ಸಂಚಾರಿಯ ಡೈರಿ : ಸಂಚಿಕೆ - 21
Friday, December 2, 2022
Edit
ಸಂಚಾರಿಯ ಡೈರಿ : ಸಂಚಿಕೆ - 21
ಸದಾ ಪರ್ಯಟನೆ ನನ್ನ ಹವ್ಯಾಸ.... ಹೊಸತನ್ನು ಹುಡುಕುತ್ತಾ , ಕಂಡರಿಯದ ಪ್ರದೇಶವನ್ನು ಸುತ್ತುತ್ತಾ ಅಲ್ಲಿಯ ವೈಶಿಷ್ಟ್ಯದ ಬಗ್ಗೆ ಹಾಗೂ ಜನರ ಜೀವನ , ಸಂಸ್ಕೃತಿ ಅಧ್ಯಯನ ಮಾಡೋದು ನನ್ನ ಆಸಕ್ತಿ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಸುತ್ತಾಟದ ಹಲವು ನೆನಪುಗಳು ನನ್ನ ಡೈರಿಯಲ್ಲಿದೆ. ನಿಮ್ಮ ಜೊತೆ ಹಂಚಿಕೊಳ್ಳುವ ಮಹದಾಸೆ ನನ್ನದು..... ಓದಿ ನಿಮ್ಮ ಅಭಿಪ್ರಾಯ ತಿಳಿಸುತ್ತೀರಿ ಅನ್ನುವ ವಿಶ್ವಾಸ ಇದೆ..... ಸುಭಾಸ್ ಮಂಚಿ
ಭಾರತ ದೇಶದ ವೈವಿಧ್ಯಮಯ ಸಂಸ್ಕೃತಿ, ಆಚಾರ ವಿಚಾರಗಳಿಗೆ ಯಾವುದೇ ಕೊರತೆಯಿಲ್ಲ. ವಸುಧೈವ ಕುಟುಂಬಕಂ ಎಂದು ಜಗತ್ತಿಗೇ ಸಾರಿದ ಈ ಮಹಾನ್ ದೇಶದಲ್ಲಿ ಸಾವಿರಾರು ಬುಡಕಟ್ಟು ಜನಾಂಗಗಳು ತಮ್ಮ ವಿಭಿನ್ನ ಆರಾಧನೆ, ವಿಚಿತ್ರ ಸಂಪ್ರದಾಯಗಳಿಗೆ ಹೆಸರಾಗಿವೆ..
ಅಂದಹಾಗೆ ಇಂದು ಚರ್ಚೆ ಮಾಡಲಿರುವ ವಿಶಿಷ್ಟ ಜನಾಂಗದ ಹೆಸರು 'ಬೋಡೋ' ಎಂದು. ಈ ಜನಾಂಗದ ಜನಸಂಖ್ಯೆ ಭಾರತದಲ್ಲಿ ಅಂದಾಜು ೨೦ ಲಕ್ಷ ಇರಬಹುದು (apprx). ಇದರಲ್ಲಿ ಬಹುಪಾಲು ಜನ ಅಸ್ಸಾಂನಲ್ಲೆ ನೆಲೆಸಿದ್ದಾರೆ.
ಒಂದು ಸಲ ನಾನು ಅಸ್ಸಾಂನ ಒಂದು ಹಳ್ಳಿಯಲ್ಲಿ, ಕೆರೆಯ ಪಕ್ಕ ಏನೋ ಯೋಚಿಸುತ್ತಿದ್ದೆ. ಆಗ ನನ್ನ ಮುಂದುಗಡೆಯ ಒಂದು ಚಿಕ್ಕ ಕಿರುದಾರಿಯಿಂದ ನಾಲ್ಕೈದು ಬಾಲಕರು ಕವಣೆ ಮತ್ತು ಕಲ್ಲು ಹಿಡಿದು ಬರತೊಡಗಿದರು. ಅದ್ಯಾರೆಂದು ನನ್ನ ಪಕ್ಕದಲ್ಲಿದ್ದ ಅಸ್ಸಾಮೀ ಆಸಾಮಿಯಲ್ಲಿ ಕೇಳಿದಾಗ "ಹೇಯ್!ಬೊರು ಬಾಹೊತ್ ಥಕ್ಕಾ ಸೊರಾಯಿ ಮಾರಿಬೋ" (ಬಿದಿರನಲ್ಲಿ ಗೂಡು ಕಟ್ಟಿರುವ ಹಕ್ಕಿಗಳನ್ನ ಹೊಡೆದೊಯ್ಯುತ್ತಾರೆ) ಎಂದಾಗ ನನಗೂ ಬೇಜಾರಾಯಿತು. ಆದರೆ ಅದು ಬೋಡೋ ಜನಾಂಗದ ಆಹಾರದ ಒಂದು ಭಾಗವಷ್ಟೇ!
ಇನ್ನು ಇವರು ದೇವರು ಎಂದು ಪೂಜಿಸೋದು ಪಾಪಸ್‌ಕಳ್ಳಿ ಗಿಡವನ್ನ. ಪಾಪಸ್‌ಕಳ್ಳಿ ಗಿಡವನ್ನ ನೆಟ್ಟು, ಸುತ್ತಲೂ ಬಿದಿರಿನ ಬೇಲಿನಿರ್ಮಿಸಿ ಪೂಜೆ ಮಾಡುತ್ತಾರೆ. ಈ ಪೂಜೆಯ ಹೆಸರು 'ಬಥೋ ಪೂಜಾ' ಎಂದು. ಸಾಮಾನ್ಯವಾಗಿ ವಿವಿಧ ಹಬ್ಬಗಳ ದಿನ ಈ ಪೂಜೆ ನಡೆಸುತ್ತಾರಾದರೂ, ಇಲ್ಲಿ ಖೇರಾಯಿ ಹಬ್ಬದ ದಿನ ಸಡಗರದ ಪೂಜೆ ನಡೆಯುತ್ತದೆ. ಕಳ್ಳಿಗಿಡದ ಸುತ್ತ ಕಟ್ಟಿದ ಬಿದಿರಿಗೆ ಹೂವು, ಹಣ್ಣು, ಪತ್ರೆಗಳ ಅರ್ಪಣೆ ಮಾಡುತ್ತಾರೆ. ಜತೆಗೆ ತೆಂಗಿನಕಾಯಿಯ ಸಿಪ್ಪೆಯ ಮೂಲಕ ಧೂಪಾರತಿ ಬೆಳಗುತ್ತಾರೆ. ದಿಯೋರಿ (ಅರ್ಚಕ)ನ ಆದೇಶದ ಅನ್ವಯ ಖೆರಾಯಿ ನೃತ್ಯ ಮಾಡುತ್ತಾರೆ. ಇಂತಹ ಹಲವಾರು ವಿಶಿಷ್ಟ ಸಂಪ್ರದಾಯಗಳು ನಮ್ಮ ಮಧ್ಯೆಯೂ ಇವೆ. ಅವನ್ನ ಗುರುತಿಸಿ, ಸಂರಕ್ಷಿಸೋದು ಇಂದಿನ ಜನಾಂಗದ ಆದ್ಯ ಕರ್ತವ್ಯವಾಗಿದೆ. ಏನಂತೀರಿ?
ಕಾಡಂಗಾಡಿ , ಮಂಚಿ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : 9663135413
******************************************