನಿಂದ ಐದಾರು ಕಿಮೀ ದೂರದ ಚಿಕ್ಕದಾದರೂ ಚೊಕ್ಕದಾದ ಚಾವಕ್ಕಾಡ್ ಬೀಚ್‌ಕಂಡು 'ಚಿಕ್ಕ ಬೀಚ್ ಆದರೂ, ಅಭಿವೃದ್ಧಿ ತುಂಬಾನೇ ಆಗಿದೆ ಎಂದು ಆವಕ್ಕಾದೆ! ಅಲ್ಲಿಂದ ಎರ್ನಾಕುಲಂ ತೆರಳಿ,ಅಲ್ಲಿಂದ ಪ್ರಸಿದ್ಧ ಆಲಯ ಚೋಟಾನಿಕರ ಭಗವತಿ ದೇವಾಲಯ ಸಂದರ್ಶಿಸಿ ಮಂಗಳೂರಿನ ಮನೆಗೆ ಹಿಂದಿರುಗಿದಾಗ ಡಿಸೆಂಬರ್ ಮಾಸ ಬಂದಿತ್ತು. ತೀವ್ರ ಆಯಾಸದಿಂದ ಸಣ್ಣ ಮಟ್ಟಿನ ಜ್ವರ ಬಂದಿತ್ತು. ಅದಾಗ್ಯೂ ಇನ್ನಷ್ಟು ಆವಿಷ್ಕರಿಸುವ ಹುರುಪಿಗೆ ಯಾವ ತೊಂದರೆಯನ್ನೂ ನೀಡಲಿಲ್ಲ. 2022 ರ ಈ ಸುಧೀರ್ಘ ಪ್ರಯಾಣ ಒಂದರ್ಥದಲ್ಲಿ ಸಿಹಿ-ಕಹಿ ಅನುಭವಗಳೊಂದಿಗೆ ಮುಗಿದಿತ್ತು. 2023 ರಲ್ಲಿ ಇನ್ನಷ್ಟು, ಮಗದಷ್ಟು ಮೊಗೆಯಲು ಪ್ರೇರೇಪಿಸಿತ್ತು.
ಕಾಡಂಗಾಡಿ , ಮಂಚಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : 9663135413
YouTube : The Silent Sanchari
Link : https://youtu.be/hgBGZHhGz7Y
******************************************