ಹಕ್ಕಿ ಕಥೆ : ಸಂಚಿಕೆ - 78
Wednesday, December 21, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ... ಈ ವಾರದ ಹಕ್ಕಿ ಕಥೆಗೆ ಸ್ವಾಗತ... ನಮ್ಮ ಶಾಲೆಯ ಒಂದು ಮಗು ಒಂದು ವಾರವಾದರೂ ಶಾಲೆಗೆ ಬಂದಿರಲಿಲ್ಲ. ಫೋನ್ ಮಾಡಿದರೆ ಅವರ ಪೋಷಕರ ಮೊಬೈಲ್ ಸ್ವಿಚ್ ಆಫ್ ಅಂತ ಬರುತ್ತಿತ್ತು. ಕಲಿಯುವುದರಲ್ಲಿ ಚುರುಕಾಗಿದ್ದ ಹುಡುಗಿ ಯಾಕಪ್ಪ ಬರುತ್ತಿಲ್ಲ ಎಂದು ಚಿಂತೆ ಆಯಿತು. ಆಕೆಯ ಮನೆಯ ಕಡೆಯಿಂದ ಬೇರೆ ಯಾವ ಮಕ್ಕಳೂ ಬರುತ್ತಿರಲಿಲ್ಲ. ಹಾಗಾಗಿ ವಿಷಯ ಏನು ಅಂತ ತಿಳಿಯಲು ನಾನೇ ಆ ಕಡೆ ಹೋಗಿ ಬರೋಣ ಅಂತ ಹೊರಟೆ. ಶಾಲೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಒಂದು ಗುಡ್ಡದ ಮೇಲೆ ಆಕೆಯ ಮನೆ. ಅಲ್ಲಿಗೆ ಬೈಕು ಕೂಡ ಹೋಗುತ್ತಿರಲಿಲ್ಲ. ರಸ್ತೆ ಬದಿಯಲ್ಲಿ ನನ್ನ ಬೈಕು ನಿಲ್ಲಿಸಿ ಅವರ ಮನೆಯ ದಾರಿ ಹಿಡಿದು ಗುಡ್ಡ ಹತ್ತಲು ಪ್ರಾರಂಭಿಸಿದೆ. ಮಾವು, ಹಲಸು, ಗೇರು ಮೊದಲಾದ ಅನೇಕ ಮರಗಳು ಚೆನ್ನಾಗಿ ಬೆಳೆದ ಕಾಡಿನಂತಹ ಪ್ರದೇಶ. ಪರಿಚಿತವಾದ ಹಲವು ಹಕ್ಕಿಗಳು ಕಾಣಿಸಿದವು. ಅಷ್ಟರಲ್ಲಿ ಗುಬ್ಬಚ್ಚಿಗಿಂತ ಸ್ವಲ್ಪ ದೊಡ್ಡ ಹಕ್ಕಿಗಳೆರಡು ನನ್ನ ಮುಂದೆಯೇ ಹಾರಿ ಅಲ್ಲಿದ್ದ ಒಂದು ಒಣಮರದಲ್ಲಿ ಹೋಗಿ ಕುಳಿತುಕೊಂಡವು. ತಲೆಯ ಮೇಲೆ ಸುಂದರವಾದ ಕಿರೀಟದಂತಹ ಜುಟ್ಟು, ಮೈಯೆಲ್ಲ ಬೂದು ಮಿಶ್ರಿತ ಕಪ್ಪು ಬಣ್ಣ, ಮುಖ, ಬೆನ್ನು, ಕತ್ತಿನ ಮೇಲೆ ಅಲ್ಲಲ್ಲಿ ಬಿಳಿ ಬಣ್ಣ. ಆ ಬಿಳೀ ಬಣ್ಣದ ನಡುವೆ ಸರಿಯಾಗಿ ನೋಡಿದರೆ ಕಾಣುವ ಕಪ್ಪು ಬಣ್ಣದ ಹಾರ್ಟ್ ಶೇಪ್ ಚುಕ್ಕಿ. ಬೆನ್ನು ಮತ್ತು ರೆಕ್ಕೆಗಳ ಮೇಲೆ ಹಲವು ಕಡೆ ಹೃದಯದ ಆಕಾರ ಸರಿಯಾಗಿ ಕಾಣುತ್ತಿತ್ತು. ತಲೆಯ ಮೇಲಿನ ಜುಟ್ಟಿನ ಬಣ್ಣದಲ್ಲಿ ಒಂದು ಹಕ್ಕಿಗಿಂತ ಇನ್ನೊಂದು ಸ್ವಲ್ಪ ವ್ಯತ್ಯಾಸ ಇತ್ತು. ಮನೆಗೆ ಬಂದು ಸಂಜೆ ಹಕ್ಕಿ ಪುಸ್ತಕ ಬಿಡಿಸಿ ನೋಡಿದಾಗ ಒಂದು ಗಂಡು ಒಂದು ಹೆಣ್ಣು ಅಂತ ತಿಳಿಯಿತು.
ಮರದ ಮೇಲೆ ಕುಪ್ಪಳಿಸುತ್ತಾ ತಮ್ಮ ಕೊಕ್ಕಿನಿಂದ ಮರವನ್ನು ಕುಟ್ಟಿ ಹುಳುಗಳು, ಇರುವೆಗಳು ಇವೆಯಾ ಎಂದು ಹುಡುಕುತ್ತಿದ್ದವು. ಒಂದು ಕೊಂಬೆಯ ಮೇಲೆ ಸ್ವಲ್ಪ ಗೆದ್ದಲು ಹಿಡಿದಿತ್ತು. ಅಲ್ಲಿಗೂ ಹೋಗಿ ಗೆದ್ದಲು ಹುಳುಗಳನ್ನೂ ಹಿಡಿದು ತಿನ್ನುತ್ತಿದ್ದವು. ಮರವನ್ನು ಕುಟ್ಟುವ ರೀತಿ ನೋಡಿದಾಗ ಅವು. ಮರಕುಟುಗಗಳೇ ಇರಬೇಕು ಎಂದು ಸಂಶಯವಾಯಿತು. ಪುಸ್ತಕ ತೆಗೆದು ಹುಡುಕಿದಾಗ ಇದೂ ಒಂದು ಜಾತಿಯ ಮರಕುಟುಗ ಎಂದು ತಿಳಿದು ಬಂತು. ತನ್ನ ಬಣ್ಣ ಮತ್ತು ಪುಟಾಣಿ ಗಾತ್ರದಿಂದಾಗಿ ತಕ್ಷಣ ಕಾಣಲು ಸಿಗದ ಈ ಹಕ್ಕಿ ಭಾರತದ ಪಶ್ಚಿಮ ಘಟ್ಟಗಳ ನಿವಾಸಿ ಎಂದು ತಿಳಿದು ಬಹಳ ಖುಷಿಯಾಯ್ತು. ನವೆಂಬರ್ ನಿಂದ ಎಪ್ರಿಲ್ ನಡುವೆ ಇದರ ಸಂತಾನಾಭಿವೃದ್ಧಿ ಕಾಲ, ಮರದ ಪೊಟರೆಯಲ್ಲಿ ಗೂಡು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತದೆ ಎಂದು ಸಲೀಂ ಅಲಿ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ನೀವೂ ಪಶ್ಚಿಮ ಘಟ್ಟದ ಸುತ್ತಮುತ್ತಲಿನ ನಿವಾಸಿಯಾಗಿದ್ದರೆ ನಿಮ್ಮ ಆಸುಪಾಸಿನಲ್ಲಿ ಈ ಹಕ್ಕಿ ನೋಡಲು ಸಿಗಬಹುದು.
ಕನ್ನಡದ ಹೆಸರು: ಚುಕ್ಕೆ ಮರಕುಟುಗ
ಇಂಗ್ಲೀಷ್ ಹೆಸರು: Heart-spotted Woodpecker
ವೈಜ್ಞಾನಿಕ ಹೆಸರು: Hemicirus canente
ಚಿತ್ರ ಕೃಪೆ : ಕೃಷ್ಣ ಮೂರ್ತಿ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************