-->
ಬದಲಾಗೋಣವೇ ಪ್ಲೀಸ್.....! ಸಂಚಿಕೆ - 70

ಬದಲಾಗೋಣವೇ ಪ್ಲೀಸ್.....! ಸಂಚಿಕೆ - 70

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
    

          "ಗಳಿಸಿದ ಪದವಿ, ಪಡೆದ ಬಿರುದು ಹಾಗೂ ಹಾಕಿದ ಪಾದರಕ್ಷೆಗಳನ್ನು ಇಲ್ಲೇ ಬಿಟ್ಟು ಸರಳವಾಗಿ ದೇವಾಲಯದೊಳಗೆ ಬನ್ನಿ. ದೇವರಿಗೆ ಇದ್ಯಾವುದರ ಅಗತ್ಯವಿಲ್ಲ. ಅವರಿಗೆ ಭಕ್ತಿ ಮಾತ್ರ ಸಾಕು".
     ಇತ್ತೀಚೆಗಷ್ಟೇ ದೇವಾಲಯಕ್ಕೆ ಭೇಟಿ ನೀಡಿದಾಗ ನನ್ನ ಗಮನ ಸೆಳೆದ ವಾಕ್ಯವಿದು. ಒಂದು ಕ್ಷಣ ಗಲಿಬಿಲಿಗೊಂಡೆ. ಇದು ನನ್ನನ್ನು ಬಹುವಾಗಿ ಕಾಡಿದ ವಾಕ್ಯ. ಹೌದಲ್ಲವೇ !... ದೇವರ ದರ್ಶನ ಮಾಡುವ ಮೂಲಕ ನಮ್ಮ ಮನಸ್ಸಿಗೆ ಪ್ರಶಾಂತತೆಯನ್ನು ತರಬಹುದು. ನಮ್ಮನ್ನು ನಾವು ಅರಿಯಬಹುದು. ತನ್ಮೂಲಕ ದೇವರೆಂಬ ಶಕ್ತಿಯ ನಂಬಿಕೆ ಮೂಲಕ ಎಲ್ಲಾ ಕೆಲಸದಲ್ಲೂ ಧೈರ್ಯದಿಂದ ಮುನ್ನುಗ್ಗಲು ಸ್ಫೂರ್ತಿ ಹೊಂದಬಹುದು.
      ನಾವು ದೇವಾಲಯಕ್ಕೆ ಹೋಗುತ್ತೇವೆ. ಆದರೆ ಹೆಚ್ಚಿನವರಿಗೆ ಆ ನಿರ್ಮಲ ಪ್ರಶಾಂತತೆ ಸಿಗುವುದಿಲ್ಲ. ಏಕೆಂದರೆ ಅವರು ದೇವಾಲಯದೊಳಗಡೆ ಪ್ರವೇಶಿಸುವಾಗ ಸರಳ ಭಾವದಿಂದ ಪ್ರವೇಶಿಸುವುದಿಲ್ಲ. ತನ್ನ ತಲೆಯೊಳಗೆ ತನ್ನ ಬೇರೆ ಬೇರೆ ಅಧಿಕಾರದ ಪದವಿಯೆಂಬ ಅಹಂಕಾರವನ್ನು ಪ್ರದರ್ಶಿಸುತ್ತಾ ಪ್ರವೇಶಿಸುತ್ತಾರೆ. ಕೆಲವರು ತನಗೆ ಸಿಕ್ಕಿದ ಬಿರುದಾವಳಿಗಳ ಪ್ರದರ್ಶನಕ್ಕಾಗಿ, ಪ್ರಚಾರಕ್ಕಾಗಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಹಾಗಾಗಿ ದೇವರ ನೈಜ ದರ್ಶನ ಅವರಿಗಾಗುವುದಿಲ್ಲ. ಆದರೆ ದರ್ಶನವಾದಂತೆ ನಟಿಸುತ್ತಾರೆ. ಕೆಲವರು ದೇವಾಲಯದ ಹೊರಗಿನ ಬೇರೆ ಬೇರೆ ವ್ಯಾಪಾರ ಅಂಶಗಳ ಅನಾವಶ್ಯಕ ಆಕರ್ಷಣೆಗೆ ಒಳಗಾಗಿ ತನ್ನ ಗುರಿ ಮರೆತು ಅಲ್ಲೇ ಬಾಕಿಯಾಗುತ್ತಾರೆ ವಿನಾಃ ಒಳಗಡೆ ಪ್ರವೇಶಿಸುವುದಿಲ್ಲ. ಆದರೆ ಯಾರು ತನ್ನ ಪದವಿ, ಬಿರುದುಗಳನ್ನು ಪಕ್ಕಕ್ಕಿಟ್ಟು ಅಥವಾ ಮರೆತು ಸರಳವಾಗಿ ವರ್ತಿಸಿ ದೇವರ ಮೇಲೆಯೇ ಏಕಾಗ್ರತರಾಗಿ ತನ್ನನ್ನು ತಾನು ಸಿದ್ಧಪಡಿಸಿಕೊಂಡಿರುತ್ತಾರೋ ಅವರಿಗೆ ಮಾತ್ರ ತನ್ನೊಳಗೆ ತನಗೆ ದೇವರ ದರ್ಶನವಾಗಿ ಪ್ರಶಾಂತ ಭಾವ ಮನ ಮಾಡುತ್ತದೆ. ಮನಸ್ಸು ಸ್ಪೂರ್ತಿ ಗೊಳ್ಳುತ್ತವೆ. ಮುಂದಿನ ದಾರಿಗೆ ಬೆಳಕು ಸಿಗುತ್ತದೆ.
         ಮಕ್ಕಳೇ.... ಶಾಲೆ ಎಂಬ ದೇವಾಲಯದಲ್ಲಿ ಕಲಿಕೆ ಎಂಬ ದೇವರ ದರ್ಶನವಾಗಬೇಕಾದರೆ ನಮಗೆ ನಾವೇ ಕಲ್ಪಿಸಿಕೊಂಡಿರುವ ಅಥವಾ ಇಟ್ಟುಕೊಂಡಿರುವ ಬುದ್ದಿವಂತ - ದಡ್ಡ , ಬಡವ- ಶ್ರೀಮಂತ, ಗಂಡು- ಹೆಣ್ಣು ಎಂಬ ಬೇಧ ಭಾವ, ಕಪ್ಪು-ಬಿಳಿ - ಕುಳ್ಳ - ಲಂಬೂ -ರೂಪ- ಕುರೂಪ ಎಂಬ ಸ್ವಯಂ ಕಲ್ಪಿತ ಸೌಂದರ್ಯ ಭಾವ, ತನ್ನಿಂದ ಸಾಧ್ಯವೇ ಇಲ್ಲ ಎಂಬ ಕೀಳರಿಮೆ, ನನಗಿಂತ ಮಿಗಿಲಾದ ಪ್ರತಿಭಾವಂತ ಇಲ್ಲಿ ಯಾರೂ ಇಲ್ಲ - ಎಲ್ಲದಕ್ಕೂ ನಾನೇ ಬೇಕು - ಇಲ್ಲಿ ನಾನೇ ಮುಖ್ಯ ಎಂಬ ಭ್ರಮೆ, ನನ್ನ ಅಪ್ಪ- ಅಮ್ಮ - ಅಣ್ಣ - ಅಕ್ಕ - ಸಂಬಂಧಿಕರು ದೊಡ್ಡ ಅಧಿಕಾರಿಗಳು, ರಾಜಕಾರಣಿಗಳು, ದೊಡ್ಡ ಸ್ಟೇಟಸ್ ನವರು ಎಂಬ ಹಿನ್ನೆಲೆಯ ಬಲದ ಅಹಂಕಾರ ಮತ್ತು ಇನ್ ಫ್ಲುಯೆನ್ಸ ಧೈರ್ಯ, ಸೋಮಾರಿತನ, ಬಾಹ್ಯ ಆಕರ್ಷಣೆ (ಮೊಬೈಲ್ - ವಾಹನ - ಕೆಟ್ಟ ಹವ್ಯಾಸಗಳು)... ಹೀಗೆ ಹಲವಾರು ಅಂಶಗಳನ್ನು ಬಿಟ್ಟು ತಾನೊಬ್ಬ ಕಲಿಕಾರ್ಥಿ ಎಂಬ ಸರಳ ಮನೋಭಾವದಿಂದ ಕಲಿಕಾ ಮಂತ್ರ ಪಠಿಸುತ ತನ್ನ ಗುರಿಯತ್ತ ಏಕಾಗ್ರತನಾದರೆ ಮಾತ್ರ ಕಲಿಕೆ ಹೊಂದಲು ಸಾಧ್ಯ. ಆ ಮೂಲಕ ಸ್ವಯಂ ಸಾಧಕರಾಗಿ ಹೊರಹೊಮ್ಮಲು ಸಾಧ್ಯ. ಕಲಿಕೆಯನ್ನು ಕದಿಯಲಾಗದು. ಅದು ಕಲಿತರೆ ಮಾತ್ರ ಬರುವಂಥದು.
       ಈ ಸರಳ ಉದಾಹರಣೆ ಮೂಲಕ ನಾವೆಲ್ಲರೂ ಕ್ರೀಡೆ, ಕಲೆ, ಸಾಂಸ್ಕೃತಿಕ, ತರಗತಿ ಜ್ಞಾನ, ಕಲಿಕೆ.... ಹೀಗೆ ಯಾವುದೇ ಸಾಧನೆಯ ಕಲಿಕಾ ದರ್ಶನಕ್ಕಾಗಿ ನಮ್ಮ ಶಾಲೆಯೆಂಬ ದೇವಾಲಯಕ್ಕೆ ಹೋಗೋಣ. ನಮ್ಮಲ್ಲಿನ ನಕಾರಾತ್ಮಕ ಅಂಶಗಳನ್ನು ಮರೆತು ಸಕಾರಾತ್ಮಕ ಅಂಶಗಳನ್ನು ಮಂತ್ರವಾಗಿಟ್ಟುಕೊಂಡು ಕಲಿಕೆಯ ಜಪ ಮಾಡೋಣ. ಆ ಮೂಲಕ ಕಲಿಕಾ ಸಾಧಕರಾಗೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?. 
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************

Ads on article

Advertise in articles 1

advertising articles 2

Advertise under the article