
ಹಕ್ಕಿ ಕಥೆ : ಸಂಚಿಕೆ -73
Tuesday, November 15, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ... ಉತ್ತರ ಧ್ರುವ ಪ್ರದೇಶದಲ್ಲಿ ಚಳಿಗಾಲ ಬಂತು ಎಂದರೆ ನೀರು ಮಂಜುಗಡ್ಡೆಯಾಗಿ ಬಿಡುತ್ತದೆ. ಕೆರೆ, ನದಿ, ಸರೋವರಗಳ ಮೇಲ್ಪದರವೆಲ್ಲ ಮಂಜುಗಡ್ಡೆಯಾದಾಗ ನೀರನ್ನೇ ನಂಬಿ ಬದುಕುವ ಹಕ್ಕಿಗಳಿಗೆಲ್ಲ ಆಹಾರ ಸಿಗುವುದು ಕಷ್ಟವಾಗುತ್ತದೆ. ಆದರೆ ಹಕ್ಕಿಗಳು ಇದನ್ನು ಪರಿಹರಿಸಿಕೊಳ್ಳುವ ರೀತಿ ಮಾತ್ರ ಉಳಿದ ಪ್ರಾಣಿಗಳಿಗಿಂತ ವಿಭಿನ್ನ. ಹಕ್ಕಿಗಳು ತಮ್ಮ ರೆಕ್ಕೆಯನ್ನು ನಂಬಿ ಚಳಿ ಕಡಿಮೆ ಇರುವ ಪ್ರದೇಶಗಳಿಗೆ ಹಾರಿ ವಲಸೆ ಹೋಗುತ್ತವೆ. ಈ ವಲಸೆ ನೂರಾರು ಕಿಲೋಮೀಟರ್ ನಿಂದ ಸಾವಿರಾರು ಕಿಲೋಮೀಟರ್ ಕೂಡ ಆಗಿರಬಹುದು. ಹೀಗೆ ವಲಸೆ ಬರುವ ಹಕ್ಕಿಗಳಿಗೆ ವೇಡರ್ಸ್ ಎಂದು ಕರೆಯುತ್ತಾರೆ. ಅಂತಹ ಹಕ್ಕಿಯೊಂದನ್ನು ಇಂದು ಪರಿಚಯ ಮಾಡಿಕೊಳ್ಳೋಣ.
ನಾನು ಪಕ್ಷಿವೀಕ್ಷಣೆಗೆ ಅಂತ ಒಂದು ಬಾರಿ ಮೈಸೂರಿನ ಗೆಳೆಯ ಡಾ. ಅಭಿಜಿತ್ ಅವರ ಮನೆಗೆ ಹೋಗಿದ್ದೆ. ಅವರ ಮನೆಯ ಆಸುಪಾಸಿನಲ್ಲಿ ಹಲವಾರು ಕೆರೆಗಳು ಇವೆ. ಅಂತಹ ಒಂದು ಕೆರೆಯಲ್ಲಿ ಪಕ್ಷಿಗಳನ್ನು ನೋಡುತ್ತಿದ್ದಾಗ ನನಗೆ ಈ ಹಕ್ಕಿ ಮೊದಲ ಬಾರಿಗೆ ನೋಡಲು ಸಿಕ್ಕಿದ್ದು. ಬಯಲು ಸೀಮೆಯ ಹಲವಾರು ಕಡೆ ಈ ಹಕ್ಕಿಯನ್ನು ನಾನು ನೋಡಿದ್ದೇನೆ. ಬಿಳೀ ಬಣ್ಣದ ದೇಹ, ಕಪ್ಪು ಬಣ್ಣದ ರೆಕ್ಕೆಗಳು, ತುಸು ಬಾಗಿದ ಉದ್ದನೆಯ ಕೊಕ್ಕು, ನೀಳವಾದ ಉದ್ದನೆಯ ಕಾಲುಗಳು, ಕಾಲಿನ ಕೆಂಪು ಬಣ್ಣ, ಸುಮಾರು ಒಂದು ಅಡಿ ಎತ್ತರದ ಹಕ್ಕಿ. ಸಾಮಾನ್ಯವಾಗಿ ಹಿಂಡು ಹಿಂಡಾಗಿ ಕೆರೆಯ ಅಂಚು ಅಥವಾ ನದೀ ಬದಿಯ ಜೌಗು ಪ್ರದೇಶದಲ್ಲಿ, ಸಣ್ಣ ಪುಟ್ಟ ನೀರ ಹರಿವಿನ ಆಸುಪಾಸಿನಲ್ಲಿ ಕಾಣಸಿಗುತ್ತದೆ. ಕೆಸರಿನಲ್ಲಿ ತನ್ನ ಕಾಲನ್ನು ಇಟ್ಟುಕೊಂಡು ನಡೆಯುತ್ತಾ ನೀರಿನ ಆಸುಪಾಸಿನಲ್ಲಿರುವ ಕೀಟಗಳು, ಏಡಿ ಮೊದಲಾದವುಗಳ ಮೊಟ್ಟೆಯನ್ನು ಹುಡುಕುತ್ತಾ ಗುಂಪಾಗಿ ಓಡಾಡುತ್ತಿರುತ್ತದೆ. ಅಪಾಯ ಎಂದು ಅನಿಸಿದರೆ ಕೂಡಲೇ ಹಾರಿ ಸ್ವಲ್ಪ ದೂರ ಹೋಗಿಬಿಡುತ್ತದೆ.
ಈಗ ಚಳಿಗಾಲ ಪ್ರಾರಂಭ ಆಗಿದೆ. ನಿಮ್ಮ ಆಸುಪಾಸಿನ ನೀರಿನ ಮೂಲಗಳ ಹತ್ತಿರ ನೀವು ಈ ಹಕ್ಕಿಯನ್ನು ನೋಡಬಹುದು. ಬೇಸಿಗೆಕಾಲದ ಕೊನೆಯಲ್ಲಿ ಮತ್ತೆ ತನ್ನ ತವರಾದ ರಷ್ಯಾ ಮತ್ತು ಯುರೋಪ್ ನ ಪ್ರದೇಶಗಳಿಗೆ ಹಿಂದಿರುಗಿ ಸಂತಾನಾಭಿವೃದ್ಧಿ ಮಾಡುತ್ತವೆ. ಹೀಗೆ ಪ್ರತಿ ವರ್ಷ ಹಲವು ಜಾತಿಯ ಹಕ್ಕಿಗಳು ದಕ್ಷಿಣ ಭಾರತದ ಪ್ರದೇಶಗಳಿಗೆ ವಲಸೆ ಬರುತ್ತವೆ. ನಿಮ್ಮೂರಿನ ಕೆರೆಯನ್ನು ಒತ್ತುವರಿ ಮಾಡಿ, ಕೃಷಿಗೋ ವಸತಿಗೋ ಕೈಗಾರಿಕೆಗೋ ಬಳಸಿಕೊಂಡರೆ ಮತ್ತೆಂದೂ ಈ ವಲಸೆ ಹಕ್ಕಿಗಳು ನಿಮ್ಮೂರಿಗೆ ಬರುವುದಿಲ್ಲ. ನಿಮ್ಮಂತೆಯೇ ಹಕ್ಕಿಗಳ ಬಗ್ಗೆ ಆಸಕ್ತರ ಜೊತೆ ಈ ವಲಸೆ ಹಕ್ಕಿಗಳನ್ನು ಗಮನಿಸಿ ದಾಖಲಿಸಿ.
ಕನ್ನಡ ಹೆಸರು: ಮೆಟ್ಟುಗಾಲು ಹಕ್ಕಿ
ಇಂಗ್ಲೀಷ್ ಹೆಸರು: Black-Winged stilt
ವೈಜ್ಞಾನಿಕ ಹೆಸರು: Himantopus himantopus
ಛಾಯಾಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************