ಪ್ರತಿಫಲನ : ಸಂಚಿಕೆ - 7
Friday, December 16, 2022
Edit
ಪ್ರತಿಫಲನ : ಸಂಚಿಕೆ - 7
ಮಕ್ಕಳಿಗಾಗಿ ಲೇಖನ ಸರಣಿ
ವಿದ್ಯಾರ್ಥಿ ಮಿತ್ರರೇ, ನೀವು ಎಂದಾದರೂ ಈ ಹೆಸರನ್ನು ಕೇಳಿರುವಿರಾ? ಕೆಲವರು ಹೌದನ್ನಬಹುದು ಕೆಲವರು ಕೇಳಿಲ್ಲ ಎನ್ನುವಿರಲ್ಲವೇ… ದಿನದ ಸಮಯವನ್ನು ನಾವು ಹೇಗೆ ಬಳಸುತ್ತೇವೆ ಎಂಬುದನ್ನು ಸೂಚಿಸುವ ದಾಖಲೆಯೇ ಸಮಯ ಸಾರಿಣಿ.
ಸಾಮಾನ್ಯವಾಗಿ ಟೈಮ್ ಟೇಬಲ್, ಕಾಲ ನಿಯಮಕ ಪಟ್ಟಿ, ವೇಳಾಪಟ್ಟಿ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ಈ ದಾಖಲೆ ನಮ್ಮೆಲ್ಲರಲ್ಲೂ ಇದೆ ಅಲ್ಲವೇ ?
ಬಹುಶಃ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಹೊರತಾಗಿ ಉಳಿದವರೆಲ್ಲರೂ ತಮ್ಮ ಕಲಿಕೆಯಲ್ಲಿ ವೇಳಾಪಟ್ಟಿಯನ್ನು ಅಳವಡಿಸಿಕೊಂಡಿಲ್ಲ ಎಂಬುದು ನನ್ನ ಭಾವನೆ. ಆದರೆ ನಿಮಗೆ ಒಂದು ವೇಳಾಪಟ್ಟಿಯ ಬಗ್ಗೆ ಜ್ಞಾನವಿದೆ. ಅದು ತರಗತಿ ವೇಳಾಪಟ್ಟಿ. ಸಣ್ಣ ತರಗತಿಗಳಿಂದಲೇ ನಿಮ್ಮ ತರಗತಿಯ ಗೋಡೆಯ ಮೇಲೆ ತೂಗಾಡುವ ಈ ಕಾಲನಿಯಮಕ ಪಟ್ಟಿಯನ್ನು ನೀವೂ ಪುಸ್ತಕದಲ್ಲಿ ದಾಖಲಿಸಿರುವಿರಲ್ಲವೇ? ಹಾಗಾದರೆ ಈ ವೇಳಾಪಟ್ಟಿಯು ಸೂಚಿಸುವ ಅಂಶಗಳು ಯಾವುವು? ದಿನ, ವಾರ, ತರಗತಿ, ಅವಧಿಗಳು, ಪ್ರತಿ ಅವಧಿಯಲ್ಲಿ ನಡೆಯುವ ವಿಷಯ, ಶಿಕ್ಷಕರು, ವಿರಾಮ ಮತ್ತು ಊಟದ ಸಮಯ.. ಇತ್ಯಾದಿ.
ಶಾಲಾ ಕೆಲಸ ಕಾರ್ಯಗಳಿಗೆ ನಿರ್ದಿಷ್ಟ ವೇಳೆಯ ಚೌಕಟ್ಟು ಅತ್ಯವಶ್ಯ. ವೇಳಾಪಟ್ಟಿಯಂತೆ ಶಾಲೆ ಆರಂಭ ಮುಕ್ತಾಯ ಮತ್ತು ದೈನಂದಿನ ತರಗತಿಗಳು ನಡೆಯುತ್ತವೆ. ಇದನ್ನು ಹೊರತುಪಡಿಸಿ ಪ್ರತಿಯೊಂದು ಕಲಿಕಾರ್ಥಿಗೂ ಒಂದು ವೈಯಕ್ತಿಕ ಸಮಯ ಸಾರಣಿ ಅಗತ್ಯವೆಂದರೆ ನಂಬುವಿರಾ… ಹೌದು ಉತ್ತಮ ಕಲಿಕೆ ಸಮಯ ಹೊಂದಾಣಿಕೆ ಎಲ್ಲಾ ವಿಷಯಗಳಿಗೆ ಯಥಾವಕಾಶ ಜತೆಗೆ ಕಲಿಕಾ ಪ್ರಗತಿಗಳಿಗೆ ಸಮಯ ಸಾರಿಣಿ ಅತ್ಯವಶ್ಯ.
ವಿದ್ಯಾರ್ಥಿಗಳ ವೈಯಕ್ತಿಕ ವೇಳಾಪಟ್ಟಿಯು ಬೆಳಗಿನ ಸಂಜೆಯ ಅವಧಿಯಲ್ಲಿ ನಿಮಗೆ ದೊರೆಯುವ ಅಭ್ಯಾಸದ ಅವಧಿಗಳು, ಅವುಗಳಲ್ಲಿ ನೀವು ವಿವಿಧ ವಿಷಯಗಳಿಗೆ ಹಂಚಿಕೊಂಡ ಸಮಯ, ಇತ್ಯಾದಿಗಳ ವಿವರವನ್ನೊಳಗೊಂಡಿರಬೇಕು. ಒಟ್ಟು ಕಲಿಕಾ ಅವಧಿಯನ್ನು ಎಲ್ಲಾ ವಿಷಯಗಳಿಗೂ ಸರಿಹೊಂದುವಂತೆ ಜೋಡಿಸಬೇಕು. ಹಾಗೆಯೇ ಮನರಂಜನೆ ಗೆ ಅವಕಾಶ ನೀಡಿದ್ದಲ್ಲಿ ಅದನ್ನು ಕೂಡ ನಮೂದಿಸಬಹುದು. ವಿರಾಮದ ವೇಳೆಯನ್ನು ಕೂಡ ದಾಖಲಿಸಬೇಕು.
ಹೀಗೆ ಸುಂದರವಾದ ವೇಳಾಪಟ್ಟಿ ತಯಾರಿಸುವುದು ಒಂದು ಕಲೆ, ವಿದ್ಯಾರ್ಥಿಗಳೇ ಇನ್ನೊಂದು ವಿಷಯ, ಎಲ್ಲಾ ದಿನಗಳಂತೆ ರವಿವಾರವಲ್ಲ. ಏಕೆಂದರೆ ಆ ದಿನ ಪೂರ್ಣ ರಜಾವಧಿಯಾಗಿರುತ್ತದೆ. ಆದುದರಿಂದ ಕಲಿಕೆಗೆ ವಿಪುಲ ಅವಕಾಶವಿದೆ. ಹಾಗಾಗಿ ರವಿವಾರದ ಮತ್ತು ಇತರ ರಜಾ ದಿನಗಳ ವೇಳಾಪಟ್ಟಿ ಪ್ರತ್ಯೇಕ ವಿರಲಿ.
ಮತ್ತೊಂದು ಮಾತು ನೆನಪಿಸಲೇ…. ವೇಳಾಪಟ್ಟಿ ರಚಿಸುವುದು ಅಂದವಾಗಿ ಗೋಡೆಯ ಮೇಲೆ ಅದನ್ನು ತೂಗು ಹಾಕುವುದು ಮಾತ್ರ ನಮ್ಮ ಕೆಲಸವಲ್ಲ. ಬದಲಾಗಿ ಅತ್ಯಂತ ಪ್ರೀತಿ ನಿಷ್ಠೆ ಆತ್ಮವಿಶ್ವಾಸ ಗಳಿಂದ ಆ ವೇಳಾಪಟ್ಟಿಯನ್ನು ಚಾಚೂ ತಪ್ಪದೆ ಪಾಲಿಸುವ ಹೊಣೆಗಾರಿಕೆಯೂ ನಮ್ಮದೇ ಆಗಿದೆ ಎಂಬುದನ್ನು ಯಾವತ್ತೂ ಮರೆಯಬಾರದು.
ವಿದ್ಯಾರ್ಥಿ ಮಿತ್ರರೇ, ನಿಮ್ಮ ಪ್ರತಿ ದಿನದ ಕಲಿಕೆ ನಿರಂತರ ಉತ್ತಮ ಗುರಿಯೆಡೆ ಸಾಗುವ ಮೆಟ್ಟಿಲುಗಳಾಗಬೇಕು. ಒಂದೊಂದೇ ಮೆಟ್ಟಿಲನ್ನೂ ಜಾಣ್ಮೆಯಿಂದ ಏರುತ್ತಾ ಸಾಗಿದಾಗ ಗುರಿಯೆಡೆ ಪಯಣ ಸರಳವಾಗುತ್ತದೆ.
ಕಲಿಕೆ ಎಂಬ ಯಜ್ಞವನ್ನು ಸಮಯ ಸಾರಿಣಿ ಎಂಬ ಚೌಕಟ್ಟಿನೊಳಗೆ ನಡೆಸಿದಾಗ ಪ್ರತಿಫಲನಗೊಳ್ಳುವ ಫಲಿತಾಂಶ ಅದ್ಭುತವಾಗಿರುತ್ತದೆ. ವ್ಯರ್ಥಾಲಾಪ, ಸಮಯ ಹಾಳು ಮಾಡುವುದು ಕಡಿಮೆಯಾಗಿ, ಕಲಿಕೆಗೆ ನಿರ್ದಿಷ್ಟತೆ, ನಿಖರತೆ, ಪ್ರಖರತೆ ಒದಗುತ್ತದೆ. ಆದುದರಿಂದಲೇ ಸಮಯ ಸಾರಿಣಿ ಪ್ರತಿಯೋರ್ವ ವಿದ್ಯಾರ್ಥಿಯ ಆಪ್ತಮಿತ್ರ! ಹಾಗಾದರೆ ಇನ್ನೇಕೆ ತಡ…. ನಿಮ್ಮ ಕಲಿಕೆಗೊಂದು ಫ್ರೇಮ್.. ಸಮಯ ಸಾರಿಣಿ ಸಿದ್ಧಗೊಳಿಸುವಿರಾ…..
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ವಳಾಲು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 99009 00456
*******************************************