-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
                                                
              ಮಕ್ಕಳೇ.... ಶಿರೋನಾಮೆ ಪರಸ್ಪರ ವಿರುದ್ಧಾರ್ಥಕ ಪದಗಳು. ಆದರೆ ಎರಡೂ ಬಲಶಾಲಿಯಾದ ಪದಗಳು. ಮಿತ್ರರು ನಮ್ಮ ಗೆಲುವುಗಳಿಗೆ ಕಾರಣರಾಗುವವರು. ಶತ್ರುಗಳು ನಮ್ಮ ಸೋಲುಗಳಿಗೆ ಕಾರಣರಾಗುವವರು ಎಂದು ಹೇಳಲಾಗುತ್ತದೆ. ಆದರೆ ಕೆಲವೊಮ್ಮೆ ಮಿತ್ರರೂ ನಮ್ಮನ್ನು ಸೋಲಿಸಲಾರರು ಎನ್ನುವಂತಿಲ್ಲ. ಶತ್ರುಗಳು ಮತ್ತು ಮಿತ್ರರು ಎಲ್ಲಿರುತ್ತಾರೆ ಎಂಬ ಪ್ರಶ್ನೆ ಸಹಜ. ಹತ್ತಿರದಲ್ಲಿರುವವರು ಮಿತ್ರರು ದೂರದಲ್ಲಿರುವವರು ಶತ್ರುಗಳು ಎಂದು ವಿವರಿಸಬಹುದೇ? ನಮ್ಮ ಹಿತವನ್ನು ಬಯಸುವವರು ಹತ್ತಿರದಲ್ಲಿಯೂ ಇರಬಹುದು; ದೂರದಲ್ಲಿಯೂ ಇರಬಹುದು. ಅವರು ನಮಗೆ ಮಿತ್ರರು. ಹಾಗೆಯೇ ಶತ್ರುಗಳು ಹತ್ತಿರದಲ್ಲಿಯೂ ಇರಬಹುದು ದೂರದಲ್ಲಿಯೂ ಇರಬಹುದು. ಅವರು ನಮಗೆ ಕೇಡು ಬಗೆಯುವವರು. ಕಾಯಿಲೆಗಳು ನಮಗೆ ಶತ್ರುಗಳು ಆದರೆ ನಮ್ಮ ದೇಹದಲ್ಲಿಯೇ ಇರುತ್ತವೆ. ಈ ಕಾಯಿಲೆಯನ್ನು ಗುಣ ಪಡಿಸುವ ಔಷಧಗಳು ಇರುವುದು ಕಾಡಿನಲ್ಲಿ ಅಲ್ವೇ? ಅಂತೆಯೇ ಶತ್ರುಗಳು ನಮ್ಮೊಡನೆಯೇ ಇರಬಹುದು, ದೂರದಲ್ಲಿಯೂ ಇರಬಹುದು. ಶತ್ರು ಅಥವಾ ಮಿತ್ರ ಎಂದೊಡನೆ ನಮಗೆ ವ್ಯಕ್ತಿಗಳೇ ಗೋಚರವಾಗುತ್ತಾರೆ. ವ್ಯಕ್ತಿಗಳ ರೂಪದಲ್ಲಿ ಶತ್ರುಗಳಿದ್ದರೂ ಮಿತ್ರರಿದ್ದರೂ ಅದಕ್ಕೆ ಕಾರಣ ಅವರ ಮನಸ್ಸು. ನಾವೂ ಮಿತ್ರ ಅಥವಾ ಶತ್ರು ಪದವಿ ಪಡೆದಿಲ್ಲ ಎಂದು ಹೇಳುವಂತೆಯೂ ಇಲ್ಲ. ವ್ಯಕ್ತಿ ರೂಪದ ಶತ್ರುಗಳು ಹತ್ತಿರ ಮತ್ತು ದೂರ ಇದ್ದರೆ ಮನಸ್ಸಿಗೆ ಸಂಬಂಧಿಸಿದ ಶತ್ರುಗಳು ನಮ್ಮೊಳಗೇ ಇದ್ದಾರೆ.
        ಕೆಲವೊಮ್ಮೆ ಶತ್ರುಗಳಿಂದಲೂ ನಾವು ಬೆಳೆಯಲು ಸಾಧ್ಯ. ಶತ್ರುಗಳು ನಾವು ಮಾಡುವ ತಪ್ಪುಗಳನ್ನು ಹುಡುಕುತ್ತಲೇ ಇರುವವರೆಂಬುದು ನಿರ್ವಿವಾದ. ಇದರಿಂದಾಗಿ ನಾವು ಮಾಡುವ ತಪ್ಪುಗಳು ಇಳಿಮುಖವಾಗಿ ಸರಿಯನ್ನು ಮಾತ್ರ ಮಾಡುವವರಾಗಿ ಬದಲಾವಣೆ ಆಗಬಹುದು. ಶತ್ರುವನ್ನು ಸೋಲಿಸುವ ಉದ್ದೇಶದಿಂದ ಕೆಲವು ಸವಾಲುಗಳನ್ನು ನಾವು ಕೈಗೆತ್ತಿ ಗೆಲುವು ಪಡೆಯಲೂ ಬಹುದು. ಉದಾಹರಣೆಗೆ ನಾವು ಪುಟ್ಟ ವ್ಯಾಪಾರ ಆರಂಭಿಸಿ ಮೇಲೇರುತ್ತಾ ಹೋಗಿ ಬೃಹತ್ ಪ್ರಮಾಣದ ವ್ಯವಹಾರಗಳನ್ನು ಮಾಡುವವರಾಗಿ ಸುಧಾರಣೆಯಾಗಬಹುದು. ಶತ್ರು ಆಗಿದ್ದವನು ಇದರಿಂದಾಗಿ ನಮಗೆ ಮಿತ್ರನಾಗಿಯೂ ಬರಬಹುದು. ಆದರೆ ಶತ್ರುವನ್ನು ಮಿತ್ರನನ್ನಾಗಿ ಮಾಡುವಾಗ ಬಹಳ ಜಾಗರೂಕ ಚಿಂತನೆ ಬೇಕಾದೀತು. ಅವನಲ್ಲಿ ಮಾನಸಿಕ ಬದಲಾವಣೆ ಆಗಿದೆಯೇ ಎಂಬುದನ್ನು ಖಾತ್ರಿಗೊಳಿಸಿರಬೇಕು. ನಮ್ಮ ಮನದೊಳಗಿನ ಶತ್ರುಗಳಿಂದ ನಾವೆಂದೂ ಉದ್ಧಾರವಾಗಲು ಸಾಧ್ಯವಿಲ್ಲ. ಮನದೊಳಗಣ ಶತ್ರುಗಳನ್ನು ಜಯಿಸದೆ ಗತ್ಯಂತರವಿಲ್ಲ. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರ ನಮ್ಮ ಪ್ರಧಾನ ಶತ್ರುಗಳು. ನಮ್ಮ ಉದ್ಧಾರದ ಮಹಾ ಗೋಡೆಗಳವು. ಅರಿಷಡ್ವರ್ಗ ಎಂದೇ ಈ ಶತ್ರುಗಳನ್ನು ವ್ಯಾಖ್ಯಾನಿಸಲಾಗಿದೆ. ಅರಿ ಎಂದರೆ ವೈರಿ. ಅರಿಷಡ್ವರ್ಗದಿಂದಾಗಿಯೇ ನಮ್ಮಲ್ಲಿ ವರ್ತನೆ ಮತ್ತು ಮಾತುಗಳಲ್ಲಿ ಒರಟುತನ, ಅಸಾಧ್ಯ ಕೋಪ, ಸ್ವಾರ್ಥಪರತೆ, ಜಡತ್ವ, ಮೇಲಾಟ, ಜಗಳಗಳು, ಅಮಾನುಷತೆಗಳೇ ಮುಂತಾದ ಅನಪೇಕ್ಷಿತ ಲಕ್ಷಣಗಳು ಹೊರಗೆಡಹಲ್ಪಡುತ್ತವೆ. ನಮ್ಮನ್ನು ಬೆಳೆಸದೆ ತುಳಿಯುತ್ತವೆ. ಸಾಮಾಜಿಕ ತಿರಸ್ಕಾರಗಳಿಗೆ ಭಾಜನರಾಗುತ್ತೇವೆ.
       ನಮ್ಮ ಶತ್ರುಗಳನ್ನು ಗುರುತಿಸೋಣ. ಶತ್ರುಗಳು ದೂರವೇ ಇರಲಿ. ನಮ್ಮ ಮಿತ್ರರ ಸಂಖ್ಯೆಯನ್ನು ಹೆಚ್ಚಿಸುತ್ತಿರಲು ಅನವರತ ಪ್ರಯತ್ನಿಸೋಣ. ಸ್ನೇಹ ನಿಧಿಗಳಾಗೋಣ... ನಮಸ್ಕಾರ
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************




Ads on article

Advertise in articles 1

advertising articles 2

Advertise under the article