-->
ಪ್ರತಿಫಲನ : ಸಂಚಿಕೆ - 5

ಪ್ರತಿಫಲನ : ಸಂಚಿಕೆ - 5

ಪ್ರತಿಫಲನ : ಸಂಚಿಕೆ - 5
ಮಕ್ಕಳಿಗಾಗಿ ಲೇಖನ ಸರಣಿ
                  
              ಅದೊಂದು ಊರು. ಆ ಊರಿನ ಮಧ್ಯಭಾಗದಲ್ಲಿ ಒಂದು ವಿಶಾಲವಾದ ಕೆರೆ. ಆ ಕೆರೆಯಲ್ಲಿ ಹಲವಾರು ಜಲಚರಗಳು ವಾಸವಾಗಿದ್ದವು. ಮೀನುಗಳು ಕಪ್ಪೆಗಳು ಏಡಿಗಳು.. ಹೀಗೆ ಕೆರೆಯು ಜಲಚರಗಳ ಸಂಸಾರವಾಗಿತ್ತು. ಊರ ಜನರು ಕೂಡ ಸ್ನಾನ ಮಾಡುವುದು ಬಟ್ಟೆ ಒಗೆಯುವುದು ತಮ್ಮ ಮನೆಗಳಿಗೆ ನೀರನ್ನು ತರುವುದು ಕೃಷಿಗೆ ನೀರಣಿಳಿಸುವುದು ಹೀಗೆ… ವಿವಿಧ ಕೆಲಸಗಳಿಗೆ ಆ ಕೆರೆಯನ್ನು ಬಳಸುತ್ತಿದ್ದರು. ಹಲವಾರು ಜಲಚರಗಳು ಮತ್ತು ‌ ಮಾನವನ ನಿತ್ಯ ಓಡಾಟದಿಂದ ಕೆರೆಯ ಪರಿಸರವು ಊರ ಜನರಿಗೆ ಪ್ರಾಣಿ ಪಕ್ಷಿಗಳಿಗೆ ಆಹ್ಲಾದಕರವಾಗಿತ್ತು . 
      ಆ ಕೆರೆಯಲ್ಲಿ ವಾಸವಾಗಿದ್ದ ಏಡಿಯೊಂದು ಪ್ರತಿದಿನ ನೀರು ಕುಡಿಯಲು, ಪುಟ್ಟ ಪುಟ್ಟ ಮೀನುಗಳನ್ನು ಆಹಾರವಾಗಿ ಸೇವಿಸಲು ಬರುತ್ತಿದ್ದ ಎರಡು ಕೊಕ್ಕರೆಗಳ ಜೊತೆಗೆ ಗೆಳೆತನ ಮಾಡಿಕೊಂಡಿತು. ಕೊಕ್ಕರೆಗಳು ತಮ್ಮ ಉದ್ದ ಕಾಲುಗಳನ್ನು ನೀರಿನಲ್ಲಿ ಇಳಿಬಿಟ್ಟು ನೀಳವಾದ ಕೊಕ್ಕಿನಿಂದ ನೀರನ್ನು ಕುಡಿಯುತ್ತಾ ಮೀನುಗಳನ್ನು ತಿನ್ನುತ್ತಾ ಖುಷಿ ಪಡುತ್ತಿದ್ದುದನ್ನು ಕಂಡ ಏಡಿಯು ಅವುಗಳೊಂದಿಗೆ ಮಾತಿಗಿಳಿಯಿತು. "ನಿಮ್ಮನ್ನು ನೋಡಿದರೆ ನನಗೆ ಬಹಳ ಸಂತೋಷ. ನಾನಾದರೋ ಈ ನೀರಿನೊಳಗೆ ಮಾತ್ರ ಬದುಕಬಲ್ಲೆ.‌ ಸ್ವಲ್ಪ ಹೊತ್ತು ದಡದಲ್ಲಿ ವಿಹರಿಸಬಹುದಾದರೂ ಕೂಡಲೇ ಪ್ರಾಣಿಗಳ ಭಯದಿಂದ ಮತ್ತೆ ನೀರಿಗಿಳಿಯಬೇಕಾಗುತ್ತದೆ. ನಿಮ್ಮನ್ನು ನೋಡಿದರೆ ಯಾವ ಭಯವೂ ಇಲ್ಲದೆ, ನೀರು ಕುಡಿಯುತ್ತೀರಿ. ಇಲ್ಲಿರುವ ಮೀನುಗಳೇ ನಿಮಗೆ ಆಹಾರ. ಸದಾ ಸಂತಸದಿಂದ ಸಂಭ್ರಮಿಸುತ್ತೀರಿ.‌ ಅಷ್ಟು ಮಾತ್ರವಲ್ಲ ಆಕಾಶದೆಡೆ ಹಾರುತ್ತಾ ಸಾಗುತ್ತೀರಿ. ನನಗೂ ನಿಮ್ಮಂತೆ ಆಗಸ ತುಂಬಾ ಹಾರಾಡಲು ಆಸೆ. ಕೊಕ್ಕರೆಗಳೆ ನೀವಿಬ್ಬರೂ ನನಗೆ ಅಕ್ಕತಂಗಿಯರು. ಒಂದು ಬಾರಿ ಆಕಾಶದಲ್ಲಿ ಹಾರುವಾಗಿನ ನಿಮ್ಮ ಅನುಭವಗಳನ್ನು ಹೇಳುವಿರಾ, ಕೇಳಿ ಸಂತಸಪಡುವೆ" ಎಂದಿತು.
       ಕೊಕ್ಕರೆಗಳಿಗೂ ಏಡಿಯ ಮಾತನ್ನು ಕೇಳಿ ಬಹಳ ಸಂತೋಷವಾಯಿತು. ಆಗಸದ ವಿಶಾಲತೆ, ತಾವು ಹಾರಾಡುವಾಗ ಉಂಟಾಗುವ ಗಾಳಿಯ ಮಧುರ ಅನುಭವ, ಮೇಲಕ್ಕೆ ಮೇಲಕ್ಕೆ ಹೋದಂತೆ ಭೂಮಿಯ ಮೇಲೆ ಇರುವ ಮರ ಗಿಡಗಳು ಮನೆಗಳು ಪುಟ್ಟದಾಗಿ ಕಾಣುವ ಸೊಬಗು, ಇವೆಲ್ಲವನ್ನೂ ವಿವರಿಸುತ್ತಾ ಸಾಗಿದವು. ಇದನ್ನು ಕೇಳಿ ಏಡಿಗೆ ಹೇಳತೀರದ ಆನಂದವಾಯಿತು. ನಾಳೆ ಸಿಗೋಣ ಎನ್ನುತ್ತಾ ಕೊಕ್ಕರೆಗಳೆರಡು ತಮ್ಮ ದಾರಿಗೆ ಹಾರಿ ಹೋದವು 
      ಏಡಿಯಾದರೋ ನೀರಿನೊಳಗೆ ಅತ್ತಿಂದಿತ್ತ ಚಲಿಸುತ್ತಾ ಕೊಕ್ಕರೆಗಳು ಆಡಿದ ಆಕಾಶಯಾನದ ಮಧುರ ಮಾತುಗಳನ್ನು ತನ್ನ ಮನದಲ್ಲಿ ಮರುಕಳಿಸುತ್ತಾ ತನಗೂ ಆಕಾಶದಲ್ಲಿ ಹಾರಬೇಕೆಂಬ ಹಂಬಲವನ್ನು ಹೆಚ್ಚಿಸುತ್ತಾ ಹೋಯಿತು. ಮತ್ತೆ ಯಾವಾಗ ಆ ಕೊಕ್ಕರೆಗಳ ಜೊತೆಗೆ ಸ್ನೇಹ ಮಾತುಗಳನಾಡುವೆನೋ ಎನ್ನುತ್ತಾ ಕಾತುರದಿಂದ ಕಾಯುತ್ತಿತ್ತು .
       ರಾತ್ರಿ ಕಳೆದು ಬೆಳಗಾಯಿತು. ಮತ್ತೆ ಕೊಕ್ಕರೆಗಳೆರಡು ನೀರು ಕುಡಿಯಲು ಹಾರಿ ಬಂದವು ಅದನ್ನೇ ಕಾಯುತ್ತಿದ್ದ ಏಡಿಯೂ ಬಂತು. ಅವುಗಳ ಜೊತೆ ಮತ್ತೆ ಹಾರಾಟದ ಮಧುರ ಯಾನದ ಅನುಭವವನ್ನು ಕೇಳುತ್ತಾ ಸಾಗಿತು. ಒಂದಷ್ಟು ವಿಹಂಗಮ ನೋಟಗಳ ಬಗ್ಗೆ ವಿವರಿಸಿದ ಹಕ್ಕಿಗಳು ಆಗಸದೆಡೆಗೆ ಹಾರಿ ಹೋದವು. ಆಕಾಶದಲ್ಲಿ ಹಾರಬೇಕೆಂಬ ಏಡಿಯ ಹಂಬಲ ಹೆಚ್ಚುತ್ತಾ ಹೋಯಿತು.
    ಹೀಗೆ ಒಂದೆರಡು ದಿನಗಳು ಕಳೆದವು. ಹಾರುವ ಉತ್ಕಟ ಆಸೆಯನ್ನು ಹೊಂದಿದ್ದ ಏಡಿಯು ಈ ದಿನ ನನ್ನನ್ನು ಹಾರಾಟಕ್ಕೆ ಕೊಂಡೊಯ್ಯಿರಿ, ಒಂದು ಬಾರಿ ಆಕಾಶ ಯಾನದ ಸೊಬಗನ್ನು ನಾನು ಅನುಭವಿಸುತ್ತೇನೆ ಎನ್ನುತ್ತಾ ಕೊಕ್ಕರೆಗಳಿಗೆ ದುಂಬಾಲುಬಿತ್ತು. 
      ಕೊಕ್ಕರೆಗಳಿಗೋ ಏಡಿಯ ಕನಸು ಆಸೆ ಕಂಡಾಗ ಬಹಳ ಬೇಸರವಾಯಿತು. ನೀರಿನೊಳಗೆ ಇರುವ ಆತನಿಗೆ ಹಾರಬೇಕೆಂಬ ಹಂಬಲ ಸಹಜವೇ. ಕೊಕ್ಕರೆಗಳು ಒಂದು ಉಪಾಯವನ್ನು ಯೋಚಿಸಿಕೊಂಡವು. ಮಾರನೆಯ ದಿನ ಒಂದು ಪುಟ್ಟ ಕೋಲನ್ನು ತಮ್ಮ ಕೊಕ್ಕುಗಳಲ್ಲಿ ಕಚ್ಚಿಕೊಂಡು ಬಂದವು. ಕೊಕ್ಕರೆಗಳು ನದಿಬದಿಗೆ ಬರುವುದನ್ನೇ ಏಡಿ ಕಾತರದಿಂದ ಕಾಯುತ್ತಿತ್ತು. ಇದೇನು ಎಂದಿತು. ನೀನು ಹಾರಾಡಬೇಕು ಎಂಬ ಆಸೆಯನ್ನು ಸೂಚಿಸಿದೆ. ಅದಕ್ಕಾಗಿ ನಾವು ಒಂದು ಉಪಾಯ ಮಾಡುತ್ತೇವೆ ಇದೋ ನೋಡು ಈ ಕೋಲಿನ ಎರಡೂ‌ ಕಡೆಗಳಲ್ಲಿ ನಾವು ಗಟ್ಟಿಯಾಗಿ ಕಚ್ಚಿಕೊಳ್ಳುತ್ತೇವೆ ಮಧ್ಯ ಭಾಗದಲ್ಲಿ ನೀನು ನಿನ್ನ ಬಾಯಿಯಿಂದ ಈ ಕೋಲನ್ನು ಭದ್ರವಾಗಿ ಹಿಡಿದುಕೋ. ಆಕಾಶದ ಎತ್ತರಕ್ಕೆ ಹಾರೋಣ. ಆದರೆ ಯಾವುದೇ ಕಾರಣಕ್ಕೂ ನೀನು ಬಾಯಿ ತೆರೆಯಬಾರದು. ಒಂದು ವೇಳೆ ಬಾಯಿ ತೆರೆದೆಯೆಂದಾದರೆ ಎತ್ತರದಿಂದ ಬಿದ್ದು ಸತ್ತು ಹೋಗುತ್ತೀಯೆ. ಕೊಕ್ಕರೆಯ ಮಾತುಗಳನ್ನು ಬಹಳ ಸಂತಸದಿಂದ ಒಪ್ಪಿದ ಏಡಿಯು ಹಾರಾಟಕ್ಕೆ ಸಿದ್ಧವಾಯಿತು. ಕೊಕ್ಕರೆಗಳ ಜತೆ ಏಡಿಯೂ ಆಕಾಶದಲ್ಲಿ ಹಾರುತ್ತಾ ಸಾಗಿತ್ತು. ಸ್ವರ್ಗಕ್ಕೆ ಮೂರೇ ಗೇಣು ಎಂಬ ಸಂತಸ ಏಡಿಗೆ.
       ಒಂದಷ್ಟು ಪುಟ್ಟ ಮಕ್ಕಳು ಬಯಲಿನಲ್ಲಿ ಆಟವಾಡುತ್ತಿದ್ದರು. ಕೊಕ್ಕರೆ ಏಡಿಗಳ ಪಯಣವನ್ನು ನೋಡಿದ ಮಕ್ಕಳು ಚಪ್ಪಾಳೆ ತಟ್ಟಿ ಕೇಕೆ ಹಾಕುತ್ತಾ ನಗಲಾರಂಭಿಸಿದರು. ನೋಡಿ, ನೋಡಿ ಕೊಕ್ಕರೆಗಳ ಜೊತೆ ಏಡಿ ಹೇಗೆ ಆಕಾಶದಲ್ಲಿ ಹಾರುತ್ತಿದೆ… ಮಕ್ಕಳ ಚಪ್ಪಾಳೆ ತನ್ನನ್ನು ಅವಮಾನ ಮಾಡಿದ ಅನುಭವ ನೀಡಿತು ಏಡಿಗೆ. ಸಿಟ್ಟು ಸಹಿಸಲಾಗಲಿಲ್ಲ.‌ ಆ ಮಕ್ಕಳನ್ನು ಬಯ್ಯುತ್ತೇನೆಂದು ಬಾಯಿ ತೆರೆದು ಅದೇನೋ ಹೇಳಹೊರಟಿತು. ಆದರೆ ಕೋಲಿನಿಂದ ಬಾಯಿ ತೆರೆದುದೇ ತಡ, ಎತ್ತರದ ಆಗಸದಿಂದ ಬಿದ್ದು ಸತ್ತೇ ಹೋಯಿತು. 
     ಪ್ರೀತಿಯ ವಿದ್ಯಾರ್ಥಿ ಮಿತ್ರರೇ ಹಲವು ಬಾರಿ ನಮ್ಮ ಜೀವನದಲ್ಲಿ ಈ ಏಡಿಯಂತೆ ಸಂದಿಗ್ಧ ಪರಿಸ್ಥಿತಿ ಎದುರಾಗುವುದಿದೆ ಅದೇನೋ ಕಾರಣಕ್ಕೆ ಸ್ಪರ್ಧೆಗಳಲ್ಲಿ ಭಾಗವಹಿಸಲಿರಬಹುದು ಭಾಷಣ ಮಾಡಲಾಗಿರಬಹುದು ಹಾಡು ಹೇಳಲಾಗಿರಬಹುದು ವೇದಿಕೆಯನ್ನೇರುತ್ತೇವೆ. ಆಗ ಹಿಂಭಾಗದಿಂದ ಒಂದಷ್ಟು ಕಣ್ಣುಗಳು ನಮ್ಮನ್ನೇ ನೋಡುತ್ತಾ ನಗುವುದನ್ನು ಕಾಣುತ್ತೇವೆ. ಏನು ಮಾಡಬಹುದು ಯೋಚಿಸಿ ನೋಡಿ. ಅವರನ್ನು ಬಯ್ಯುವುದಾಗಲಿ ಸಿಟ್ಟು ಮಾಡಿಕೊಳ್ಳುವುದಾಗಲಿ ಸಲ್ಲದು. ಬದಲಾಗಿ ನಾನು ಸ್ಪರ್ಧಿಸುವುದೇ ಇಲ್ಲ ಎಂದು ಕೈ ಚೆಲ್ಲಿ ಕುಳಿತುಕೊಳ್ಳುವುದೂ ತರವಲ್ಲ.
        ವಿಶೇಷವಾದ ಸಾಧನೆ ಮಾಡಬೇಕಾದರೆ ಒಂದೊಂದೇ ಹೆಜ್ಜೆಗಳನ್ನು ಮುಂದಿಡುತ್ತಾ ಸಾಗಬೇಕು. ಗುರು ಹಿರಿಯರ ಮಾತುಗಳನ್ನು ಕೇಳಬೇಕು. ಸಿಟ್ಟಿನ ಕೈಗೆ ನಮ್ಮ ಬುದ್ಧಿಯನ್ನು ನೀಡಿದಾಗ ಅದರಿಂದ ಹಾನಿ ನಮಗೇ ಆಗುತ್ತದೆ. ಯಾರು ಏನೇ ಅನ್ನಲಿ, ಗುರಿಯೆಡೆಗೆ ಪಯಣಿಸುವೆವೆಂಬ ಆತ್ಮವಿಶ್ವಾಸ ನಮ್ಮದಾದರೆ ನಮಗೆಂದೂ ಸೋಲಿಲ್ಲ. ಆದುದರಿಂದ ಕಲಿಕೆಯ ಹಾದಿಯಲ್ಲಿ ನೀವು ಇಡುವ ಪ್ರತಿ ಹೆಜ್ಜೆಯೂ ದೃಢವಾಗಿರಲಿ. ಹೆಜ್ಜೆ ಹೆಜ್ಜೆಗೂ ಕಲಿಯುತ್ತಾ ಮುಂದೆ ಸಾಗುವೆನೆಂಬ‌‌ ದೃಢ ಸಂಕಲ್ಪ ಅದಮ್ಯ ಚೈತನ್ಯದೊಂದಿಗೆ ನಿಮ್ಮನ್ನು ಗುರಿಯೆಡೆಗೆ ಕೊಂಡೊಯ್ಯಲಿ. ಎಂತಹ ಸಂದರ್ಭ ಬಂದರೂ ವಿಚಲಿತರಾಗದ ನಿಷ್ಟ ಕಾಯಕ ತತ್ವ ನಿಮ್ಮ ಜೀವನದ ಶ್ರೇಷ್ಠ ಪ್ರತಿಫಲನವಾಗಲಿ ಶುಭವಾಗಲಿ.
.......................................... ಪುಷ್ಪಲತಾ ಎಂ
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ವಳಾಲು
ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ
Mob : +91 99009 00456
*******************************************

Ads on article

Advertise in articles 1

advertising articles 2

Advertise under the article