-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ  ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                   
              ಮಕ್ಕಳೇ.... ಆ ಕಾಲ ನಮಗರಿವಿಲ್ಲ. ಹಿರಿಯರ ಅನುಭವಗಳ ಬತ್ತಳಿಕೆಯಿಂದ ಪಡೆದುಕೊಳ್ಳಬಹುದು. ನಾವು ಹಿರಿಯರಿಂದ ಪಡೆಯುವ ಮಾಹಿತಿಗಳು ಒಂದು ಶತಮಾನದಿಂದ ಈಚಿನದು. ಪ್ರಾಚ್ಯ ಸಂಶೋಧಕರು, ಪ್ರಾಚ್ಯ ವಸ್ತು ಸಂಗ್ರಹಾಲಯಗಳು, ಪ್ರಾಚ್ಯ ಗ್ರಂಥಗಳು, ಜನಪದ ಸಾಹಿತ್ಯಗಳು ‘ಆ’ ಕಾಲದ ವಿವರಣೆ ನೀಡಲು ಸಶಕ್ತವಾಗಿವೆ. 
       ಸಿಂಧೂ ಕಂದರದ ಕಾಲದಲ್ಲೇ ಲೋಹದ ಬಳಕೆಯಿತ್ತು ಎಂಬುದು ಇತಿಹಾಸ. ಆದರೆ ಗ್ರಾಮೀಣರು ಇತ್ತೀಚೆಗಿನವರೆಗೂ ಬಳಸುತ್ತಿದ್ದುದು ಮಣ್ಣಿನ ಪಾತ್ರೆಗಳನ್ನು ಎಂದರೆ ಸೋಜಿಗವಾಗಬಹುದು. ಸ್ನಾನಕ್ಕಾಗಿ ನೀರು ಕಾಯಿಸಲು ಬಳಸುವ ಹಂಡೆ, ಮುಚ್ಚಳಗಳು, ಅನ್ನ ಬೇಯಿಸುವ ಚೆರಿಗೆಗಳು, ‘ನೀರ್ಪೋಳೆ’ಯ ಕಾವಲಿಗಳು, “ಓಟ್ಪೋಳೆ’ಯ ಅಂಚು, ಇಡ್ಲಿ-ಪತ್ರೊಡೆ- ಕಡುಬು ಮುಂತಾದವನ್ನು ಬೇಯಿಸುವ ‘ತೋಂದರೆ ಅಡ್ಯೆ’ ಪಾತ್ರೆಗಳು, ಅಪ್ಪದ ಕಾವಲಿಗಳು, ಪಲ್ಯದ ತವಾಗಳು, ಸಾಂಬಾರು ಮಾಡುವ ‘ಬಿಸಲೆ’ಗಳು, ತಿಂಡಿ ತಿನ್ನುವ ಗದ್ದಾವು, ದೇವರ ದೀಪ, ಹಣತೆ, ಆರತಿ, ಹಲಸಿನ ಸೊಳೆ ಮಾವುಗಳನ್ನು ಉಪ್ಪಿನಲ್ಲಿ ಹಾಕುವ ‘ಮಂಡೆ’, ಅಕ್ಕಿ ಬೆಲ್ಲ, ಬೇಳೆ ಸಂಗ್ರಹಿಸುವ ಪಾತ್ರೆಗಳು, ಚಿನ್ನ ಬೆಳ್ಳಿ ಹಣ ಇಡುವ ‘ಕರ್ಜನ’, ಪೀಕದಾನಿ...... ಹೀಗೆ ದಿನ ನಿತ್ಯ ಮನೆಯಲ್ಲಿ ಬಳಸುತ್ತಿದ್ದ ಪಾತ್ರೆ ಪರಡಿಗಳು ಆ ಕಾಲದಲ್ಲಿ ಮಣ್ಣಿನದೇ ಆಗಿದ್ದುವು. ಹೆಚ್ಚೇಕೆ ದನಕ್ಕೆ ಅಕ್ಕಚ್ಚು ಕೊಡುತ್ತಿದ್ದ ಅಗಲ ಬಾಯಿಯ ಪಾತ್ರೆ ಮಣ್ಣಿನಿಂದಲೇ ತಯಾರಾಗುತ್ತಿದ್ದುವು. ಬಹಳ  ಅಪರೂಪಕ್ಕೆ ಹಳ್ಳಿಯ ಕೆಲವು ಮನೆಗಳಲ್ಲಿ  ಪದಾರ್ಥ (ಸಾರು, ಸಾಂಬಾರು..) ಮಾಡಲು ಮಣ್ಣಿನ ಪಾತ್ರೆ, ನೀರು ತುಂಬಿಡಲು ಮಣ್ಣಿನ ಹೂಜಿ ಇಂದಿಗೂ ಬಳಸುತ್ತಾರೆ. ಬೆಲ್ಲ, ಉಪ್ಪಿನಕಾಯಿ, ಉಪ್ಪು, ಹುಳಿ ಮುಂತಾದುವುಗಳನ್ನು ಭರಣಿಗಳಲ್ಲಿಡುತ್ತಾರೆ. ಅವು ಚೀನಾ ಕ್ಲೇ ಪಾತ್ರೆಗಳಾಗಿದ್ದು ಕೊರೆಯಲ್ಪಡುವುದಿಲ್ಲ. ಸೌಟುಗಳನ್ನು ತೆಂಗಿನ ಗೆರಟೆ, ಅಡಿಕೆ ಅಥವಾ ಬಿದಿರ ಹಿಡಿಗಳಿಂದ ಮಾಡುತ್ತಿದ್ದರು. ಅಡುಗೆ ಕೋಣೆಯ ಸ್ವರೂಪ ಮತ್ತು ಪಾತ್ರೆಗಳ ಮಾದರಿ ಸಂಪೂರ್ಣವಾಗಿ ಬದಲಾಗಿವೆ.  ಈ ಕಾಲದ ಅಡುಗೆ ಕೋಣೆಯ ಪಾತ್ರೆಗಳ ಪರಿಚಯ ಎಲ್ಲರಿಗೂ ಇದ್ದೇ ಇದೆ. ವಿವರಣೆ ಅನಗತ್ಯ.
     ನಮ್ಮ ಹಿರಿಯರು ಗಂಜಿ ಉಣ್ಣುತ್ತಿದ್ದರು. ಮೊಸರು, ಉಪ್ಪಿನಕಾಯಿ ಇದ್ದರೆ ಅವರಿಗೆ ಭರ್ಜರಿ ಊಟವದು. ಕೆಲವೊಮ್ಮೆ ಕೆಂಡದಲ್ಲಿ ಕಾಸಿದ ಒಣಮೆಣಸು, ಹುಣಸೆ ಮತ್ತು ಉಪ್ಪು ಇವುಗಳನ್ನು ನೀರಿನೊಂದಿಗೆ ಸರಿಯಾಗಿ ಮಿಶ್ರಮಾಡಿ ‘ಉಪ್ಪು ಮೆಣಸು’ ಮಾಡಿ ದೊಡ್ಡ ಬಟ್ಟಲು ತುಂಬ ಖುಷಿಯಿಂದ ಉಣ್ಣುವುದೂ ಇತ್ತು. ಬಾಳೆ ಹೂ, ಕುದನೆ ಕಾಯಿ, ಕಾನಕಲ್ಲಟೆ, ಕೆಸುವಿನ ದಂಟು ಮತ್ತು ಗೆಡ್ಡೆ, ನುಗ್ಗೆ ಯಾ ತೇರೆ ಮರದ ಕುಡಿ, ಒಂದೆಲಗ, ‘ಪುನರ್ಪುಳಿ’ ಹಣ್ಣಿನ ಸಿಪ್ಪೆ, ‘ಬೀಂಪುಳಿ’, ನೆಲ್ಲಿ, ಕಾಡು ಮಾವು, ನುಗ್ಗೆ ಸೊಪ್ಪು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹಳ್ಳಿಗರು ಅಂದು ಬಳಸುತ್ತಿದ್ದ ತರಕಾರಿಗಳಲ್ಲಿ ಹಲವನ್ನು ಇಂದಿನವರು ರುಚಿಯೇ ನೋಡಿರಲಿಕ್ಕಿಲ್ಲ. ಇಂದು ಗಂಜಿ ಊಟ ಮಾಡುವವರು ಕಡಿಮೆಯಾಗುತ್ತಿದ್ದಾರೆ. ಪಿಜ್ಜ, ಪುಲಾವ್, ಬಿಸಿ ಬೇಳೆ ಬಾತ್, ಚೌ ಚೌ ಬಾತ್, ಪನ್ನೀರ್ ಮಸಾಲ...... ಹೀಗೆ ಹೊಸ ಸ್ವರೂಪದ ತಿಂಡಿ ತಿನಿಸುಗಳು. ಭೋಜನ ಕೂಟಕ್ಕೆ ಹಿಂದಿನ ಸಾಂಪ್ರದಾಯಿಕ ತಿಂಡಿಗಳು ಮಾಯವಾಗಿ ಹೊಸ ಮಾದರಿಯ ಖಾದ್ಯಗಳು ತಯಾರಿಸಲ್ಪಡುತ್ತಿವೆ. ಭೋಜನ ಕ್ರಮವೂ ಬದಲಾಗಿದೆ. ಮನೆಯವರು ಒಟ್ಟಾಗಿ ಕುಳಿತು ಭೋಜನ ಅಥವಾ ತಿಂಡಿ ತಿನ್ನುವ  ಆ ಕಾಲದ ವಿಧಾನ, ನೆಲದ ಮೇಲೆ ಕುಳಿತುಣ್ಣುವ ಅಂದಿನ ಕ್ರಮ ಇಂದು ಮಾಯವಾಗಿದೆ. ‘ಹೋಟೆಲ್’ನಲ್ಲಿ ಸಪ್ಲೈ ಮಾಡುವ ಸಪ್ಲೈರ್ ಕೆಲಸ ಇಂದು ಅಮ್ಮನಿಗೆ. ದೂರದರ್ಶನ ದರ್ಶಿಸುತ್ತಾ ಮೊಬೈಲ್ ಒತ್ತುತ್ತಾ ಅಥವಾ ‘ಮೊಬೈಲ್’ನಲ್ಲಿ ಮಾತನಾಡುತ್ತಾ ತಿನ್ನುವ ಉಣ್ಣುವ  ಕಾಲ ಇದು. ಇದು ಸುಧಾರಣೆಯೋ, ಬದಲಾವಣೆಯೋ, ನಾಗರಿಕತೆಯೋ ಅನಾಗರಿಕತೆಯೋ ಒಂದೂ ಅರ್ಥವಾಗದು.
     ಅಂದು ಮೈ ತುಂಬಾ ವಸ್ತ್ರ. ಸಣ್ಣ ತೂತಾದರೂ ದುರಸ್ತಿ ಮಾಡುತ್ತಿದ್ದರು. ಇಂದು ನಾವು ಧರಿಸುವ ಬಟ್ಟೆಗೆ ಕೇವಲ ನವರಂಧ್ರಗಳಲ್ಲ, ಶೋಡಷರಂಧ್ರಗಳೂ ಇವೆ. ನೋಡುಗರು ‘ಹರಿದ ವಸ್ತ್ರ ಯಾಕೆ ಉಟ್ಟಿದ್ದಾರೆ’ ಎಂದು ಹೇಳುವುದೂ ಉಂಟು. ಮೈಮುಚ್ಚ ಬೇಕಾದಲ್ಲಿ ಮೈ ಬಿಚ್ಚುವ ಸ್ಥಿತಿಯತ್ತ  ನಮ್ಮ ಒಲವು ಹರಿಯುತ್ತಿದೆಯೇ? ಎಂಬ ಸಂದೇಹ ಎಲ್ಲರಿಗೂ ಇದೆ. ಹಿಂದೆ ನೆಂಟರು ಮನೆಯಿಂದ ಹೊರಡುವ ದಿನ ‘ನೂಕಡ್ಯೆ’ (ಅಕ್ಕಿ ಶ್ಯಾವಿಗೆ) ಮಾಡುವ ಸಂಪ್ರದಾಯವಿತ್ತು. ‘ನೂಕಡ್ಯೆ” ತಿಂದ ನಂತರ ನೆಂಟರು ಮನೆಯಿಂದ ಕಾಲ್ಕೀಳಬೇಕಿತ್ತಂತೆ. “ನೂಕಡ್ಯೆ” ಒತ್ತುವುದೇ ಅಂದು ಸಾಹಸದ ಕೆಲಸ. ಮೂರರಿಂದ ನಾಲ್ಕು ಜನರಿಲ್ಲದೆ ಈ ತಿಂಡಿ ಮಾಡುವುದು ಕಷ್ಟವಾಗುತ್ತಿತ್ತು. ಶ್ಯಾವಿಗೆ ಮಣೆಯನ್ನು ಮರ ಬಳಸಿ ಮಾಡುತ್ತಿದ್ದರು. ಇಂದು ಶ್ಯಾವಿಗೆ ಬಹಳ ಸುಲಭದ ತಿಂಡಿ. ನೆಂಟರು ಬರಲಿ ಬಾರದಿರಲಿ, ಹೋಗಲಿ ಹೋಗದಿರಲಿ ಶ್ಯಾವಿಗೆ ‘ರೆಡಿ’ಯಾಗುತ್ತದೆ. 
      ಅಂದು ಹೆರಿಗೆಗಳು ಮನೆಯಲ್ಲೇ ಸೂಲಗಿತ್ತಿಯರ ಸಹಾಯದಿಂದ ನಡೆಯುತ್ತಿತ್ತು. ಶೇಕಡಾ 95ಕ್ಕೂ ಹೆಚ್ಚು ಸಾದಾ ಹೆರಿಗೆಗಳಾಗುತ್ತಿದ್ದುವು. ಇಂದು ಎಲ್ಲ ಹೆರಿಗೆಗಳೂ ‘ಸೂಪರ್ ಸ್ಪೆಷಲ್’ ಶುಶ್ರೂಷಾಲಯಗಳಲ್ಲಿ ನಡೆಯುತ್ತವೆ. ಸಾದಾ ಹೆರಿಗೆಗಳು ಶೇಕಡಾ ಐದು ಮಾತ್ರ ನಡೆಯುತ್ತವೆ. ಶಸ್ತ್ರ ಚಿಕಿತ್ಸೆಯಿರದ ಹೆರಿಗಗಳು ಅಪರೂಪವಾಗಿವೆ. ಅಂದು ಸಕ್ಕರೆ ಕಾಯಿಲೆ ರೋಗಿಗಳು ಬಹಳ ಕಡಿಮೆ. ಇಂದು ನಮ್ಮ ಆಹಾರ ಕ್ರಮ ಹೆಚ್ಚಿನವರಿಗೆ ಸಕ್ಕರೆ ಕಾಯಿಲೆಯನ್ನು ಅಂಟಿಸಿದೆ. ಅಂದು ಬರಿಗಾಲು ನಡಿಗೆಯ ಕಾಲ, ಇಂದು ಮನೆಯೊಳಗೂ ಚಪ್ಪಲಿ ಧರಿಸುವ ಕಾಲ. ಹಿಂದೆ  ಗೊರಬೆ ಬಳಸಿ ಮಳೆಯಿಂದ ಮೈರಕ್ಷಣೆ, ಇಂದು ಮಳೆಯಲ್ಲಿ ತೋಯುವುದೇ ಮಹಾ ಫ್ಯಾಶನ್. ನಮ್ಮ ಹಿರಿಯರು ಹೊಲದಲ್ಲಿ ದುಡಿಮೆ ಮಾಡುವಾಗ ಹಾಳೆಯ ‘ಮುಟ್ಟಾಳೆ’ ಧರಿಸುತ್ತಿದ್ದರು. ತಲೆಯನ್ನು ರಕ್ಷಿಸುವ ‘ಮುಟ್ಟಾಳೆ’ ಈಗ ಮೂಲೆ ಸೇರಿದೆ. ಆ ಸ್ಥಾನಕ್ಕೆ ‘ಮುಂಡಾಸು’ ಬಂದಿದೆ. ಹಿಂದಿನರು ಸೂರ್ಯನ ನೆರಳು ನೋಡಿ ಸಮಯ ಹೇಳುತ್ತಿದ್ದರು. ನಂತರದಲ್ಲಿ ನಾನಾ ಗಡಿಯಾರಗಳು ಬಂದುವು. ಈಗ ಮೊಬೈಲೇ ನಮಗೆ ನಿಖರವಾದ ಸಮಯ ಹೇಳುತ್ತದೆ. ಗುರುಕುಲ ಶಿಕ್ಷಣ ಹೋಗಿ ಶಾಲಾ ಶಿಕ್ಷಣ ಬಂತು. ತಾಳೆ ಓಲೆ ಹೋಗಿ ಕಾಗದ ಬಂತು. ಕಂಠ ಮತ್ತು ಅಣಿಲೆ ಕಾಯಿ ರಸ ಹೋಗಿ ಶಾಯಿ ಪೆನ್ನು ಬಂತ್ತು. ಸ್ಲೇಟು ಕಡ್ಡಿ ಹೋಗಿ ಟಿಪ್ಪಣಿ ಪುಸ್ತಕ ಮತ್ತು ಬರೆಯುವ ಕಡ್ಡಿ ಬಂತು. ಇತ್ತೀಚೆಗೆ ಶಾಯಿ ಪೆನ್ನು ಬಹಳ ಅಪರೂಪವಾಗಿದೆ. ‘ರಿಫೀಲ್”  ಬಹುರೂಪವಾಗಿದೆ.
       ನಮ್ಮ ಹಿರಿಯರು ಶುಭ ಕಾರ್ಯಗಳಿಗೆ ಮನೆ ಮನೆಗಳಿಗೆ ನಡೆದು ಹೋಗಿ ಎಲ್ಲರನ್ನೂ ವೀಳ್ಯ ಮತ್ತು ಅಡಿಕೆ ನೀಡಿ ಆಮಂತ್ರಿಸುತ್ತಿದ್ದರು. ನಂತರದಲ್ಲಿ ಮುದ್ರಿತ ಕಾಗದ ಬಂತು, ವೀಳ್ಯ ಮತ್ತು ಅಡಿಕೆ ಬದಿಗೆ ಸರಿಯುತ್ತಾ ಬಂತು. ಈಗ ಆಮಂತ್ರಣ ಪತ್ರ ಇದ್ದರೂ ಮನೆ ಮನೆಗೆ ಅಂಚೆ ಮೂಲಕ ರವಾನೆ ಮತ್ತು ಅತ್ಯಂತ ನಿಕಟ ಸಂಬಂಧಿಗಳಿಗೆ ಮಾತ್ರ ಮನೆ ಭೇಟಿ ಮೂಲಕ ಆಮಂತ್ರಣ ನೀಡುವರು.  ಆಮಂತ್ರಣ ನೀಡಿಕೆಯಲ್ಲಿ ‘ವಾಟ್ಸಾಪ್’ ಮತ್ತು ಇತರ ಜಾಲಗಳೇ ಹೆಚ್ಚು ಬಳಕೆಯಾಗುತ್ತಿದೆ. ಆ ಕಾಲ ಸಂಬೋಧನೆ ಮಾಡುತ್ತಿದ್ದ ಸಂಬಂಧವಾಚಕಗಳು ಶುದ್ಧ ದೇಶೀಯ ಮತ್ತು ಅರ್ಥಪೂರ್ಣ. ಇಂದು ಕರೆಯುವ ಸಂಬಂಧ ವಾಚಕಗಳು ಅನಿಷ್ಟಪೂರ್ಣವೆಂದರೆ ತಪ್ಪಾಗದು. ಉದಾ: ಅಮ್ಮ – ಮೋಮ್. ಅಪ್ಪ-ಡ್ಯಾಡ್, ಅಣ್ಣ- ಬ್ರೋ, ತಂಗಿ- ಸಿಸ್………….. ಹೀಗೆ ಸಂಪ್ರದಾಯ ಮತ್ತು ಜೀವನ ಶೈಲಿಗಳು ನಿರಂತರ ಬದಲಾವಣೆಯಾಗುತ್ತಿವೆ. ಕೆಲವು ಬದಲಾವಣೆಗಳಿಗೆ ಹಿರಿಯರು ಒಗ್ಗಿದರೂ ಕೆಲವುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವುದನ್ನೂ ಕಾಣುತ್ತಿದ್ದೇವೆ. ನಮಸ್ಕಾರ.....
........ರಮೇಶ  ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************


Ads on article

Advertise in articles 1

advertising articles 2

Advertise under the article