-->
ಹಕ್ಕಿ ಕಥೆ : ಸಂಚಿಕೆ - 72

ಹಕ್ಕಿ ಕಥೆ : ಸಂಚಿಕೆ - 72

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
       
              ಮಕ್ಕಳೇ ನಮಸ್ತೇ.. ಈ ವಾರದ ಹಕ್ಕಿ ಕಥೆಗೆ ಸ್ವಾಗತ. ರಜೆ ಬಂತು ಎಂದರೆ ನಾವೆಲ್ಲಾದರೂ ಸುತ್ತಾಡಲು ಹೋಗೋಣ ಎಂದು ಅನ್ನಿಸುವುದು ಸಹಜ ಅಲ್ಲವೇ. ಕುಟುಂಬದ ಸದಸ್ಯರ ಜೊತೆ ಸ್ನೇಹಿತರ ಜೊತೆ ಎಲ್ಲಾದರೂ ಹೋಗಿಬರೋಣ ಎಂದು ಯೋಚಿಸುತ್ತೇವೆ ಅಲ್ಲವೇ. ಹಕ್ಕಿಗಳೂ ಹೀಗೆ ರಜೆಗೆ ಎಲ್ಲಾದರೂ ಹೋಗುತ್ತವೆಯೇ ಎಂದು ನನ್ನ ಮಗಳು ಒಂದು ದಿನ ಕೇಳಿದಳು. ಒಳ್ಳೆ ಪ್ರಶ್ನೆ ಎಂದುಕೊಂಡು ಆ ಬಗ್ಗೆ ಮಾಹಿತಿಗಾಗಿ ಹುಡುಕಾಡಿದೆ. 
         ಹಕ್ಕಿಗಳು ಜಗತ್ತಿನ ಎಲ್ಲ ಭೂಭಾಗಗಳಲ್ಲೂ ನೋಡಲು ಸಿಗುತ್ತವೆ. ಭೂಮಿಯ ಮೇಲೆ ಹವಾಮಾನ ಎಲ್ಲಾ ತಿಂಗಳಲ್ಲೂ ಒಂದೇ ರೀತಿ ಇರುವುದಿಲ್ಲ. ಕೆಲವು ತಿಂಗಳು ಬಿಸಿಲು ಜಾಸ್ತಿ ಇದ್ದರೆ ಇನ್ನು ಕೆಲವು ತಿಂಗಳು ಚಳಿ ಜಾಸ್ತಿ ಇರುತ್ತವೆ. ಚಳಿ ಜಾಸ್ತಿ ಆದಾಗ ಕೆಲವು ಕಡೆ ಹಿಮಪಾತ ಅಂದರೆ ಐಸ್‌ ಬೀಳುತ್ತದೆ. ಕೆರೆ, ಸರೋವರದ ನೀರೆಲ್ಲ ಮಂಜುಗಡ್ಡೆ ಆಗಿ ಎಲ್ಲ ಕಡೆ ಬಿಳೀ ಬಣ್ಣದ ಮಂಜಿನ ಹೊದಿಕೆ ಆವರಿಸಿಕೊಳ್ಳುತ್ತದೆ. ಹಗಲಿನ ಸೂರ್ಯನ ಓರೆ ಬಿಸಿಲು ಬಿದ್ದರೂ ಮಂಜು ಕರಗುವುದಿಲ್ಲ. ಭೂಮಿಯ ಉತ್ತರಾರ್ಧ ಗೋಳದಲ್ಲಿ ಈಗ ಅಂತಹ ಚಳಿಗಾಲ ಪ್ರಾರಂಭವಾಗಿದೆ. ಭಾರತದ ಉತ್ತರ ಭಾಗದಲ್ಲಿರುವ ಹಿಮಾಲಯದಲ್ಲೂ ಈಗ ಚಳಿಗಾಲ.  
          ಚಳಿಗಾಲ ಪ್ರಾರಂಭವಾದರೆ ಎಲ್ಲ ಕಡೆ ಮಂಜಿನ ಪದರ ಆವರಿಸಿಕೊಳ್ಳುವುದರಿಂದ ಆಹಾರ ಮತ್ತು ನೀರು ಸಿಗುವುದು ಸ್ವಲ್ಪ ಕಷ್ಟ. ಹೀಗಾದಾಗ ಅಲ್ಲೇ ವಾಸಿಸುವ ಕೆಲವು ಪ್ರಾಣಿಗಳು ಚಳಿಗಾಲ ಮುಗಿಯುವ ತನಕ ದೀರ್ಘ ನಿದ್ರೆಗೆ ಜಾರಿಕೊಳ್ಳುತ್ತವೆಯಂತೆ. ಆದರೆ ಅಲ್ಲಿ ವಾಸಿಸುವ ಕೆಲವು ಜಾತಿಯ ಹಕ್ಕಿಗಳು ಮಾತ್ರ ಇದಕ್ಕೆ ಬೇರೆಯದೇ ಉಪಾಯ ಕಂಡುಕೊಂಡಿವೆ. ಉತ್ತರದ ಹಿಮಾಲಯ ಮತ್ತು ಅದರ ಆಸುಪಾಸಿನ ಬಯಲುಗಳಲ್ಲಿ ವಾಸಿಸುವ ಕೆಲವು ಹಕ್ಕಿಗಳು ಚಳಿಗಾಲ ಬಂತು ಎಂದರೆ ದಕ್ಷಿಣ ಭಾರತದ ಕಡೆಗೆ ವಲಸೆ ಬರುತ್ತವೆ. ಇಲ್ಲೂ ಚಳಿಗಾಲವೇ ಆದರೂ ನೀರು ಮಂಜುಗಡ್ಡೆ ಆಗುವ ಸಮಸ್ಯೆ ಇಲ್ಲ. ಮಾತ್ರವಲ್ಲ ಮಳೆಗಾಲ ಕಳೆದು ನೀರಿನ ಮೂಲಗಳಲ್ಲಿ ಸಮೃದ್ಧವಾಗಿ ಬೆಳೆದ ಜಲಚರ ಜೀವಿಗಳೂ ಸಿಗುತ್ತವೆ, ಇತರೆ ಸಸ್ಯಮೂಲದ ಆಹಾರವೂ ಸಾಕಷ್ಟು ಸಿಗುತ್ತದೆ. ಹೀಗೆ ಸಾಮಾನ್ಯವಾಗಿ ಬರುವ, ಎಲ್ಲಾ ಕಡೆ ಕಾಣಲು ಸಿಗುವ ಹಕ್ಕಿಯೊಂದನ್ನು ಇವತ್ತು ಪರಿಚಯ ಮಾಡಿಕೊಳ್ಳೋಣ. 
      ನಿಮ್ಮ ಮನೆಯ ಆಸುಪಾಸಿನಲ್ಲಿ ಗದ್ದೆ, ಕೆರೆ, ನೀರು ಹರಿಯುವ ಸಣ್ಣ ತೋಡು ಅಥವಾ ದೊಡ್ಡ ನದಿಯೇ ಇದ್ದರೂ ನೀವು ಈ ಹಕ್ಕಿಯನ್ನು ನೋಡಬಹುದು. ಸಮುದ್ರದ ಬದಿಗೆ ಸೂರ್ಯಾಸ್ತ ನೋಡಲು ಹೋಗುತ್ತೀರಿ ಎಂದಾದರೆ ಸ್ವಲ್ಪ ಕಡಿಮೆ ಜನಜಂಗುಳಿ ಇರುವ ಪ್ರದೇಶದಲ್ಲಿ ನೀವು ಬಹಳ ಸುಲಭವಾಗಿ ಈ ಹಕ್ಕಿಯನ್ನು ನೋಡಬಹುದು.          
           ಗಾತ್ರದಲ್ಲಿ ಕೋಳಿಮರಿಗಿಂತ ಸ್ವಲ್ಪ ದೊಡ್ಡದು. ಹೊಟ್ಟೆಯ ಭಾಗ ಚಂದದ ಬಿಳೀ ಬಣ್ಣ, ರೆಕ್ಕೆ, ಮುಖ, ಕತ್ತಿನ ಭಾಗ ಹಸುರು ಮಿಶ್ರಿತ ಬೂದು ಬಣ್ಣ. ನೇರವಾದ ಕೊಕ್ಕು. ನೀರಿನ ಮೂಲಗಳ ಅಂಚಿನಲ್ಲಿ ಬಾಲ ಮತ್ತು ದೇಹವನ್ನು ಕುಣಿಸುತ್ತಾ ಕೆಸರು ಮಣ್ಣನ್ನು ಕೆದಕಿ ಕೀಟಗಳು, ಏಡಿಯ ಮೊಟ್ಟೆ ಮೊದಲಾದ ಜಲಮೂಲದ ಆಹಾರಗಳನ್ನು ಹುಡುಕುತ್ತಾ ಇರುತ್ತದೆ. ಭಯವಾದಾಗ ತಕ್ಷಣ ಹಾರಿ ನೀರಿನಮೇಲೆ ಅಥವಾ ಬದಿಯಲ್ಲಿ ತೇಲುತ್ತಾ ಸಾಗಿದಂತೆ ಹಾರಿ ದೂರ ಹೋಗುತ್ತದೆ. ನಿಮ್ಮ ಆಸುಪಾಸಿನಲ್ಲಿ ಈ ಹಕ್ಕಿ ಈಗಾಗಲೇ ಹಿಮಾಲಯದಿಂದ ಬಂದಿರಬಹುದು.
ಕನ್ನಡದ ಹೆಸರು: ಗದ್ದೆ ಗೊರವ
ಇಂಗ್ಲೀಷ್‌ ಹೆಸರು: Common Sandpiper
ವೈಜ್ಞಾನಿಕ ಹೆಸರು: Actitis hypoleucos
ಛಾಯಾಚಿತ್ರ : ಅರವಿಂದ ಕುಡ್ಲ
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************


Ads on article

Advertise in articles 1

advertising articles 2

Advertise under the article