-->
ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಸ್ಫೂರ್ತಿಯ ಮಾತುಗಳು : ರಮೇಶ ಎಂ ಬಾಯಾರು

ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

            ಮಕ್ಕಳೇ...... ದಡ್ಡ, ಹೆಡ್ಡ, ಬಡ್ಡ, ಮೂಢ, ಬೆಪ್ಪ, ಲೂಸ್, ಪೆಟ್ಟು ಕಡಿಮೆ, ನೂರಕ್ಕೆ ನೂರು ಭರ್ತಿಯಿಲ್ಲ, ಸ್ವಲ್ಪ ನಿಧಾನ, ಟ್ಯೂಬ್ ಲೈಟ್...... ಹೀಗೆ ಕೆಲವು ಮಾಪನ ಪದಗಳಿವೆ. ವ್ಯಕ್ತಿಯ ಮಿದುಳಿನ ಶಕ್ತಿ ನ್ಯೂನವಾಗಿದೆ ಎಂಬುದನ್ನು ವ್ಯಕ್ತಗೊಳಿಸುವ ಪರಿಯಿದು. ಇಂತಹ ಪದಗಳನ್ನು ವ್ಯಕ್ತಿಯ ಸಾಮರ್ಥ್ಯದ ಅರಿವಿಲ್ಲದಾಗ ಬಳಕೆ ಮಾಡಿದರೆ ಅನ್ಯಾಯವಾಗುತ್ತದೆ. ಇಂತಹ ಪದಗಳನ್ನು ಬಳಸಿ ವ್ಯಕ್ತಿಯನ್ನು ಅಳೆಯುವವರ ಮುಖದಲ್ಲಿ ಸಣ್ಣ ಕುಹಕ ನಗುವೂ ಇರುತ್ತದೆ. ಈ ನಗು ವ್ಯಂಗ್ಯದ ಪ್ರತಿಬಿಂಬವಾಗಿರುವುದು ಶೋಚನೀಯ.  
         ನಾನು ಅಧ್ಯಾಪಕನಾಗಿ ತರಗತಿಯೊಳಗೆ ಕಂಡ ಹಲವು ಘಟನೆಗಳಲ್ಲಿ ಒಂದು ಘಟನೆ ಹೀಗಿದೆ. ಅಂದು ಓರ್ವ ಬೋಧಕರು ರಜೆಯಲ್ಲಿದ್ದರು. ಅವರ ಅವಧಿಯಲ್ಲಿ ನಾನು ಎಂಟನೇ ತರಗತಿಗೆ ಹೋದೆ. ಅದು ಜೂನ್ ಮೊದಲ ವಾರದ ಒಂದು ದಿನ ಇರಬೇಕು. ಮಕ್ಕಳಿಗೆ ಸಂತಸ ಉಣಿಸುವ ಯೋಚನೆಯಲ್ಲಿ ಹತ್ತು ನಿಮಿಷದ ಒಂದು ಆಟ ಆಡಿಸಲು ಯೋಚಿಸಿದೆ. ಮಕ್ಕಳಿಗೆ ಒಂದು ಬೈರಾಸನ್ನು ಕೊಟ್ಟು, ಅದನ್ನು ಹೇಗೆಲ್ಲಾ ಬಳಸಬಹುದೆಂದು ಮಾಡಿ ತೋರಿಸಿ ಎಂದೆ. ಅವರು ಹೇಗೆ ಬಳಸಿರುವರೆಂಬುದನ್ನು ಹೇಳಬೇಕಾದವರು ಕುಳಿತವರು ಎಂದು ವಿವರಿಸಿ, ಆಟವನ್ನು ಆರಂಭಿಸಲು ಹೇಳಿದೆ. ಒಬ್ಬನು ಲಂಗೋಟಿಯಂತೆ, ಇನ್ನೊಬ್ಬನು ಪೂಜೆಯವರು ಹಾಕುವ ಶಲ್ಯದಂತೆ, ಮಗದೊಬ್ಬರು ಹೆಣದ ಮೇಲೆ ಹಾಸುವ ಬಿಳಿ ವಸ್ತ್ರದಂತೆ.... ಹೀಗೆ ನಾನಾ ಉದ್ದೇಶಗಳಿಗೆ ಆ ಬೈರಾಸನ್ನು ಬಳಕೆ ಮಾಡಿ ಆಡಿದರು. ಕೊನೆಗೆ ಮೂವರು ಬಂದಿರಲಿಲ್ಲ. ನೀವ್ಯಾಕೆ ಆಡಲಿಲ್ಲ? ಉಳಿದವರೆಲ್ಲ ಆಡಿದರಲ್ಲಾ ಎಂದೆ. ತರಗತಿಯ ನಲವತ್ತೆಂಟು ಮುಖಗಳಲ್ಲಿ ಒಂದು ಮುಖ ಹೇಳಿತು, “ಅವರು ದಡ್ಡರು ಸರ್” ಎಂದು. ಇನ್ನೊಬ್ಬಳು ಅದರ ಇನ್ನೊಂದು ಪರ್ಯಾಯ ಪದ ಬಳಸಿ ವ್ಯಾಖ್ಯಾನ ನೀಡಿದಳು. ನನಗೂ ಏನು ಮಾಡುವುದೆಂಬ ಚಿಂತೆ ತಲೆಯೊಳಗೆ ಹೊಕ್ಕಿತು. ಆ ಮೂವರನ್ನೂ ಹತ್ತಿರಕ್ಕೆ ಕರೆದೆ. ನಿಮಗೂ ಅವರಂತೆ ಯಾವುದಾರೂ ಒಂದು ಕೆಲಸದಲ್ಲಿ ಬೈರಾಸನ್ನು ಬಳಸಿ ತೋರಿಸಲು ಸಾಧ್ಯವಿದೆ, ಪ್ರಯತ್ನಿಸಿ ಎಂದೊಡನೆ ಆ ಮೂವರೂ ಸಣ್ಣ ಮಾತುಕತೆ ಮಾಡಿದರು. ಒಬ್ಬ ಜಗಲಿಯಲ್ಲಿದ್ದ ಪ್ಲಾಸ್ಟಿಕ್ ಕುರ್ಚಿಗಳೆರಡನ್ನು ಒಳಗೆ ತಂದು ಹತ್ತಿರ ಹತ್ತಿರ ಇಟ್ಟ. ಉಳಿದಿಬ್ಬರನ್ನೂ ಅದರಲ್ಲಿ ಕುಳ್ಳಿರಿಸಿದ. ಕರಗಳೆರಡರಿಂದ ಅವರೀರ್ವರಿಗೂ ನಮಿಸಿದ. ಬೈರಾಸನ್ನು ಇಬ್ಬರ ಹೆಗಲಿಗೆ ಹೊದಿಸಿದ. ಮೇಜು ಮೇಲಿದ್ದ ಚೋಕ್ ಬಾಕ್ಸ್ ಮತ್ತು ಡಸ್ಟರನ್ನು ಅವರ ಕೈಗಳಲ್ಲಿಟ್ಟು ಪುನಹ ನಮಿಸಿದ. ಬುದ್ದಿವಂತರೆಂದೆಣಿಸಿದ್ದ ಉಳಿದ ನಲುವತ್ತೈದು ಮಂದಿಯೂ ಆ ಮೂವರ ಚಟುವಟಿಕೆಯನ್ನು ‘ಸನ್ಮಾನ’ ಎಂದು ಹೇಳಿಯೇ ಬಿಟ್ಟರು. ಜೊತೆಗೆ ಬೆರಗೂ ಆದರು. ದಡ್ಡರಾದರೂ ಯಾರಿಗೂ ಹೊಳೆಯದ ವಿಷಯವು ಅವರಿಗೆ ಹೊಳೆದುದು ಹೇಗೆ ಎಂಬುದೇ ಅವರಿಗೆ ಅವರ ಬೆರಗು. ಆದರೆ ನನಗೆ ಅವರು ಅರ್ಥವತ್ತಾಗಿ ಚಟುವಟಿಕೆ ನೀಡಿದ ಸಂತಸ.
        ಯಾರೂ ದಡ್ಡರಿಲ್ಲ. ಪ್ರತಿಯೊಬ್ಬನಿಗೂ ನೂರಕ್ಕಿಂತ ಕಡಿಮೆಯಾಗದ ಬೌದ್ಧಿಕ ಸಾಮರ್ಥ್ಯ ಇದ್ದೇ ಇದೆ. ಭಗವಂತ ಎಲ್ಲರಿಗೂ ಐ.ಕ್ಯು ಕೊಟ್ಟಿದ್ದಾನೆ. ಆದರೆ ಬಳಸುವ ಮನಸ್ಸು ನಮಗೆ ಬೇಕು. ನಮಗೆ ಒಬ್ಬ ಕೊಟ್ಟ ಸಿಹಿ ತಿಂಡಿಯನ್ನು ತಿಂದರೆ ಅದರ ಸವಿಯ ಆನಂದ ಸಿಗುತ್ತದೆ. ತಿನ್ನದೇ ಬಿಟ್ಟರೆ...? ಹಾಗೆಯೇ ಐ.ಕ್ಯು ವಿನ ಅನುಭವವೂ ಬಳಕೆಯಲ್ಲಿರುತ್ತದೆಯೇ ಹೊರತು ತಾನಾಗಿ ರಕ್ಷಿಸಲ್ಪಡುವುದಿಲ್ಲ. ಗರಗಸ ಸದಾ ಬಳಸಿದರೆ ಹರಿತವಿರುತ್ತದೆ. ಬಳಸದೆ ಜಾಗ್ರತೆಯಿಂದ ಅಡಗಿಸಿಟ್ಟರೆ ತುಕ್ಕು ಹಿಡಿದು ನಿರುಪಯುಕ್ತವಾಗುತ್ತದೆ. ಮಿದುಳಿಗೂ ಸಾಣೆ ಹಿಡಿಯಬೇಕು; ಸ್ವಪ್ರಯತ್ನದ ಆಲೋಚನೆಯೇ ಸಾಣೆ. ನಮ್ಮಲ್ಲಿ ಅದ್ಭುತ ಪ್ರತಿಭೆ ಇದೆ ಎಂಬ ಅರಿವು ನಮಗಿರಬೇಕು. ತನಗೇನೂ ತಿಳಿದಿಲ್ಲ ಎಂಬ ಮೂಢ ಯೋಚನೆ ಮಾಡಲೇ ಬಾರದು. ಅದು ನಮ್ಮ ಬಗೆಗೆ ತಾವು ತಾಳುವ ಮಿಥ್ಯ ಅರಿವು.
         ಮಾನಸಿಕತೆಯನುಸಾರ ನಮ್ಮ ಯೋಚನೆಗಳಿರುತ್ತವೆ. ಪರಿಸರವೂ ಮಾನಸಿಕತೆಯ ಮೇಲೆ ಪರಿಣಾಮಗಳನ್ನು ಬೀರುತ್ತದೆ. ನಮ್ಮ ಮನಸನ್ನು ಸದಾ ಪ್ರಫುಲ್ಲಿತವಾಗಿಡಲು ನಾವು ಅನಗತ್ಯ ವಿಷಯಗಳಿಂದ ದೂರವಿರಬೇಕು. ಅಗತ್ಯವಿರುವ ವಿಷಯಗಳನ್ನು ಕೈಬಿಡಲೇ ಬಾರದು. ದಡ್ಡತನ ನಮ್ಮ ಸೃಷ್ಟಿಯೇ ಹೊರತು, ದೇವರ ಸೃಷ್ಟಿಯಲ್ಲ. ಇತರರನ್ನು ದಡ್ಡ ಎಂದು ಪಟ್ಟ ಕಟ್ಟಿ ದೂರ ಸರಿಸುವ ವಿಕೃತಿಯೂ ಸಲ್ಲದು. ಯಾವ ಮಣ್ಣಿನಲ್ಲಿ ಯಾವ ಸತ್ವ ಇದೆಯೆಂಬುದನ್ನು ಅರಿತು ಬೀಜ ಬಿತ್ತಿ ಉತ್ತಮ ಬೆಳೆ ಪಡೆಯುತ್ತೇವೆ. ವ್ಯಕ್ತಿಗೂ ಅವನ ಸಾಮರ್ಥ್ಯಕ್ಕೆ ಪೂರಕವಾಗಿ ಅವನಲ್ಲಿ ಅರಿವಿನ ಬೀಜ ಬಿತ್ತಿದರೆ ಅವನು ಬಲಿತ ಜ್ಞಾನ ವೃಕ್ಷವಾಗಿ ಬೆಳಗುತ್ತಾನೆ. ಜಾಣ ಎಂಬ ಪದ ಪ್ರತಿಯೊಬ್ಬನಿಗೂ ಅನ್ವಯಿಸುತ್ತದೆ, ಯಾರೂ ದಡ್ಡರಲ್ಲ. ನಮಸ್ಕಾರ....
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
********************************************




Ads on article

Advertise in articles 1

advertising articles 2

Advertise under the article