ಹಕ್ಕಿ ಕಥೆ : ಸಂಚಿಕೆ - 71
Tuesday, November 1, 2022
Edit
ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ.... ಈ ವಾರದ ಹಕ್ಕಿ ಕಥೆಗೆ ಸ್ವಾಗತ... ಮದುವೆಯಾದ ಹೊಸತರಲ್ಲಿ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ನವದಂಪತಿಗಳಾದ ನಮ್ಮನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸುತ್ತಿದ್ದರು. ಹೀಗೆ ಹಲವಾರು ಸಂಬಂಧಿಗಳ ಮನೆಗೆ ಸುತ್ತಾಡುತ್ತಾ ಮೈಸೂರಿಗೆ ಹೋಗಿದ್ದೆವು. ನಮ್ಮ ಆತ್ಮೀಯರಾದ ಒಂದಿಬ್ಬರ ಮನೆಗಳಿಗೆ ನಾವು ಹೋಗಬೇಕಿತ್ತು. ನಾನು ಮೈಸೂರಿನಲ್ಲಿ ಓದುತ್ತಿದ್ದಾಗ ತಮ್ಮ ಸ್ವಂತ ಮಗನಂತೆ ನನ್ನ ಬಗ್ಗೆ ಕಾಳಜಿ ಮಾಡುತ್ತಿದ್ದ ನರಸಿಂಹ ಮಾಮ ಮತ್ತು ಕಾವೇರತ್ತೆ ದಂಪತಿಗಳ ಮನೆಗೆ ಹೋಗಿದ್ದೆವು. ಮನೆಯವರೆಲ್ಲ ಬೆಳಗ್ಗಿನ ತಿಂಡಿಯ ತಯಾರಿಯಲ್ಲಿ ಇದ್ದರು. ನಾನು ಸ್ವಲ್ಪ ಹೊರಗೆ ವಾಕಿಂಗ್ ಹೋಗಿ ಬರುತ್ತೇನೆ ಎಂದು ಹೇಳಿ ನನ್ನ ಕ್ಯಾಮರಾ ಹಿಡಿದುಕೊಂಡು ಹೊರಟೆ. ಅವರ ಮನೆಯಿಂದ ಸ್ವಲ್ಪ ದೂರದಲ್ಲೇ ರಾಗಿಯ ಹೊಲಗಳು ಇದ್ದವು. ಪೇಟೆಯ ಅಂಚಿನ ಊರಾದ್ದರಿಂದ ಜಾನುವಾರುಗಳು ಹೊಲಕ್ಕೆ ನುಗ್ಗದಿರಲಿ ಎಂದು ಮುಳ್ಳಿನ ಗಿಡಗಳ ಬೇಲಿ ಹಾಕಿದ್ದರು. ಆ ಮುಳ್ಳಿನ ಗಿಡಗಳ ನಡುವೆ ಒಣಗಿದ ಹುಲ್ಲಿನಿಂದ ಮಾಡಿದ ಚೆಂಡಿನಾಕಾರದ ಗೂಡೊಂದು ಅಡಗಿ ಕುಳಿತಿರುವುದು ಕಾಣಿಸಿತು. ಅಲ್ಲಿಂದ ಸ್ವಲ್ಪ ದೂರದಲ್ಲೇ ಇದ್ದ ರಾಗಿಯ ಗದ್ದೆಯಲ್ಲಿ ಬಲಿತ ರಾಗಿ ತೆನೆಯ ಮೇಲೆ ಯಾವುದೋ ಪುಟಾಣಿ ಹಕ್ಕಿ ಕುಳಿತಿರುವುದು ಕಾಣಿಸಿತು. ಕ್ಯಾಮರಾ ತೆಗೆದು ಫೋಟೋ ತೆಗೆಯೋಣ ಎನ್ನುವಷ್ಟರಲ್ಲಿ ಯಾವುದೋ ದೊಡ್ಡ ಬಂದೂಕು ನೋಡಿದವರಂತೆ ಹೆದರಿ ರಾಗಿಯ ಹೊಲದೊಳಗೆ ಹೋಗಿ ಅವಿತುಕೊಂಡವು. ನಾನೂ ಅಲ್ಲೇ ಇದ್ದ ಕಿಲೋಮೀಟರ್ ಕಲ್ಲಿನ ಮೇಲೆ ಕುಳಿತುಕೊಂಡು ಬೈನಾಕುಲರ್ ಮೂಲಕ ಗಮನಿಸತೊಡಗಿದೆ.
ತಿಳಿಕಂದು ಬಣ್ಣದ ದೇಹ, ಕುತ್ತಿಗೆ ಎದೆ ಮತ್ತು ಬೆನ್ನಿನ ಭಾಗದಲ್ಲಿ ತಿಳಿಬಿಳಿ ಬಣ್ಣ, ಚೂಪಾದ ತುದಿಯ ಬಾಲ, ಬಾಲ ಮತ್ತು ರೆಕ್ಕೆಯ ತುದಿಯಲ್ಲಿ ಕಪ್ಪು ಬಣ್ಣ. ಇದರ ಜೊತೆಗೆ ಬೆಳ್ಳಿ ಲೋಹದಿಂದ ಮಾಡಲಾಗಿದೆಯೋ ಎಂಬಂತೆ ಕಾಣುವ ಕೊಕ್ಕು. ಈ ಕೊಕ್ಕು ಧಾನ್ಯಗಳನ್ನು ತಿನ್ನಲು, ಹುಲ್ಲನ್ನು ಮುರಿಯಲು ಬಹಳ ಸಹಕಾರಿ. ತಕ್ಷಣ ನೋಡಲು ಗುಬ್ಬಚ್ಚಿಯಂತೆ ಕಂಡರೂ ಗುಬ್ಬಚ್ಚಿಗಿಂತ ಚಿಕ್ಕದು. ಮುನಿಯಾ ಅಥವಾ ರಾಟವಾಳಗಳ ಕುಟುಂಬಕ್ಕೆ ಸೇರಿದ ಹಕ್ಕಿ ಇದು. ಸಿಗುವ ಜಾಗಕ್ಕೆ ಹೊಂದಿಕೊಂಡು ಮುನಿಯಾ ಹಕ್ಕಿಗಳಂತೆ ಗೋಲಾಕಾರದ ಅಥವಾ ಕೊಳವೆಯಾಕಾರದ ಗೂಡನ್ನು ಮಾಡುತ್ತವೆ. ಒಂದು ಬದಿಯಿಂದ ಒಳಗೆ ಹೋಗಲು ಬಾಗಿಲು ಇರುತ್ತದೆ. ವಿಶೇಷ ಅಂದರೆ ಮರಿಗಳು ರೆಕ್ಕೆ ಬಲಿತು ಹಾರಲು ಕಲಿತ ನಂತರವೂ ಈ ಹಕ್ಕಿಗಳು ತಮ್ಮ ಗೂಡನ್ನು ಕೆಲವು ಸಮಯ ರಾತ್ರಿ ಮಲಗುವ ಕೋಣೆಯನ್ನಾಗಿ ಬಳಸುತ್ತವೆ. ಆಹಾರದ ಲಭ್ಯತೆಯನ್ನು ಆಧರಿಸಿ ವರ್ಷದ ಬೇರೆಬೇರೆ ಕಾಲದಲ್ಲಿಯೂ ಈ ಹಕ್ಕಿ ಗೂಡುಕಟ್ಟಿ ಮರಿಮಾಡುತ್ತವೆ.
ಭಾರತದ ನೈರುತ್ಯ ಭಾಗ, ಪೂರ್ವೋತ್ತರ ರಾಜ್ಯಗಳು, ಹಿಮಾಲಯ ಪ್ರದೇಶಗಳನ್ನು ಹೊರತುಪಡಿಸಿ ದೇಶದ ಉದ್ದಗಲಕ್ಕೂ ಈ ಹಕ್ಕಿ ಕಾಣಲು ಸಿಗುತ್ತದೆ ಎಂದು ಪಕ್ಷಿತಜ್ಞರು ಹೇಳುತ್ತಾರೆ. ಕರ್ನಾಟಕದ ಪಶ್ಚಿಮ ಕರಾವಳಿ ಮತ್ತು ಮಲೆನಾಡು ಹೊರತುಪಡಿಸಿ ಉತ್ತರ ಕರ್ನಾಟಕ ಮತ್ತು ಮೈಸೂರು ಸೀಮೆಯ ಎಲ್ಲ ಕಡೆ ಈ ಹಕ್ಕಿ ಸಾಮಾನ್ಯವಾಗಿ ಕಾಣಲು ಸಿಗುತ್ತದೆ. ಗುಂಪು ಗುಂಪಾಗಿ ಓಡಾಡುವ ಈ ಹಕ್ಕಿಗಳು ರಸ್ತೆಯ ಬದಿಯಲ್ಲಿಯೂ ಸುಲಭವಾಗಿ ನೋಡಲು ಸಿಗುತ್ತವೆ. ಹುಡುಕ್ತೀರಲ್ಲ..
ಕನ್ನಡ ಹೆಸರು: ಬಿಳಿ ಕತ್ತಿನ ರಾಟವಾಳ
ಇಂಗ್ಲೀಷ್ ಹೆಸರು: Indian Silverbill
ವೈಜ್ಞಾನಿಕ ಹೆಸರು: Euodice malabarica
ಚಿತ್ರ ಕೃಪೆ : ಹೇಮಂತ್ ಕುಮಾರ್
ಮುಂದಿನವಾರ ಇನ್ನೊಂದು ಹೊಸ ಹಕ್ಕಿಯ ಪರಿಚಯದೊಂದಿಗೆ ಸಿಗೋಣ.
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************